ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಬಲಿಗ ಶಾಸಕರೊಂದಿಗೆ ಬಿಎಸ್‌ವೈ ಗೋಪ್ಯ ಸಭೆ

Last Updated 8 ಡಿಸೆಂಬರ್ 2012, 10:03 IST
ಅಕ್ಷರ ಗಾತ್ರ

ಹಾವೇರಿ: ಶುಕ್ರವಾರ ನಗರದ ಜಿ.ಎಚ್.ಕಾಲೇಜು ಮೈದಾನದಲ್ಲಿ ಸಮಾವೇಶದ ಸಿದ್ಧತೆಗಳನ್ನು ಪರಿಶೀಲಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಮಾವೇಶದ ವೇದಿಕೆಯಲ್ಲಿಯೇ ಬೆಂಬಲಿಗ ಶಾಸಕ, ಸಂಸದರೊಂದಿಗೆ ಗೋಪ್ಯ ಸಭೆ ನಡೆಸಿ ಚರ್ಚೆ ನಡೆಸಿದರು.

ಆದರೆ, ಸಭೆಯಲ್ಲಿ ಯಾವ ವಿಷಯ ಚರ್ಚಿಸಿದರು ಎಂಬುದು ಬಹಿರಂಗಗೊಂಡಿಲ್ಲ. ಸುಮಾರು ಅರ್ಧ ಗಂಟೆಗಳ ಕಾಲ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರನ್ನು ಹಾಗೂ ಮಾಧ್ಯಮದವರನ್ನು ದೂರ ಇರುವಂತೆ ಸೂಚಿಸಲಾಗಿತ್ತಲ್ಲದೇ, ಸಭೆ ನಡೆಯುವ ಸ್ಥಳಕ್ಕೆ ಯಾರೊಬ್ಬರನ್ನು ಬಿಡದಂತೆ ಪೊಲೀಸ್ ಸಿಬ್ಬಂದಿಗೆ ಸೂಚಿಸಲಾಗಿತ್ತು.

ಸಭೆಯಲ್ಲಿ ಶಾಸಕ ನೆಹರೂ ಓಲೇಕಾರ, ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ, ಸಂಸದ ರಾಘವೇಂದ್ರ, ಕೆಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ, ಶಾಸಕರಾಗಿರುವ ಹರಿಹರದ ಬಿ.ಪಿ. ಹರೀಶ, ಸೊರಬದ ಹರತಾಳ ಹಾಲಪ್ಪ, ಕಡೂರಿನ ಡಾ. ವಿಶ್ವನಾಥ, ಚೆನ್ನಗಿರಿಯ ವಿರೂಪಾಕ್ಷಪ್ಪ, ತರಿಕೇರಿಯ ಸುರೇಶಗೌಡ. ಜಿ.ಪಂ.ಅಧ್ಯಕ್ಷ ಶಂಕ್ರಣ್ಣ ಮಾತನವರ, ಕೆಜೆಪಿ ಅಧ್ಯಕ್ಷ ಮೈಲಪ್ಪ ಗುಡಗೂರ, ಬಿಎಸ್‌ವೈ ಪುತ್ರ ವಿಜಯೇಂದ್ರ, ಮಾಜಿ ಸಚಿವ ಕೆ.ಎಚ್.ಶ್ರೀನಿವಾಸ ಹಾಜರಿದ್ದರು.
ಸಭೆ ಮುಗಿದ ಬಳಿಕ ಯಡಿಯೂರಪ್ಪ ಅವರು ಅದೇ ವೇದಿಕೆ ಮೇಲೆ ಕುಳಿತು ಬೆಂಬಲಿಗ ಶಾಸಕರೊಂದಿಗೆ ಮಿರ್ಚಿ ಮಂಡಕ್ಕಿ ಸವಿದರು.
ಸಮಾವೇಶದ ವರೆಗೆ ವಾಸ್ತವ್ಯ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಡಿ.9 ರವರೆಗೆ ಜಿಲ್ಲೆಯಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ.

ತಾಲ್ಲೂಕಿನ ಸಂಗೂರು ಸಕ್ಕರೆ ಕಾರ್ಖಾನೆ ಅತಿಥಿಗೃಹದಲ್ಲಿ ವಾಸ್ತವ್ಯ ಮಾಡುವ ಯಡಿಯೂರಪ್ಪ ಅವರು ಶನಿವಾರ ತಾಲ್ಲೂಕಿನ ಕರ್ಜಗಿ ಸ್ಟೇಶನ್‌ನಲ್ಲಿರುವ ರಾಘವೇಂದ್ರಸ್ವಾಮಿ ಮಠದಲ್ಲಿ ಗುರುಗಳಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಕೆಜೆಪಿ ಸಮಾವೇಶದಲ್ಲಿ ಭಾಗವಹಿಸುತ್ತೇನೆ: ಹಾಲಪ್ಪ

ಹಾವೇರಿ: ನಗರದಲ್ಲಿ ಇದೇ 9 ರಂದು ನಡೆಯುವ ಕೆಜೆಪಿ ಸಮಾವೇಶದಲ್ಲಿ ಭಾಗವಹಿ ಸುತ್ತಿದ್ದು, ವೇದಿಕೆಯಲ್ಲಿ ಕುಳಿತುಕೊಳ್ಳಲು ಆವಕಾಶ ಕಲ್ಪಿಸಿದರೆ ವೇದಿಕೆ ಮೇಲೆ ಹೋಗುತ್ತೇನೆ ಎಂದು ಶಾಸಕ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ ತಿಳಿಸಿದರು.

ಶುಕ್ರವಾರ ನಗರದ ಜಿ.ಎಚ್.ಕಾಲೇಜು ಮೈದಾನದಲ್ಲಿ ಕೆಜೆಪಿ ಸಮಾವೇಶದ ಸಿದ್ಧತೆ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ತಾವು ಬಿಜೆಪಿ ಕೈಗೊಳ್ಳುವ ಯಾವುದೇ ಕ್ರಮಕ್ಕೆ ಹೆದರುವ ಪ್ರಮೆಯೇ ಇಲ್ಲ. ಈಗಾಗಲೇ ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಿದ್ದು, ಯಾವ ಕ್ರಮ ಕೈಗೊಂಡರೂ ಎದುರಿಸಲು ಸಿದ್ಧನಿದ್ದೇನೆ ಎಂದು ಹೇಳಿದರು. 

ರಾಜಕೀಯದಲ್ಲಿ ಎಲ್ಲರೂ ಸ್ನೇಹಿತರಾಗಿದ್ದಾರೆ. ಯಾವುದೇ ಒಂದು ಪಕ್ಷದ ಸಮಾವೇಶದಲ್ಲಿ ಪಾಲ್ಗೊಳ್ಳುವುದು ಅಪರಾಧವೇನಲ್ಲ. ಹೊಸ ಪಕ್ಷದ ಉದಯಕ್ಕೆ ಶುಭಾಶಯ ಹೇಳುವುದಕ್ಕಾಗಿ ತಾವು ಸಮಾವೇಶದಲ್ಲಿ ಭಾಗವಹಿಸುವುದಾಗಿ ತಿಳಿಸಿದ ಅವರು, ಮುಂದಿನ ದಿನಗಳಲ್ಲಿ ಕೆಜೆಪಿ ಸೇರುವುದಾಗಿ ತಿಳಿಸಿದರು.

ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಾಗಲೇ ಎಲ್ಲರೂ ಜನಾದೇಶಕ್ಕೆ ತೆರಳಬೇಕಿತ್ತು. ಕಾರಣಾಂತರಗಳಿಂದ ಸರ್ಕಾರವನ್ನು ಮುಂದೂಡಿಕೊಂಡು ಬರಲಾಯಿತು ಎಂದು ಹೇಳಿದರು.

ಹಿಂದಿನ ಚುನಾವಣೆಯನ್ನು ಯಡಿ ಯೂರಪ್ಪ ಅವರೇ ಮುಖ್ಯಮಂತ್ರಿ ಎಂದು ಹೇಳಿಕೊಂಡು ಅಧಿಕಾರಕ್ಕೆ ಬರಲಾಯಿತು. ಈಗ ಮತ್ತೆ ಹೊಸ ಪಕ್ಷದ ಮೂಲಕ ಮತ್ತೆ ಅವರನ್ನು ಮುಖ್ಯಮಂತ್ರಿಯನ್ನಾಗಿಸಲು ಶ್ರಮಿಸುತ್ತೇವೆ ಎಂದ ಅವರು, ಬಿಜೆಪಿಗೆ ಬರುವ ದಿನಗಳಲ್ಲಿ ಭವಿಷ್ಯವಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT