ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ. 11ಕ್ಕೆ ರಾಜ್ಯಮಟ್ಟದ ಶೈಕ್ಷಣಿಕ ಹಬ್ಬ ಆರಂಭ

Last Updated 22 ಜನವರಿ 2011, 8:25 IST
ಅಕ್ಷರ ಗಾತ್ರ

ಚಾಮರಾಜನಗರ: ಭಾರತ ಜ್ಞಾನ ವಿಜ್ಞಾನ ಸಮಿತಿಯಿಂದ ಫೆ. 11 ಮತ್ತು 12ರಂದು ನಗರದಲ್ಲಿ ರಾಜ್ಯಮಟ್ಟದ ಶೈಕ್ಷಣಿಕ ಹಬ್ಬ ಜರುಗಲಿದೆ. ಪ್ರವಾಸಿ ಮಂದಿರದಲ್ಲಿ ಗುರುವಾರ ಶಾಸಕ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆಯಲ್ಲಿ ಈ ಸಂಬಂಧ ಪೂರ್ವಭಾವಿ ಸಭೆ ನಡೆಯಿತು. ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಅನೌಪಚಾರಿಕ ನೆಲೆಯಲ್ಲಿ ಚರ್ಚಿಸಿ ಆಶಯಗಳನ್ನು ಮುಂದೆ ಕೊಂಡೊಯ್ಯುವ ವೇದಿಕೆಯಾದ ‘ಶೈಕ್ಷಣಿಕ ಹಬ್ಬ’ ಕುರಿತು ಚರ್ಚೆ ನಡೆಯಿತು.

ಬಿಜಿವಿಎಸ್‌ನಿಂದ ಹೊರತರುತ್ತಿರುವ ‘ಟೀಚರ್’ ಶೈಕ್ಷಣಿಕ ಮಾಸ ಪತ್ರಿಕೆಯ ವಾರ್ಷಿಕೋತ್ಸವಗಳು ಇಂಥ ಶೈಕ್ಷಣಿಕ ಹಬ್ಬದ ರೂಪ ಪಡೆದಿವೆ. ಮೊದಲ ಹಬ್ಬ ತುಮಕೂರಿನಲ್ಲಿ ನಡೆದಿತ್ತು. ಜಿಲ್ಲೆಯಲ್ಲಿ ನಡೆಯುತ್ತಿರುವುದು ಒಂಬತ್ತನೇಯ ಹಬ್ಬ. ಶಿಕ್ಷಣ ಇಲಾಖೆಯ ಸಹಯೋಗದಡಿ ಹಬ್ಬ ನಡೆಯುತ್ತಿದೆ. ಇದರಲ್ಲಿ ರಾಜ್ಯದ ವಿವಿಧೆಡೆಯಿಂದ 800 ಶಿಕ್ಷಕರು ಹಾಗೂ ಶಿಕ್ಷಣಾಸಕ್ತರು ಪಾಲ್ಗೊಳ್ಳಲಿದ್ದಾರೆ. ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ವಿಷಯ ಕುರಿತು ಉಪನ್ಯಾಸ, ಚರ್ಚೆ ಹಾಗೂ ಪ್ರದರ್ಶನ ಏರ್ಪಡಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

200 ರೂ. ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ. ಹಬ್ಬ ನಡೆಯುವ ಎರಡು ದಿನದ ಕಾಲ ಪಾಲ್ಗೊಳ್ಳುವ ಎಲ್ಲರಿಗೂ ಊಟ, ವಸತಿ ಸೌಲಭ್ಯ ಒದಗಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಒಒಡಿ ಸೌಲಭ್ಯ ನೀಡಿರುವ ಬಗ್ಗೆ ಸಮಿತಿಯ ಮುಖಂಡರು ತಿಳಿಸಿದರು. ಶೈಕ್ಷಣಿಕ ಹಬ್ಬ ಯಶಸ್ಸಿಗೆ ವಿವಿಧ ಸಮಿತಿ ರಚಿಸಲಾಯಿತು. ಸಾಹಿತಿ ಕುಂ. ವೀರಭದ್ರಪ್ಪ ಶೈಕ್ಷಣಿಕ ಹಬ್ಬ ಉದ್ಘಾಟಿಸಲಿದ್ದಾರೆ. ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಕುಮಾರನಾಯಕ್ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಮೊದಲ ಅಧಿವೇಶನದಲ್ಲಿ ‘ಶಿಕ್ಷಣದ ಹಕ್ಕು ಕಾನೂನು ಹಾಗೂ ರಾಜ್ಯ  ಸರ್ಕಾರದ ಮಾದರಿ ನಿಯಮಗಳ’ ಬಗ್ಗೆ ಚರ್ಚೆ ನಡೆಯಲಿದೆ. ನಂತರ 2ನೇ ಅಧಿವೇಶನದಲ್ಲಿ ‘ಮೂಢನಂಬಿಕೆ ಮತ್ತು ಶಿಕ್ಷಣ ವ್ಯವಸ್ಥೆ’, ‘ಮೂಢನಂಬಿಕೆ ಮತ್ತು ವೈಜ್ಞಾನಿಕ ಮನೋಭಾವ’ ಕುರಿತು ವಿಷಯ ಮಂಡನೆಯಾಗಲಿದೆ.ಸಮಾರೋಪದಂದು ‘ನಮ್ಮ ಪತ್ರಿಕೆ-ಒಂದು ವಿಮರ್ಶೆ’ ಕುರಿತು ಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಜತೆಗೆ, ಪಠ್ಯಾಧಾರಿತ ಮಕ್ಕಳ ನಾಟಕ ಕೂಡ ಏರ್ಪಡಿಸಲಾಗಿದೆ. ಮೂರನೇ ಅಧಿವೇಶನದಲ್ಲಿ ‘ಶಿಕ್ಷಕರ ಸಂಘಟನೆ- ಪ್ರಸ್ತುತ ಸವಾಲುಗಳು’ ಬಗ್ಗೆ ಚರ್ಚೆ ನಡೆಯಲಿದೆ.  ‘ಉಪ್ಪಾರ ಮತ್ತು ಗಿರಿಜನ ಮಕ್ಕಳ ಸ್ಥಿತಿಗತಿ’ ಬಗ್ಗೆಯೂ ಗೋಷ್ಠಿ ನಡೆಯಲಿದೆ. ಮಾಹಿತಿಗೆ ವಿದ್ಯಾಂಕುರ- ಬಿಜಿವಿಎಸ್ ಕಚೇರಿ ಅಥವಾ ದೂರವಾಣಿ ಸಂಖ್ಯೆ 08226-222068 ಸಂಪರ್ಕಿಸಿ.

ಸಭೆಯಲ್ಲಿ ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ಸುಂದರನಾಯಕ್, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಿ.ಎ. ರಾಜಶೇಖರ್, ನಗರಸಭೆ ಅಧ್ಯಕ್ಷೆ ಭಾಗ್ಯಮ್ಮ, ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಉಪಾಧ್ಯಕ್ಷ ಈ. ಬಸವರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಂದ್ರಶೇಖರ್, ಶ್ರೀಕಂಠಯ್ಯ, ಈ. ನಂಜಪ್ಪ, ಬಂಗಾರನಾಯಕ, ಕಾಂತರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT