ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿದೀಪ ವಿದ್ಯುತ್ ಸಂಪರ್ಕಕ್ಕೆ ಮೆಸ್ಕಾಂ ನಕಾರ

Last Updated 14 ಜೂನ್ 2011, 11:05 IST
ಅಕ್ಷರ ಗಾತ್ರ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಬೀದಿ ದೀಪಗಳ ಬಿಲ್ ರೂಪದಲ್ಲಿ ಗ್ರಾಮ ಪಂಚಾಯಿತಿಗಳು ಪ್ರತಿ ತಿಂಗಳು 24 ಲಕ್ಷ ರೂಪಾಯಿ ಪಾವತಿಸಬೇಕಿದೆ. ಹಲವು ಗ್ರಾ.ಪಂ.ಗಳು ಬಿಲ್ ಪಾವತಿಸದೇ ಒಟ್ಟು 33 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿವೆ. ಇನ್ನು ಮುಂದೆ ಬಿಲ್ ಪಾವತಿಸದಿದ್ದರೆ ಹೊಸದಾಗಿ ಬೀದಿ ದೀಪಗಳಿಗೆ ಸಂಪರ್ಕ ಕಲ್ಪಿಸುವುದಿಲ್ಲ ಎಂದು `ಮೆಸ್ಕಾಂ~ ಪಟ್ಟು ಹಿಡಿಯಿತು.

ಜಿ.ಪಂ. ಸಭಾಂಗಣದಲ್ಲಿ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮೆಸ್ಕಾಂ ಅಧಿಕಾರಿ ಕಡ್ಡಿ ಮುರಿದಂತೆ ಈ ವಿಷಯ ತಿಳಿಸಿದಾಗ ಹಿರಿಯ ಅಧಿಕಾರಿಗಳು ಸ್ತಂಭೀಭೂತರಾದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಮುಖ್ಯ ಲೆಕ್ಕಪತ್ರ ಅಧಿಕಾರಿ ರಾಮದಾಸ್, ಗ್ರಾ.ಪಂ.ಗಳೊಂದಿಗೆ ಸಂಧಾನ ನಡೆಸಿ ಯಾವುದೇ ಬಡ್ಡಿ ವಿಧಿಸದೆ ಬಿಲ್ ಆಕರಿಸಲು ಸರ್ಕಾರ ಸೂಚಿಸಿದೆ. ಹೀಗಿದ್ದರೂ ಹಳೆಯ ಬಾಕಿ ನೆಪ ಇಟ್ಟುಕೊಂಡು ಹೊಸದಾಗಿ ಬೀದಿ ದೀಪಗಳಿಗೆ ವಿದ್ಯುತ್ ಸಂಪರ್ಕ ನೀಡದೆ ಸತಾಯಿಸುವುದು ಸರಿಯಲ್ಲ ಎಂದರು.

`ಕುಡಿಯುವ ನೀರಿನ ವಿಚಾರದಲ್ಲಿ ಬಿಲ್ ಬಾಕಿ ಇದ್ದರೂ ನಾವು ವಿದ್ಯುತ್ ಸಂಪರ್ಕ ಕಡಿತ ಮಾಡಿಲ್ಲ. ಬೀದಿ ದೀಪ ವಿಚಾರದಲ್ಲಿ ನಮ್ಮ ಹಳೆಯ ಬಿಲ್ ಪಾವತಿಸಲೇಬೇಕು~ ಎಂದು ಮೆಸ್ಕಾಂ ಅಧಿಕಾರಿಗಳು ಪಟ್ಟು ಹಿಡಿದರು. ಈ ವಿಚಾರದಲ್ಲಿ ವಾದ, ಪ್ರತಿವಾದಗಳೂ ನಡೆದವು.

ಕೊನೆಗೆ ಪ್ರಭಾರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಮೇಗೌಡ ಮಧ್ಯಪ್ರವೇಶಿಸಿ, ಎಲ್ಲೆಲ್ಲಿ ಸಂಧಾನ ಬಾಕಿ ಇದೆಯೋ ಅಲ್ಲೆಲ್ಲ ಮೆಸ್ಕಾಂ ತಕ್ಷಣ ಸಂಧಾನ ನಡೆಸಿ ಬಡ್ಡಿ ರಹಿತ ಬಿಲ್ ಪಾವತಿ ಬಾಕಿ ಎಷ್ಟು ಎಂಬುದನ್ನು ಅಂತಿಮಗೊಳಿಸಬೇಕು. ಅವುಗಳನ್ನು ಪಾವತಿಸಲು ಕ್ರಮ ಕೈಗೊಳ್ಳಲಾಗುತ್ತದೆ, ಆದರೆ ಯಾವುದೇ ಕಾರಣಕ್ಕೂ ಬಾಕಿ ಬಿಲ್ ನೆಪದಲ್ಲಿ ಬೀದಿ ದೀಪಗಳಿಗೆ ಸಂಪರ್ಕ ಕಲ್ಪಿಸುವುದಕ್ಕೆ ಮೀನಾಮೇಷ ಎಣಿಸಬಾರದು ಎಂದು ಸೂಚಿಸಿದರು. ಈ ಬಗ್ಗೆ ಮೇಲಧಿಕಾರಿಗಳೊಂದಿಗೆ ಚರ್ಚಿಸುವ ಭರವಸೆಯನ್ನು ಮೆಸ್ಕಾಂ ಅಧಿಕಾರಿ ನೀಡಿದರು.

ವಿವಿಧ ಇಲಾಖೆಗಳಲ್ಲಿ ಮಹಿಳೆ ಮತ್ತು ಅಂಗವಿಕಲರಿಗೆ ಮೀಸಲಿಟ್ಟಿರುವ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಕ್ಕೆ ಬಾರದೆ ಇರುವುದಕ್ಕೆ ಪ್ರಭಾರ ಸಿಇಒ ಅಸಮಾಧಾನ ವ್ಯಕ್ತಪಡಿಸಿದರು. ಕೆಲವು ಇಲಾಖೆಗಳು ಕ್ರಿಯಾ ಯೋಜನೆಯನ್ನೇ ಸಿದ್ಧಪಡಿಸದೆ ಇರುವುದನ್ನು ತರಾಟೆಗೆ ತೆಗೆದುಕೊಂಡರು.

ಆಶ್ರಯ, ಅಂಬೇಡ್ಕರ್ ಮನೆಗಳ ನಿರ್ಮಾಣಕ್ಕೆ ಈಗಾಗಲೇ ಕಂದಾಯ ಇಲಾಖೆ 230 ಎಕರೆ ಮೀಸಲಿಟ್ಟಿದ್ದು, ಈ ಬಗ್ಗೆ ಪೂರಕ ಮಾಹಿತಿಯನ್ನು ಪಿಡಿಒಗಳು, ತಹಸೀಲ್ದಾರ್ ತರಿಸಿಕೊಂಡು ಅಗತ್ಯ ದಾಖಲೆಗಳನ್ನು ಪಡೆದುಕೊಂಡು ಮನೆ ನಿರ್ಮಾಣಕ್ಕೆ ಸಂಬಂಧಿಸಿದ ನಿಗದಿತ ಗುರಿ ಸಾಧಿಸಬೇಕು ಎಂದು ಅವರು ಸೂಚಿಸಿದರು.

ಬಿಸಿಎಂ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಗಳು ನಿರ್ಮಿತಿ ಕೇಂದ್ರಕ್ಕೆ ವಹಿಸಿದ್ದ ನಿರ್ಮಾಣ ಕಾಮಗಾರಿಗಳನ್ನು ಸಮರ್ಪಕವಾಗಿ ನಿಭಾಯಿಸದೆ ಇರುವುದಕ್ಕೆ ಆಕ್ಷೇಪ ವ್ಯಕ್ತವಾಯಿತು. ಒಂದು ಹಂತದಲ್ಲಿ ರೋಸಿಹೋದ ಸಿಇಒ, ನಿರ್ಮಿತಿ ಕೇಂದ್ರ ಇದೇ ರೀತಿ ವರ್ತಿಸಿದರೆ ನೀಡಿದ ದುಡ್ಡನ್ನು ವಾಪಸು ಪಡೆಯುವ ಪ್ರಸ್ತಾಪವನ್ನು ಸಭೆಯ ಮುಂದಿಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಮುಂದಿನ ಕೆಡಿಪಿಯಲ್ಲಿ ಜಿ.ಪಂ.ನಿಂದ ಬಂದ ಅನುದಾನ ಹಾಗೂ ಸರ್ಕಾರದಿಂದ ನೇರವಾಗಿ ಬಂದ ಅನುದಾನ, ನಡೆಸಿದ ಕಾಮಗಾರಿಗಳ ಪ್ರಗತಿ ವರದಿ ನೀಡಬೇಕು ಎಂದು ನಿರ್ಮಿತಿ ಕೇಂದ್ರಕ್ಕೆ ತಾಕೀತು ಮಾಡಿದರು.

ಸಭೆಯಲ್ಲಿ ಜಿ.ಪಂ.ಅಧ್ಯಕ್ಷೆ ಕೆ.ಟಿ. ಶೈಲಜಾ ಭಟ್, ಉಪಾಧ್ಯಕ್ಷೆ ಧನಲಕ್ಷ್ಮಿ ಜನಾರ್ದನ್, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಜನಾರ್ದನ ಗೌಡ, ಈಶ್ವರ ಕಟೀಲ್, ನಳಿನ್ ಕುಮಾರ್ ರೈ ಮೇನಾಲ, ಮುಖ್ಯ ಯೋಜನಾ ಅಧಿಕಾರಿ ಮೊಹಮ್ಮದ್ ನಜೀರ್, ಯೋಜನಾ ನಿರ್ದೇಶಕಿ ಸೀತಮ್ಮ ಇದ್ದರು.

ಭತ್ತಕ್ಕೆ ಅನ್ವಯವಾಗದ ಸುವರ್ಣ ಭೂಮಿ
ಕೃಷಿ ಇಲಾಖೆಯ ಆಹಾರ ಧಾನ್ಯಗಳ ಉತ್ಪಾದನೆ ಮತ್ತು ವಿಸ್ತೀರ್ಣ ಕಾರ್ಯಕ್ರಮದ ಅಡಿಯಲ್ಲಿ ದ.ಕ.ಜಿಲ್ಲೆಯಲ್ಲಿ ಭತ್ತವನ್ನು ಸುವರ್ಣ ಭೂಮಿ ಯೋಜನೆಯಡಿಯಲ್ಲಿ ಸೇರಿಸಬೇಕು ಎಂಬ ಪ್ರಸ್ತಾವವನ್ನು ಸರ್ಕಾರ ತಿರಸ್ಕರಿಸಿದೆ.

ಕೃಷಿ ಇಲಾಖೆಯ ನಿರ್ದೇಶಕರು ಕಳೆದ ಏಪ್ರಿಲ್ 5ರಂದು ಹೊರಡಿಸಿದ ಆದೇಶದಲ್ಲಿ ಇದನ್ನು ತಿಳಿಸಿದ್ದಾರೆ ಎಂಬ ಮಾಹಿತಿಯನ್ನು ಕೆಡಿಪಿ ಸಭೆಯಲ್ಲಿ ಇಲಾಖೆಯ ಜಂಟಿ ನಿರ್ದೇಶಕರು ನೀಡಿದರು. ಈ ಪ್ರಯತ್ನ ಕೈಗೂಡದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಭತ್ತದ ಬೆಳೆ ಉತ್ತೇಜನಕ್ಕೆ ಕೇರಳ ಮಾದರಿಯ ಪ್ಯಾಕೇಜ್ ನೀಡಲು ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT