ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿನ ಅರ್ಥವನ್ನು ಅನನ್ಯವಾದ ರೀತಿಯಲ್ಲಿ ಕಟ್ಟಿಕೊಡುವುದು ಶ್ರೇಷ್ಠ ಸಾಹಿತ್ಯ

ಸಾಹಿತ್ಯ ಸಾಂಗತ್ಯ
Last Updated 6 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಭಾರತೀಯ ಸಾಹಿತ್ಯದೊಂದಿಗೆ ಜಗತ್ತಿನ ಸಾಹಿತ್ಯವನ್ನು ಓದಿಕೊಂಡಿದ್ದೀರಿ, ಓದನ್ನು ತೀರಾ ಹಚ್ಚಿಕೊಂಡದ್ದು ಯಾವಾಗ? ಈ ಓದಿನ ಪ್ರಯಾಣ ಹೇಗೆ ಆರಂಭವಾಯಿತು?
ನನಗೆ ಬಾಲ್ಯದಿಂದಲೂ ಓದುವ ಹಾಗೂ ಪುಸ್ತಕಗಳನ್ನು ಸಂಗ್ರಹಿಸುವ ಹುಚ್ಚು ಇತ್ತು. ಆದರೆ ಅದು ಕನ್ನಡ ಸಾಹಿತ್ಯಕ್ಕೆ ಸೀಮಿತವಾಗಿತ್ತು. ಇಂಟರ್‌ಮೀಡಿಯೇಟ್ ಪರೀಕ್ಷೆಯವರೆಗೆ ನಾನು ಕನ್ನಡವನ್ನೇ ಮುಖ್ಯ ವಿಷಯವನ್ನಾಗಿ ತೆಗೆದುಕೊಳ್ಳಬೇಕೆಂಬ ನಿರ್ಧಾರದಲ್ಲಿ ಇದ್ದೆ. ಹಾಗಾಗಿ ಕನ್ನಡ ಸಾಹಿತ್ಯದ ಓದಿನಲ್ಲೇ ತೊಡಗಿಕೊಂಡಿದ್ದೆ. ಆದರೆ ಬಿ.ಎ. ಗೆ ಇಂಗ್ಲಿಷನ್ನು ಮುಖ್ಯ ವಿಷಯವನ್ನಾಗಿ ತೆಗೆದುಕೊಳ್ಳುವ ಪ್ರಸಂಗ ಬಂದಾಗ, ಕನ್ನಡದ ಜೊತೆಗೆ ಇಂಗ್ಲಿಷ್ ಸಾಹಿತ್ಯದ ಓದಿಗೆ ತೊಡಗಿದೆ. ಮುಂದೆ ಇಂಗ್ಲಿಷ್ ಅಧ್ಯಾಪಕನಾದ ಮೇಲೆ ಅನಿವಾರ್ಯವಾಗಿ ಹೆಚ್ಚು ಹೆಚ್ಚು ಇಂಗ್ಲಿಷ್ ಸಾಹಿತ್ಯವನ್ನು ಓದಬೇಕಾಯಿತು. ಜೊತೆಗೆ ವಿಮರ್ಶೆಯ ಬರವಣಿಗೆಗೆ ತೊಡಗಿದ್ದರಿಂದ ಇಂಗ್ಲಿಷ್ ಸಾಹಿತ್ಯದ ಜೊತೆಗೆ ಜಾಗತಿಕ ಸಾಹಿತ್ಯವನ್ನೂ ಓದಿಕೊಂಡೆ. ನಿವೃತ್ತಿಯ ನಂತರ ಮತ್ತೆ ಕನ್ನಡದ ಓದಿಗೆ ಹೆಚ್ಚು ಒತ್ತು ಕೊಡುತ್ತಿದ್ದೇನೆ. ಆದರೂ ನಾನು ಅಂಥ ದೊಡ್ಡ ಓದುಗನೇನೂ ಅಲ್ಲ. ಒಂದು ಮಾತು ಹೇಳುವುದಾದರೆ, ಓದು ಮತ್ತು ಬರಹದ ನಡುವೆ ಆಯ್ಕೆ ಮಾಡಿಕೊಳ್ಳುವ ಪ್ರಸಂಗ ಬಂದಾಗೆಲ್ಲ ನಾನು ಓದನ್ನೇ ಆರಿಸಿಕೊಳ್ಳಲು ಇಷ್ಟ ಪಡುತ್ತೇನೆ.

ನಿಮ್ಮ ಈ ವಿಶ್ರಾಂತ ಸಮಯವನ್ನು ಓದು ಬರಹಗಳ ಹೊರತಾಗಿ ಸದ್ಯ ಇನ್ನೂ ಯಾವ ಯಾವ ಚಟುವಟಿಕೆಗಳಲ್ಲಿ ವಿನಿಯೋಗಿಸುತ್ತಿದ್ದೀರಿ?
ನಾನು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಅಧ್ಯಾಪಕನಾಗಿದ್ದಾಗ - ನಾನು, ಚಂಪಾ, ಪಟ್ಟಣಶೆಟ್ಟಿ ಕೂಡಿ `ಸಂಕ್ರಮಣ' ಪತ್ರಿಕೆಯನ್ನು ಆರಂಭಿಸಿದೆವು. ಅದರ ಕೆಲಸವೂ ಸಾಕಷ್ಟು ಇತ್ತು. ಅದು ಆ ಕಾಲದಲ್ಲಿ ಒಳ್ಳೆಯ ಹೆಸರು ಪಡೆದಿತ್ತು. ಮುಂದೆ ನಾನು 1970ರಿಂದ 84ರವರೆಗೆ ಕಲಬುರ್ಗಿಯಲ್ಲಿ ಇದ್ದಾಗ `ರಂಗಮಾಧ್ಯಮ' ಎಂಬ ಹೆಸರಿನ ರಂಗತಂಡವೊಂದನ್ನು ಕಟ್ಟಿಕೊಂಡು ವರ್ಷಕ್ಕೆ ಕನಿಷ್ಠ ನಾಲ್ಕು ನಾಟಕಗಳನ್ನು ಆಡಿಸುವ ಕೆಲಸ ಕೈಗೊಂಡಿದ್ದೆ. ಅಲ್ಲಿ ನಟನಾಗಿ, ನಿರ್ದೇಶಕನಾಗಿ, ಸಂಘಟಕನಾಗಿ ಕೆಲಸ ಮಾಡಬೇಕಾಯಿತು. ಒಂದು ದೊಡ್ಡ ನಾಟಕೋತ್ಸವವನ್ನು ನಡೆಸಿದೆವು. ಇವೆಲ್ಲ ಕಲಬುರ್ಗಿಯ ಸಾಂಸ್ಕೃತಿಕ ಜೀವನದಲ್ಲಿ ದೊಡ್ಡ ಸಂಚಲನವನ್ನೇ ಉಂಟು ಮಾಡಿತು. ಧಾರವಾಡಕ್ಕೆ ಬಂದ ಮೇಲೆ ನಾಟಕದ ಕೆಲಸವನ್ನು ಕೈಬಿಟ್ಟೆ. ಆದರೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾದಾಗ ಅನೇಕ ಸಾಹಿತ್ಯಕ ಕಾರ್ಯಕ್ರಮಗಳನ್ನು ನಡೆಸುವ ಅವಕಾಶ ಸಿಕ್ಕಿತು. ಶತಮಾನದ ಸಂಕಲನಗಳನ್ನು ಪ್ರಕಟಿಸಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯಕಾರಿ ಸಮಿತಿಯ ಸದಸ್ಯನಾದಾಗ ಮತ್ತೆ ಹಲವಾರು ವಿಚಾರ ಸಂಕಿರಣ ಇತ್ಯಾದಿಗಳನ್ನು ಏರ್ಪಡಿಸಿದ್ದೆ.

ಈ ಹಿಂದೆ ನವ್ಯದ ವಿಮರ್ಶಕರಾಗಿ ದೊಡ್ಡ ಹೆಸರು ಮಾಡಿದವರು ನೀವು. ಇತ್ತೀಚೆಗೆ ಪ್ರಬಂಧ ಪ್ರಕಾರವನ್ನು ಹೊಸ ರೂಪದಲ್ಲಿ ಪ್ರಸ್ತುತ ಪಡಿಸುತ್ತಿರುವ ನಿಮಗೆ, ನೀವು ಕೈಗೊಂಡ ವಿಮರ್ಶೆಗಳಿಗಿಂತ ಈ ಮಾಧ್ಯಮ ಯಾವ ರೀತಿಯಲ್ಲಿ ಖುಷಿಕೊಟ್ಟಿದೆ?
ನಾನು ವಿಮರ್ಶಕನಾಗಬೇಕೆಂದು ಬಯಸಿದವನೇ ಅಲ್ಲ. `ಸಂಕ್ರಮಣ' ಪತ್ರಿಕೆಯ ಸಂಪಾದಕತ್ವದ ಹೊಣೆ ಹೊತ್ತ ಸಂದರ್ಭದಲ್ಲಿ ಅದು ಹೇಗೋ ವಿಮರ್ಶಕನಾಗಿಬಿಟ್ಟೆ. ಒಂದು ಸಲ `ವಿಮರ್ಶಕ' ಎಂದು ಅನಿಸಿಕೊಂಡ ಮೇಲೆ ಅದರಿಂದ ಬಿಡಿಸಿಕೊಳ್ಳುವುದು ಬಹಳ ಕಷ್ಟ. ಆದರೆ ನನಗೆ ಮೊದಲಿನಿಂದಲೂ ಸೃಜನಶೀಲ ಲೇಖಕನಾಗಬೇಕೆಂಬ ಆಶೆ ಇತ್ತು. ಆರಂಭದಲ್ಲಿ ಕವಿತೆ, ಕತೆ, ಕಾದಂಬರಿ, ನಾಟಕ, ಪ್ರಬಂಧ- ಎಲ್ಲವನ್ನೂ ಬರೆದೆ. ಆದರೆ ವಿಮರ್ಶೆಗೆ ತೊಡಗಿದ ಮೇಲೆ ಅವೆಲ್ಲ ಹಿಂದೆ ಬಿದ್ದವು. ಈಚೆಗೆ  ಹಿಂತಿರುಗಿ ನೋಡಿದಾಗ, ನಾನೇಕೆ ಅವುಗಳ ಕಡೆಗೆ ಗಮನ ಕೊಡುತ್ತಿಲ್ಲಎಂದು ಯೋಚನೆ ಸುರು ಆಯಿತು. ಆಗೊಂದು ಈಗೊಂದರಂತೆ ನಾಲ್ಕು ಪ್ರಬಂಧಗಳನ್ನು ಬರೆದಿದ್ದೆ. ಇನ್ನಷ್ಟು ಬರೆಯಬೇಕು ಎನಿಸಿ, ಐದು ಪ್ರಬಂಧಗಳನ್ನು ಬರೆದುಬಿಟ್ಟೆ. ವಿಮರ್ಶೆಯನ್ನು ಬರೆಯುವಾಗ ಸಿಗುವ ಖುಷಿಯೇ ಬೇರೆ. ಅಲ್ಲಿ ಏನಾದರೂ ಹೊಸದನ್ನು ಹೇಳಲು ಸಾಧ್ಯವಾದಾಗ ಸಿಗುವ ಖುಷಿ ಅದು. ಆದರೆ ಸೃಜನಶೀಲ ಕೃತಿಗಳನ್ನು ರಚಿಸಿದಾಗ ಸಿಗುವ ಖುಷಿ ಬೇರೆ ಬಗೆಯದು. ಆ ಖುಷಿಗಳ ನಡುವೆ ಗುಣಾತ್ಮಕ ವ್ಯತ್ಯಾಸವಿದೆ. ವಿಮರ್ಶೆಯೂ ಒಂದು ರೀತಿಯಲ್ಲಿ ಸೃಜನಶೀಲ ಬರವಣಿಗೆ ಎಂದರೂ, ನಿಜವಾಗಿ ಸೃಜನಶೀಲತೆಯ ಹಿಂದೆ ವಿಶಿಷ್ಟವಾದ, ರಹಸ್ಯಮಯವಾದ ಅಂತಃಪ್ರೇರಣೆ ಕೆಲಸ ಮಾಡುತ್ತಿರುತ್ತಿರುತ್ತದೆ. ಅದನ್ನು ವಿವರಿಸುವದು ಕಷ್ಟ. ಆದರೆ ಪ್ರಬಂಧಗಳ ಬರವಣಿಗೆಯಲ್ಲಿ ವಿಮರ್ಶೆಯ ಬರವಣಿಗೆ ಒಳಗೊಳ್ಳದ ನಿರಾಳತೆ, ಆಪ್ತತೆ, ಉಲ್ಲಾಸ, ಹಾಸ್ಯ, ಕಥನ, ಭಾಷೆಯ ಜೊತೆಗಿನ ಆಟ ಇತ್ಯಾದಿಗಳನ್ನು ತರಲು ಸಾಧ್ಯವಾದದ್ದು ನನಗೆ ಖುಷಿಕೊಟ್ಟಿತು. ಜೊತೆಗೆ, ಅಭಿವ್ಯಕ್ತಿಯ ಸಾಧನವಾಗಿಯೂ ನನಗೆ ಅದು ಒದಗಿ ಬಂತು. ನಾನು ಈಚೆಗೆ ಬರೆದ ವ್ಯಕ್ತಿ ಚಿತ್ರಗಳಲ್ಲೂ ಇಂಥ ಆತ್ಮಾಭಿವ್ಯಕ್ತಿಗೆ ಪ್ರಯತ್ನಿಸಿದ್ದೆೀನೆ.

ಇಂಗ್ಲಿಷಿನ ಅಧ್ಯಾಪಕರಾಗಿ ಹಲವು ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ಕಲಿಸಿದ್ದೀರಿ, ಕಲಿಸುವದಕ್ಕಾಗಿ ನಡೆಯುವ ಅಕೆಡೆಮಿಕ್ ಓದು ಹಾಗೂ ಸ್ವಂತ ಖುಷಿಗಾಗಿ ನಡೆಯುವ ಓದನ್ನು ನೀವು ಹೇಗೆ ನೋಡುತ್ತೀರಿ?
ಕಲಿಸುವದಕ್ಕಾಗಿ ನಡೆಸುವ ಓದು ಅನಿವಾರ್ಯವಾದದ್ದು. ಕಲಿಸುವುದಕ್ಕಾಗಿ ಅಲ್ಲದಿದ್ದರೆ ಅದರಲ್ಲಿಯ ಎಷ್ಟೋ ಕೃತಿಗಳನ್ನು ನಾವು ಓದುತ್ತಿರಲೇ ಇಲ್ಲ. ಅವುಗಳಲ್ಲಿ ಹೆಚ್ಚಿನವು ನಾವು ಓದಲೇ ಬೇಕಾದ ಕೃತಿಗಳಿರುತ್ತವೆ. ಮಿಲ್ಟನ್ನನ `ಪ್ಯಾರಡೈಸ್ ಲಾಸ್ಟ್' ಕಾವ್ಯವನ್ನು ಕಲಿಸುವುದಕ್ಕಾಗಿ ಅಲ್ಲದಿದ್ದರೆ ಸಂತೋಷಕ್ಕಾಗಿ ಓದುವುದು ಕಷ್ಟ. ಆದರೆ ಅದು ಓದಲೇ ಬೇಕಾದ ಕೃತಿ. ಇಂಥ ಕೃತಿಗಳನ್ನು ಓದುವುದರಿಂದ ನಮ್ಮ ಓದಿನ ಆಳ ಹೆಚ್ಚಾಗುತ್ತದೆ, ಸಾಹಿತ್ಯದ ಬಗೆಗಿನ ನಮ್ಮ ತಿಳಿವಳಿಕೆಗೆ ಹೆಚ್ಚಿನ ಅರ್ಥಪೂರ್ಣತೆ ಬರುತ್ತದೆ. ಆದರೂ ಇದು ಕಷ್ಟಪಟ್ಟು ಓದಬೇಕಾದ ಸಾಹಿತ್ಯ. ಯಾವುದೋ ವಿಚಾರ ಸಂಕಿರಣಕ್ಕೊ, ಲೇಖನಕ್ಕೊ ಓದಲೇ ಬೇಕಾದ ಇನ್ನೂ ಕೆಲವು ಕೃತಿಗಳಿರುತ್ತವೆ. ಅದೂ ಒಂದು ರೀತಿಯ ಒತ್ತಾಯದ ಓದೇ. ಆದರೆ ಕಲಿಸುವುದಕ್ಕಾಗಿ ಓದುವಾಗ ಪಡಬೇಕಾದಷ್ಟು ಕಷ್ಟ, ಸಿದ್ಧತೆ ಇಲ್ಲಿ ಇರುವುದಿಲ್ಲ. ಒಂದು ಒಳ್ಳೆಯ ಕೃತಿಯನ್ನು ಕಲಿಸುವ ಅಥವಾ ವಿಮರ್ಶಿಸುವ ಒತ್ತಾಯವಿಲ್ಲದೇ ಓದುವುದು ನಿಜಕ್ಕೂ ಖುಷಿಯ ಕೆಲಸ. ಅದೊಂದು ನಿರಾಳ ಅನುಭವ. ಕೃತಿ ಚೆನ್ನಾಗಿರದಿದ್ದರೆ ಅರ್ಧಕ್ಕೆ ಬಿಡುವ ಸ್ವಾತಂತ್ರ್ಯವೂ ಇಲ್ಲಿ ಇರುತ್ತದೆ. ಆದರೆ ಸ್ವಂತದ ಖುಷಿಗಾಗಿ ಓದಬೇಕೆಂದರೆ ನಾನು ಆರಿಸಿಕೊಳ್ಳುವುದು ಪತ್ತೇದಾರಿ ಕೃತಿಗಳನ್ನು. ಅದೊಂದು ಯಾವುದೇ ನಿರ್ಬಂಧವಿಲ್ಲದ ಓದಿನ ಖುಷಿ. ಅವುಗಳನ್ನು ಓದಿ ನೆನಪಿಟ್ಟುಕೊಳ್ಳಬೇಕೆಂಬ ನಿರ್ಬಂಧವೂ ಇರುವುದಿಲ್ಲ.

ಯಾವ ಸಾಹಿತ್ಯ ಕೃತಿಗಳು ನಿಮ್ಮ ಮೇಲೆ ಅತ್ಯಂತ ಪ್ರಭಾವ ಬೀರಿವೆ? ಅವು ನಿಮ್ಮ ಬದುಕು, ಸಾಹಿತ್ಯವನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಿವೆ ಎಂದು ನಿಮಗನ್ನಿಸಿವೆಯೇ?
ಇಂಥದೇ ಒಂದು ಕೃತಿ ಅಥವಾ ಇಂಥವನೇ ಒಬ್ಬ ಲೇಖಕ ನನ್ನ ಮೇಲೆ ಪ್ರಭಾವ ಬೀರಿದ್ದಾನೆ ಎಂದು ನಿಖರವಾಗಿ ಹೇಳುವುದು ಕಷ್ಟ. ನನ್ನ ಬಾಲ್ಯದಲ್ಲಿ, ನಾನೊಬ್ಬ ಸೃಜನಶೀಲ ಲೇಖಕನಾಗುತ್ತೇನೆ ಎಂದುಕೊಂಡಿದ್ದಾಗ ನನ್ನ ಮೇಲೆ ಪ್ರಭಾವ ಬೀರಿದ ಲೇಖಕ ಅ.ನ.ಕೃ ಅವರು. ಆದರೆ ನಾನು ಕಾಲೇಜಿಗೆ ಬರುವ ಹೊತ್ತಿಗೆ ಆಗಲೇ ಅ.ನ.ಕೃ ಆಕರ್ಷಣೆ ಮುಗಿದುಹೋಗಿತ್ತು. ನನ್ನ ವಿಮರ್ಶೆಯ ದಿನಗಳಲ್ಲಿ ಕೀರ್ತಿನಾಥ ಕುರ್ತಕೋಟಿ ಮತ್ತು ಟಿ.ಎಸ್.ಎಲಿಯಟ್‌ರ ವಿಮರ್ಶೆ ನನ್ನ ಮೇಲೆ ಪ್ರಭಾವ ಬೀರಿತ್ತು. ಆದರೆ ವಿಮರ್ಶೆ ಅವರನ್ನೆಲ್ಲ ಮೀರಿ ಮುಂದೆ ಹೋದದ್ದರಿಂದ ಅವರ ಪ್ರಭಾವ ತಾತ್ಕಾಲಿಕ ಮಾತ್ರ ಆಗಿತ್ತು. ಬದುಕನ್ನು, ಸಾಹಿತ್ಯವನ್ನು ನೋಡುವ ನನ್ನ ದೃಷ್ಟಿಕೋನವನ್ನೇ ಬದಲಿಸಿದ ದೊಡ್ಡ ಪ್ರಭಾವ ನನ್ನ ಮೇಲೆ ಆಗಿಲ್ಲವೆಂದೇ ಹೇಳಬಹುದು. ಹಾಗೆ ನನ್ನ ದೃಷ್ಟಿಕೋನದಲ್ಲಿ ಬದಲಾವಣೆಯೇನಾದರೂ ಆಗಿದ್ದರೆ, ಅದಕ್ಕೆ ನನ್ನ ಒಟ್ಟಿನ ಓದೇ ಕಾರಣ ಅನ್ನಬಹುದೇನೊ!

ನಿಮ್ಮ ಪ್ರಕಾರ ಅತ್ಯುತ್ತಮ ಸಾಹಿತ್ಯ ಕೃತಿ ಎಂದರೆ ಹೇಗಿರಬೇಕು? ನಿಮ್ಮ ವಿಸ್ತಾರವಾದ ಓದಿನ  ವ್ಯಾಪ್ತಿಯಲ್ಲಿ ಒಂದೆರಡು ಉದಾಹರಣೆ ಕೊಡಲು ಸಾಧ್ಯವೇ?
ಕೆ.ವಿ. ಸುಬ್ಬಣ್ಣನವರು ಒಂದು ಸಂದರ್ಭದಲ್ಲಿ `ಶ್ರೇಷ್ಠತೆಯ ವ್ಯಸನ' ಎಂಬ ಮಾತನ್ನು ಎಚ್ಚರಿಕೆಯ ರೀತಿಯಲ್ಲಿ ಬಳಸಿದ್ದರು. ಈಗ ಅದು ಸಿಕ್ಕ ಸಿಕ್ಕವರ ಬಾಯಲ್ಲಿ ಹರಿದಾಡಿ ಅರ್ಥ ಕಳೆದುಕೊಂಡಿದೆ. ಶ್ರೇಷ್ಠವಾದುದನ್ನು ಹೀಯಾಳಿಸುವ ವ್ಯಸನವಾಗಿಬಿಟ್ಟಿದೆ. ಆದರೆ ಶ್ರೇಷ್ಠ ಸಾಹಿತ್ಯ ಎಂಬುದರ ಅರ್ಥವಾದರೂ ಏನು? ಒಂದು ಕೃತಿ ಕೇವಲ ಸಾಹಿತ್ಯಕ  ದೃಷ್ಟಿಯಿಂದ ಶ್ರೇಷ್ಠವೆನಿಸಿಕೊಳ್ಳುವುದಿಲ್ಲ. ಬದುಕಿನ ಅರ್ಥವನ್ನು ಅನನ್ಯವಾದ ರೀತಿಯಲ್ಲಿ ಕಟ್ಟಿಕೊಡುತ್ತದೆಂಬ ಕಾರಣಕ್ಕಾಗಿ ಒಂದು ಕೃತಿ ಶ್ರೇಷ್ಠವೆನಿಸಿಕೊಳ್ಳುತ್ತದೆ. ಅದು ಬದುಕಿನ ಬಗ್ಗೆ ನಮ್ಮ ತಿಳಿವಳಿಕೆಯನ್ನು ಆಳಗೊಳಿಸುತ್ತದೆ. ಬದುಕನ್ನು ನೋಡಲು ಹೊಸ ದೃಷ್ಟಿಯನ್ನು ಕೊಡುತ್ತದೆ. ಬದುಕಿನ ಬಗ್ಗೆ ಹೊಸ ಅರ್ಥಗಳನ್ನು ಹೊಳೆಯಿಸುತ್ತದೆ. ಜೀವನದ ಬಗ್ಗೆ ನಮ್ಮ ಗೌರವ, ಪ್ರೀತಿಗಳನ್ನು ಬೆಳೆಸುತ್ತದೆ. ಶ್ರೇಷ್ಠ ಸಾಹಿತ್ಯ ಮಾತ್ರ ಬದುಕಿನ ಸೂಕ್ಷ್ಮಗಳನ್ನು ಹಿಡಿಯಬಲ್ಲದಾದ್ದರಿಂದ ಸಾಹಿತ್ಯ ಕೃತಿ ಶ್ರೇಷ್ಠವಾಗಿರಲೇ ಬೇಕಾಗುತ್ತದೆ. ಸಾಹಿತ್ಯದ ಪ್ರಾಥಮಿಕ ಮಾನದಂಡಗಳಿಗೇ ಎರವಾದ ಕೃತಿಗಳನ್ನು ರಚಿಸಿದವರು `ಶ್ರೇಷ್ಠತೆಯ ವ್ಯಸನ' ಎಂದು ಶ್ರೇಷ್ಠತೆಯನ್ನು ಟೀಕಿಸುವುದು ಹಾಸ್ಯಾಸ್ಪದವಾಗುತ್ತದೆ.

ಕುವೆಂಪು ಅವರ ಕಾದಂಬರಿಗಳು, ಶಿವರಾಮ ಕಾರಂತರ `ಮರಳಿಮಣ್ಣಿಗೆ', `ಬೆಟ್ಟದ ಜೀವ', ಟಾಲ್‌ಸ್ಟಾಯ್‌ನ ಎರಡು ಬೃಹತ್ ಕಾದಂಬರಿಗಳು, ದಾಸ್ತೋವ್‌ಸ್ಕಿಯ `ಕ್ರೈಮ್ ಅಂಡ್ ಪನಿಷ್‌ಮೆಂಟ್', ಬೇಂದ್ರೆಯವರ ಕಾವ್ಯ, ಡಬ್ಲೂ.ಬಿ. ಯೇಟ್ಸ್ ನ ಕಾವ್ಯ ಇತ್ಯಾದಿಗಳು ನನ್ನ ದೃಷ್ಟಿಯಲ್ಲಿ ಅತ್ಯುತ್ತಮ ಕೃತಿಗಳು. ಆದರೆ ಸಾಹಿತ್ಯದಲ್ಲಿ ಕೇವಲ ಶ್ರೇಷ್ಠ ಕೃತಿಗಳೇ ಬರಬೇಕೆನ್ನುವುದು ಅತಿಯಾಸೆಯಾದೀತು. ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ಸಮಸ್ಯೆಗಳನ್ನು ಮುಂಚೂಣಿಗೆ ತಂದು, ಓದುಗರನ್ನು ಎಚ್ಚರಿಸುವ ಮಹತ್ವದ ಕೃತಿಗಳೂ ಇರುತ್ತವೆ. ಮಾರ್ಕ್ವೇಜನ `ಒನ್ ಹಂಡ್ರೆಡ್ ಇಯರ್ಸ್‌ ಆಫ್ ಸಾಲಿಟ್ಯೂಡ್', ಕಾಫ್ಕಾನ ಕಾದಂಬರಿಗಳು, ನಮ್ಮ ವಚನ ಸಾಹಿತ್ಯ , ದೇವನೂರರ `ಕುಸುಮಬಾಲೆ', ಅನಂತಮೂರ್ತಿಯವರ ಕತೆಗಳು, ಮುಂತಾದವು ಇಂಥ ಕೃತಿಗಳು. ಆದರೆ ಇವು ಎಲ್ಲರಿಗೂ ದಕ್ಕುವ ಸಾಹಿತ್ಯವಲ್ಲ. ಇವುಗಳ ಜೊತೆಗೆ, ಅಪಾರ ಸಂಖ್ಯೆಯ ಸಾಮಾನ್ಯ ಓದುಗರ ಸಾಹಿತ್ಯಾಸಕ್ತಿಯನ್ನು ಪೋಷಿಸಿ ಬೆಳೆಸುವ ಜನಪ್ರಿಯ ಕೃತಿಗಳೂ ಇರಬೇಕು. 

ಹಿರಿಯ ಲೇಖಕರ ಕೃತಿಗಳ ವಿಮರ್ಶೆಯ ಹೊರತಾಗಿ ಇತ್ತೀಚಿನ ಬರಹಗಾರರ ವಿಮರ್ಶೆಗಳನ್ನು ಕೈಗೊಂಡಿದ್ದೀರಾ? ಹೊಸ ತಲೆಮಾರಿನ ಬರಹಗಳ ಬಗ್ಗೆ ನಿಮ್ಮ ಅನಿಸಿಕೆ ಏನು?
ನಾನು ವಿಮರ್ಶೆ ಬರೆದದ್ದು ಹೆಚ್ಚಾಗಿ ಹಿರಿಯ ತಲೆಮಾರಿನ ಮತ್ತು ನನ್ನ ವಾರಿಗೆಯ ಲೇಖಕರ ಬಗ್ಗೆ. ಹಿಂದೆ `ಸುಧಾ' ಪತ್ರಿಕೆಗೆ ವಿಮರ್ಶೆ ಬರೆಯುತ್ತಿದ್ದಾಗ ಆ ಕಾಲದ ಅನೇಕ ತರುಣ ಲೇಖಕರ ಕೃತಿಗಳ ಬಗ್ಗೆ ಬರೆದದ್ದುಂಟು. ಆ ವಿಮರ್ಶೆ ಈಗ ನನ್ನ ?ಸಮಗ್ರ ವಿಮರ್ಶೆ? ಯ ಮೂರನೆ ಸಂಪುಟದಲ್ಲಿ ಪ್ರಕಟವಾಗಿದೆ. ನಾನು ಮೊದಲು ಬರೆದ `ಸಣ್ಣ ಕತೆಯ ಹೊಸ ಒಲವುಗಳು' ಕೃತಿಯಲ್ಲಿ ನನ್ನ ಸಮಕಾಲೀನ ಲೇಖಕರ ಬಗ್ಗೆ ಬರೆದಿದ್ದೆೀನೆ. ಆದರೆ ಈ ಕಾಲದ ಹೊಸ ತಲೆಮಾರಿನ ಲೇಖಕರ ಬಗ್ಗೆ ಬರೆದದ್ದು ಕಡಿಮೆ.

ಇದಕ್ಕೆ, ನಾನು ಯಾರಿಗೂ ಮುನ್ನುಡಿ ಬರೆಯುವದಿಲ್ಲ ಎಂಬುದು ಒಂದು ಕಾರಣವಾಗಿರಬಹುದು. ಹಾಗೆಂದು ಈಗಿನ ಹೊಸ ತಲೆಮಾರಿನ ಲೇಖಕರನ್ನು ನಾನು ಉಪೇಕ್ಷಿಸಿದ್ದೆೀನೆ ಎಂದೇನೂ ಅಲ್ಲ. ನಾನು ಓದಿ ಮೆಚ್ಚಿಕೊಂಡ ಹೊಸಬರ ಕೃತಿಗಳ ಬಗ್ಗೆ ತಕ್ಷಣ ಒಂದು ಕಾರ್ಡು ಬರೆದು ಹಾಕಿ ನನ್ನ ಮೆಚ್ಚಿಗೆಯನ್ನು ತಿಳಿಸಿದ್ದೆೀನೆ, ಕೊರತೆಗಳನ್ನೂ ಸೂಚಿಸಿದ್ದೆೀನೆ. ಕೆಲವರ ಕೃತಿಗಳಿಗೆ ಬೆನ್ನುಡಿ ಬರೆದೂ ಆ ಕೆಲಸ ಮಾಡಿದ್ದೆೀನೆ. ಹೊಸಬರಲ್ಲಿ ಅನೇಕ ಜನ ಪ್ರತಿಭಾವಂತರಿದ್ದಾರೆ. ಅವರು ಮುಂದೆ ಹೇಗೆ ಬೆಳೆಯುತ್ತಾರೆಂಬುದನ್ನು ಕಾದು ನೋಡಬೇಕು. ಮೊದಲ ಕೃತಿಗೇ ಒಂದು ದೊಡ್ಡ ಪ್ರಶಸ್ತಿ ಬಂದ ಕೂಡಲೇ ತಾವು ದೊಡ್ಡ ಲೇಖಕರಾಗಿಬಿಟ್ಟೆವೆಂದು ಯಾರೂ ಸಂಭ್ರಮಿಸಬಾರದು. ಇಷ್ಟು ಜನ ಕಾಂಪಿಟೆಂಟ್ ಆಗಿ ಬರೆಯುತ್ತಿದ್ದರೂ, ಒಂದು ಪೀಳಿಗೆಯನ್ನು ಬೆಳೆಸಬಲ್ಲ, ಅನೇಕರಿಗೆ ಒಂದು ಹೊಸ ದಾರಿಯನ್ನು ತೋರಿಸಬಲ್ಲ ದೊಡ್ಡ ಪ್ರತಿಭೆಗಳು ಮಾತ್ರ ಕಾಣುತ್ತಿಲ್ಲ. ಹೀಗೆ ಹೇಳುವಾಗ ನನ್ನ ಮನಸ್ಸಿನಲಿರ‌್ಲುವುದು ನವೋದಯ ಮತ್ತು ನವ್ಯ ಕಾಲದ ದೊಡ್ಡ ಪ್ರತಿಭೆಗಳು. ಅಂಥ ದೊಡ್ಡ ಪ್ರತಿಭೆಗಳ ಬಗ್ಗೆ ನನಗೆ ಗೌರವ ಇರುವುದರಿಂದ ಅವರ ಬಗ್ಗೆ ಹೆಚ್ಚು ಬರೆದಿದ್ದೇನೆ. ಅದರಲ್ಲೂ ನವೋದಯದ ಬಗ್ಗೆ ನನ್ನ ಒಲವು ಹೆಚ್ಚು.

ವಿಮರ್ಶೆಗಳನ್ನು ಬರೆಯಲು ನೀವೇ ಮನಸ್ಸು ಮಾಡಬೇಕೋ? ಅಥವಾ ಯಾರಾದರೂ (ಪತ್ರಿಕೆಯವರು ಯಾ ಲೇಖಕರು) ನಿಮ್ಮ ಬಳಿ ಒತ್ತಾಯದಿಂದ ಕೇಳಿಕೊಂಡು ಬರೆಸಬೇಕೋ?
ನನ್ನ ಹೆಚ್ಚಿನ ವಿಮರ್ಶೆ ರಚನೆಯಾದದ್ದು ವಿಚಾರ ಸಂಕಿರಣಗಳ ಒತ್ತಾಯದಿಂದ. ಟಿಪ್ಪಣಿ ಮಾಡಿಕೊಂಡು ಭಾಷಣ ಮಾಡಿ ಬಂದ ಮೇಲೆ ಸಂಘಟಕರು ಅದನ್ನು ಬರೆದುಕೊಡಬೇಕೆಂದು ದುಂಬಾಲು ಬಿದ್ದಾಗಲೇ ಬರೆದದ್ದು ಹೆಚ್ಚು. ಆದರೂ ನಾನಾಗಿಯೇ ಇಷ್ಟಪಟ್ಟು ಬರೆದದ್ದೂ ಇದೆ. `ಸಣ್ಣ ಕತೆಯ ಹೊಸ ಒಲವುಗಳು', `ವಚನ ವಿನ್ಯಾಸ', `ಕನ್ನಡ ಕಾವ್ಯ ಪರಂಪರೆ ಮತ್ತು ಬೇಂದ್ರೆಯವರ ಕಾವ್ಯ', `ಮರೆಯಬಾರದ ಹಳೆಯ ಕತೆಗಳು' ಇತ್ಯಾದಿ ಕೃತಿಗಳನ್ನು ಬರೆದದ್ದು ಹಾಗೆ.

ಜನಜೀವನ, ಸಾಮಾಜಿಕತೆ, ಜೀವನದ ಮೌಲ್ಯಗಳು ಬದಲಾದಂತೆ ಇಂದಿನ ಬರಹಗಳಿಗೂ ಹೊಸ ಆಯಾಮ ಒದಗಿ ಬಂದಿದೆ. ಅದಕ್ಕೆ ತಕ್ಕಂತೆ ನಿಮ್ಮ ವಿಮರ್ಶಾ ನೋಟಗಳು ಬದಲಾಗಿವೆಯೇ? ಇಂದಿನ ತಲೆಮಾರಿಗೆ ತಕ್ಕುದಾದ ವಿಮರ್ಶೆಯ ಭಾಷ್ಯ ಬದಲಾಗಬೇಕೆಂಬ ಮಾತಿದೆ. ನೀವೇನೆನ್ನುತ್ತೀರಿ?
ನಾನು ನವ್ಯದ ಉತ್ಕರ್ಷದ ಕಾಲದಲ್ಲಿ ಬರವಣಿಗೆಯನ್ನು ಆರಂಭಿಸಿದವನು. ಅಮೆರಿಕದ ನ್ಯೂ ಕ್ರಿಟಿಸಿಸಂ ಬಗ್ಗೆ ಸಾಕಷ್ಟು ಓದಿಕೊಂಡಿದ್ದೆ. ಅದರ ಉಪಕರಣಗಳು ನನಗೆ ಉಪಯುಕ್ತವೆನಿಸಿದವು. ಆದರೆ ನಾನು ಮೆಚ್ಚಿಕೊಂಡದ್ದು ಟಿ.ಎಸ್. ಎಲಿಯಟ್‌ನ ಮಾದರಿಯನ್ನು. ಆತ ನ್ಯೂ  ಕ್ರಿಟಿಸಿಸಂ ಗೆ ಸೇರಿದವನಲ್ಲ. ಸಾಹಿತ್ಯ ವಿಮರ್ಶೆಯಲ್ಲಿ ಜೀವನದ ಮೌಲ್ಯಗಳಿಗೆ ಹೆಚ್ಚಿನ ಮಹತ್ವ ಕೊಟ್ಟವನು. ಒಂದು ಕೃತಿ ಸಾಹಿತ್ಯ ಕೃತಿ ಹೌದೋ ಅಲ್ಲವೋ ಎಂದು ನಿರ್ಧರಿಸಲಿಕ್ಕೆ ಸಾಹಿತ್ಯಕ ಮಾನದಂಡಗಳು ಸಾಕಾಗುತ್ತವೆ; ಆದರೆ ಅದು ಶ್ರೇಷ್ಠ ಸಾಹಿತ್ಯ ಕೃತಿ ಹೌದೋ ಅಲ್ಲವೋ ಎಂಬುದನ್ನು ನಿರ್ಧರಿಸಲು ಸಾಹಿತ್ಯಕ ಮಾನದಂಡಗಳು ಸಾಕಾಗುವುದಿಲ್ಲ.

ಸಾಹಿತ್ಯೇತರ ಮಾನದಂಡಗಳಿಂದಲೂ ಅದನ್ನು ಅಳೆದು ನೋಡಬೇಕಾಗುತ್ತದೆ- ಎಂದು ಹೇಳಿದ ಎಲಿಯಟ್‌ನ ಮಾತು ನನಗೆ ಈಗಲೂ ಮಾನ್ಯ. ಸಾಹಿತ್ಯೇತರ ಮಾನದಂಡಗಳೆಂದರೆ ಜನಜೀವನ, ಸಾಮಾಜಿಕತೆ, ಪುರುಷಾರ್ಥಗಳು, ಧರ್ಮ ಅಧ್ಯಾತ್ಮ, ಜೀವನ ಪ್ರೀತಿ, ಜೀವಪರತೆ ಇತ್ಯಾದಿಗಳೆಲ್ಲ ಸೇರುತ್ತವೆ. ಇವುಗಳಲ್ಲಿ ಹೆಚ್ಚಿನ ಬದಲಾವಣೆಗಳಾಗುವುದಿಲ್ಲ. ಅವುಗಳ ಮೇಲೆ ಬೀಳುವ ಒತ್ತು ಬದಲಾಗುತ್ತದೆ. ಜೊತೆಗೆ, ಸಾಮಾಜಿಕ ಜೀವನದಲ್ಲಿ ನಿಧಾನವಾಗಿ ಇಲ್ಲವೇ ತೀವ್ರವಾಗಿ ಬದಲಾವಣೆಗಳು ನಡೆದೇ ಇರುತ್ತವೆ. ಸಾಹಿತ್ಯ ಈ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗ್ರಹಿಸಿ, ಧ್ವನಿಪೂರ್ಣವಾಗಿ ಚಿತ್ರಿಸುತ್ತವೆ. ಹಾಗೆ ಚಿತ್ರಿಸುವಾಗ ತನಗೆ ಒಗ್ಗದ ಸಾಹಿತ್ಯಿಕ ನಿರ್ಬಂಧಗಳನ್ನು ಮುರಿದು ಹೊಸ ಚೌಕಟ್ಟುಗಳನ್ನು ನಿರ್ಮಿಸಿಕೊಳ್ಳುತ್ತದೆ. ಉದಾಹರಣೆಗೆ, ಈಚಿನ ದಿನಗಳಲ್ಲಿ ಕಾಣುತ್ತಿರುವ ಸಾಹಿತ್ಯ ಪ್ರಕಾರಗಳ ಸಂಕರ.

ಸಾಹಿತ್ಯದಲ್ಲಿ ನಡೆಯುತ್ತಿರುವ ಎಲ್ಲ ಬದಲಾವಣೆಗಳನ್ನೂ ವಿಮರ್ಶೆ ಮೆಚ್ಚಬೇಕೆಂದೇನೂ ಇಲ್ಲ. ಉದಾಹರಣೆಗೆ ಬಂಡಾಯದ ವಾಚ್ಯ ಬರವಣಿಗೆ ನನಗೆ ಹಿಡಿಸಲಿಲ್ಲ. ಅದರ ಆಶಯ ಒಳ್ಳೆಯದಾಗಿದ್ದರೂ, ಅದನ್ನು ಸಾಹಿತ್ಯಿಕ ಆಕೃತಿಯಾಗಿ ರೂಪಿಸಬಲ್ಲ ತೀಕ್ಷ್ಣ ಸೃಜನಶೀಲ ಪ್ರತಿಭೆ ಅಲ್ಲಿ ಇರಲಿಲ್ಲ. ಇಂಥ ಧೋರಣೆಯಿಂದಾಗಿ ನಾನು ಸಾಕಷ್ಟು ಟೀಕೆಗೊಳಗಾಗಿದ್ದೇನೆ. ಈ ವಿಷಯದಲ್ಲಿ ದಲಿತ ಸಾಹಿತ್ಯ ಹೆಚ್ಚು ಸುದೈವಿಯಾಗಿತ್ತು ಎನ್ನಬಹುದು. ಅಲ್ಲಿ ದೇವನೂರು ಮಹಾದೇವ, ಸಿದ್ಧಲಿಂಗಯ್ಯರಂಥ ಮಹತ್ವದ ಲೇಖಕರೂ ಕಾಣಿಸಿಕೊಂಡರು. ಬಂಡಾಯದ ನಂತರ ಮತ್ತೆ ಮೂರು ನಾಲ್ಕು ಪೀಳಿಗೆಗಳ ಲೇಖಕರು ಬಂದಿದ್ದಾರೆ. ಅವರ ಕೃತಿಗಳನ್ನು ನಾನು ಆಸಕ್ತಿಯಿಂದ ಗಮನಿಸುತ್ತಿದ್ದೇನೆ. ಈ ಹೊಸ ಬರವಣಿಗೆಯನ್ನು ಮೆಚ್ಚಬೇಕಾದರೆ ಹೊಸ ಅಭಿರುಚಿಯೇ ಬೇಕು. ಅದು ನಮ್ಮ ವಿಮರ್ಶೆಯ ರೀತಿಯನ್ನು, ಭಾಷೆಯನ್ನು, ಸ್ವರೂಪವನ್ನು ಅಗತ್ಯವಾಗಿ ಬದಲಿಸುತ್ತದೆ. ನನ್ನ ಈಚಿನ ವಿಮರ್ಶೆಯಲ್ಲಿ ಅಂಥ ಬದಲಾವಣೆಗಳಾಗಿವೆ ಎಂದು ಕೆಲವು ಜನ ವಿಮರ್ಶಕರು ಹೇಳಿದ್ದುಂಟು.

ಈಗ ಪುಸ್ತಕಗಳ ಓದು ಕಡಿಮೆಯಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಕನ್ನಡದ ಒಬ್ಬ ಪ್ರಮುಖ ವಿಮರ್ಶಕರಾಗಿ ಜನಸಾಮಾನ್ಯರ (ಯುವ ತಲೆಮಾರಿನ) ಓದಿನ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿಯಾವ ರೀತಿಯ ಸಲಹೆಗಳನ್ನು ನೀಡುತ್ತೀರಿ?
ಈಗ ಪುಸ್ತಕಗಳ ಓದು ಕಡಿಮೆಯಾಗುತ್ತಿದೆ ಎಂಬ ಮಾತು ಅನೇಕ ಕಡೆಯಿಂದ ಕೇಳಿಬರುತ್ತಿದೆ. ಕನ್ನಡ ಮಾಧ್ಯಮದಲ್ಲಿ ಓದಿ, ಕೆಲಸ ಮಾಡಿ ನಿವೃತ್ತರಾದವರೇ ಈಗ ಹೊತ್ತುಗಳೆಯಲು ಪುಸ್ತಕ ಓದುತ್ತಿದ್ದಾರೆ ಎನ್ನುವ ಮಾತೂ ಇದೆ. ಇನ್ನು ಹತ್ತು-ಹದಿನೈದು ವರ್ಷಗಳಲ್ಲಿ ಅವರು ಇಲ್ಲವಾದ ಮೇಲೆ ಮುಂದೆ ಕನ್ನಡ ಪುಸ್ತಕಗಳ ಮಾರಾಟದ ಸ್ಥಿತಿ ಹೇಗಿರುತ್ತದೋ ಎಂಬ ಭೀತಿ ವ್ಯಕ್ತವಾಗಿದೆ. ಅವರ ಮಕ್ಕಳೆಲ್ಲ ಈಗ ಇಂಗ್ಲಿಷ್ ಮಾಧ್ಯಮದಲ್ಲಿ ಓದಿರುವುದರಿಂದ ಅವರ‌್ಯಾರೂ ಕನ್ನಡ ಪುಸ್ತಕಗಳನ್ನು ಓದುವುದಿಲ್ಲ. ಆದರೂ ಕನ್ನಡದ ಕೆಲವು ಪುಸ್ತಕಗಳು ಮರುಮುದ್ರಣವಾಗುತ್ತಿರುವ ಭರಾಟೆಯನ್ನು ನೋಡಿದರೆ, ಕನ್ನಡ ಪುಸ್ತಕಗಳಿಗೆ ಹಿಂದೆಂದೂ ಇಲ್ಲದಂಥ ಬೇಡಿಕೆ ಬಂದದ್ದು ಸ್ಪಷ್ಟವಾಗಿ ಕಾಣುತ್ತಿದೆ. ಹೀಗೆ ಮಾರಾಟವಾಗುವ ಪುಸ್ತಕಗಳಲ್ಲಿ ಗಂಭೀರವಾದುವೂ ಇವೆ ಎನ್ನುವುದು ಗಮನಾರ್ಹ. ವಿಮರ್ಶೆಯ ಪುಸ್ತಕಗಳಿಗೂ ದೊಡ್ಡ ಮಾರುಕಟ್ಟೆ ದೊರೆತಿದೆ. ಕನ್ನಡ ಪುಸ್ತಕಗಳ ಪ್ರಕಟಣೆಯ ಸಂಖ್ಯೆಯಂತೂ ಪ್ರತಿ
ವರ್ಷವೂ ಹೆಚ್ಚುತ್ತಿದೆ. ಇದೆಲ್ಲ ಓದುವವರಿಲ್ಲದೇ, ಕೊಳ್ಳುವವರಿಲ್ಲದೇ ಆಗಿರಲಾರದಲ್ಲವೇ?

ಓದಿನ ಹವ್ಯಾಸವನ್ನು ಬೆಳೆಸಲು ಕೆಲವು ದಾರಿಗಳಿವೆ. ಎಚ್.ವಿ. ನಾಗೇಶ್ ಅವರು ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾಗಿದ್ದಾಗ ಆಕಾಶವಾಣಿಯಲ್ಲಿ ಕೆಲವು ಕುತೂಹಲಕರ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಟೀವಿಯಲ್ಲಿ ಬರುವ ನಾ. ಸೋಮೇಶ್ವರ ಅವರ `ಥಟ್ಟಂತ ಹೇಳಿ' ಕಾರ್ಯಕ್ರಮ ಸಾಕಷ್ಟು ಜನಪ್ರಿಯವಾಗಿದೆ. ಓದಿನ ಹವ್ಯಾಸ ಬೆಳೆಸಲು ತರುಣರಿಗಾಗಿ ಕೆಲವು ಕಮ್ಮಟಗಳನ್ನು ನಡೆಸಬಹುದು. ಕೆಲವು ಪುಸ್ತಕಗಳನ್ನು ಓದಲು ಸೂಚಿಸಿ ಅವುಗಳ ಮೇಲೆ ಕ್ವಿಜ್ ರೀತಿಯ ಕಾರ್ಯಕ್ರಮಗಳನ್ನು ನಡೆಸಬಹುದು. ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳನ್ನು ಓದದೇ ಉತ್ತರಿಸಲು ಸಾಧ್ಯವಾಗದ ರೀತಿಯಲ್ಲಿಪ್ರಶ್ನೆ ಪತ್ರಿಕೆಗಳನ್ನು ತಯಾರಿಸಬೇಕು. ಮುಖ್ಯವಾಗಿ ತರುಣರಲ್ಲೇ ಓದಿನ ಆಸಕ್ತಿ ಇಲ್ಲದಿದ್ದರೆ ಏನು ಮಾಡಿ ಏನು ಪ್ರಯೋಜನ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT