ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸೂರೆಗೊಂಡ ಪೈಲ್ವಾನರ ಪಟ್ಟುಗಳು

Last Updated 4 ಫೆಬ್ರುವರಿ 2012, 5:15 IST
ಅಕ್ಷರ ಗಾತ್ರ

ಹಿರೇಕೆರೂರ: ಕೆಲವು ರೋಚಕ ಹಣಾಹಣಿಗಳು, ಮತ್ತೆ ಹಲವು ನೀರಸ ಪ್ರದರ್ಶನಗಳು, ಇನ್ನು ಕೆಲವು ಮದಗಜಗಳ ಕಾಳಗ...   ಸಮಬಲದ ಹೋರಾಟಗಳು... ನೆರೆದಿದ್ದ ಸಾವಿರಾರು ಕ್ರೀಡಾ ಪ್ರೇಮಿಗಳ ಸಿಳ್ಳೆ, ಕೇಕೆಗಳು...ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಎರಡನೇ ದಿನದ ಕುಸ್ತಿ ಪಂದ್ಯಾವಳಿಯಲ್ಲಿ ಕಂಡು ಬಂದ ದೃಶ್ಯಗಳಿವು.

ಉತ್ತಮ ಪ್ರದರ್ಶನ ತೋರಿದ ಪೈಲ್ವಾನರು ನೆರೆದಿದ್ದ ಅಭಿಮಾನಿಗಳಿಂದ ಕರತಾಡನ ಹಾಗೂ ಬಹುಮಾನಗಳ ಅಭಿನಂದನೆ ಸ್ವೀಕರಿಸುತ್ತಿದ್ದರೆ, ಸೋಲೊಪ್ಪಿಕೊಂಡವರು ಅಖಾಡದಿಂದ ಬಾಡಿದ ಮೊಗದಿಂದ ತೆರಳುವುದು ಸಾಮಾನ್ಯ ವಾಗಿತ್ತು. ರಾಜ್ಯ  ಹಾಗೂ ಮಹಾರಾಷ್ಟ್ರದ ವಿವಿಧ ಮೂಲೆಗಳಿಂದ ಬಂದ ನೂರಾರು ಪೈಲ್ವಾನರು ಕುಸ್ತಿ ಪ್ರಿಯರಿಗೆ ರಸದೌತಣ ನೀಡಿದರು.

ಶಿವಮೊಗ್ಗದ ಪೈಲ್ವಾನ ರಾಘು ಹಾಗೂ ಕೊಲ್ಲಾಪುರದ ಕೃಷ್ಣ ಮಧ್ಯೆ ನಡೆದ ತೀವ್ರ ಹಣಾಹಣಿ ಪ್ರೇಕ್ಷಕರನ್ನು ತುದಿಗಾಲಿನ ಮೇಲೆ ನಿಲ್ಲಿಸಿತ್ತು. ಕೊನೆಗೂ ರಾಘು ಗೆಲುವಿನ ನಗೆ ಬೀರಿದರು. ದಿನದ ಕೊನೆಗೆ ನಡೆದ ಶ್ರೀನಿವಾಸ ಕಡೇನಂದಿಹಳ್ಳಿ ಹಾಗೂ ರಮೇಶ ಹೊಳೆ ಹೊನ್ನೂರು ಮಧ್ಯದಲ್ಲಿ ನಡೆದ ಪಂದ್ಯ ದೀರ್ಘ ಸಮಯ ನಡೆದರೂ ನೋಡುಗರಲ್ಲಿ ಉತ್ಸಾಹವನ್ನು ಇಮ್ಮಡಿಗೊಳಿಸಿತು.

ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳದಂತೆ ಪೈಲ್ವಾನರಿಗೆ ಆಗಾಗ್ಗೆ ಸಂಘಟಕರು ಎಚ್ಚರಿಕೆ ನೀಡುತ್ತಿದ್ದುದು ಸಾಮಾನ್ಯವಾಗಿತ್ತು. ಇಂದಿನ ಪಂದ್ಯಗಳಲ್ಲಿ ಹಲವಾರು ಶ್ರೇಷ್ಟ ಕಾದಾಟಗಳು ಕಂಡು ಬಂದವು. ಗೊಂದಲಗಳು, ಸಣ್ಣ ಪುಟ್ಟ ಕಿರಿಕಿರಿಗಳ ಮಧ್ಯೆ ಪಂದ್ಯಾವಳಿ ನಡೆಸಲು ಸಂಘಟಕರು ತೀವ್ರ ಶ್ರಮ ಪಡಬೇಕಾಯಿತು.
 
ಮೈಸೂರು ದಸರಾ ನಂತರ ಬಹುದೊಡ್ಡ ಕುಸ್ತಿ ಪಂದ್ಯಾವಳಿ ಇದಾಗಿದೆ ಎಂಬುದು ಸಂಘಟಕರ ಅಭಿಪ್ರಾಯ. ಕೆಲವು ಪೈಲ್ವಾನರ ಮಕ್ಕಳು ಕುಸ್ತಿಯನ್ನು ಪಾಲ್ಗೊಂಡಿದ್ದುದು ಕಂಡು ಬಂದಿತು.

ದುರ್ಗಾದೇವಿ ಉತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರಪ್ಪ ತಿಪ್ಪಶೆಟ್ಟಿ, ಕಾರ್ಯಾಧ್ಯಕ್ಷ ಅಜ್ಜಪ್ಪ ಕುಬಸದ, ಕುಸ್ತಿ ಕಮಿಟಿ ಅಧ್ಯಕ್ಷ ಅಲ್ತಾಫ್‌ಖಾನ್ ಪಠಾಣ, ಎಲ್.ಬಿ. ತೆಂಬದ, ದುರಗಪ್ಪ ನೀರಲಗಿ, ಬಸವರಾಜ ಕಾಲ್ವೀಹಳ್ಳಿ, ದುರಗೇಶ ತಿರಕಪ್ಪನವರ, ಕೆ.ಜಿ. ಪ್ರತಾಪ, ಶಂಭು ಹಂಸಭಾವಿ, ಸೇರಿದಂತೆ ಬಹುತೇಕ ಸಮಿತಿ ಪದಾಧಿಕಾರಿಗಳು,  ಸ್ವಯಂ ಸೇವಕರು ಹಾಗೂ ಪೊಲೀಸರು ಸ್ಥಳದಲ್ಲಿ ಜನ ಸಂದಣಿ ನಿಯಂತ್ರಿಸುವ ಜೊತೆಗೆ ಕುಸ್ತಿ ಸುಗಮವಾಗಿ ನಡೆಯಲು ಶ್ರಮಿಸಿದರು.

ಶನಿವಾರ ಕೊನೆಯ ದಿನ: ಫೆ.4ರಂದು ಕುಸ್ತಿ ಕೊನೆಯ ದಿನವಾಗಿದ್ದು, ಅಪಾರ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇದೆ. ಮಧ್ಯಾಹ್ನ 12ಕ್ಕೆ ಉದ್ಘಾಟನೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT