ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ, 15-1-1962

Last Updated 14 ಜನವರಿ 2012, 19:30 IST
ಅಕ್ಷರ ಗಾತ್ರ

ನಾಡಿನ ಮತದಾರರಿಗೆ ರಾಷ್ಟ್ರಪತಿ ಕರೆ
ನವದೆಹಲಿ, ಜ. 14
-  ಪಂಜಾಬ್, ಕೇರಳ ಮತ್ತು ಕೇಂದ್ರದ ಆಡಳಿತಕ್ಕೆ ಒಳಪಟ್ಟ ಪ್ರದೇಶಗಳನ್ನು ಬಿಟ್ಟು, ನಾಡಿನ ಉಳಿದೆಲ್ಲ ಪಾರ್ಲಿಮೆಂಟರಿ ಚುನಾವಣಾ ಕ್ಷೇತ್ರಗಳ ಮತದಾರರಿಗೆ ರಾಷ್ಟ್ರಪತಿಯವರು, ಲೋಕಸಭೆಗೆ ಪ್ರತಿನಿಧಿಗಳನ್ನು ಚುನಾಯಿಸಿ ರೆಂದೂ ಮತ್ತು ಬರಲಿರುವ ಮಾರ್ಚ್ 31ರೊಳಗಾಗಿ ಚುನಾವಣಾ ಕಾರ್ಯಕ್ರಮಗಳೆಲ್ಲವನ್ನೂ ಪೂರ್ಣಗೊಳಿಸಿರೆಂದೂ ಕರೆ ಇತ್ತಿರುವರು.

ಇಂದು ಇಲ್ಲಿ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದರು ಹೊರಡಿಸಿದ ಪ್ರಕಟಣೆಯೊಂದು ಮೇಲಿನ ಸಂಗತಿಯನ್ನು ಸಾರಿತು.

ಪಂಜಾಬ್ - ಕೇರಳ ಮತ್ತು ಕೇಂದ್ರದ ಆಡಳಿತಕ್ಕೆ ಒಳಪಟ್ಟ ಹಿಮಾಚಲ ಪ್ರದೇಶಗಳಲ್ಲಿ ಲೋಕ ಸಭೆಗೆ ನಡೆಯುವ ಚುನಾವಣೆಗಳ ಬಗೆಗೆ ಇದೇ 20 ರಂದು ಪ್ರಕಟಣೆ ಹೊರಬೀಳಲಿದೆ.

ಒಂದೆರಡು ದಿನದಲ್ಲಿ ಸಂಜೀವರೆಡ್ಡಿ ನಿರ್ಧಾರ
ನವದೆಹಲಿ, ಜ. 14
-  ಮುಂದಿನ ಸಾರ್ವತ್ರಿಕ ಚುನಾವಣೆಗಳ ನಂತರ ಆಂಧ್ರದ ಕಾಂಗ್ರೆಸ್ ಶಾಸನ ಸಭಾ ಪಕ್ಷದ ನಾಯಕತ್ವವನ್ನು ಮತ್ತೆ ವಹಿಸಿಕೊಳ್ಳಲು ಆಂಧ್ರ ಅಸೆಂಬ್ಲಿಗೆ ತಾವು ಚುನಾವಣೆಗೆ ನಿಲ್ಲುವ ಸಾಧ್ಯತೆ ಕುರಿತ ವರದಿಗಳನ್ನು ಕಾಂಗ್ರೆಸ್ ಅಧ್ಯಕ್ಷ ಶ್ರೀ ಸಂಜೀವರೆಡ್ಡಿಯವರು ಇಂದು ಅಲ್ಲಗಳೆಯಲಿಲ್ಲ.

ಹೈದರಾಬಾದಿನಲ್ಲಿ ಆಂಧ್ರ ಕಾಂಗ್ರೆಸ್ ನಾಯಕರೊಡನೆ ಸಮಾಲೋಚನೆ ನಡೆಸಿದ ಬಳಿಕ ಒಂದೆರಡು ದಿನದಲ್ಲಿ ಈ ವಿಷಯದಲ್ಲಿ ತಾವು ನಿರ್ಧಾರವನ್ನು ಕೈಗೊಳ್ಳುವುದಾಗಿ ಅವರು ಪತ್ರಿಕಾಗೋಷ್ಠಿಯೊಂದರಲ್ಲಿ ಪ್ರಶ್ನಿಸಿದಾಗ ತಿಳಿಸಿದರು.

ಪೋರ್ಚುಗೀಸರ ಗೊಡ್ಡು ನೀತಿ
ವಾರಣಾಸಿ, ಜ. 14 -
ಪೋರ್ಚುಗಲ್ ನಾಯಕರು ಪುರಾತನ ಶತಮಾನಗಳಲ್ಲಿದ್ದಂತೆಯೇ ಇದ್ದುಕೊಂಡು ಬಾಯಿಬಿಡಲು ಸಹ ನಿರಾಕರಿಸಿದ್ದರಿಂದ ಭಾರತ ಗತ್ಯಂತರವಿಲ್ಲದೆ ಗೋವಾ ಮೇಲೆ ಕಾರ್ಯಾಚರಣೆ ಕೈಗೊಳ್ಳಬೇಕಾಯಿತೆಂದು ಪ್ರಧಾನಿ ನೆಹರೂ ಇಂದು ಇಲ್ಲಿ ನುಡಿದರು.

ಗೋವಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ರಕ್ಷಣಾ ದಳದವರನ್ನುದ್ದೇಶಿಸಿ ಇದೇ ಪ್ರಥಮವಾಗಿ ಪ್ರಧಾನಿ ನೆಹರೂ ಇಲ್ಲಿ ಭಾಷಣ ಮಾಡಿದರು. ಭಾರತ ರಕ್ಷಣಾ ಪಡೆಗೆ ಸೇರಿದ 2ನೇ ಅಶ್ವಾರೋಹಿ ದಳವು ಇತ್ತೀಚೆಗೆ ಗೋವಾದಿಂದ ಇಲ್ಲಿಗೆ ಹಿಂತಿರುಗಿದೆ. ಈ ದಳಕ್ಕೆ ಸೇರಿದ ಇಬ್ಬರು ಅಧಿಕಾರಿಗಳು ಆ ಕಾರ್ಯಾಚರಣೆಯಲ್ಲಿ ಮಡಿದ ಬಗ್ಗೆ ನೆಹರೂ ತನ್ನ ಅನುತಾಪ ವ್ಯಕ್ತಪಡಿಸಿದರು.

ಬೆಳಗಾವಿಯಿಂದ ಪಂಜಿಂಗೆ ಬಸ್ ಸೌಲಭ್ಯ
ಬೆಳಗಾವಿ, ಜ. 14
- ರಾಜ್ಯದ ಉಳಿದಿರುವ ಭಾಗಗಳಲ್ಲಿ ಶೀಘ್ರದಲ್ಲಿಯೇ ರಸ್ತೆ ಸಾರಿಗೆಯ ರಾಷ್ಟ್ರೀಕರಣ ಮಾಡಲಾಗುವುದೆಂದು ರಾಜ್ಯದ ಮುಖ್ಯಮಂತ್ರಿ ಶ್ರೀ ಬಿ. ಡಿ. ಜತ್ತಿ ಅವರು ಇಂದು ಇಲ್ಲಿ ತಿಳಿಸಿದರು.

ಸುಮಾರು 2 ಲಕ್ಷ 30 ಸಾವಿರ ರೂ.ಗಳ ವೆಚ್ಚದಲ್ಲಿ ಇಲ್ಲಿ ಹೊಸದಾಗಿ ಕಟ್ಟಿಸಿರುವ ಬಸ್ ನಿಲ್ದಾಣವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಅವರು, ಇನ್ನೊಂದು ವಾರದೊಳಗಾಗಿ ರಾಜ್ಯದ ರಸ್ತೆ ಸಾರಿಗೆಯ ಕಾರ್ಪೊರೇಷನ್ನು ಬೆಳಗಾವಿಯಿಂದ ಗೋವಾದ ಪಂಜಿಂಗೆ ಬಸ್ ಸೌಕರ್ಯವನ್ನು ಏರ್ಪಡಿಸುವುದೆಂಬ ಅಂಶವನ್ನು ಹೊರಗೆಡಹಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT