ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್ ಅಂತ್ಯಕ್ಕೆ ಗ್ರಾಮೀಣ ರಸ್ತೆ ಕಾಮಗಾರಿ ಪೂರ್ಣ

ಗ್ರಾಮೀಣ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬೋಪಯ್ಯ ಚಾಲನೆ
Last Updated 17 ಡಿಸೆಂಬರ್ 2012, 6:15 IST
ಅಕ್ಷರ ಗಾತ್ರ

ನಾಪೋಕ್ಲು: ಮಾರ್ಚ್ ಅಂತ್ಯದೊಳಗೆ ಒಳಗೆ ಕೊಡಗು ಜಿಲ್ಲೆಯಲ್ಲಿನ ಎಲ್ಲ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ರಾಜ್ಯ ವಿಧಾನ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಹೇಳಿದರು.

ಸಮೀಪದ ಕುಂಜಿಲ ಗ್ರಾಮದಲ್ಲಿ ರೂ. 1.89 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡ ಕುಂಜಿಲ-  ಕೊಳಕೇರಿ ಸಂಪರ್ಕ ರಸ್ತೆ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ಕೊಡಗಿನ ರಸ್ತೆ ದುರಸ್ತಿಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾ ಪಂಚಾಯಿತಿ ವತಿಯಿಂದ ರಸ್ತೆ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿದೆ. ಲೋಕೋಪಯೋಗಿ ಇಲಾಖೆಯಿಂದ ಆಗಬೇಕಾಗಿದ್ದ ಕಾಮಗಾರಿಗಳು ವಿಳಂಬವಾಗುತ್ತಿವೆ. ಈ ವಿಳಂಬಕ್ಕೆ ಗುತ್ತಿಗೆದಾರರ ಕೊರತೆ ಮತ್ತು ಅಧಿಕಾರಿಗಳ ಬೇಜವಾಬ್ದಾರಿ ಕಾರಣ ಎಂದರು.

ರಾಜ್ಯ ಹೆದ್ದಾರಿ ಪ್ರಾಧಿಕಾರದ ಐದು ಹೆದ್ದಾರಿಗಳಲ್ಲಿ ಮೂರು ಹೆದ್ದಾರಿಗಳ ಕಾಮಗಾರಿಯನ್ನು ಪ್ರಥಮ ಹಂತದಲ್ಲಿ ಸೇರ್ಪಡೆಗೊಳಿಸಲಾಗಿದೆ. ಇದರಲ್ಲಿ ವಿರಾಜಪೇಟೆ- ಬೈಂದೂರು ರಸ್ತೆ ಕಾಮಗಾರಿಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಹುಣಸೂರು- ತಲಕಾವೇರಿ ರಸ್ತೆ ಕಾಮಗಾರಿ ಪ್ರಾರಂಭದ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

ಕರಡ- ತಲಕಾವೇರಿ ಹೆದ್ದಾರಿ ನಿರ್ಮಾಣಕ್ಕೆ 17 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ. ಸಾರ್ವಜನಿಕರು ರಸ್ತೆ ನಿರ್ಮಿಸಲು ಸ್ಥಳಾವಕಾಶ ನೀಡಿ ಸಹಕರಿಸಿದರೆ ಶೀಘ್ರವಾಗಿ ಕಾಮಗಾರಿ ಪೂರೈಸಲು ಸಹಕಾರಿಯಾಗಲಿದೆ ಎಂದರು.

ಗೋಣಿಕೊಪ್ಪ- ಆನೆಚೌಕೂರು ರಸ್ತೆ ದುರಸ್ತಿಗೂ ಕ್ರಮ ಕೈಗೊಳ್ಳಲಾಗಿದೆ. ಪಾಡಿಶ್ರೀ ಇಗ್ಗುತ್ತಪ್ಪ ದೇವಾಲಯದ ಅಭಿವದ್ಧಿಗೆ ಒಂದು ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಈ ಅನುದಾನದಲ್ಲಿ ಕಕ್ಕಬ್ಬೆ ಮುಖ್ಯ ರಸ್ತೆಯಿಂದ ದೇವಾಲಯದವರೆಗೆ ರಸ್ತೆ ನಿರ್ಮಾಣ ಮತ್ತು ಭಕ್ತರಿಗೆ ಮೂಲಭೂತ ಸೌಲಭ್ಯ ನೀಡುವ ಕ್ರಮ ಕೈಗೊಳ್ಳಲಾಗುವುದು ಎಂದು ಬೋಪಯ್ಯ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಮಾತನಾಡಿ, ಸ್ವಾತಂತ್ರ್ಯ ಬಂದ ನಂತರದ 60 ವರ್ಷಗಳಲ್ಲಿ ಮಾಡದ ಕೊಡಗಿನ ಅಭಿವದ್ಧಿಯನ್ನು ಕೆ.ಜಿ. ಬೋಪಯ್ಯ ನಾಲ್ಕು ವರ್ಷಗಳಲ್ಲಿ ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕಕ್ಕಬ್ಬೆ ಗ್ರಾಮ ಪಂಚಾಯಿತಿಯಲ್ಲಿ ರೂ. 1.46 ಕೋಟಿ ವೆಚ್ಚದ ರಸ್ತೆ ಕಾಮಗಾರಿ, ರೂ. 16 ಲಕ್ಷ ವೆಚ್ಚದ ಕುಡಿಯುವ ನೀರಿನ ಪೂರೈಕೆ, ರೂ. 9 ಲಕ್ಷ ವೆಚ್ಚದ ಕೋಡಿಮಣಿಯಂಡ ಕುಟುಂಬಸ್ಥರ ಮುಳುಗು ಸೇತುವೆ ಕಾಮಗಾರಿಗೆ ಚಾಲನೆ ನೀಡಲಾಯಿತು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಬಿದ್ದಂಡ ಉಷಾದೇವಮ್ಮ, ಕಕ್ಕಬ್ಬೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಿಯಂಡ ಸುನಂದ, ಸದಸ್ಯೆ ಪರದಂಡ ಪ್ರಮೀಳಾ ಪೆಮ್ಮಯ್ಯ, ಕಕ್ಕಬ್ಬೆ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಉದಿಯಂಡ ಸುರ ನಾಣಯ್ಯ, ಚಂಡಿರ ಜಗದೀಶ್, ಕಲ್ಯಾಟಂಡ ಮುತ್ತಪ್ಪ, ತಿಮ್ಮಯ್ಯ, ಬಾಚಮಂಡ ಪೂವಣ್ಣ, ನಂಬಡಮಂಡ ಸೋಮಯ್ಯ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT