ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸೋದ್ಯಮಕ್ಕೆ ಲಾಭ

Last Updated 6 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕರ್ನಾಟಕದ ಕರಾವಳಿಯಲ್ಲಿ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ರಾಜ್ಯದ ಸುಮಾರು 350 ಕಿಲೋಮೀಟರ್ ಉದ್ದದ ಕರಾವಳಿಯಲ್ಲಿ ಸುಂದರವಾದ ಬೀಚುಗಳು, ನಡುಗಡ್ಡೆಗಳ ಸಮೃದ್ಧಿ ಇದೆ.
 
ಅಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಿದರೆ ರಾಜ್ಯದ ವಿವಿಧ ಭಾಗಗಳಿಂದ ಮಾತ್ರವಲ್ಲದೆ ದೇಶ ವಿದೇಶಗಳಿಂದಲೂ ಪ್ರವಾಸಿಗರನ್ನು ಆಕರ್ಷಿಸುವುದು ಸಾಧ್ಯ. ರಾಜ್ಯದ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಪ್ರತ್ಯೇಕ ಇಲಾಖೆಯೇನೋ ಇದೆ.
 
ಅದು ಚುರುಕಾಗಿ ಕೆಲಸ ಮಾಡುವುದಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆ. ಆದ್ದರಿಂದ ನೈಸರ್ಗಿಕವಾದ ರಮ್ಯ ತಾಣಗಳಿದ್ದರೂ ರಾಜ್ಯದ ಕರಾವಳಿ ಪ್ರವಾಸೋದ್ಯಮ, ನೆರೆಯ ಕೇರಳ, ಗೋವಾ ರಾಜ್ಯಗಳಲ್ಲಿ ಆಗಿರುವಷ್ಟು ಅಭಿವೃದ್ಧಿ ಹೊಂದಿಲ್ಲ.
 
ಈ ಕೊರತೆ ರಾಜ್ಯದ ಮುಖ್ಯಮಂತ್ರಿಯವರ ಗಮನಕ್ಕೆ ಬಂದಿದ್ದು ಈ ಕೊರತೆಯ ನಿವಾರಣೆಗೆ ಅವರು ಆಸಕ್ತಿ ತಾಳಿರುವುದರಿಂದ ಕರಾವಳಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ನೆರವಾಗುವ ನಿರೀಕ್ಷೆ ಮೂಡಿದೆ. ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ಉತ್ಸವಗಳನ್ನು ಏರ್ಪಡಿಸಲು ಖಾಸಗಿಯವರೊಂದಿಗೆ ಸಹಭಾಗಿತ್ವಕ್ಕೆ ಮುಂದಾಗಿರುವುದೂ ಸ್ವಾಗತಾರ್ಹ ಕ್ರಮ.
 
ಉಡುಪಿ ಸನಿಹದ ಸೇಂಟ್ ಮೇರೀಸ್ ದ್ವೀಪದಲ್ಲಿ ಉಡುಪಿ ಜಿಲ್ಲಾಡಳಿತ ಖಾಸಗಿಯವರೊಂದಿಗೆ ಸೇರಿ ಏರ್ಪಡಿಸಿದ ನಾಡಿನ ಜನಪದ ನೃತ್ಯ-ಸಂಗೀತ ವೈವಿಧ್ಯದ ವಸಂತೋತ್ಸವವನ್ನು ಈ ದೃಷ್ಟಿಯಿಂದ ಗಮನಿಸಬೇಕು. ಇದನ್ನು ಸಾಂಸ್ಕೃತಿಕವಾಗಿ ಇಲ್ಲವೇ ರಾಜಕೀಯ ದೃಷ್ಟಿಯಿಂದ ನೋಡುವುದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಾಯವಾಗದು.

ಕರ್ನಾಟಕದಲ್ಲಿ ದೇಶ ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುವ ಸ್ಥಳಗಳಿವೆ. ಚಾರಿತ್ರಿಕ ಮಹತ್ವದ ಪಾರಂಪರಿಕ ಹಿನ್ನೆಲೆಯ ಸ್ಥಳಗಳಿವೆ. ಜಲಪಾತ, ಕಣಿವೆ, ಬೆಟ್ಟಗುಡ್ಡಗಳಂಥ ನೈಸರ್ಗಿಕ ಪ್ರದೇಶಗಳಿವೆ. ಜೀವವೈವಿಧ್ಯದ ಸಮೃದ್ಧಿ ಇರುವ ಅರಣ್ಯಗಳಿವೆ.
 
ಇವನ್ನೆಲ್ಲ ಪ್ರವಾಸಿಗರಿಗೆ ಸೂಕ್ತವಾಗಿ ತೆರೆದಿಡುವ ಮೂಲಕ ಈ ಉದ್ಯಮವನ್ನು ಲಾಭದಾಯಕವಾಗಿ ಬೆಳೆಸಲು ವಿಪುಲ ಅವಕಾಶವಿದೆ. ಪ್ರವಾಸಿಗರನ್ನು ಸೆಳೆಯುವುದರಿಂದ ಸ್ಥಳೀಯರಿಗೆ ಉದ್ಯೋಗ, ವಸತಿ, ಸಾರಿಗೆ ಮೊದಲಾದ ಸೇವಾ ಕ್ಷೇತ್ರಗಳಲ್ಲಿ   ವ್ಯಾಪಾರ ವಹಿವಾಟು ವೃದ್ಧಿಗೂ ಅವಕಾಶವಿದೆ.

ಸ್ಥಳೀಯ ಸಂಗೀತ- ನೃತ್ಯ ಪ್ರಕಾರಗಳು ಒಳಗೊಂಡ ಉತ್ಸವಗಳನ್ನು ಏರ್ಪಡಿಸುವುದರಿಂದ ನಾಡಿನ ಕಲಾವಿದರಿಗೂ ಉತ್ತೇಜನ ಸಿಗುವಂಥ ವಾತಾವರಣವನ್ನು ಸರ್ಕಾರವೇ ಕಲ್ಪಿಸಿದಂತಾಗುತ್ತದೆ. ಪ್ರವಾಸಿಗರಿಗೆ ಅಗತ್ಯವಾಗಿ ಬೇಕಾದ ರಸ್ತೆ, ರೈಲು, ವಿಮಾನ ಸಂಪರ್ಕ, ವಾಹನ ಸೌಲಭ್ಯ, ವಸತಿ, ಶುದ್ಧ ನೀರು, ಶೌಚಾಲಯ ಮೊದಲಾದ ಮೂಲ ಸೌಕರ್ಯಗಳನ್ನು ನೈಸರ್ಗಿಕ ತಾಣಗಳಲ್ಲಿ ಮಾತ್ರವಲ್ಲದೆ, ಧಾರ್ಮಿಕ ಕೇಂದ್ರಗಳಲ್ಲಿಯೂ ಕಲ್ಪಿಸಿದರೆ ಧಾರ್ಮಿಕ ಪ್ರವಾಸೋದ್ಯಮಕ್ಕೂ ನೆರವಾಗುತ್ತದೆ.
 
ರಾಜ್ಯದ ವಿವಿಧ ಭಾಗಗಳ ಪ್ರಾದೇಶಿಕ ಸಂಸ್ಕೃತಿಯನ್ನು ಬಿಂಬಿಸುವಂಥ ಹಲವು ಬಗೆಯ ಉತ್ಸವಗಳನ್ನು ನಡೆಸುತ್ತಿರುವ ಸರ್ಕಾರ ಈ ಉತ್ಸವಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಟಿಯನ್ನೂ ಅಳವಡಿಸಿಕೊಂಡರೆ ವಿದೇಶಿ ಪ್ರವಾಸಿಗರನ್ನೂ ಸೆಳೆಯುವುದಕ್ಕೆ ಅವಕಾಶವಿದೆ.

ವಿದೇಶಿ ಪ್ರವಾಸಿಗರ ಮೋಜಿನ ಜೀವನ ಶೈಲಿ ಕೆಲವರಿಗೆ ಇಷ್ಟವಾಗದಿರಬಹುದು. ಆದರೆ, ಮದ್ಯಸೇವನೆಗೆ ಕಾನೂನು ನಿಷೇಧವಿಲ್ಲ. ಮಾದಕವಸ್ತು ಸೇವನೆಗೆ ನಿರ್ಬಂಧವಿದೆ. ಇದು ಉಲ್ಲಂಘನೆಯಾದರೆ ಕಾನೂನು ಕ್ರಮ ತೆಗೆದುಕೊಳ್ಳುವುದಕ್ಕೆ ಸರ್ಕಾರಕ್ಕೆ ಅವಕಾಶವಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT