ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತದ ಉತ್ಸಾಹ; ಮುಗಿಯದ ಕಿರಿಕಿರಿ

Last Updated 5 ಫೆಬ್ರುವರಿ 2011, 17:10 IST
ಅಕ್ಷರ ಗಾತ್ರ

ಬೆಂಗಳೂರು: 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಎರಡನೆಯ ದಿನವಾದ ಶನಿವಾರವೂ ಸಾಹಿತ್ಯ ಪ್ರೇಮಿಗಳಲ್ಲಿ ಉತ್ಸಾಹದ ಬುಗ್ಗೆಯನ್ನು ಚಿಮ್ಮಿಸಿತ್ತು.

ದೂರದ ಊರುಗಳಿಂದ ಬಂದಿದ್ದ ಸಹಸ್ರಾರು ಸಂಖ್ಯೆಯ ಸಾಹಿತ್ಯ ಪ್ರೇಮಿಗಳು ತಮ್ಮ ನೆಚ್ಚಿನ ಸಾಹಿತಿ/ಬರಹಗಾರರನ್ನು ಹತ್ತಿರದಿಂದ ಕಂಡು, ಅವರೊಂದಿಗೆ ಮಾತನಾಡಿ, ಅವರ ಹಸ್ತಾಕ್ಷರ ಪಡೆದು ಸಂಭ್ರಮಿಸುತ್ತಿದ್ದ ದೃಶ್ಯಗಳು ಅಲ್ಲಲ್ಲಿ ಕಂಡುಬಂದವು.ಸಾಹಿತ್ಯಾಸಕ್ತರ ಸಂಭ್ರಮ, ಉತ್ಸಾಹದ ನಡುವೆಯೂ ಶುಕ್ರವಾರ ಕಂಡುಬಂದ ಕೆಲವು ಸನ್ನಿವೇಶಗಳು ಮತ್ತೆ ಕಂಡುಬಂದವು.

ಇಕ್ಕಟ್ಟಿನ ಪ್ರವೇಶ ದ್ವಾರ

ಮಹಾಮಂಟಪದ ಇಕ್ಕಟ್ಟಾದ ಪ್ರವೇಶ ದ್ವಾರ ಶನಿವಾರವೂ ಸಾಹಿತ್ಯಾಸಕ್ತರ ಪಾಲಿಗೆ ಕಿರಿಕಿರಿ ನೀಡುವ ಸ್ಥಳವಾಯಿತು. ಶನಿವಾರ ನಗರದ ಹಲವು ಕಂಪೆನಿಗಳಿಗೆ ರಜೆ ಇರುವ ಕಾರಣ ಸಮ್ಮೇಳನಕ್ಕೆ ಆಗಮಿಸಿದವರ ಸಂಖ್ಯೆಯೂ ಹೆಚ್ಚೇ ಇತ್ತು. ಜನ ಪ್ರವೇಶದ್ವಾರದಲ್ಲಿ ಏದುಸಿರು ಬಿಡುತ್ತಾ ಸಾಗುತ್ತಿದ್ದ ದೃಶ್ಯ ತೀರಾ ಸಾಮಾನ್ಯವಾಗಿತ್ತು. ಪೊಲೀಸರು ಕೂಡ ಜನರಿಗೆ ಅತ್ತಿತ್ತ ಹೋಗಿಬರಲು ನೆರವಾಗುತ್ತಿದ್ದರು, ಪಡಿಪಾಟಲು ಪಡುತ್ತಿದ್ದರು, ಏದುಸಿರು ಬಿಡುತ್ತಿದ್ದರು!

ಮುಂದುವರಿದ ಪ್ರೇಕ್ಷಕರ ಗೋಳು
ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆಯ ಮೇಲಿರುವ ಒಂದು ಎಲ್‌ಇಡಿ ಪರದೆಯನ್ನು ಹೊರತುಪಡಿಸಿದರೆ ಇಡೀ ಸಭಾಂಗಣದಲ್ಲಿ ಎಲ್ಲಿಯೂ ಒಂದೇ ಒಂದು ಎಲ್‌ಸಿಡಿ ಅಥವಾ ಎಲ್‌ಇಡಿ ಪರದೆ ಇಲ್ಲ. ರಾಜ್ಯದ ಮೂಲೆ ಮೂಲೆಗಳಿಂದ ಬಂದಿರುವ ಅಸಂಖ್ಯಾತ ಸಾಹಿತ್ಯಾಸಕ್ತರಿಗೆ ಇದು ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.

ಸಭಾಂಗಣದ ಹಿಂಭಾಗದಲ್ಲಿ ಕುಳಿತಿರುವವರಿಗೆ ವೇದಿಕೆಯ ಮೇಲೆ ನಡೆಯುವ ಯಾವುದೇ ಕಾರ್ಯಕ್ರಮಗಳನ್ನು ಸ್ವಲ್ಪವೂ ನೋಡಲಾಗದ ಪರಿಸ್ಥಿತಿ ಉಂಟಾಯಿತು. ‘ಮುಂದಿನ ಸಮ್ಮೇಳನಗಳಲ್ಲಾದರೂ ಕಸಾಪ ಈ ಸಮಸ್ಯೆಯನ್ನು ಇಲ್ಲವಾಗಿಸಲಿ’ ಎಂದು ಬಿಜಾಪುರದಿಂದ ಬಂದಿದ್ದ ಬಸವರಾಜ ಅಭಿಪ್ರಾಯ ವ್ಯಕ್ತಪಡಿಸಿದರು.

ಬಗೆಹರಿಯದ ನೋಂದಣಿ ಗೊಂದಲ

ವಿವಿಧ ಊರುಗಳಿಂದ ಆಗಮಿಸಿರುವ ಪ್ರತಿನಿಧಿಗಳ ನೋಂದಣಿ ಕಾರ್ಯ ಮತ್ತು ಅವರಿಗೆ ಸಾಹಿತ್ಯ ಸಮ್ಮೇಳನದ ಕಿಟ್ ವಿತರಿಸುವ ಕಾರ್ಯ ಶುಕ್ರವಾರ ಸಮರ್ಪಕವಾಗಿ ನಡೆಯದೆ ಸಾಕಷ್ಟು ಗೊಂದಲ ಉಂಟಾಗಿತ್ತು. ದುರದೃಷ್ಟವಶಾತ್ ಇದೇ ಪರಿಸ್ಥಿತಿ ಶನಿವಾರವೂ ಮುಂದುವರೆಯಿತು. ಅನೇಕ ಮಂದಿ ಅದಾಗಲೇ ನೋಂದಣಿ ಮಾಡಿಸಿಕೊಂಡು ಕಸಾಪ ಪ್ರತಿನಿಧಿಗಳ ಬಳಿ ಕಿಟ್ ನೀಡಿ ಕೇಳುತ್ತಿದ್ದರು.

ಕಿಟ್ ವಿಚಾರವಾಗಿ ಕಸಾಪ ಅಧಿಕಾರಿಗಳು ಮತ್ತು ಪ್ರತಿನಿಧಿಗಳ ನಡುವೆ ನಡೆದ ವಾಕ್ಸಮರ ಪೊಲೀಸರ ಮಧ್ಯಸ್ಥಿಕೆಯಿಂದ ಶಮನಗೊಂಡ ಘಟನೆಯೂ ಶನಿವಾರ ನಡೆಯಿತು.

ಸ್ಮೈಲ್ ಪ್ಲೀಸ್...
ತಮ್ಮ ನೆಚ್ಚಿನ ಸಾಹಿತಿ ಮತ್ತು ಬರಹಗಾರರ ಬದಿಯಲ್ಲಿ ನಿಂತು ಸಾಹಿತ್ಯ ಪ್ರೇಮಿಗಳು ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದ ದೃಶ್ಯಗಳೂ ಶನಿವಾರ ಕಂಡುಬಂದವು.

ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಅಭಿಮಾನಿಗಳು ತಮ್ಮ ಇಷ್ಟದ ಸಾಹಿತಿಯ ಪಕ್ಕದಲ್ಲಿ ನಿಂತು ಫೋಟೊ ತೆಗೆಸಿಕೊಂಡರು. ಸಮ್ಮೇಳನಕ್ಕೆ ಬಂದಿದ್ದ ಜ್ಞಾನಪೀಠ ಪುರಸ್ಕೃತ ಸಾಹಿತಿ ಯು.ಆರ್. ಅನಂತಮೂರ್ತಿಯವರೊಂದಿಗೆ ಶುಕ್ರವಾರ ಅವರ ಅನೇಕ ಅಭಿಮಾನಿಗಳು ಭಾವಚಿತ್ರ ತೆಗೆಸಿಕೊಂಡಿದ್ದರು.

ದೂರದೂರುಗಳಿಂದ ಬಂದಿದ್ದ ಸಹಸ್ರಾರು ಸಾಹಿತ್ಯ ಪ್ರೇಮಿಗಳು ತಮ್ಮ ನೆಚ್ಚಿನ ಸಾಹಿತಿ/ ಬರಹಗಾರರನ್ನು ಹತ್ತಿರದಿಂದ ಕಂಡು, ಮಾತನಾಡಿ, ಅವರ ಹಸ್ತಾಕ್ಷರ ಪಡೆದು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT