ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ-ಪಾಕ್ : ದ್ವಿಪಕ್ಷೀಯ ಮಾತುಕತೆಗೆ ಭದ್ರ ಬುನಾದಿ

Last Updated 7 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಥಿಂಪು (ಪಿಟಿಐ): ಭಾರತ- ಪಾಕ್ ವಿದೇಶಾಂಗ ಕಾರ್ಯದರ್ಶಿಗಳ ನಡುವಿನ ಚರ್ಚೆ ಉಭಯ ದೇಶಗಳ ನಡುವೆ ಸುಸ್ಥಿರ ಮಾತುಕತೆಗೆ ಭದ್ರ ಬುನಾದಿ ಹಾಕುವಲ್ಲಿ ಯಶಸ್ವಿಯಾಗಿದ್ದು, ಪರಸ್ಪರ ವಿಶ್ವಾಸ ಮೂಡಿಸುವ ಯತ್ನವಾಗಿದೆ ಎಂದು ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಹೇಳಿದ್ದಾರೆ.

ಸಾರ್ಕ್ ದೇಶಗಳ ವಿದೇಶಾಂಗ ಸಚಿವರ 33ನೇ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿರುವ ಅವರು, ಭಾನುವಾರ ನಡೆದ ಭಾರತ-ಪಾಕ್ ವಿದೇಶಾಂಗ ಕಾರ್ಯದರ್ಶಿಗಳ ನಡುವಿನ ಮಾತುಕತೆ ಬಗ್ಗೆ ಪ್ರತಿಕ್ರಿಯೆ ನೀಡಿ, ಉಭಯ ದೇಶಗಳ ನಡುವೆ ನಿರಂತರ ಚರ್ಚೆಗೆ ಈ ಮಾತುಕತೆ ಅನುಕೂಲ ಕಲ್ಪಿಸಲಿದೆ. ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪಾಕಿಸ್ತಾನದ ಅವರ ಸಹವರ್ತಿ ಯೂಸೂಪ್ ರಜಾ ಗಿಲಾನಿ ಅವರ ಆಶಯದಂತೆ ಈ ಮಾತುಕತೆ ನಡೆದಿದೆ ಎಂದರು.

ಭಾನುವಾರ ರಾತ್ರಿ ವಿದೇಶಾಂಗ ಕಾರ್ಯದರ್ಶಿಗಳಾದ ನಿರುಪಮಾ ರಾವ್ ಮತ್ತು ಸಲ್ಮಾನ್ ಬಷೀರ್ ಅವರು 90 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದರು. ಮಾತುಕತೆ ರಚನಾತ್ಮಕವಾಗಿತ್ತು ಎಂದು ಉಭಯತ್ರರೂ ಹೇಳಿದ್ದು, ಈ ಚರ್ಚೆ ಮುಂದೆ ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆಗೆ ಸೂಕ್ತ ಮಾರ್ಗಸೂಚಿಯಾಗಲಿದೆ ಎಂದರು.

 ಉತ್ತಮ ಬೆಳವಣಿಗೆ: ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿ ಗಳ ನಡುವಿನ ಮಾತುಕತೆ ಉತ್ತಮ ಬೆಳವಣಿಗೆಯಾಗಿದ್ದು, ಮುಂದೆ ದ್ವಿಪಕ್ಷೀಯ ಮಾತುಕತೆಗೆ ಎಚ್ಚರಿಕೆಯಿಂದ ಕಾರ್ಯಸೂಚಿಯನ್ನು ಸಿದ್ಧಪಡಿಸುತ್ತಿರುವುದಾಗಿ ಇಬ್ಬರೂ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಮಾತುಕತೆ ಸಂದರ್ಭದಲ್ಲಿ ಯಾವುದೇ ಒಂದು ವಿಷಯಕ್ಕೇ ಒತ್ತು ನೀಡಲಿಲ್ಲ. ಬದಲಾಗಿ ಸಮಗ್ರವಾಗಿ ಮಾತುಕತೆ ನಡೆಸಲಾಯಿತು. ಮಾತುಕತೆ ತೃಪ್ತಿ ತಂದಿದೆ ಎಂದು ನಿರುಪಮಾ ರಾವ್ ಅವರು  ಹೇಳಿದರು

ಶ್ರೀಲಂಕಾ ಸಚಿವರ ಜತೆ ಚರ್ಚೆ: ಶ್ರೀಲಂಕಾ ನೌಕಾಪಡೆಯವರು ಅಮಾಯಕ ತಮಿಳು ಮೀನುಗಾರರನ್ನು ಹತ್ಯೆ ಮಾಡುತ್ತಿರುವ ಕುರಿತು ಅಲ್ಲಿನ ವಿದೇಶಾಂಗ ಸಚಿವ ಜಿ.ಎಲ್.ಪೆರೀಸ್ ಅವರೊಂದಿಗೆ ಕೃಷ್ಣ ಮಂಗಳವಾರ ಚರ್ಚೆ ನಡೆಸುವರು.

ಶ್ರೀಲಂಕಾ ನೌಕಾ ಪಡೆ ಭಾರತೀಯ ಮೀನುಗಾರರಿಗೆ ನೀಡುತ್ತಿರುವ ಕಿರುಕುಳ ವಿಷಯವನ್ನು ನೋಡಿಕೊಳ್ಳುತ್ತಿರುವ ವಿದೇಶಾಂಗ ಇಲಾಖೆ ಜಂಟಿ ಕಾರ್ಯದರ್ಶಿ ಟಿ.ಎಸ್.ತಿರುಮೂರ್ತಿ ಅವರು ಇದೇ ಉದ್ದೇಶಕ್ಕಾಗಿ ಥಿಂಪುಗೆ ಆಗಮಿಸಿದ್ದಾರೆ. ಎರಡೂ ದೇಶಗಳ ವಿದೇಶಾಂಗ ಸಚಿವರ ಮಾತುಕತೆ ಸಂದರ್ಭದಲ್ಲಿ ಶ್ರೀಲಂಕಾ ನೌಕಾಪಡೆಯಿಂದ ಭಾರತೀಯ ಮೀನುಗಾರರಿಗೆ ಆಗುತ್ತಿರುವ ತೊಂದರೆ ಕುರಿತು ಕೃಷ್ಣ ಪ್ರಸ್ತಾಪಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT