ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಿ ಸಂರಕ್ಷಣೆ: ತಿಳಿವಳಿಕೆ ಅಗತ್ಯ- ಅಮಲಾ

Last Updated 17 ಸೆಪ್ಟೆಂಬರ್ 2011, 19:35 IST
ಅಕ್ಷರ ಗಾತ್ರ

ಬೆಂಗಳೂರು:  ಪ್ರಾಣಿ ಹಿಂಸೆ ತಡೆಗಟ್ಟಲು ಸಾಕಷ್ಟು ಕಾನೂನುಗಳಿದ್ದರೂ ಸಹ ಹೆಚ್ಚುತ್ತಿರುವ ಮಾಂಸಾಹಾರಿಗಳ ಸಂಖ್ಯೆಯಿಂದಾಗಿ ಪ್ರಾಣಿಗಳ ಮಾರಣ ಹೋಮ ಮತ್ತು ಹಿಂಸಾ ಪ್ರವೃತ್ತಿ ಹಾಗೆಯೇ ಮುಂದುವರೆದಿದೆ ಎಂದು ಭಾರತ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯೆ ಹಾಗೂ ಚಿತ್ರನಟಿ ಅಮಲಾ ಅಕ್ಕಿನೇನಿ ನುಡಿದರು.

ಪ್ರಾಣಿದಯಾ ಸಂಘಟನೆ `ಸಮಭಾವ~ಕ್ಕೆ ಒಂದು ವರ್ಷ ತುಂಬಿದ ಪ್ರಯುಕ್ತ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಅಹಿಂಸಾ ಧರ್ಮವನ್ನು ಬೋಧಿಸಿದ ಮಹಾವೀರ ಮತ್ತು ಬುದ್ಧನಂಥ ವ್ಯಕ್ತಿಗಳು ಜನಿಸಿದ ಭಾರತದಲ್ಲಿ, ಪ್ರಾಣಿ ಸಂರಕ್ಷಣೆ ಪ್ರಕ್ರಿಯೆಯು ಸಹಜವಾಗಿ ಆಗಬೇಕಿತ್ತು. ಆದರೆ ಸಂಸದೆಯಾಗಿದ್ದ ಲಕ್ಷ್ಮೀದೇವಿ ಅರುಂಡಳೆ ಅವರು 1958ರಲ್ಲಿ ಪ್ರಾಣಿ ಸಂರಕ್ಷಣೆಯ ಅಗತ್ಯದ ಕುರಿತು ಸಂಸತ್ತಿಗೆ ಸುದೀರ್ಘ ವರದಿ ಸಲ್ಲಿಸಿದ ನಂತರವಷ್ಟೇ 1960ರಲ್ಲಿ ಸಂಸತ್ತು ಪ್ರಾಣಿ ಹಿಂಸೆ ತಡೆ ಮಸೂದೆಯನ್ನು ಅಂಗೀಕರಿಸಿತು~     ಎಂದರು.

`ಆದರೆ ಪ್ರಾಣಿ ಸಂರಕ್ಷಣೆಯ ಬಗ್ಗೆ ಸೂಕ್ತ ತಿಳಿವಳಿಕೆ ಮೂಡಿದಾಗಲೇ ಸಂರಕ್ಷಣೆ ಸಾಧ್ಯ. ಆಧುನಿಕತೆ ಬಂದಂತೆಲ್ಲ ಮಾನವ ತನ್ನ ಅಗತ್ಯಗಳಿಗೆ ಪ್ರಾಣಿಗಳ ಬಳಕೆಯನ್ನು ಕಡಿಮೆ ಮಾಡಿದ್ದಾನೆ. 10 ವರ್ಷಗಳ ಹಿಂದೆ ಹೈದರಾಬಾದ್‌ನಲ್ಲಿ 350 ಕುದುರೆ, ಕತ್ತೆಗಳನ್ನು ಸಾಗಾಣಿಕೆಗೆ ಬಳಸಿಕೊಳ್ಳಲಾಗುತ್ತಿತ್ತು. ಇದೀಗ ಆ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡಿದೆ~ ಎಂದರು.

`ಮಾಂಸಾಹಾರ ನಿಷಿದ್ಧವಲ್ಲ. ಆದರೆ ಕೋಳಿ, ಹಂದಿ ಸಾಕಾಣಿಕೆದಾರರು ಅವುಗಳನ್ನು ಉತ್ತಮ ಪರಿಸರದಲ್ಲಿ ಸಾಕುವುದಿಲ್ಲ. ಅಲ್ಲಿ ಸ್ವಚ್ಛತೆಯೆಂಬುದೇ ದೂರದ ಮಾತು. ದನಗಳನ್ನು ಒಂದು ಕಡೆಯಿಂದ ಇನ್ನೊಂದು ಭಾಗಕ್ಕೆ ಸಾಗಿಸುವಾಗಲೂ ಸಹ ಒತ್ತೊತ್ತಾಗಿ ವಾಹನದಲ್ಲಿ ತುಂಬಿಸಿರುವುದನ್ನು ಕಾಣುತ್ತೇವೆ. ಮೋಜಿಗಾಗಿ ಪ್ರಾಣಿಗಳನ್ನು ಕೊಲ್ಲುವುದೂ ಇದೆ~ ಎಂದು ಹೇಳಿದರು.

ಪ್ರಾಣಿಗಳನ್ನು ಸೂಕ್ತವಾಗಿ ನಿರ್ವಹಿಸುವ, ಅವುಗಳ ಸ್ವಾತಂತ್ರ್ಯಕ್ಕೆ ಧಕ್ಕೆ ತರದಿರುವಂತೆ ನಾವು ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಪ್ರಾಣಿಗಳ ಸಂರಕ್ಷಣೆಗಾಗಿ ಕೇಂದ್ರ ಪ್ರಾಣಿ ಕಲ್ಯಾಣ ಮಂಡಳಿಯು ವಾರ್ಷಿಕ ಐದು ಕೋಟಿ ರೂಪಾಯಿಗಳನ್ನು ನೀಡುತ್ತದೆ. ಆದರೆ ಇದನ್ನು 2,500 ಸಂಸ್ಥೆಗಳು ಹಂಚಿಕೊಳ್ಳಬೇಕಿುವುದರಿಂದ, ತಲಾ ಹಂಚಿಕೆಯಾಗುವ ಹಣದ ಮೊತ್ತ ಕಡಿಮೆಯಾಗುತ್ತದೆ ಎಂದು ವಿಷಾದಿಸಿದರು.

`ನಾನು ಪ್ರಾಣಿಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಲು ನನ್ನ ತಾಯಿಯೂ ಕಾರಣ. ಬೆಕ್ಕು ಅಥವಾ ನಾಯಿಯನ್ನು ನಾನು ಎತ್ತಿಕೊಂಡಾಗ, ಕೊಳಕು ಪ್ರಾಣಿಗಳು ಎಂದು ಜರೆಯಲಿಲ್ಲ~ ಎಂದು ಚಟಾಕಿ ಹಾರಿಸಿದರು.

ಸಮಭಾವ ಸಂಸ್ಥೆಯ ಮುಖ್ಯಸ್ಥ ಸಂದೇಶ್, ಸಂಸ್ಥೆಯು ಒಂದು ವರ್ಷದ ಅವಧಿಯಲ್ಲಿ ಕೈಗೊಂಡ ಕಾರ್ಯಕ್ರಮಗಳು, ಕ್ಷೇತ್ರ ಭೇಟಿಯ ಅನುಭವಗಳನ್ನು ಹಂಚಿಕೊಳ್ಳುತ್ತಾ, ಬಹುತೇಕ ಜಟಕಾ ಬಂಡಿಗಳ ಮಾಲೀಕರಿಗೆ ಕುದುರೆಗಳು ಕಾಯಿಲೆ ಬಿದ್ದಾಗ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿವಳಿಕೆ ಇರುವುದಿಲ್ಲ. ಕುದುರೆಗೆ ಲಾಳವನ್ನು ಅಳವಡಿಸುವಾಗ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಸದಸ್ಯತ್ವ ನೋಂದಣಿಗೆ ಮನವಿ
ಬೆಂಗಳೂರು:
ಆರೋಗ್ಯ ಆರ್.ಎಸ್.ಎಸ್. ಟ್ರಸ್ಟ್ ಸಂಘದ ಸದಸ್ಯರಿಗೆ ಪ್ರತಿ ತಿಂಗಳ ಮೊದಲ ಭಾನುವಾರ ಉಚಿತ ಆರೋಗ್ಯ ತಪಾಸಣೆ ಹಾಗೂ ಟ್ರಸ್ಟ್ ಸಹಭಾಗಿತ್ವದ ಆಸ್ಪತ್ರೆಗಳಲ್ಲಿ ಶೇ 20 ರಷ್ಟು ರಿಯಾಯಿತಿ ನೀಡುವ ಉದ್ದೇಶ ಹೊಂದಿದೆ.

ಈ ಸಂಬಂಧ ಆರೋಗ್ಯ ಟ್ರಸ್ಟ್‌ಗೆ ಸದಸ್ಯರನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಆಸಕ್ತರು ನೋಂದಣಿ ಮಾಡಿಕೊಳ್ಳುವಂತೆ ಪ್ರಕಟಣೆ ಕೋರಿದೆ. ದೂರವಾಣಿ: 3249 2611.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT