ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗಾಗಿ ಬಂದಿದೆ `ಕಲಿಕೋತ್ಸವ'

Last Updated 6 ಸೆಪ್ಟೆಂಬರ್ 2013, 5:58 IST
ಅಕ್ಷರ ಗಾತ್ರ

ಮಂಡ್ಯ: ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮದಡಿ, 2013-14ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳ `ಕಲಿಕೋತ್ಸವ' ಎಂಬ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ.

`ಕಲಿಕೋತ್ಸವ' ಎಂಬ ವಿನೂತನ ಮತ್ತು ಹೊಸ ಕಾರ್ಯಕ್ರಮವು ರಾಜ್ಯದಾದ್ಯಂತ ಎಲ್ಲ 203 ಸರ್ಕಾರಿ ಬ್ಲಾಕ್‌ಗಳಲ್ಲಿ ಜಾರಿಗೆ ಬರಲಿದೆ. ಮಕ್ಕಳ ದಿನಾಚರಣೆಯಾದ ನ. 14ರಂದು ಶಾಲಾ ಕಲಿಕೋತ್ಸವಕ್ಕೆ ಚಾಲನೆ ಸಿಗಲಿದೆ.

1 ರಿಂದ 8ನೇ ತರಗತಿವರೆಗಿನ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ, ಅವರ ಕಲಿಕೆ ಹಾಗೂ ಕಲಿಕೆಯ ಖಾತರಿಯನ್ನು ಹಬ್ಬೋಪಾದಿಯಲ್ಲಿ ಆಚರಿಸುವುದೇ `ಕಲಿಕೋತ್ಸವ'ದ ಉದ್ದೇಶವಾಗಿದೆ.

ಇಂತಹದೊಂದು ಚಟುವಟಿಕೆಯಿಂದ ವಿದ್ಯಾರ್ಥಿಗಳಲ್ಲಿ ಸ್ಪಷ್ಟ ಓದು ಶುದ್ಧ ಬರಹ, ಸರಳ ಗಣಿತ, ಸಾಮರ್ಥ್ಯ ವಿಕಾಸ ಅಭಿವ್ಯಕ್ತಿಗೆ ಉತ್ತಮ ವೇದಿಕೆ ಆಗಲಿದೆ ಎನ್ನುವುದು ಸರ್ಕಾರದ ನಿಲುವಾಗಿದೆ.

1 ರಿಂದ 5ನೇ ತರಗತಿ ವರೆಗೆ ಹಾಗೂ 6 ರಿಂದ 8ನೇ ತರಗತಿಯ ಮಕ್ಕಳಿಗಾಗಿ ಪ್ರತ್ಯೇಕ ಸ್ಪರ್ಧೆಗಳನ್ನು ಮೂರು ಹಂತಗಳಲ್ಲಿ ಅಂದರೆ, ಶಾಲಾ, ಕ್ಲಸ್ಟರ್ ಮತ್ತು ಬ್ಲಾಕ್‌ವಾರು ನಡೆಸಲಾಗುತ್ತದೆ.

ಒಬ್ಬ ವಿದ್ಯಾರ್ಥಿಯು ಗರಿಷ್ಠ 2 ವೈಯಕ್ತಿಕ ಮತ್ತು 1 ಸಾಮೂಹಿಕ ಸ್ಪರ್ಧೆಗಳಲ್ಲಿ ಮಾತ್ರ ಭಾಗವಹಿಸ ಬಹುದಾಗಿದೆ. ಮುಖ್ಯ ವೇದಿಕೆಯಲ್ಲಿ ಸಮುದಾಯಕ್ಕೆ ಆಸಕ್ತಿದಾಯಕ ಸ್ಪರ್ಧೆಗಳು ನಡೆಯುವಂತೆ ಶಾಲಾ ಮುಖ್ಯಸ್ಥರು ಕಾರ್ಯಕ್ರಮವನ್ನು ರೂಪಿಸಬೇಕಿದೆ.

ಯೋಜನೆಗೆ ಹಣಕಾಸು ವ್ಯವಸ್ಥೆ
ಇದಕ್ಕಾಗಿ ಪ್ರತಿ ಬ್ಲಾಕ್‌ಗೆ 50ಸಾವಿರ ರೂ. ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ರೂ 30 ಸಾವಿರವನ್ನು ಕ್ಲಸ್ಟರ್ ಕಲಿಕೋತ್ಸವಕ್ಕಾಗಿ ಹಾಗೂ 20 ಸಾವಿರ ರೂ.ಗಳನ್ನು ಬ್ಲಾಕ್ ಕಲಿಕೋತ್ಸವಕ್ಕಾಗಿ ಬಳಸಿಕೊಳ್ಳಲು ಸೂಚಿಸಲಾಗಿದೆ.

ಕ್ಲಸ್ಟರ್ ಕಲಿಕೋತ್ಸವವು ಡಿ. 12ರಂದು ನಡೆಯಲಿದೆ. ಶಾಲಾ ಕಲಿಕೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಕ್ಲಸ್ಟರ್ ಕಲಿಕೋತ್ಸವದಲ್ಲಿ ಭಾಗವಹಿಸಲು ಅವಕಾಶ ಕಲ್ಪಸಲಾಗಿದೆ. 2014ರ ಜ. 9ರಂದು ಬ್ಲಾಕ್ ಹಂತದ ಕಲಿಕೋತ್ಸವವು ಜರುಗಲಿದೆ.

ಸ್ಪರ್ಧೆಗಳೇನು?: ಕಿರಿಯರ (1 ರಿಂದ 5ನೇ ತರಗತಿ) ವೈಯಕ್ತಿಕ ವಿಭಾಗದಲ್ಲಿ ಸ್ವರಭಾರಯುಕ್ತ ಓದುವುದು, ಕಂಠಪಾಠ, ಉಕ್ತ ಲೇಖನ, ಪದ ಬರೆಯುವುದು, ಪದಗಳನ್ನು ಓದುವುದು (ಪ್ರಥಮ ಭಾಷೆ), ರೇಖಾಕೃತಿಗಳ ಬಗ್ಗೆ ಆಶುಭಾಷಣ, ಗುಣಾಕಾರ ಮಗ್ಗಿ, ಸಿಂಗಿಂಗ್ ರೈಮ್ಸ ಸ್ಪರ್ಧೆಗಳು ನಡೆಯಲಿದೆ.

ಸಾಮೂಹಿಕ ವಿಭಾಗದಲ್ಲಿ ರಸಪ್ರಶ್ನೆ, ಸಂಭಾಷಣೆ, ನಾಟಕ, ಕಾನ್‌ವರ್‌ಸೈಷನ್ ಸ್ಪರ್ಧೆಗಳನ್ನು ನಡೆಸಬೇಕಿದೆ. ಹಿರಿಯರ (6 ರಿಂದ 8ನೇ ತರಗತಿ) ವೈಯಕ್ತಿಕ ವಿಭಾಗದಲ್ಲಿ ಸ್ವರಭಾರಯುಕ್ತ ಓದುವುದು, ಪತ್ರ ಲೇಖನ (ಪ್ರಥಮ ಭಾಷೆ ಮತ್ತು ಆಂಗ್ಲ ಭಾಷೆ), ಅಳತೆ ಮತ್ತು ತೂಕದ ಬಗೆಗಿನ ಜ್ಞಾನ ಪರೀಕ್ಷೆ, ಒಗಟು ಬಿಡಿಸುವುದು ಸೇರಿದಂತೆ ಒಟ್ಟು 13 ಸ್ಪರ್ಧೆಗಳನ್ನು ಹಾಗೂ ಸಾಮೂಹಿಕ ವಿಭಾಗದಲ್ಲಿ ಐದು ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳಲ್ಲಿನ ಜ್ಞಾನ, ಸಾಮರ್ಥ್ಯ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT