ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿ ಮೇಲೆ ಭಾರತದ ಕಣ್ಣು

ಸ್ಯಾಫ್‌ ಕಪ್‌: ಇಂದು ಫೈನಲ್‌, ಸೇಡು ತೀರಿಸಿಕೊಳ್ಳಲು ಕಾದಿದೆ ಆಫ್ಘಾನಿಸ್ತಾನ
Last Updated 10 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಕಠ್ಮಂಡು (ಪಿಟಿಐ): ಹಾಲಿ ಚಾಂಪಿ­ಯನ್‌ ಭಾರತ ತಂಡದ ಗೆಲುವಿನ ಯಾತ್ರೆ ಮುಂದುವರಿದಿದೆ. ಸೆಮಿ­ಫೈನಲ್‌­ನಲ್ಲಿ ಮಾಲ್ಡೀವ್ಸ್‌ ತಂಡವನ್ನು ಬಗ್ಗುಬಡಿದಿರುವ ಸುನಿಲ್‌ ಚೆಟ್ರಿ ಬಳಗ ಸ್ಯಾಫ್‌ ಕಪ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ ಆಫ್ಘಾನಿಸ್ತಾನದ ಎದುರು ‘ಫೈನಲ್‌ ಸಮರ’ಕ್ಕೆ ಸಜ್ಜಾಗಿದೆ.

ಸೋಮವಾರ ನಡೆದ ನಾಲ್ಕರ ಘಟ್ಟದ ಹೋರಾಟದಲ್ಲಿ ಭಾರತ 1–0 ಗೋಲಿನಿಂದ ಗೆಲುವು ಸಾಧಿಸಿದೆ. ಲೀಗ್‌ ಹಂತದಲ್ಲಿ ಚೆಟ್ರಿ ಪಡೆ ಉತ್ತಮ ಪ್ರದರ್ಶನ ತೋರಿತ್ತಾದರೂ, ಕೊನೆಗೂ ಕೈ ಹಿಡಿದಿದ್ದು ‘ಅದೃಷ್ಟ’. ಲೀಗ್‌ನ ಅಂತಿಮ ಪಂದ್ಯದಲ್ಲಿ ಆತಿಥೇಯ ನೇಪಾಳದ ಎದುರು ಭಾರತ ನಿರಾಸೆ ಅನುಭವಿಸಿತ್ತು. ಆದರೆ, ಗೋಲು ಗಳಿಕೆಯ ಆಧಾರದ ಮೇಲೆ ಭಾರತ ನಾಲ್ಕರ ಘಟ್ಟ ತಲುಪಿತ್ತು.

ಫಿಫಾ ರಾ್ಯಂಕ್‌ ಪಟ್ಟಿಯಲ್ಲಿ ಭಾರತ 145ನೇ ಸ್ಥಾನದಲ್ಲಿದ್ದರೆ, ಆಫ್ಘಾನಿಸ್ತಾನ 139ನೇ ಸ್ಥಾನ ಹೊಂದಿದೆ. ಆದ್ದರಿಂದ ಈ ಪಂದ್ಯ ಭಾರತಕ್ಕೆ ಕಠಿಣ ಸವಾಲು ಎನಿಸಿದೆ. ಆದರೆ, ಸ್ಯಾಫ್‌ಕಪ್‌ನಲ್ಲಿ ಭಾರತ ಆರು ಸಲ ಚಾಂಪಿಯನ್‌ ಆಗಿದೆ. ಹೋದ ಸಲವೂ ಪ್ರಶಸ್ತಿ ಎತ್ತಿ ಹಿಡಿದಿತ್ತು. ಒಟ್ಟು 9 ಸಲ ಈ ಟೂರ್ನಿ ನಡೆದಿದೆ. ಅದರಲ್ಲಿ ಭಾರತ ಎಂಟು ಸಲ ಸೆಮಿಫೈನಲ್‌ ತಲುಪಿತ್ತು.  ಈಗ ಮತ್ತೊಮ್ಮೆ ಟ್ರೋಫಿಯನ್ನು ತನ್ನಲ್ಲಿಯೇ ಉಳಿಸಿಕೊಳ್ಳುವ ಅವಕಾಶ ಭಾರತಕ್ಕೆ ಲಭಿಸಿದೆ.

ಭಾರತ ಮತ್ತು ಆಫ್ಘಾನಿಸ್ತಾನ ತಂಡ­ಗಳು ಕೊನೆಯ ಸಲದ ಸ್ಯಾಫ್‌ಕಪ್‌ನಲ್ಲಿ ಮುಖಾಮುಖಿಯಾಗಿದ್ದಾಗ ಭಾರತ 4–0 ಗೋಲುಗಳಿಂದ ಗೆಲುವು ಸಾಧಿಸಿತ್ತು. ಆ ಸೋಲಿಗೆ ತಿರುಗೇಟು ನೀಡುವ ಲೆಕ್ಕಾಚಾರ ಆಫ್ಘಾನಿಸ್ತಾನ ತಂಡದ್ದಾಗಿದೆ.

‘ಹಿಂದಿನ ಪಂದ್ಯದಲ್ಲಿ ಭಾರತದ ಎದುರು ಸೋಲು ಕಂಡಿದ್ದೆವು. ಈ ಸಲ ಸೇಡು ತೀರಿಸಿಕೊಳ್ಳಲು ಕಾತರದಿಂದ ಕಾಯುತ್ತಿದ್ದೇವೆ. ಅದಕ್ಕಾಗಿ ಮಾನಸಿಕವಾಗಿ ಮತ್ತು ತಾಂತ್ರಿಕವಾಗಿ ಸಜ್ಜಾಗಿದ್ದೇವೆ’ ಎಂದು ಆಫ್ಘಾನಿಸ್ತಾನ ತಂಡದ ಸಹಾಯಕ ಕೋಚ್‌ ಎ. ಜಾವೇದ್‌ ಹೇಳಿದ್ದಾರೆ.

ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿ ಸಾಕಷ್ಟು ಅನುಭವ ಹೊಂದಿರುವ ನಾಯಕ ಸುನಿಲ್‌ ಚೆಟ್ರಿ ಸೆಮಿಫೈನಲ್‌ನಲ್ಲಿ ಆಡಿರಲಿಲ್ಲ. ಅವರು ಫೈನಲ್‌ನಲ್ಲಿ ಆಡಲಿದ್ದಾರೆ. ಆದರೆ, ಚೆಟ್ರಿ ಈ ಸಲದ ಟೂರ್ನಿಯಲ್ಲಿ ಎರಡು ಗೋಲು ಮಾತ್ರ ಗಳಿಸಿದ್ದಾರೆ. ಗುರ್ಮಿಂದರ್ ಸಿಂಗ್ ಮತ್ತು ಅರ್ನಬ್‌ ಮಂಡಲ್‌ ಭಾರತದ ಪ್ರಮುಖ ಆಟಗಾರರು. ನಾಲ್ಕರ ಘಟ್ಟದ ಹೋರಾಟದಲ್ಲಿ ಮಂಡಲ್‌ 86ನೇ  ನಿಮಿಷದಲ್ಲಿ ಗೋಲು ಗಳಿಸಿ ಭಾರತ ಫೈನಲ್ ತಲುಪಲು ಕಾರಣರಾಗಿದ್ದರು. ಆದ್ದರಿಂದ ಈ ಪಂದ್ಯದಲ್ಲಿ ಅವರಿಂದ ಉತ್ತಮ ಪ್ರದರ್ಶನ ನೀರಿಕ್ಷಿಸಲಾಗಿದೆ.

ಆಫ್ಘಾನಿಸ್ತಾನ ತಂಡದ ನಾಯಕ ಅಮೀರ್‌ ಮುಂಬೈ ಫುಟ್‌ಬಾಲ್ ಕ್ಲಬ್‌ ಪರ ಆಡಿದ ಅನುಭವ ಹೊಂದಿದ್ದಾರೆ. ಆದ್ದರಿಂದ ಭಾರತದ ಆಟಗಾರರ ತಂತ್ರಗಳ ಬಗ್ಗೆ ಅವರು ತಿಳಿದಿದ್ದಾರೆ. ಪ್ರಬಲ ತಂಡಗಳ ನಡುವಿನ ಕಾದಾಟ ಇದಾದ ಕಾರಣ ಫುಟ್‌ಬಾಲ್‌ ಪ್ರಿಯರಿಗಂತೂ ಅಂತಿಮ ಹೋರಾಟ ಕುತೂಹಲ ಮೂಡಿಸಿದೆ.

‘ಚೆಟ್ರಿ ಎದುರು ಸಾಕಷ್ಟು ಸಲ ಪಂದ್ಯಗಳನ್ನು ಆಡಿದ್ದೇನೆ. ಆತ ಚಾಣಾಕ್ಷ ಆಟಗಾರ. ಚೆಟ್ರಿ ಬಗ್ಗೆ ತುಂಬಾ ಎಚ್ಚರ ವಹಿಸಬೇಕು’ ಎಂದು ಅಮೀರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT