ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಶಿಕ್ಷಣ ಯಾವಾಗ ಆರಂಭಿಸಬೇಕು?

Last Updated 16 ಜೂನ್ 2018, 9:20 IST
ಅಕ್ಷರ ಗಾತ್ರ

ಮಕ್ಕಳ ಶಿಕ್ಷಣದ ಬಗ್ಗೆ ತಂದೆ ತಾಯಿಯರಿಗೆ ಸದಾ ಚಿಂತೆ ಇರುವುದು ಸಹಜ. ಆದ್ದರಿಂದ ಯಾವುದೇ ಸಮಸ್ಯೆಯಾದಾಗ ತಿಳಿದವರ ಕಡೆಗೆ, ಶಿಕ್ಷಣ ತಜ್ಞರ ಕಡೆಗೆ ಹೋಗಿ ಸಲಹೆ ಪಡೆಯುತ್ತಾರೆ. ಕಳೆದ ದಶಕಗಳಲ್ಲಿ ಅಮೇರಿಕಾ ದೇಶದಲ್ಲಿ ಡಾ. ಫ್ರಾನ್ಸಿಸ್ ಪಾರ್ಕರ್ ಅವರದು ದೊಡ್ಡ ಹೆಸರು. ಶಿಕ್ಷಕರಾಗಿ, ತರಬೇತಿದಾರರಾಗಿ, ಆಡಳಿತಾಧಿಕಾರಿಗಳಾಗಿ ಸಲಹೆಗಾರರಾಗಿ ಅವರಿಗೆ ತುಂಬ ಮರ್ಯಾದೆ, ಗೌರವವಿತ್ತು. ಅವರು ಪ್ರಾಂತ, ಪ್ರಾಂತಗಳನ್ನು ಸುತ್ತಿ, ಸಭೆಗಳನ್ನು ನಡೆಸುತ್ತಾ ಪಾಲಕರಿಗೆ ಮಾರ್ಗದರ್ಶನ ನೀಡುತ್ತ ಬರುತ್ತಿದ್ದರು.  ಒಂದು ರೀತಿಯಲ್ಲಿ ಅದೇ ಅವರ ಜೀವನದ ಗುರಿಯಾಗಿ ಹೋಗಿತ್ತು.

ಒಂದು ಬಾರಿ ಅವರ ಚಿಂತನೆಯ ಶಿಬಿರ ದೊಡ್ಡ ಪಟ್ಟಣದಲ್ಲಿ ನಡೆಯುತ್ತಿತ್ತು. ನೂರಾರು ಜನ ಪಾಲಕರು ಬಂದು ಅವರ ವಿಚಾರಧಾರೆಯನ್ನು ಕೇಳುತ್ತಿದ್ದರು. ಮಕ್ಕಳನ್ನು ಬೆಳೆಸುವ, ಅವರಿಗೆ ಶಿಕ್ಷಣ ನೀಡುವ ಅವರ ಚಿಂತನೆಗಳನ್ನು ಗಮನಿಸಿ ಬರೆದುಕೊಳ್ಳುತ್ತಿದ್ದರು.  ಭಾಷಣ ಮುಗಿದ ನಂತರ ಪ್ರಶ್ನೋತ್ತರಕ್ಕೆ ಅವಕಾಶವಿತ್ತು. ಭಾಷಣ ಮುಗಿದ ಮೇಲೆ ಡಾ.ಪಾರ್ಕರ್ ಮುಗುಳ್ನಕ್ಕು, ಯಾರಿಗಾದರೂ ಏನಾದರೂ ಕೇಳುವುದಿದ್ದರೆ ಕೇಳಬಹುದು ಎಂದರು.

ಒಬ್ಬ ಮಹಿಳೆ ಎದ್ದು ನಿಂತು, ‘ಸರ್ ಕೆಲವರು ಹೇಳುತ್ತಾರೆ ಮಕ್ಕಳಿಗೆ ಮೂರು ವರ್ಷವಾದ ಮೇಲೆ ಶಿಕ್ಷಣ ಪ್ರಾರಂಭಿಸಬೇಕೆಂದು.  ಮತ್ತೆ ಕೆಲವರು ಐದು ವರ್ಷಕ್ಕೆ ಎನ್ನುತ್ತಾರೆ. ಯಾವುದು ಸರಿ? ನನ್ನ ಮಗನಿಗೆ ಯಾವ ವಯಸ್ಸಿಗೆ ಶಿಕ್ಷಣ ನೀಡಬೇಕೆಂಬುದರಲ್ಲಿ ಜಿಜ್ಞಾಸೆ ಉಂಟಾಗಿದೆ’ ಎಂದಳು.

‘ನಿಮ್ಮ ಮಗನಿಗೆ ಈಗ ಎಷ್ಟು ವರ್ಷ?’ ಕೇಳಿದರು ಪಾರ್ಕರ್.  ಅವನಿಗೀಗ ಐದು ವರ್ಷ ಎಂದಳಾಕೆ.‘ಹೌದೇ? ಹಾಗಾದರೆ ಅವನಿಗೆ ಶಿಕ್ಷಣ ನೀಡುವುದು ಬಹಳ ತಡವಾಯಿತು’ ಎಂದು ದುಃಖ ಸೂಚಿಸಿದರು ಪಾರ್ಕರ್.

‘ನಾನು ಮೂರು ವರ್ಷಕ್ಕೇ ಅವನನ್ನು ಶಾಲೆಗೆ ಹಾಕಬೇಕಿತ್ತೇ?’ ಎಂದು ಗಾಬರಿಯಿಂದ ಕೇಳಿದಳು ಮಹಿಳೆ. ‘ಅಲ್ಲಮ್ಮ ನೀವು ಆತನನ್ನು ಶಾಲೆಗೆ ಯಾವ ವಯಸ್ಸಿಗೇ ಹಾಕಿ ಪರವಾಗಿಲ್ಲ. ಆದರೆ ಅವನಿಗೆ ಶಿಕ್ಷಣ ನೀಡುವುದು ಈಗಾಗಲೇ ಐದು ವರ್ಷಗಳಷ್ಟು ತಡವಾಯಿತಲ್ಲ?’ ಎಂದರು ಪಾರ್ಕರ್. ಆಕೆಯ ಮುಖದಲ್ಲಿ ಗೊಂದಲವನ್ನು ಕಂಡು ಪಾರ್ಕರ್ ಅವರೇ ಮುಂದುವರೆಸಿದರು. ‘ಮಗುವಿಗೆ ಶಿಕ್ಷಣ ಪ್ರಾರಂಭವಾಗಬೇಕಾದದ್ದು ಹುಟ್ಟಿದ ತಕ್ಷಣದಿಂದ. ಶಾಲೆಗೆ ಹೋದಮೇಲೆ ಕಲಿಯುವುದು ಪರೀಕ್ಷೆ ಪಾಸಾಗುವ ಪಾಠ.  ಜೀವನದ ಪಾಠ ಪ್ರಾರಂಭವಾಗುವುದು ಮನೆಯಿಂದಲೇ.

ಮನೆಗೆ ಬಂದವರೊಡನೆ, ಹಿರಿಯರೊಡನೆ ನಡೆದುಕೊಳ್ಳುವ ರೀತಿ, ಊಟ ಮಾಡುವ ರೀತಿ, ಸತ್ಯ ಹೇಳಬೇಕೆಂಬುದನ್ನು ನಡೆದು ತೋರಿಸುವ ನೀತಿ, ಮತ್ತೊಬ್ಬರ ಬಗ್ಗೆ ಕೆಟ್ಟ ಮಾತನ್ನಾಡದಿರುವುದನ್ನು ತೋರಿಸುವ ರೀತಿ ಇದೆಲ್ಲ ಮುಖ್ಯ ಶಿಕ್ಷಣ. ನೀವು ಮನೆಗೆ ಬೇಗ ಓಡಿ, ಈಗಾಗಲೇ ನಿಮ್ಮ ಮಗನಿಗೆ ಐದು ವರ್ಷದ ಶಿಕ್ಷಣ ಹೋಗಿದೆ’ ಎಂದರು.  ಮಹಿಳೆ ಅವಸರದಿಂದಲೇ ಹೊರಗೆ ಓಡಿದಳು.
ನಾವು ಮಕ್ಕಳಿಗೆ ಶಿಕ್ಷಣ ಕೊಡಲು ಶಾಲೆಗೆ ಕಳುಹಿಸುತ್ತೇವೆ. ಆದರೆ ನಿಜವಾದ ಶಿಕ್ಷಣವನ್ನು-ಜೀವನಕ್ಕೆ ಅವಶ್ಯವಾದ ಶಿಕ್ಷಣವನ್ನು- ಪಾಲಕರೇ ನೀಡಬೇಕಾಗುತ್ತದೆ. ನಾವು ಮಕ್ಕಳ ಮುಂದೆ ಸುಳ್ಳು ಮಾತನಾಡಿ ಅವರಿಗೆ ಸತ್ಯವನ್ನೇ ಹೇಳಬೇಕೆಂದು ಹೇಳಿದರೆ ಕೇಳುತ್ತಾರೆಯೇ? ಮಕ್ಕಳ ಮುಂದೆ ಕೆಟ್ಟ ಮಾತುಗಳನ್ನಾಡುತ್ತ ಅವರು ಹಾಗೆ ಮಾತನಾಡದಿರುವಂತೆ ನಿರ್ಬಂಧಿಸಲಾಗುತ್ತದೆಯೋ?
ಒಟ್ಟಿನಲ್ಲಿ, ನಮ್ಮ ಮಕ್ಕಳು ಹೇಗೆ ಬದುಕಬೇಕೆಂದು ನಾವು ಅಪೇಕ್ಷೆ ಪಡುತ್ತೇವೆಯೋ ಹಾಗೆ ನಾವೇ ಬದುಕಿ ತೋರಿಸುವುದು ಮಕ್ಕಳಿಗೆ ಕೊಡಬಹುದಾದ ಶ್ರೇಷ್ಠ ಶಿಕ್ಷಣ. ಇದು ಸರಿಯಾಗಿ ದೊರೆತರೆ, ಅವರು ಮುಂದೆ ಯಾವ ಶಾಲಾಶಿಕ್ಷಣ ಪಡೆದರೂ ಜೀವನದಲ್ಲಿ ಯಶಸ್ವಿಗಳಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT