ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಟ್ಟಲಿನಂತಿದ್ದ ಕೆರೆಗಳು ತಟ್ಟೆಗಳಾದವು...

ಹೂಳಿನಲ್ಲಿ ಹೂತು ಹೋದ ಕೆರೆ ಸಂಸ್ಕೃತಿ ಭಾಗ-2
Last Updated 19 ಜುಲೈ 2013, 10:09 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಕೆರೆ, ಗ್ರಾಮೀಣ ಪ್ರದೇಶದ ಜನರ ಒಂದು ಸಾಂಸ್ಕೃತಿಕ ಪರಂಪರೆಯ ಪ್ರತೀಕ. ಈ ಪರಂಪರೆಯಲ್ಲಿ ಕೆರೆಗೆ ಹೆಚ್ಚಿನ ಮಹತ್ವ ಇತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಕೆರೆಗಳು ಮೈದಾನಗಳಾಗಿ, ಕಾಡುಗಳಾಗಿ, ಭೂಗಳ್ಳರ ಭಾಗ್ಯವಾಗಿ ಮಾರ್ಪಡುತ್ತಿರುವುದು ವಿಪರ್ಯಾಸ.

ತಾಲ್ಲೂಕಿನ ಗ್ರಾಮಗಳ ಸಂಖ್ಯೆಗಿಂತ ಕೆರೆಗಳ ಸಂಖ್ಯೆ ಹೆಚ್ಚಾಗಿರುವುದು ವಿಶೇಷ. ಒಟ್ಟು 290 ಜನ ವತಿಯುಳ್ಳ ಗ್ರಾಮಗಳಿವೆ. ಆದರೆ ತಾಲ್ಲೂಕಿನಲ್ಲಿ ಇರುವ ಕೆರೆಗಳ ಸಂಖ್ಯೆ 344. (ಕಳೆದ ವರ್ಷ ಜನವರಿಯಲ್ಲಿ ಈ ಕೆರೆಗಳ ಸಂಖ್ಯೆ 375 ಇತ್ತು!)  ಆ ಪೈಕಿ 313 ಚಿಕ್ಕ ಕೆರೆಗಳು. 31 ಮಧ್ಯಮ ಗಾತ್ರದ ಕೆರೆಗಳು. ಈ ಕೆರೆಗಳ ಆಶ್ರಯದಲ್ಲಿ 6445 ಹೆಕ್ಟೇರ್ ಅಚ್ಚಕಟ್ಟು ಪ್ರದೇಶವಿದೆ. ಆದರೆ ಬಹುತೇಕ ಕರೆಗಳಲ್ಲಿ ಹೂಳು ತುಂಬಿದ್ದು, ನಿರುಪಯುಕ್ತಗೊಂಡಿವೆ.

ಇಲ್ಲಿ ತಾಲ್ಲೂಕಿನ ದಕ್ಷಿಣದ ಬಯಲು ಪ್ರದೇಶದ ಕೆರೆಗಳು ಹಾಗೂ ಉತ್ತರದ ಗುಡ್ಡಗಾಡಿನ ಕೆರೆಗಳು ಎಂದು ವಿಭಾಗಿಸಬಹುದು. ಬಯಲು ಪ್ರದೇಶದಲ್ಲಿ ವಿಶಾಲವಾದ ಕೆರೆಗಳಿದ್ದರೆ, ಗುಡ್ಡಗಾರು ಪ್ರದೇಶದಲ್ಲಿ ಚಿಕ್ಕದಾದ ಹಾಗೂ ಆಳದ ಕೆರೆಗಳಿವೆ. ಬಯಲು ಪ್ರದೇಶದ ಕೆರೆಗಳು ಮೊದಲು ಹೂಳು ತುಂಬಿ ಹಾಳಾದವು. ಆದರೆ ಗುಡ್ಡಗಾಡಲ್ಲಿ ಇನ್ನೂ ಕೆರೆಯ ಮಹತ್ವ ಸ್ವಲ್ಪಮಟ್ಟಿಗೆ ಉಳಿದುಕೊಂಡಿದೆ. ಕಾರಣ ಕಲ್ಲು ಪ್ರದೇಶದಲ್ಲಿ ಹೂಳು ಹರಿದು ಬರುವುದು ಕಡಿಮೆ ಮತ್ತು ಅವು ಹೆಚ್ಚು ಆಳವಾಗಿರುವುದರಿಂದ ಸ್ವಲ್ಪ ಮಟ್ಟಿಗಾದರೂ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮಾರ್ಥ್ಯವನ್ನು ಉಳಿಸಿಕೊಂಡಿವೆ.

ವ್ಯರ್ಥ ಗದ್ದೆ ಬಯಲು: ಗ್ರಾಮೀಣ ಜನರ ಬದುಕಿಗೆ ಆಧಾರವಾಗಿದ್ದ ಕೆರೆಗಳು ಕಣ್ಣು ಮುಚ್ಚಿದ ಮೇಲೆ. ಗದ್ದೆ ಬಯಲು ನಿರುಪಯುಕ್ತವಾಗಿದೆ. ಕೆಲವರು ಭತ್ತ ಬೆಳೆಯುತ್ತಿದ್ದ ನೆಲದಲ್ಲಿ ನೀಲಗಿರಿ ಬೆಳೆಸಿದ್ದಾರೆ. ಇನ್ನು ಕೆಲವರು ಮಳೆ ಆಶ್ರಯದಲ್ಲಿ ಸಾಂಪ್ರದಾಯಿಕ ರಾಗಿ ಹೊಲ ಮಾಡುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಗದ್ದೆ ಬಯಲನ್ನು ಬೀಡುಬಿಡಲಾಗಿದೆ. ಅಲ್ಲಿ ಮುಳ್ಳು ಪೊದೆಗಳು ಹಾಗೂ ಹುತ್ತಗಳು ಬೆಳೆದು ನಿಂತಿವೆ. ಬದುಗಳು ಕರಗಿ ಯಾವ ಗದ್ದೆ ಯಾರದು ಎಂಬ ಗುರುತು ಕೂಡ ಸಿಗುತ್ತಿಲ್ಲ!

ಕೆರೆಗಳಿಗೆ ಮಳೆ ನೀರು ಹರಿದುಬರುತ್ತಿದ್ದ ರಾಜ ಕಾಲುವೆಗಳು ಒತ್ತುವರಿಗೆ ಒಳಗಾಗಿವೆ. ಕೆರೆಗಳೂ ಸಹ ಒತ್ತುವರಿಯಾಗಿದ್ದು, ಉಳುಮೆ ಮಾಡಿದ ಭೂಮಿಯಿಂದ ಮಳೆಗಾಲದಲ್ಲಿ ಹರಿದು ಹೋಗುವ ಮಣ್ಣು ಕೆರೆಗಳ ಆಳವನ್ನು ಮುಚ್ಚಿ, ಬಟ್ಟಲಿನಂತಿದ್ದ ಕೆರೆಗಳನ್ನು ತಟ್ಟೆಯಂತೆ ಮಾಡಿದೆ. ಈಗ ಮಳೆಯಾದರೆ ಕಟ್ಟೆ ಅಂಚಲ್ಲಿ ಮಾತ್ರ ಸ್ವಲ್ಪ ನೀರು ನಿಲ್ಲುತ್ತದೆ. ಅದು ಅತಿ ಕಡಿಮೆ ಅವಧಿಯಲ್ಲೇ ಆವಿಯಾಗಿ ಮುಗಿದುಹೋಗುತ್ತದೆ.

ಕೆರೆ ಕಟ್ಟೆಗಳು ದುರಸ್ತಿ ಕಂಡು ದಶಕಗಳು ಕಳೆದಿವೆ. ತೂಬುಗಳು ಶಿಥಿಲಗೊಂಡಿವೆ, ಕೋಡಿ ಹರಿಯುವುದು ನಿಂತು ಹೋಗಿದೆ. ಕೆರೆ ಆಶ್ರಯದಲ್ಲಿ ಭತ್ತವೂ ಇಲ್ಲ. ಗದ್ದೆ ಪಾಲನೆ ಮಾಡುತ್ತಿದ್ದ ನೀರುಗಂಟಿಯೂ ಇಲ್ಲ. ಕೆರೆಗಳ ಹೂಳು ತೆಗೆಯುವ ಕಾರ್ಯ ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ. ಅಲ್ಲೊಂದು ಇಲ್ಲೊಂದು ಕೆರೆಯಲ್ಲಿ ಅಷ್ಟುಷ್ಟು ಪ್ರಮಾಣದಲ್ಲಿ ಹೂಳು ತೆಗೆದಿರುವುದನ್ನು ಬಿಟ್ಟರೆ ಈ ಕೆಲಸ ವ್ಯಾಪಕವಾಗಿ ನಡೆದಿಲ್ಲ.

ಅಭಿವೃದ್ಧಿ ಸಂಘ: ತಾಲ್ಲೂಕಿನಲ್ಲಿ ಬೆರಳೆಣಿಕೆಯಷ್ಟು ಕೆರೆ ಅಭಿವೃದ್ಧಿ ಸಂಘಗಳು ಮಾತ್ರ ಅಸ್ತಿತ್ವದಲ್ಲಿವೆ. ಆದರೆ ಅವುಗಳಿಗೆ ಅಗತ್ಯ ಪ್ರಮಾಣದ ಆರ್ಥಿಕ ಅನುಕೂಲದ ಕೊರತೆಯಿಂದಾಗಿ, ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಸಾಧ್ಯವಾಗಿಲ್ಲ. ಗದ್ದೆ ಬೇಸಾಯ ಬಿಟ್ಟಿರುವ ರೈತರಲ್ಲಿ ಕೆರೆಗಳ ಅಭಿವೃದ್ಧಿ ಬಗ್ಗೆ ಕಾಳಜಿ ಕಂಡುಬರುತ್ತಿಲ್ಲ. ಫಲಾನುಭವಿಗಳೇ ಸುಮ್ಮನಾದರೆ ಅಭಿವೃದ್ಧಿ ಹೇಗೆ ಸಾಧ್ಯ ಎಂಬ ಪ್ರಶ್ನೆ ಎದುರಾಗುತ್ತದೆ.

ನಾಪತ್ತೆ: ಇನ್ನು ಪಟ್ಟಣ ಸಮೀಪದ ಕೆರೆಗಳು ಅಭಿವೃದ್ಧಿಯ ಹೆಸರಲ್ಲಿ ಅಸ್ತಿತ್ವ ಕಳೆದುಕೊಂಡಿವೆ. ಶ್ರೀನಿವಾಸಪುರದ ಪಕ್ಕದಲ್ಲಿ ತಾಲ್ಲೂಕಿನಲ್ಲಿಯೇ ಅತಿ ದೊಡ್ಡದಾದ ಅಮಾನಿ ಕೆರೆ ಇದೆ. ಈ ಕೆರೆಯ ಒಂದು ಭಾಗವನ್ನು ಸರ್ಕಾರಿ ಕಟ್ಟಡಗಳು, ಕ್ರೀಡಾಂಗಣ ನಿರ್ಮಾಣ ಹಾಗೂ ವಸತಿ ಹೀನರಿಗೆ ಮನೆ ಕಟ್ಟಿಕೊಡಲು ಬಳಸಿಕೊಳ್ಳಲಾಗಿದೆ.

ಪಟ್ಟಣದ ಅಂಚಿನಲ್ಲಿದ್ದ ಈಚಲು ಕುಂಟೆ ಕೆರೆಯಲ್ಲಿ ಸರ್ಕಾರಿ ಕಟ್ಟಡಗಳು ಹಾಗೂ ಜನ ವಸತಿಗಳು ಎದ್ದು ನಿಂತಿವೆ. ಪಟ್ಟಣದ ಇನ್ನೊಂದು ದಿಕ್ಕಿನಲ್ಲಿದ್ದ ಬೋವಿ ನಾಚಪಲ್ಲಿ ಕೆರೆ ಅಂಗಳದಲ್ಲಿ ಎಪಿಎಂಸಿ ಮಾರುಕಟ್ಟೆ ಸ್ಥಾಪಿತವಾಗಿದೆ. ಉಳಿದ ಭಾಗವನ್ನು ಗೃಹ ನಿರ್ಮಾಣಕ್ಕಾಗಿ ಬಳಸಿಕೊಳ್ಳಲಾಗಿದೆ.

ಈ ಮೂರೂ ಕೆರೆಗಳು ನೀರಿನಿಂದ ತುಂಬಿ ತುಳುಕುತ್ತಿದ್ದ ಕಾಲದಲ್ಲಿ ಪಟ್ಟಣದಲ್ಲಿ ಅಂತರ್ಜಲ ಸಮಸ್ಯೆ ಇರಲಿಲ್ಲ. ಈಗ ಕೆರೆ ತುಂಬಿ ನೀರು ಹೊರಗೆಳೆದ ಮೇಲೆ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ. ಕೊಳವೆ ಬಾವಿಗಳಲ್ಲಿ ನಿರೀಕ್ಷಿತ ಪ್ರಮಾಣದ ನೀರು ಸಿಗುತ್ತಿಲ್ಲ.
-ಆರ್.ಚೌಡರೆಡ್ಡಿ

ಶ್ರೀನಿವಾಸಪುರವೇ `ದೊಡ್ಡಣ್ಣ'
ಕೆ.ನರಸಿಂಹಮೂರ್ತಿ

ಪ್ರಜಾವಾಣಿ ವಾರ್ತೆ
ಕೋಲಾರ: ಇಡೀಜಿಲ್ಲೆಯಲ್ಲಿ ಕೆರೆ ಒತ್ತುವರಿ ವಿಚಾರದಲ್ಲಿ ಶ್ರೀನಿವಾಸಪುರ ತಾಲ್ಲೂಕು ದೊಡ್ಡಣ್ಣನಂತೆ ಕಾಣುತ್ತದೆ. ಜಿಲ್ಲೆಯ ಐದು ತಾಲ್ಲೂಕಿನ ಪೈಕಿ ಈ ತಾಲ್ಲೂಕಿನಲ್ಲಿ ಹೆಚ್ಚು ಕೆರೆ ಪ್ರದೇಶ ಒತ್ತುವರಿಯಾಗಿದೆ ಎಂಬುದು ದಾಖಲೆಗಳಿಂದ ತಿಳಿದುಬರುತ್ತದೆ.

ದೊಡ್ಡ ಕೆರೆ, ಸಣ್ಣ ಕೆರೆ  ಎಂಬ ವ್ಯತ್ಯಾಸವೇ ಇಲ್ಲದೆ ಒಟ್ಟಾರೆ 12,684 ಎಕರೆ ಕೆರೆ ಪ್ರದೇಶದ ಪೈಕಿ 2385 ಎಕರೆಯಷ್ಟು ಕೆರೆ ಭೂಮಿ ಒತ್ತುವರಿಯಾಗಿದೆ ಎಂದು 2011ರ ನವೆಂಬರ್ 3ರಂದು ಜಿಲ್ಲಾಧಿಕಾರಿ ಕಚೇರಿಗೆ ತಹಶೀಲ್ದಾರರು ಸಲ್ಲಿಸಿರುವ ವರದಿಯಲ್ಲಿ ಮಾಹಿತಿ ನೀಡಲಾಗಿದೆ. ಆ ನಂತರದ ಬೆಳವಣಿಗೆಗಳ ಬಗ್ಗೆ ಸದ್ಯಕ್ಕೆ ಎಲ್ಲಿಯೂ ಮಾಹಿತಿ ಲಭ್ಯವಿಲ್ಲ.

ಗ್ರಾಮ ಪಂಚಾಯಿತಿ, ಸಣ್ಣ ನೀರಾವರಿ ಇಲಾಖೆ, ಜಲಾನಯನ ಇಲಾಖೆಯ ಉಸ್ತುವಾರಿಯಲ್ಲಿರುವ ತಾಲ್ಲೂಕಿನ ಐದು ಹೋಬಳಿಗಳ ವ್ಯಾಪ್ತಿಯಲ್ಲಿರುವ ಬಹಳಷ್ಟು ಕೆರೆಗಳು ಒತ್ತುವರಿಯಾಗಿವೆ. ಒಟ್ಟಾರೆ ತಾಲ್ಲೂಕಿನ ರಾಯಲ್ಪಾಡು, ರೋಣೂರು, ನೆಲವಂಕಿ, ಯಲ್ದೂರು, ಕಸಬಾ ಹೋಬಳಿಯಲ್ಲಿ ಸಣ್ಣ ಕೆರೆಗಳೂ ಕೂಡ ಒತ್ತುವರಿಯಾಗಿವೆ. ತಾಲ್ಲೂಕಿನ ಗಡಿಯಂಚಿನಲ್ಲಿರುವ ಕೆರೆಗಳಿಗೂ ಈ ವಿಷಯದಲ್ಲಿ ಜನ ರಿಯಾಯಿತಿ ನೀಡಿಲ್ಲ. ಹಲವೆಡೆ ಕೆರೆ ಸುತ್ತಮುತ್ತನ ಗ್ರಾಮಸ್ಥರೇ ಒತ್ತುವರಿ ಮಾಡಿದ್ದಾರೆ.

ನಿದರ್ಶನಕ್ಕೆ ನೆರೆಯ ಆಂಧ್ರಪ್ರದೇಶಕ್ಕೆ ಅತಿ ಹತ್ತಿರದಲ್ಲಿರುವ, ತಾಲ್ಲೂಕಿನ ರಾಯಲ್ಪಾಡು ಹೋಬಳಿಗೆ ಸೇರಿದ ಮುದಿಮಡುಗು ಗ್ರಾಮವನ್ನೇ ನಿದರ್ಶನಕ್ಕೆ ತೆಗೆದುಕೊಳ್ಳಬಹುದು. ಈ ಗ್ರಾಮ ವ್ಯಾಪ್ತಿಯಲ್ಲಿ 87 ಎಕರೆ ಪ್ರದೇಶದಲ್ಲಿ 4 ಕೆರೆಗಳಿದ್ದು ಅವುಗಳಲ್ಲಿ 18 ಎಕರೆಗಿಂತಲೂ ಹೆಚ್ಚು ಪ್ರದೇಶವನ್ನು ಒತ್ತುವರಿ ಮಾಡಲಾಗಿದೆ.

ರೋಣೂರು ಬೋಗಳಿಯ ಆರ್.ತಿಮ್ಮಸಂದ್ರ ಕೆರೆಯನ್ನು 100 ಪ್ರದೇಶದಷ್ಟು ಒತ್ತುವರಿ ಮಾಡಲಾಗಿದೆ!

ಹೆಚ್ಚು ಒತ್ತುವರಿ: 10 ಮತ್ತು ಅದಕ್ಕಿಂತಲೂ ಹೆಚ್ಚು ಎಕರೆಯಷ್ಟು ಒತ್ತುವರಿಯಾಗಿರುವ ತಾಲ್ಲೂಕಿನ ಕೆರೆಗಳ ವಿವರ ಹೀಗಿದೆ (ಒತ್ತುವರಿ ಪ್ರಮಾಣ ಆವರಣದಲ್ಲಿದೆ):

ಮುದಿಮಡಗಿನ ಚೆನ್ನಮ್ಮ ನಾಯಕನ ಕೆರೆ, ಚಿಂತಮಾನಿಪಲ್ಲಿ ಕೆರೆ (ತಲಾ 10 ಎಕರೆ) ,ಲೋಚರೆಡ್ಡಿಪಲ್ಲಿ ಕೆರೆ 16.20), ರೋಣೂರು ದೊಡ್ಡ ಕೆರೆ (38), ರೋಣೂರು ತಿಮ್ಮಸಂದ್ರ ಕೆರೆ (25), ಸೋಮಯಾಜಲಹಳ್ಳಿಯ ಕೊಂಡರಾಜ ಕೆರೆ (16), ಕೊಳಗುರ್ಕಿ ಕೆರೆ (15), ತಾಡಿಗೋಳು ಖರಾಬು ಕೆರೆ ಅಂಗಳ (10), ದೊಡ್ಡ ಕೆರೆ ಖರಾಬು (45), ತಾಡಿಗೋಳು ಹೊಸಕೆರೆ ಖರಾಬು(15), ಕಮಕಂಪಲ್ಲಿ ಪಿಲ್ಲಾಜಿ ಕೆರೆ ಖರಾಬು (20), ಕಪ್ಪಲ್ಲಿ ಸರ್ಕಾರಿ ಕೆರೆ ಖರಾಬು (15), ಜಂಗಮಶೆಟ್ಟಿ ಹಳ್ಳಿ ಖರಾಬು ಸರ್ಕಾರಿ ಕೆರೆ (10), ಯಚ್ಚನಹಳ್ಳಿ ಸರ್ಕಾರಿ ಕೆರೆ (35), ನೀಲಮಾಕಲ ಕೆರೆ (15), ಗುಳ್ಳಕುಂಟೆ ದೊಡ್ಡಕೆರೆ (15.20), ಪೆಗಳಪಲ್ಲಿ ಕೆರೆ (12.10), ಖರಾಬ್ ಕೆರೆ ಅಂಗಳ (10.20), ಪೂರ್ಣಪಲ್ಲಿಯ ಎಲುವಳ ಕೆರೆ (11.20), ಪಾತಬಲ್ಲಿಪಲ್ಲಿ ಕೆರೆ (30.20), ಕೊರ್ನೆಲ್ಲಿ ಕೆರೆ (25.10), ಮಲ್ದೇಪಲ್ಲಿ ಕೆರೆ (20.16), ರಾಜಗುಂಡ್ಲಹಳ್ಳಿ ದೊಡ್ಡಕೆರೆ (10.20), ಚೆನ್ನಯ್ಯಗಾರಿಪಲ್ಲಿ ಕೆರೆ ಅಂಗಳ (12.10), ಇಮರಕುಂಟೆ ಕೆರೆ (15), ಹೊದಲಿ ಕೆರೆ (30), ದೇವಲಪಲ್ಲಿಕೆರೆ (40), ಚೊಕ್ಕನಹಳ್ಳಿ ಕೆರೆ (40), ವೀರತಿಮ್ಮನಹಳ್ಳಿ ಕೆರೆ (30), ಗೋಪಾಲಪುರ ಕೆರೆ (10),ಈಜುಕುಂಟೆ ಕೆರೆ (24.08), ಕಂಬಾಲಪಲ್ಲಿ ಕೆರೆ (30),  ನೀಲಟೂರು(50), ಕೊಟ್ರಗುಳಿ ಮತ್ತು ಚಾಂಪಲ್ಲಿ ಕೆರೆ (ತಲಾ 20), ನಾರವಮಕಲಪಲ್ಲಿ ಕೆರೆ (21), ಮಣಿಗಾನಹಳ್ಳಿ ಕೆರೆ (25), ಆರಿಕುಂಟೆ ಮತ್ತು ಚಕ್ಕಾರ‌್ಲಪಲ್ಲಿ ಕೆರೆ(ತಲಾ 15), ಕೊತ್ತೂರು ಕೆರೆ (19), ಬಂಡಪಲ್ಲಿ ಕೆರೆ (12), ನಂಬುವಾರಿಪಲ್ಲಿಯ ದೊಡ್ಡೋಬಳನಾಯಕಮ ಕೆರೆ ಮತ್ತು ದೇವರೆಡ್ಡಿಪಲ್ಲಿಯ ಮದ್ದಿರೆಡ್ಡಿ ಕೆರೆ (ತಲಾ 10), ಲಕ್ಷ್ಮಿಪುರದ ಕುಮಾರ ಓಬಳನಾಯಕನ ಕೆರೆ (10), ಲಕ್ಷ್ಮಿಸಾಗರ ಕೆರೆ (10.20)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT