ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಾದ ಹೋರಾಟಗಾರ

Last Updated 1 ಜುಲೈ 2012, 8:40 IST
ಅಕ್ಷರ ಗಾತ್ರ

ಸಿದ್ದಪ್ಪ ಮಾಸ್ಟರ್ ಕೆನ್ನೆಗೆ ಬಾರಿಸಿದಾಗ ಬಾಯಲ್ಲಿ ರಕ್ತ ಬಂತೇ ಹೊರತು ಬೋಲೋ ಭಾರತ್ ಮಾತಾಕಿ ಎಂಬ ಘೋಷಣೆ ಮಾತ್ರ ನಿಲ್ಲಲಿಲ್ಲ. 83ರ ಇಳಿವಯಸ್ಸಿನ ಗಾಂಧಿವಾದಿ ಬಿ.ಎ.ನಾರಾಯಣಸ್ವಾಮಿ ತಮ್ಮ ಸ್ವಾತಂತ್ರ್ಯ ಹೋರಾಟದ ನೆನಪುಗಳನ್ನು ಬಿಚ್ಚಿಡುತ್ತಿದ್ದುದೇ ಮಾತಿನ ಮೂಲಕ.

ಅದೆಲ್ಲ ಶುರುವಾಗಿದ್ದು ಅವರು 8ನೇ ತರಗತಿಯಲ್ಲಿದ್ದಾಗ. ಅಂದಿನಿಂದ ಕೊನೆಯುಸಿರು ಇರುವವರೆಗೂ ಅವರು ಸ್ವಾತಂತ್ರ್ಯ ಹೋರಾಟದ ನೆನಪುಗಳನ್ನು ಮತ್ತು ಸಮಕಾಲೀನ ರಾಜಕೀಯ, ಸಾಮಾಜಿಕ ವಾಸ್ತವಗಳನ್ನು ಹೋಲಿಸಿ ವಿಷಾದ ವ್ಯಕ್ತಪಡಿಸುತ್ತಲೇ ಇದ್ದರು.

ಸ್ವಾತಂತ್ರ್ಯ ಹೋರಾಟದ ದಿನಗಳನ್ನು ಅವರು ನೆನಪಿಸಿಕೊಳ್ಳುತ್ತಿದ್ದುದು ಹೀಗೆ: 1947ರ ಆಗಸ್ಟ್ 15ರಂದು ದೇಶಕ್ಕೆ ಸ್ವಾತಂತ್ರ್ಯ ದೊರೆತಿದ್ದರೂ ಮೈಸೂರು ಸಂಸ್ಥಾನದ ರಾಜರ ಆಳ್ವಿಕೆಯೇ ಮುಂದುವರಿದಿತ್ತು. ರಾಜಪ್ರಭುತ್ವದ ಮುಂದುವರಿಕೆಯನ್ನು ವಿರೋಧಿಸಿ ಸೆಪ್ಟೆಂಬರ್‌ನಲ್ಲಿ ಹೋರಾಟಗಾರರಾದ ಶೆಟ್ಟಿ ಶಿವಣ್ಣ, ಲಕ್ಕೂರು ಅಪ್ಪೋಡಪ್ಪ, ಚನ್ನಕಲ್ಲು ರಾಮಣ್ಣ ನೇತೃತ್ವದಲ್ಲಿ ಪಾದಯಾತ್ರೆಗಳು ನಡೆಯುತ್ತಿದ್ದವು.
 
ಪಾದಯಾತ್ರೆ ಘೋಷಣೆಗಳು ಸರ್ಕಾರಿ ಶಾಲೆಯ ಮುಂದೆ ಬಂದ ಕೂಡಲೆ 8ನೇ ತರಗತಿಯಲ್ಲಿದ್ದ ನಾರಾಯಣಸ್ವಾಮಿ ತರಗತಿಯಿಂದ ಹೊರಬಂದು ದನಿಗೂಡಿಸಿದ್ದರು. ಸರ್ಕಾರದ ಸೇವಕರಾದ ಸಿದ್ದಪ್ಪ ಮಾಸ್ಟರ್ ಕೋಪದಿಂದ ಅವರ ಕೆನ್ನೆಗೆ ಹೊಡೆದಿದ್ದರು. ಬಾಯಲ್ಲಿ ರಕ್ತ ಬಂದರೂ ನಾರಾಯಣಸ್ವಾಮಿ ಘೋಷಣೆ ಮಾತ್ರ ನಿಲ್ಲಿಸಲಿಲ್ಲ.  

ಪಟ್ಟಣದ ನೆಹರೂ ಬಡಾವಣೆ ನಿವಾಸಿಯಾಗಿದ್ದ ನಾರಾಯಣಸ್ವಾಮಿ ತಮ್ಮ 6ನೇ ವಯಸ್ಸಿನಲ್ಲಿಯೇ ಗಾಂಧೀಜಿಯವರನ್ನು ಕಂಡಿದ್ದರು. 1935ರಲ್ಲಿ ನಂದಿಬೆಟ್ಟಕ್ಕೆ ಗಾಂಧೀಜಿ ಭೇಟಿ ನೀಡಿ ನಂತರ ಮಾಲೂರು ಪಟ್ಟಣಕ್ಕೆ ಹರಿಜನ ನಿಧಿ ಸಂಗ್ರಹಕ್ಕೆಂದು ಬಂದಿದ್ದಾಗ ಅವರು ತಮ್ಮ ತಂದೆ ಜೊತೆ ಹತ್ತಿರದಿಂದ ಗಾಂಧೀಜಿಯವರನ್ನು ಅಂದಿನ ಕಾರಂಜಿ ಕಟ್ಟೆ (ಇಂದಿನ ಸರ್ಕಾರಿ ಆಸ್ಪತ್ರೆ) ಬಯಲಲ್ಲಿ ನೋಡಿದ್ದೆ ಎಂದು ಸ್ಮರಿಸುತ್ತಿದ್ದರು.

`ಕಾರಿನಿಂದ ಕೆಳಗೆ ಇಳಿದ ಮಹಾತ್ಮರು ಅಂದಿನ ಜಿಲ್ಲಾ ಬೋರ್ಡ್ ಅಧ್ಯಕ್ಷ ವೇಮಾರೆಡ್ಡಿಯವರನ್ನು ಕುರಿತು (ಪಟ್ಟಣದ ಖ್ಯಾತ ಉದ್ಯಮಿ ಎಂ.ವಿ.ವೇಮನರ ತಾತ) “ವೇಮಾರೆಡ್ಡಿ ಕಹಾ ಹೈ” ಎಂದು ಕೇಳಿದ ರೀತಿ ಈಗಲೂ ಮನಸ್ಸಿನಲ್ಲಿ ಉಳಿದಿದೆ~  ಎಂದು ಈ ಹಿಂದೆ `ಪ್ರಜಾವಾಣಿ~ಗೆ ನೀಡಿದ್ದ ಸಂದರ್ಶನದಲ್ಲಿ ಸ್ಮರಿಸಿದ್ದರು.

ಪ್ರತಿ ದಿನ ಭಗದ್ಗೀತೆ, ಭಾಗವತ ಮತ್ತು ಗಾಂಧೀಜಿ ಆತ್ಮಚರಿತ್ರೆಯಂತಹ ಪುಸ್ತಕಗಳನ್ನು ಓದುತ್ತಾ ಅವರು ಕಾಲ ಕಳೆಯುತ್ತಿದ್ದರು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಅವರು ಶಿಕ್ಷಕರಾಗಿದ್ದಾಗ 1944ರಲ್ಲಿ ವಿನೋಬಾ ಭಾವೆ, ಜಯಪ್ರಕಾಶ್ ನಾರಾಯಣರ ಸರ್ವೋದಯ ಮತ್ತು ಭೂದಾನ ಚಳವಳಿಗಳಲ್ಲಿ ಪಾಲ್ಗೊಂಡಿದ್ದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಪಟ್ಟಣದಲ್ಲಿ ಗಾಂಧಿ ಭವನ ನಿರ್ಮಾಣ ಮಾಡಬೇಕೆಂದು ಅವರ ಮನದಾಸೆಯಾಗಿತ್ತು. ಜೂನ್ 30ರಂದು ತಮ್ಮ ಮನೆಯಲ್ಲಿ ಕೊನೆಯುಸಿರೆಳೆದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT