ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದನೆ ನಿಗ್ರಹ ಕೇಂದ್ರಕ್ಕೆ ವಿರೋಧ ಏಕೆ ?

Last Updated 21 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮಾರ್ಚ್‌ನಿಂದ ಆರಂಭವಾಗಬೇಕೆಂದು ಕೇಂದ್ರ ಸರ್ಕಾರ ಆದೇಶಿಸಿರುವ ರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ಕೇಂದ್ರ (ಎನ್‌ಸಿಟಿಸಿ) ಒಂಬತ್ತು ರಾಜ್ಯಗಳ ಮುಖ್ಯಮಂತ್ರಿಗಳ ವಿರೋಧಕ್ಕೆ ಒಳಗಾಗಿರುವುದು ಆತಂಕಕಾರಿ.

ಮುಂಬೈ ನಗರ 2008ರಲ್ಲಿ ಭಯೋತ್ಪಾದಕರ ದಾಳಿಗೆ ತುತ್ತಾದಾಗ ಇಂಥ ಘಟನೆಗಳನ್ನು ತಡೆಯಲು ಸಾಧ್ಯವಿರಲಿಲ್ಲವೇ ಎಂಬ ಟೀಕೆಗಳು ಕೇಳಿ ಬಂದು ನಮ್ಮ ಭದ್ರತಾ ವ್ಯವಸ್ಥೆಯಲ್ಲಿನ ಲೋಪಗಳು ಬೆಳಕಿಗೆ ಬಂದವು.
 
ಭಾರತದ ಪ್ರತಿ ರಾಜ್ಯದಲ್ಲಿಯೂ ಗುಪ್ತಚರ ದಳಗಳಿವೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಬಾಹ್ಯ ಗುಪ್ತಚರ ದಳ (ಆರ್‌ಎಡಬ್ಲ್ಯು) ಹಾಗೂ ಆಂತರಿಕ ಗುಪ್ತಚರ ದಳ (ಇಂಟಲಿಜೆನ್ಸ್ ಬ್ಯೂರೊ- ಐಬಿ) ಇವೆ.
 
ಇವಲ್ಲದೆ ಭೂ ಸೇನೆ, ನೌಕಾದಳ, ವಾಯುಪಡೆ, ಗಡಿ ಭದ್ರತಾ ಪಡೆ ಮತ್ತಿತರ ಅರೆಸೈನಿಕ ದಳಗಳೂ ಗುಪ್ತ ಮಾಹಿತಿ ಸಂಗ್ರಹಿಸುತ್ತವೆ.

ಇಷ್ಟೆಲ್ಲ ಮಾಹಿತಿ ಸಂಗ್ರಹ ವ್ಯವಸ್ಥೆಯಿದ್ದರೂ ಮುಂಬೈನಲ್ಲಿ ಆದ ಸಾವು ನೋವುಗಳನ್ನು ತಡೆಯಲಾಗದೆ ಇರುವುದಕ್ಕೆ ಕಾರಣಗಳೇನು ಎಂದು ವಿಶ್ಲೇಷಿಸಿದಾಗ ವಿವಿಧ ಗುಪ್ತಚರ ದಳಗಳು ತಮ್ಮಲ್ಲಿರುವ ಮಾಹಿತಿಗಳನ್ನು ಪರಸ್ಪರ ಹಂಚಿಕೊಳ್ಳಲು ಹಿಂಜರಿಯುತ್ತಿದ್ದು, ಒಂದು ಘಟನೆ ಆಗುವ ಬಗ್ಗೆ ಮಾಹಿತಿ ಇದ್ದರೂ ಆ ಮಾಹಿತಿ ಸರಿಯಾದ ಜಾಗಕ್ಕೆ ಮುಟ್ಟಿ ಸೂಕ್ತ ಮುಂಜಾಗರೂಕತಾ ಕ್ರಮ ತೆಗೆದುಕೊಳ್ಳಲಾರದ ಪರಿಸ್ಥಿತಿ ಇತ್ತು.
 
ಇದನ್ನು ಹೇಗೆ ಸರಿಪಡಿಸುವುದು ಎಂದು ವಿಚಾರ ಮಾಡತೊಡಗಿದಾಗ ನಮ್ಮ ಗಮನ ಅಮೇರಿಕಾ ದೇಶದತ್ತ ಹರಿಯಿತು.

2001ರ ಸೆಪ್ಟೆಂಬರ್ 11ರ ಘಟನೆಯ ನಂತರ ಅಮೇರಿಕದ ಭದ್ರತಾ ವ್ಯವಸ್ಥೆ ವ್ಯಾಪಕವಾಗಿ ಪರಿಷ್ಕರಣೆಗೊಂಡು ಆ ನಂತರ ಒಂದೇ ಒಂದು ಭಯೋತ್ಪಾದಕ ಘಟನೆಯೂ ಅಲ್ಲಿ ಸಂಭವಿಸಿಲ್ಲ.

  ಇದಕ್ಕೆ ಕಾರಣ ಅಮೇರಿಕಾದಲ್ಲಿ ಸ್ಥಾಪಿತಗೊಂಡ ವಿವಿಧ ಭದ್ರತಾ ಸಂಘಟನೆಗಳು. ಹೋಂ ಲ್ಯಾಂಡ್ ಸೆಕ್ಯೂರಿಟಿ ಎಂಬ ವಿಶೇಷ ಇಲಾಖೆಯನ್ನು ತೆರೆದು ಅದರ ಅಡಿಯಲ್ಲಿ ರಾಷ್ಟ್ರದ ಇಮಿಗ್ರೇಷನ್, ಕಸ್ಟಮ್ಸ, ವಿಮಾನ ನಿಲ್ದಾಣ ಭದ್ರತೆ, ವಿ.ಐ.ಪಿ ಭದ್ರತೆ ಮುಂತಾದ ಸಂಸ್ಥೆಗಳನ್ನು ತರಲಾಯಿತು.
 
ರಾಷ್ಟ್ರೀಯ ಗುಪ್ತಚರ ನಿರ್ದೇಶನಾಲಯ (ಇದು ಅಮೇರಿಕಾದಲ್ಲಿ ಅಸ್ತಿತ್ವದಲ್ಲಿದ್ದ ಕೇಂದ್ರ ಗುಪ್ತಚರ ದಳ ಸಿಐಎಗೆ ಸಮನಾದದ್ದು) ಎಂಬ ಸಂಸ್ಥೆಯನ್ನು ತೆರೆದು ಅದರ ಅಡಿಯಲ್ಲಿ 2003ರಲ್ಲಿ `ಭಯೋತ್ಪಾದಕರ ಸವಾಲುಗಳ ಪರಿವೀಕ್ಷಣಾ ಕೇಂದ್ರ~ವನ್ನು  (ಟೆರರಿಸ್ಟ್ ಥ್ರೆಟ್ ಇಂಟಿಗ್ರೇಷನ್ ಸೆಂಟರ್) ತೆರೆಯಲಾಯಿತು.
 
2004 ರಿಂದ ಈ ಸಂಸ್ಥೆ ಎನ್‌ಸಿಟಿಸಿ ಎಂದು ಪುನರ್ ನಾಮಕರಣಗೊಂಡು ಅಮೇರಿಕದ ವಿವಿಧ ಗುಪ್ತಚರ ಸಂಘಟನೆಗಳು ಸಂಗ್ರಹಿಸಿದ ಮಾಹಿತಿಯನ್ನು ಸ್ವೀಕರಿಸಿ, ಪರಿಷ್ಕರಿಸಿ ಮುಂದೆ ಏನಾಗಬಹುದೆಂದು ಊಹಿಸಿ ಸಂಬಂಧಿಸಿದವರಿಗೆ ಎಚ್ಚರಿಸುವ ಕಾರ್ಯ ನಿರ್ವಹಿಸಲಾರಂಭಿಸಿತು.
 
ಈ ಕೇಂದ್ರಕ್ಕೆ ಅಮೇರಿಕಾದ ಸಿಐಎ, ರಾಷ್ಟ್ರೀಯ ತನಿಖಾ ಸಂಸ್ಥೆ (ಎಫ್‌ಬಿಐ), ರಕ್ಷಣಾ ಪಡೆಗಳಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿ ಎರವಲು ಸೇವೆ ಪಡೆಯಲಾಯಿತು.
ಇಂತಹುದೇ ಒಂದು ಕೇಂದ್ರ ನಮ್ಮ ದೇಶಕ್ಕೂ ಅವಶ್ಯಕ ಎಂದು ಕೇಂದ್ರ ಸರ್ಕಾರ ಈ ಹಿಂದೆಯೇ ಮನಗಂಡಿತ್ತು.
 
ಆದರೆ ಕೇಂದ್ರ ಸರ್ಕಾರ ಮೊದಲಿಗೆ ರಾಷ್ಟ್ರೀಯ ತನಿಖಾ ದಳವನ್ನು (ಎನ್‌ಐಎ) ಸಂಘಟಿಸಿ ಭಯೋತ್ಪಾದಕ ಘಟನೆಗಳ ಬಗ್ಗೆ ತನಿಖೆ ಕೈಗೊಳ್ಳಲು ಅವಕಾಶ ಮಾಡಿಕೊಟ್ಟಿತ್ತು.
 
ಸಾಕಷ್ಟು ವಿರೋಧದ ನಡುವೆಯೂ ಭಯೋತ್ಪಾದನೆ ಹತ್ತಿಕ್ಕಲು ನಾಗರಿಕರ ಬಗ್ಗೆ ವಿವಿಧ ಮಾಹಿತಿಗಳನ್ನು ಒಂದೇ ಕಡೆ ಕಲೆ ಹಾಕುವಂತಹ (ಅಂದರೆ ನಾಗರಿಕರ ಬ್ಯಾಂಕ್ ವಿವರ, ಕ್ರೆಡಿಟ್ ಕಾರ್ಡ್‌ಗಳ ಬಳಕೆ, ಟೆಲಿಫೋನ್ ಹಾಗೂ ಈ-ಮೇಲ್ ವಿವರಗಳು) ಎನ್‌ಎಟಿ ಗ್ರಿಡ್ ಎಂಬ ಸಂಸ್ಥೆಯನ್ನು ಸಂಘಟಿಸಿತು.

ಈಗ ಪ್ರಾರಂಭಿಸಬೇಕೆಂದು ಆದೇಶಿಸಿರುವ ಎನ್‌ಸಿಟಿಸಿಗೆ ಕೇಂದ್ರದಲ್ಲೇ ಮೊದಲಿಗೆ ವಿರೋಧವಿತ್ತು. ಸರ್ಕಾರದ ಭದ್ರತಾ ಸಮಿತಿ ಜನವರಿ 2012ರಲ್ಲಿ ಈ ಸಂಸ್ಥೆಯ ಆರಂಭಕ್ಕೆ ಒಪ್ಪಿಗೆ ನೀಡಿದ ನಂತರ ಕೇಂದ್ರ ಸರ್ಕಾರ ಮಾರ್ಚ್ 1, 2012ರಿಂದ ಈ ಸಂಸ್ಥೆ ಆರಂಭವಾಗಬೇಕೆಂಬ ಆದೇಶ ಹೊರಡಿಸಿದೆ.

ಭಾರತದ ಎನ್‌ಸಿಟಿಸಿಗೆ ಇರುವ ಕಾನೂನಿನ ನೆಲೆ 1967ರಲ್ಲಿ ರೂಪಿತಗೊಂಡ ಕಾನೂನು ವಿರೋಧಿ ಚಟುವಟಿಕೆಗಳ ತಡೆ ಕಾಯಿದೆ. 2004ರಲ್ಲಿ ಈ ಕಾಯಿದೆ ತಿದ್ದುಪಡಿಗೊಂಡಿದೆ. ಇದರನ್ವಯ ಭಯೋತ್ಪಾದನೆಗೆ ಸಂಬಂಧಿಸಿದ ಅಪರಾಧಗಳ ತನಿಖೆ ನಡೆಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆ.
 
ಈ ಕಾಯಿದೆಯ ಕಲಂ 43ಎ ಅಡಿಯಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳು ಸಂಶಯಾಸ್ಪದ ವ್ಯಕ್ತಿಗಳನ್ನು ಬಂಧಿಸಬಹುದು, ದಸ್ತಾವೇಜುಗಳು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಬಹುದು ಹಾಗೂ ದಾಳಿಗಳನ್ನು ನಡೆಸಬಹುದು. ಇವುಗಳನ್ನು ರಾಜ್ಯ ಸರ್ಕಾರಗಳ ಅರಿವಿಲ್ಲದೆಯೇ ಮಾಡಬಹುದು.
 
ಎನ್‌ಸಿಟಿಸಿ ಸ್ಥಾಪನೆಯ ಮೂಲ ಉದ್ದೇಶ ಭಯೋತ್ಪಾದಕರು, ಅವರ ಅನುಯಾಯಿಗಳು, ಸಹಾಯಕರು, ಅವರಿಗೆ ಸಹಾನುಭೂತಿ ತೋರಿಸುವವರು ಮತ್ತಿತರ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕುವುದು.

ಇದಲ್ಲದೆ ದೇಶದ ವಿವಿಧ ಭದ್ರತಾ ಹಾಗೂ ತನಿಖಾ ಸಂಸ್ಥೆಗಳಾದ ಸಿಬಿಐ, ಎನ್‌ಐಎ, ಎನ್‌ಎಟಿ ಗ್ರಿಡ್, ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಕೇಂದ್ರ(ಎನ್‌ಟಿಆರ್‌ಒ), ರೆವಿನ್ಯೂ ಗುಪ್ತ ಮಾಹಿತಿ ನಿರ್ದೇಶನಾಲಯ (ಡಿಆರ್‌ಐ) ಇದು ಹಣಕಾಸು ಸಚಿವಾಲಯದ ಅಧೀನದಲ್ಲಿದೆ.

ಸಿಆರ್‌ಪಿಎಫ್, ಎನ್‌ಎಸ್‌ಜಿ (ಇವು ಅರೆಸೈನ್ಯ ಪಡೆಗಳು) ಹಾಗೂ ರಾಜ್ಯ ಗುಪ್ತಚರ ಸಂಸ್ಥೆಗಳಿಂದ ವರದಿಗಳನ್ನು ತರಿಸಿಕೊಳ್ಳಬಹುದು. ಹೀಗೆ ವಿವಿಧ ಮೂಲಗಳಿಂದ ಸಂಗ್ರಹಿಸುವ ಮಾಹಿತಿಯನ್ನು ಪರಿಷ್ಕರಿಸಿ ಕ್ರಿಯಾಶೀಲವಾದ ಮಾಹಿತಿಯನ್ನು ತಯಾರಿಸಿ ಸಂಬಂಧಿಸಿದವರಿಗೆ ಮುನ್ನೆಚ್ಚರಿಕೆ ನೀಡುವುದು.

ಎನ್‌ಸಿಟಿಸಿಗೆ ಭಯೋತ್ಪಾದಕ ಘಟನೆಗಳನ್ನು ತಡೆಯಲು ವಿಪುಲ ಅವಕಾಶಗಳಿವೆ. ಒಂದು ಸ್ಥಳದಲ್ಲಿ ಅಂಥ ಘಟನೆ ನಡೆಯಬಹುದು ಎಂಬ ಮಾಹಿತಿ ಬಂದೊಡನೆ ಈ ಸಂಸ್ಥೆಯ ಅಧಿಕಾರಿಗಳು ಎನ್‌ಎಸ್‌ಜಿ ಮತ್ತಿತರ ಕೇಂದ್ರ ಅರೆ ಸೈನ್ಯ ಪಡೆಗಳ ಸಹಕಾರದೊಂದಿಗೆ ಕೂಡಲೇ ಅಲ್ಲಿಗೆ ತೆರಳಿ ಭಯೋತ್ಪಾದಕರನ್ನು ಬಂಧಿಸಬಹುದು ಇಲ್ಲವೇ ರಾಜ್ಯಗಳ ಪೊಲಿಸರಿಗೆ ಎಚ್ಚರಿಕೆ ನೀಡಬಹುದು.
 
ಒಟ್ಟಿನಲ್ಲಿ ಭಯೋತ್ಪಾದಕ ಘಟನೆಗಳನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕುವಂತಹ ಅವಕಾಶ ಎನ್‌ಸಿಟಿಸಿಗೆ ಇದೆ. ಇಂತಹ ಉತ್ತಮ ಉದ್ದೇಶಗಳಿದ್ದರೂ ಎನ್‌ಸಿಟಿಸಿಗೆ ರಾಜ್ಯ ಸರ್ಕಾರಗಳ ವಿರೋಧವೇಕೆ? ಕಾನೂನು ಸುವ್ಯವಸ್ಥೆ ಹಾಗೂ ಪೊಲೀಸ್‌ಗೆ ಸಂಬಂಧಪಟ್ಟ ವಿಷಯಗಳು ಭಾರತದ ಸಂವಿಧಾನದ ಅನ್ವಯ ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬರುತ್ತದೆ.
 
ಹೀಗಾಗಿ ಈ ವಿಷಯಗಳ ಬಗ್ಗೆ ಕೇಂದ್ರೀಯ ಸಂಘಟನೆಯನ್ನು ರಚಿಸುವ ಮೊದಲು ರಾಜ್ಯ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿತ್ತು. ಅವುಗಳ ಸಲಹೆ ಸೂಚನೆಗಳನ್ನು ಪಡೆಯಬೇಕಾಗಿತ್ತು. ಇದನ್ನು ಮಾಡದೇ ಏಕಾಏಕಿ ಮಾ. 1ರಿಂದ ಎನ್‌ಸಿಟಿಸಿ ಆರಂಭವಾಗುತ್ತದೆ ಎಂದು ಕೇಂದ್ರ ಸರ್ಕಾರ ಆದೇಶ ನೀಡಿರುವುದು ಹಲವಾರು ರಾಜ್ಯಗಳ ವಿರೋಧಕ್ಕೆ ಕಾರಣವಾಗಿದೆ.
 
ಎನ್‌ಸಿಟಿಸಿ ರಚಿಸಲು ಅಂತಹ ಅವಸರವೇನಿತ್ತು, ಕೇಂದ್ರಸರ್ಕಾರ ನಮ್ಮ ಸಂವಿಧಾನ ನೀಡಿರುವ ಒಕ್ಕೂಟ ವ್ಯವಸ್ಥೆಗೆ (ಫೆಡರಲ್ ಸ್ವರೂಪ) ಏಕೆ ಧಕ್ಕೆ ತರಲು ಹೊರಟಿದೆ, ಕೇಂದ್ರ ಸರ್ಕಾರದ ಉದ್ದೇಶದಲ್ಲಿ ಏನೋ ಗುಪ್ತ ಗುರಿ ಇದೆ ಎನ್ನುವುದು ರಾಜ್ಯಗಳ ಅನಿಸಿಕೆ. ಓಎನ್‌ಸಿಟಿಸಿ ಸ್ಥಾಪನೆಯಿಂದ ಕೇಂದ್ರವು ರಾಜ್ಯ ಸರ್ಕಾರಗಳ, ರಾಜಕೀಯ ವಿರೋಧಿಗಳ ಹಾಗೂ ಇತರರನ್ನು ಇಕ್ಕಟಿಗೆ ಸಿಲುಕಿಸುವಂತಹ ಉದ್ದೇಶ ಹೊಂದಿರಬಹುದು ಎಂಬ ಸಂಶಯವೂ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಇರಬಹುದು.
 
ಎನ್‌ಸಿಟಿಸಿ ಕೇಂದ್ರ ಗುಪ್ತಚರದಳದ ನೇರ ಅಧೀನದಲ್ಲಿ ಬರುವುದೂ ಈ ಸಂಶಯಕ್ಕೆ ಪುಷ್ಟಿ ನೀಡಿದೆ.

ರಾಷ್ಟ್ರದ ಭದ್ರತೆಗಾಗಿ ಎನ್‌ಸಿಟಿಸಿ ಅನಿವಾರ್ಯವಾಗಿದೆ. ಏಕೆಂದರೆ ಭಯೋತ್ಪಾದನೆ ಕೇವಲ ಒಂದು ರಾಜ್ಯದ ಸಮಸ್ಯೆಯಲ್ಲ. ಭಯೋತ್ಪಾದನೆ ಅಪರಾಧಗಳ ತನಿಖೆ ಕೂಡಾ ಕೇವಲ ಒಂದೇ ರಾಜ್ಯಕ್ಕೆ ಸೀಮಿತವಾಗಿರುವುದಿಲ್ಲ.
 
ಅಮೇರಿಕಾದ ವ್ಯವಸ್ಥೆಯೂ ನಮ್ಮ ವ್ಯವಸ್ಥೆಯಂತೆಯೇ ರಾಜ್ಯಗಳ ಒಕ್ಕೂಟದ ವ್ಯವಸ್ಥೆಯೇ ಆಗಿದೆ. ಅಲ್ಲಿ ಎನ್‌ಸಿಟಿಸಿ ಹಾಗೂ ಇತರ ಸಂಘಟನೆಗಳಿಗೆ ವಿರೋಧ ಬಂದಿಲ್ಲ. ಅಂಥ ಸಂಸ್ಥೆಯಿಂದಲೇ  ಅಮೇರಿಕಾ ಭಯೋತ್ಪಾದನೆಯನ್ನು  ಯಶಸ್ವಿಯಾಗಿ ತಡೆಯಲು ಸಫಲವಾಗಿದೆ.

       ಡಾ.ಡಿ.ವಿ.ಗುರುಪ್ರಸಾದ್
(ಲೇಖಕರು ನಿವೃತ್ತ ಪೊಲಿಸ್ ಮಹಾನಿರ್ದೇಶಕರು)
89, ವೆಸ್ಟ್ ಪಾರ್ಕ್‌ರಸ್ತೆ,ಮಲ್ಲೇಶ್ವರಂ, ಬೆಂಗಳೂರು  560 055
      ದೂರವಾಣಿ: 23349874

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT