ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಲ್ಲಿ ಗೇಲ್ `ಸುನಾಮಿ'

ಅತಿವೇಗದ ಶತಕ ಗಳಿಸಿದ ವಿಂಡೀಸ್ ಬ್ಯಾಟ್ಸ್‌ಮನ್; ರಾಯಲ್ ಚಾಲೆಂಜರ್ಸ್ ಜಯಭೇರಿ
Last Updated 23 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕ್ರಿಕೆಟ್‌ನ ಇತಿಹಾಸದಲ್ಲೇ ಅತಿವೇಗದ ಶತಕ ಗಳಿಸಿದ ಕ್ರಿಸ್ ಗೇಲ್ ಆಟಕ್ಕೆ ಉದ್ಯಾನನಗರಿಯ ಚಿನ್ನಸ್ವಾಮಿ ಕ್ರೀಡಾಂಗಣ ಗಡಗಡ ನಡುಗಿದೆ. ಕ್ರಿಕೆಟ್ ಈ ಭೂಮಿಯಲ್ಲಿ ಜನ್ಮತಾಳಿದ ದಿನದಿಂದ ಇದುವರೆಗೂ ಯಾರೂ ಕಂಡು ಕೇಳರಿಯದಂತಹ ಇನಿಂಗ್ಸ್‌ನ್ನು ವೆಸ್ಟ್ ಇಂಡೀಸ್‌ನ ಈ ಬ್ಯಾಟ್ಸ್‌ಮನ್ ಕಟ್ಟಿದ್ದಾರೆ.

ಗೇಲ್ ತೋರಿದ ಆಟದ ಮುಂದೆ ಎದುರಾಳಿ ಪುಣೆ ವಾರಿಯರ್ಸ್ ತಂಡ ಕೊಚ್ಚಿಕೊಂಡು ಹೋಗಿದೆ. ಈ ಮೂಲಕ ಐಪಿಎಲ್ ಟ್ವೆಂಟಿ-20 ಟೂರ್ನಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 130 ರನ್‌ಗಳ ಭರ್ಜರಿ ಗೆಲುವು ಒಲಿಯಿತು.

ಗೇಲ್ ಮಂಗಳವಾರ ತೋರಿದ್ದು ಬರೇ ಬ್ಯಾಟಿಂಗ್ ಅಲ್ಲ. ಅದರಲ್ಲಿ ಸುನಾಮಿಯ ಅಬ್ಬರವಿತ್ತು. ಚಂಡಮಾರುತದ ವೇಗವಿತ್ತು. ಅವರು ಚೆಂಡನ್ನು ಯದ್ವಾತದ್ವ ಬಡಿದಟ್ಟಲಿಲ್ಲ. ಅಷ್ಟೊಂದು ಸಿಕ್ಸರ್, ಬೌಂಡರಿ ಸಿಡಿಸುವಾಗ ಒಮ್ಮೆಯೂ ಲೆಕ್ಕಾಚಾರ ತಪ್ಪಲಿಲ್ಲ. ಎಲ್ಲ ಹೊಡೆತಗಳೂ ನಿಖರವಾಗಿದ್ದವು.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 263 ರನ್ ಕಲೆಹಾಕಿತು. ಗೇಲ್ ಗಳಿಸಿದ ಅಮೋಘ 175 ರನ್‌ಗಳು ಆರ್‌ಸಿಬಿಯ ದಾಖಲೆ ಮೊತ್ತಕ್ಕೆ ಕಾರಣ. ಐಪಿಎಲ್‌ನಲ್ಲಿ ಮೂಡಿಬಂದ ಅತಿದೊಡ್ಡ ಮೊತ್ತ ಇದು.

ಸೋಲನ್ನು ಬಗಲಲ್ಲಿ ಕಟ್ಟಿಕೊಂಡೇ ಆಟ ಆರಂಭಿಸಿದ ಪುಣೆ ವಾರಿಯರ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 133 ರನ್ ಗಳಿಸಲಷ್ಟೇ ಯಶಸ್ವಿಯಾಯಿತು. ಈ ಗೆಲುವಿನ ಮೂಲಕ ವಿರಾಟ್ ಕೊಹ್ಲಿ ನೇತೃತ್ವದ ತಂಡ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿತು.

ಗೇಲ್ ಅಬ್ಬರದ ಆಟವನ್ನು ನೋಡಿಯೇ ವಾರಿಯರ್ಸ್ ಆಟಗಾರರು ಸುಸ್ತಾಗಿ ಹೋಗಿದ್ದರು. ಮಾನಸಿಕವಾಗಿ ಮೊದಲೇ ಸೋತುಹೋಗಿದ್ದ ಈ ತಂಡದ ಪರ ಬ್ಯಾಟಿಂಗ್‌ನಲ್ಲಿ ಯಾರೂ ಮಿಂಚಲಿಲ್ಲ. ಸ್ಟೀವನ್ ಸ್ಮಿತ್ (41, 31 ಎಸೆತ, 6 ಬೌಂ) `ಗರಿಷ್ಠ ಸ್ಕೋರರ್' ಎನಿಸಿದರು. ರವಿ ರಾಂಪಾಲ್ (21ಕ್ಕೆ 2) ಮತ್ತು ಜೈದೇವ್ ಉನದ್ಕತ್ (38ಕ್ಕೆ 2) ಎದುರಾಳಿ ತಂಡವನ್ನು ನಿಯಂತ್ರಿಸಿದರು.

ಗೇಲ್ `ಸುನಾಮಿ': ಐಪಿಎಲ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್‌ನ `ದೈತ್ಯ' ಆಟಗಾರನ ಹಲವು ಅದ್ಭುತ ಇನಿಂಗ್ಸ್‌ಗಳು ಈಗಾಗಲೇ ಮೂಡಿಬಂದಿವೆ. ಆದರೆ ಮಂಗಳವಾರ ಅವರು ತೋರಿದ ಆಟ ಈ ಹಿಂದಿನ ಎಲ್ಲ ಇನಿಂಗ್ಸ್‌ಗಳನ್ನೂ ಮೀರಿ ನಿಂತಿತು.

ಟಾಸ್ ಗೆದ್ದ ವಾರಿಯರ್ಸ್ ತಂಡದ ನಾಯಕ ಆ್ಯರನ್ ಫಿಂಚ್ ಆರ್‌ಸಿಬಿಯನ್ನು ಬ್ಯಾಟಿಂಗ್‌ಗೆ ಕಳುಹಿಸಿ ದೊಡ್ಡ ತಪ್ಪು ಮಾಡಿದರು. ಎರಡನೇ ಓವರ್‌ನಿಂದಲೇ ಗೇಲ್ ಅಬ್ಬರ ಶುರುವಾಯಿತು. ಈಶ್ವರ್ ಪಾಂಡೆ ಎಸೆದ ಓವರ್‌ನ ಮೊದಲ ಎರಡು ಎಸೆತಗಳನ್ನು ಬೌಂಡರಿಗೆ ಅಟ್ಟಿದರು. ಈ ವೇಳೆ ಅಲ್ಪ ಮಳೆ ಬಂದ ಕಾರಣ ಅರ್ಧ ಗಂಟೆಯ ಕಾಲ ಆಟ ನಿಂತಿತು.

ವರುಣ ಬೇಗನೇ ನಿಂತು ಗೇಲ್ ಆಟಕ್ಕೆ ಅವಕಾಶ ಮಾಡಿಕೊಟ್ಟ. ಆ ಓವರ್‌ನ ಇನ್ನುಳಿದ ನಾಲ್ಕು ಎಸೆತಗಳಲ್ಲಿ ಮೂರನ್ನೂ ಬೌಂಡರಿಗೆ ಅಟ್ಟಿದರು.

ಮಿಷೆಲ್ ಮಾರ್ಷ್ ಎಸೆದ ಐದನೇ ಓವರ್‌ನಲ್ಲಿ 28 ರನ್ ಸಿಡಿಸಿದ ಗೇಲ್ ಮಿಂಚಿನ ವೇಗದಲ್ಲಿ ಅರ್ಧಶತಕ ಪೂರೈಸಿದರು. ಆ್ಯರನ್ ಫಿಂಚ್ ಅವರ ಎಂಟನೇ ಓವರ್‌ನಲ್ಲಿ ಮತ್ತೆ 28 ರನ್ ಬಾಚಿದರು. ಅಶೋಕ್ ದಿಂಡಾ ಬೌಲ್ ಮಾಡಿದ 9ನೇ ಓವರ್‌ನ ಐದನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಅತಿವೇಗದ ಶತಕ ಪೂರೈಸಿದರು.

ಮೊದಲ ಅರ್ಧಶತಕ ಗಳಿಸಲು 17 ಎಸೆತವನ್ನು ತೆಗೆದುಕೊಂಡ ಗೇಲ್ ಮುಂದಿನ 50 ರನ್‌ಗಳಿಗೆ 13 ಎಸೆತಗಳನ್ನು ಮಾತ್ರ ಎದುರಿಸಿದರು. 100 ರಿಂದ 150 ರನ್ ತಲುಪಲು 23 ಎಸೆತಗಳನ್ನು ತೆಗೆದುಕೊಂಡರು.

ಬೌಲರ್‌ಗಳಿಂದ ತನಗೆ ಯಾವುದೇ ಪೈಪೋಟಿ ದೊರೆಯದೇ ಇದ್ದ ಕಾರಣ ಗೇಲ್ ತಮ್ಮನ್ನು ತಾವೇ ಸ್ಪರ್ಧೆಗೆ ಒಡ್ಡಿದರು. ಕೇವಲ ಸಿಕ್ಸರ್ ಸಿಡಿಸುವುದು ಮಾತ್ರವಲ್ಲ, ಚೆಂಡನ್ನು ಅಂಗಳದಿಂದ ಹೊರಕ್ಕೆ ಕಳುಹಿಸಲು ಪ್ರಯತ್ನಿಸಿದಂತೆ ಕಂಡುಬಂತು. ಎರಡು ಸಲ ಅಲ್ಪ ಅಂತರದಲ್ಲಿ ವಿಫಲರಾದರು. ಒಮ್ಮೆ ಚೆಂಡು ಛಾವಣಿಗೆ ಬಡಿದು ಗ್ಯಾಲರಿಗೆ ಬಿತ್ತು. ಕೊನೆಗೂ ಅಲಿ ಮುರ್ತಜಾ ಎಸೆತದಲ್ಲಿ ಚೆಂಡನ್ನು ಅಂಗಳದಿಂದ ಹೊರಕ್ಕಟ್ಟಿದರು.

ಗೇಲ್ ಮತ್ತು ತಿಲಕರತ್ನೆ ದಿಲ್ಶಾನ್ (33, 36 ಎಸೆತ) ಮೊದಲ ವಿಕೆಟ್‌ಗೆ 13.4 ಓವರ್‌ಗಳಲ್ಲಿ 167 ರನ್ ಸೇರಿಸಿದರು. ಕೊನೆಯಲ್ಲಿ ಎಬಿ ಡಿವಿಲಿಯರ್ಸ್ ಕೇವಲ 8 ಎಸೆತಗಳಲ್ಲಿ 31 (3 ಬೌಂ, 3 ಸಿಕ್ಸರ್) ಸಿಡಿಸಿದರು.

9 ಓವರ್‌ಗಳ ಕೊನೆಗೆ ಆರ್‌ಸಿಬಿ ಮೊತ್ತ 124 ಆಗಿತ್ತು. ಆ ವೇಳೆಗೆ ಭುವನೇಶ್ವರ್ ಕುಮಾರ್ ಮೂರು ಓವರ್‌ಗಳಲ್ಲಿ 8 ರನ್ ನೀಡಿದ್ದರು. ಆಂದರೆ ಇತರ ಆರು ಓವರ್‌ಗಳಲ್ಲಿ 116 ರನ್ ಬಂದವು. ವಾರಿಯರ್ಸ್ ಪರ ಪ್ರಭಾವಿ ಎನಿಸಿದ್ದ ಭುವನೇಶ್ವರ್ ಮತ್ತು ಲೂಕ್ ರೈಟ್ ತಮ್ಮ ಎಂಟು ಓವರ್‌ಗಳಲ್ಲಿ ಒಟ್ಟು 49 ರನ್ ಬಿಟ್ಟುಕೊಟ್ಟರು. ಇನ್ನುಳಿದ 12 ಓವರ್‌ಗಳಲ್ಲಿ 214 ರನ್‌ಗಳು ಹರಿದುಬಂದಿವೆ!

ಗೇಲ್ ಅಂತಿಮ ಓವರ್: ವಾರಿಯರ್ಸ್ ಇನಿಂಗ್ಸ್‌ನ ಕೊನೆಯ ಓವರ್ ಎಸೆಯುವ ಅವಕಾಶ ಪಡೆದ ಗೇಲ್ ಎರಡು ವಿಕೆಟ್ ಪಡೆಯಲು ಯಶಸ್ವಿಯಾದರು. ವಿಕೆಟ್ ಪಡೆದಾಗ `ಗಂಗ್ನಮ್' ನೃತ್ಯದ ಮೂಲಕ ನೆರೆದ ಪ್ರೇಕ್ಷಕರನ್ನು ರಂಜಿಸಿದರು.
ಓವರ್‌ನ ಮೂರನೇ ಎಸೆತದಲ್ಲಿ ಅಲಿ ಮುರ್ತಜಾ ಮತ್ತು ಐದನೇ ಎಸೆತದಲ್ಲಿ ಈಶ್ವರ್ ಪಾಂಡೆ ವಿಕೆಟ್ ಪಡೆದರು.

ನಾಲ್ಕನೇ ಎಸೆತದಲ್ಲಿ ಪಾಂಡೆ ವಿರುದ್ಧ ಎಲ್‌ಬಿಗೆ ಮನವಿ ಮಾಡುವ ಸಂದರ್ಭ ಗೇಲ್ ಅಂಪೈರ್‌ಗೆ ಕೈಮುಗಿದು ನಿಂತಾಗಲೂ ಪ್ರೇಕ್ಷಕರ ಕರತಾಡನ ಮುಗಿಲುಮುಟ್ಟಿತು.

ಸ್ಕೋರ್ ವಿವರ :
ರಾಯಲ್ ಚಾಲೆಂಜರ್ಸ್ ಬೆಂಗಳೂರು
: 20 ಓವರ್‌ಗಳಲ್ಲಿ  5 ವಿಕೆಟ್‌ಗೆ 263
ಕ್ರಿಸ್ ಗೇಲ್ ಔಟಾಗದೆ  175
ತಿಲಕರತ್ನೆ ದಿಲ್ಶಾನ್ ಸಿ ಮುರ್ತಜಾ ಬಿ ಲೂಕ್ ರೈಟ್  33
ವಿರಾಟ್ ಕೊಹ್ಲಿ ರನೌಟ್  11
ಎಬಿ ಡಿವಿಲಿಯರ್ಸ್ ಸಿ ಮನ್ಹಾಸ್ ಬಿ ಮಿಷೆಲ್ ಮಾರ್ಷ್  31
ಸೌರಭ್ ತಿವಾರಿ ಸಿ ಮಾರ್ಷ್ ಬಿ ಅಶೋಕ್ ದಿಂಡಾ  02
ರವಿ ರಾಂಪಾಲ್ ಸಿ ಮಾರ್ಷ್ ಬಿ ಅಶೋಕ್ ದಿಂಡಾ  00
ಇತರೆ: (ಲೆಗ್‌ಬೈ- 3, ವೈಡ್-6, ನೋಬಾಲ್-2)  11
ವಿಕೆಟ್ ಪತನ: 1-167 (ದಿಲ್ಶಾನ್; 13.4), 2-207 (ಕೊಹ್ಲಿ; 16.2), 3-251 (ಡಿವಿಲಿಯರ್ಸ್; 18.5), 4-262 (ತಿವಾರಿ; 19.4), 5-263 (ರಾಂಪಾಲ್; 19.6)

ಬೌಲಿಂಗ್: ಭುವನೇಶ್ವರ್ ಕುಮಾರ್ 4-0-23-0, ಈಶ್ವರ್ ಪಾಂಡೆ 2-0-33-0, ಅಶೋಕ್ ದಿಂಡಾ 4-0-48-2, ಮಿಷೆಲ್ ಮಾರ್ಷ್ 3-0-56-1, ಅಲಿ ಮುರ್ತಜಾ 2-0-45-0, ಆ್ಯರನ್ ಫಿಂಚ್ 1-0-29-0, ಲೂಕ್ ರೈಟ್ 4-0-26-1
ಪುಣೆ ವಾರಿಯರ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 133
ರಾಬಿನ್ ಉತ್ತಪ್ಪ ಸಿ ಆರ್‌ಪಿ ಸಿಂಗ್ ಬಿ ಮುರಳಿ ಕಾರ್ತಿಕ್  00
ಆ್ಯರನ್ ಫಿಂಚ್ ಸಿ ಕಾರ್ತಿಕ್ ಬಿ ರವಿ ರಾಂಪಾಲ್  18
ಯುವರಾಜ್ ಸಿಂಗ್ ಸಿ ಕೊಹ್ಲಿ ಬಿ ಜೈದೇವ್ ಉನದ್ಕತ್  16
ಲೂಕ್ ರೈಟ್ ಸಿ ಡಿವಿಲಿಯರ್ಸ್ ಬಿ ಜೈದೇವ್ ಉನದ್ಕತ್  07
ಸ್ಟೀವನ್ ಸ್ಮಿತ್ ಸಿ ದಿಲ್ಶಾನ್ ಬಿ ರವಿ ರಾಂಪಾಲ್  41
ಮಿಷೆಲ್ ಮಾರ್ಷ್ ಬಿ ಆರ್. ವಿನಯ್ ಕುಮಾರ್  25
ಮಿಥುನ್ ಮನ್ಹಾಸ್ ಔಟಾಗದೆ  11
ಭುವನೇಶ್ವರ್ ಕುಮಾರ್ ಸಿ ಅರುಣ್ ಬಿ ಆರ್‌ಪಿ ಸಿಂಗ್  06
ಅಲಿ ಮುರ್ತಜಾ ಸ್ಟಂಪ್ ಅರುಣ್ ಬಿ ಕ್ರಿಸ್ ಗೇಲ್  05
ಈಶ್ವರ್ ಪಾಂಡೆ ಬಿ ಕ್ರಿಸ್ ಗೇಲ್  00
ಅಶೋಕ್ ದಿಂಡಾ ಔಟಾಗದೆ  01
ಇತರೆ: (ವೈಡ್-3)  03

ವಿಕೆಟ್ ಪತನ: 1-0 (ರಾಬಿನ್; 0.2), 2-28 (ಫಿಂಚ್; 4.2), 3-38 (ರೈಟ್; 5.2), 4-42 (ಯುವರಾಜ್; 5.4), 5-100 (ಸ್ಮಿತ್; 13.3), 6-119 (ಮಾರ್ಷ್; 16.2), 7-127 (ಭುವನೇಶ್ವರ್; 18.5), 8-132 (ಮುರ್ತಜಾ; 19.3), 9-132 (ಪಾಂಡೆ; 19.5)
ಬೌಲಿಂಗ್: ಮುರಳಿ ಕಾರ್ತಿಕ್ 3-0-25-1, ಆರ್‌ಪಿ ಸಿಂಗ್ 4-0-20-1, ರವಿ ರಾಂಪಾಲ್ 4-0-21-2, ಜೈದೇವ್ ಉನದ್ಕತ್ 4-0-38-2, ಆರ್. ವಿನಯ್ ಕುಮಾರ್ 4-0-24-1, ಕ್ರಿಸ್ ಗೇಲ್ 1-0-5-2
ಫಲಿತಾಂಶ: ರಾಯಲ್ ಚಾಲೆಂಜರ್ಸ್‌ಗೆ 130 ರನ್ ಗೆಲುವು, ಪಂದ್ಯಶ್ರೇಷ್ಠ: ಕ್ರಿಸ್ ಗೇಲ್

ಮುಖ್ಯಾಂಶಗಳು
-ಐಪಿಎಲ್‌ನಲ್ಲಿ ಯೂಸುಫ್ ಪಠಾಣ್ ಹೆಸರಿನಲ್ಲಿದ್ದ (37 ಎಸೆತ) ದಾಖಲೆ ಪತನ
-ಐಪಿಎಲ್‌ನ ಪಂದ್ಯವೊಂದರಲ್ಲಿ ಅತಿಹೆಚ್ಚು ವೈಯಕ್ತಿಕ ಮೊತ್ತ; ನೈಟ್ ರೈಡರ್ಸ್ ತಂಡದ ಬ್ರೆಂಡನ್ ಮೆಕ್ಲಮ್ 2008 ರಲ್ಲಿ ಗಳಿಸಿದ್ದ 158 ರನ್ ಇದುವರೆಗಿನ ದಾಖಲೆಯಾಗಿತ್ತು.
-ಪಂದ್ಯವೊಂದರಲ್ಲಿ ಅತ್ಯಧಿಕ ಸಿಕ್ಸರ್ (17)
-ಅತಿವೇಗದ ಅರ್ಧಶತಕ (17 ಎಸೆತ). ಗೇಲ್ ಈ ಮೂಲಕ ಆ್ಯಡಮ್ ಗಿಲ್‌ಕ್ರಿಸ್ಟ್ ಹೆಸರಿನಲ್ಲಿದ್ದ ದಾಖಲೆ ಸರಿಗಟ್ಟಿದರು.
-ಐಪಿಎಲ್‌ನಲ್ಲಿ ಅತಿವೇಗದ 150 ರನ್ (53 ಎಸೆತ); ಬ್ರೆಂಡನ್ ಮೆಕ್ಲಮ್ (70 ಎಸೆತ) ದಾಖಲೆ ಮುರಿದರು.
-ಟ್ವೆಂಟಿ-20 ಪಂದ್ಯವೊಂದರಲ್ಲಿ ಅತಿಹೆಚ್ಚು ರನ್ ಪೇರಿಸಿದ ಆರ್‌ಸಿಬಿ

ಆ ಮೂವತ್ತು ಎಸೆತಗಳು...
ಕ್ರಿಸ್ ಗೇಲ್ ಶತಕ ಪೂರೈಸಲು ತೆಗೆದುಕೊಂಡ 30 ಎಸೆತಗಳಲ್ಲಿ ಏಳು `ಡಾಟ್ ಬಾಲ್' ಆಗಿದ್ದವು. ಅಂದರೆ ಯಾವುದೇ ರನ್‌ಗಳು ಬರಲಿಲ್ಲ. ನಾಲ್ಕು ಸಿಂಗಲ್ಸ್‌ಗಳು ಇದ್ದವು. ಅದೇ ರೀತಿ ಎಂಟು ಬೌಂಡರಿ ಹಾಗೂ 11 ಸಿಕ್ಸರ್‌ಗಳು ಇದ್ದವು.
ಶತಕದ ಹಾದಿಯಲ್ಲಿ ಅವರು ಎದುರಿಸಿದ 30 ಎಸೆತಗಳು ಹೀಗಿದ್ದವು:

0, 0, 1, 4, 4, 0, 4 (ನೋಬಾಲ್), 4 (ಫ್ರೀಹಿಟ್), 0, 4, 1, 6, 6, 4, 0, 6, 6, 4, 6, 1, 6, 0, 6, 6, 4, 6, 6, 0, 1, 6

ಗೇಲ್ ಇನಿಂಗ್ಸ್ ಬಗ್ಗೆ `ಟ್ವಿಟರ್'ನಲ್ಲಿ ...
ಚಿಪಾಕ್ (ಚೆನ್ನೈನ ಚಿದಂಬರಂ) ಕ್ರೀಡಾಂಗಣದ ಬಳಿಯಿಂದ ಒಂದು ಚೆಂಡು ಹಾರಿ ಹೋಯಿತು. ಅದು ಚಿನ್ನಸ್ವಾಮಿ ಕ್ರೀಡಾಂಗಣದಿಂದ ಬಂದದ್ದೇ?
-ಸುರೇಶ್ ರೈನಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT