ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್ ಮಗುಚಿ ಮೂರು ಕಾರ್ಮಿಕರ ಸಾವು

Last Updated 12 ಫೆಬ್ರುವರಿ 2011, 20:20 IST
ಅಕ್ಷರ ಗಾತ್ರ

ಬೆಂಗಳೂರು: ಡಿಸ್ಟಿಲರಿ ಕಾರ್ಖಾನೆಗೆ ಮಹಿಳಾ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್ ಮಗುಚಿ ಬಿದ್ದ ಪರಿಣಾಮ ಮೂರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಕನಕಪುರ ರಸ್ತೆಯ ಕಗ್ಗಲೀಪುರದಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.

ಬಣ್ಣಳ್ಳಿಯ ನೀಲಮ್ಮ (35), ಭೀಮಗೊಂಡನಹಳ್ಳಿಯ ತುಳಸಮ್ಮ (38) ಮತ್ತು ಗುಡ್ಡಹೊಸಹಳ್ಳಿಯ ಪುಟ್ಟಮ್ಮ (18) ಮೃತಪಟ್ಟವರು. ಅಪಘಾತದಲ್ಲಿ ಇನ್ನೂ ಇಪ್ಪತ್ತೆಂಟು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರು ಬನ್ನೇರುಘಟ್ಟ ರಸ್ತೆಯ ಹುಳಿಮಾವಿನಲ್ಲಿರುವ ಶಶಿ ಡಿಸ್ಟಿಲರಿಯಲ್ಲಿ ಕೆಲಸ ಮಾಡುತ್ತಿದ್ದರು. ಬೆಳಿಗ್ಗೆ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಕನಕಪುರ ಸಮೀಪದ ಹಾಲನಾಥ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಮಹಿಳಾ ಕಾರ್ಮಿಕರು ಶಶಿ ಡಿಸ್ಟಿಲರಿಗೆ ಕೆಲಸಕ್ಕೆ ಬರುತ್ತಾರೆ. ಬೆಳಿಗ್ಗೆ ನಾಲ್ಕು ಗಂಟೆ ಸುಮಾರಿಗೆ ಗ್ರಾಮಗಳಿಗೆ ತೆರಳಿ ಕಾರ್ಮಿಕರನ್ನು ಬಸ್‌ನಲ್ಲಿ ಹತ್ತಿಸಿಕೊಂಡು ಎಂಟು ಗಂಟೆ ಸುಮಾರಿಗೆ ಡಿಸ್ಟಿಲರಿಗೆ ಕರೆ ತರಲಾಗುತ್ತದೆ. ಒಟ್ಟು 31 ಮಂದಿಯನ್ನು ಬಸ್‌ನಲ್ಲಿ ಕರೆದುಕೊಂಡು ಬರುತ್ತಿದ್ದ ವೇಳೆ ಕಗ್ಗಲೀಪುರ ತಿರುವಿನಲ್ಲಿ ಆರು ಗಂಟೆ ಸುಮಾರಿಗೆ ಬಸ್ ಮಗುಚಿ ಬಿದ್ದಿತು.

ತೀವ್ರವಾಗಿ ಗಾಯಗೊಂಡ ಮೂರು ಮಂದಿ ಸ್ಥಳದಲ್ಲೇ ಮೃತಪಟ್ಟರು. ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆಲವರು ಚಿಕಿತ್ಸೆ ಪಡೆದು ಮನೆಗೆ ತೆರಳಿದರೆ ಇನ್ನೂ ಕೆಲವರು ಆಸ್ಪತ್ರೆಯಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಿರಿದಾದ ರಸ್ತೆಯಿಂದ ಕೂಡಿರುವ ಕಗ್ಗಲೀಪುರ ತಿರುವು ಅಪಾಯಕಾರಿ ಸ್ಥಳವಾಗಿದೆ. ಚಾಲಕ ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿದ್ದರಿಂದಲೇ ಈ ಅಪಘಾತ ಸಂಭವಿಸಿದೆ. ಈ ರಸ್ತೆಯಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿರುತ್ತವೆ. ನಿಧಾನವಾಗಿ ಚಲಿಸುವಂತೆ ನಾಮಫಲಕ ಅಳವಡಿಸಿದ್ದರೂ ಚಾಲಕರು ಗಮನಿಸುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್ ಚಾಲಕ ಸತೀಶ್‌ಗೂ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ವಿರುದ್ಧ ಅತಿ ವೇಗ ಮತ್ತು ಅಜಾಗರೂಕತಾ ಚಾಲನೆ ಪ್ರಕರಣ ದಾಖಲಿಸಲಾಗಿದೆಎಂದು ಪೊಲೀಸರು ತಿಳಿಸಿದ್ದಾರೆ. ತಲಘಟ್ಟಪುರ ಠಾಣೆಯ ಎಸ್‌ಐ ಕುಮಾರ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಬಂಧನ: ಪಡಿತರ ಚೀಟಿದಾರರಿಗೆ ವಿತರಿಸಬೇಕಾದ ನೀಲಿ ಸೀಮೆಎಣ್ಣೆಯನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಮೂರು ಮಂದಿಯನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಚಾಂದ್ ಪಾಷಾ (38), ಸೈಯದ್ ಪಾಷಾ (22) ಮತ್ತು ಶಿವ (37) ಬಂಧಿತರು. ಆರೋಪಿಗಳು ಪಡಿತರ ಚೀಟಿದಾರರಿಗೆ ವಿತರಿಸುವ ಸೀಮೆಎಣ್ಣೆಯನ್ನು ಅಕ್ರಮವಾಗಿದಾಸ್ತಾನು ಮಾಡಿ ಹೆಚ್ಚು ಬೆಲೆಗೆ ಮಾರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನಾಗನಾಥಪುರದಲ್ಲಿರುವ ದಾಸ್ತಾನು ಮಳಿಗೆಯ ಮೇಲೆ ದಾಳಿ ನಡೆಸಿ ಐದು ಲಕ್ಷ ರೂಪಾಯಿ ಮೌಲ್ಯದ ಸೀಮೆಎಣ್ಣೆ, ಸೀಮೆಎಣ್ಣೆ ಸಾಗಿಸಲು ಬಳಸುತ್ತಿದ್ದ ಟೆಂಪೊ ಮತ್ತು ಒಂದು ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ದೇವಸ್ಥಾನದಲ್ಲಿ ಕಳವು: ನಗರದ ಅಕ್ಕಿಪೇಟೆಯ ಪೊಲೀಸ್ ರಸ್ತೆಯಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಬಾಗಿಲು ಮುರಿದು ಒಳ ನುಗ್ಗಿದ ದುಷ್ಕರ್ಮಿಗಳು 22 ಸಾವಿರ ರೂಪಾಯಿ ಮೌಲ್ಯದ ಪಂಚಲೋಹದ ವಿಗ್ರಹ ಮತ್ತು ಬೆಳ್ಳಿ ಆಭರಣಗಳನ್ನು ಕಳವು ಮಾಡಿದ ಘಟನೆ ಗುರುವಾರ ರಾತ್ರಿ ನಡೆದಿದೆ.

ಕಿಡಿಗೇಡಿಗಳು ದೇವಾಲಯದ ಗರ್ಭ ಗುಡಿಯೊಳಗಿದ್ದ ಲಕ್ಷ್ಮಿ, ಸರಸ್ವತಿ, ಗಣೇಶ ಮೂರ್ತಿಯ ಪಂಚಲೋಹದ ವಿಗ್ರಹಗಳು, ಬೆಳ್ಳಿ ಸರ ಹಾಗೂ ಒಂದು ಸಾವಿರ ನಗದು ಕಳವು ಮಾಡಿ ಪರಾರಿಯಾಗಿದ್ದಾರೆ. ಈ ಬಗ್ಗೆ ದೇವಸ್ಥಾನದ ಅರ್ಚಕ ಬಿ.ವಿ.ಪ್ರಭಾಕರ್ ಎಂಬುವರು ಕಾಟನ್‌ಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT