ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ಉಪವಾಸ; ಹೊರಟ್ಟಿ ಅಸ್ವಸ್ಥ

Last Updated 21 ಫೆಬ್ರುವರಿ 2011, 8:35 IST
ಅಕ್ಷರ ಗಾತ್ರ

ಧಾರವಾಡ: ಮಾಜಿ ಶಿಕ್ಷಣ ಸಚಿವ ಮತ್ತು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅನುದಾನರಹಿತ ವಿದ್ಯಾಸಂಸ್ಥೆಗಳಿಗೆ ವೇತನ ಅನುದಾನ ನೀಡಬೇಕು ಎಂಬ ಬೇಡಿಕೆ ಇಟ್ಟುಕೊಂಡು ನಡೆಸಿರುವ ಆಮರಣ ಉಪವಾಸ ಭಾನುವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಹೊರಟ್ಟಿ ಅವರ ಜೊತೆ ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಸ್ಥೆಯ ಐವರು ಸದಸ್ಯರೂ ಆಮರಣ ಉಪವಾಸ ನಡೆಸಿದ್ದು, ಆ ಪೈಕಿ ಅಮಾತಿಗೌಡ ಎಂಬುವವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರನ್ನು ಪೊಲೀಸರು ಬಲವಂತದಿಂದ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯೆ ತುರುಸಿನ ವಾಗ್ವಾದ ನಡೆಯಿತು. ಉಪವಾಸ ಸತ್ಯಾಗ್ರಹನಿರತರಾದ ಪ್ರತಿಭಟನಾಕಾರರು ನಮಗೆ ಯಾವ ವೈದ್ಯಕೀಯ ನೆರವು ಬೇಕಿಲ್ಲ ಎಂದು ಹಠ ಹಿಡಿದರು. ಅಮಾತಿಗೌಡ ಅವರನ್ನು ಸ್ಟ್ರೇಚರ್ ಮೇಲೆ ಕರೆದೊಯ್ಯುವಾಗಲೂ ತೀವ್ರವಾದ ವಿರೋಧ ಎದುರಾಯಿತು. ಆಮೇಲೆ ಬೀದಿಗಿಳಿದ ಪ್ರತಿಭಟನಾಕಾರರು ಅಮಾತಿಗೌಡ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ರಸ್ತೆತಡೆ ನಡೆಸಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪ್ರತಿಕೃತಿ ಅವರು ದಹಿಸಿದರು. ಈ ಮಧ್ಯೆ ಹೊರಟ್ಟಿ ಅವರ ಆರೋಗ್ಯ ಸ್ಥಿತಿಯೂ ಬಿಗಡಾಯಿಸಿದ್ದು ಜಿಲ್ಲಾ ಆಸ್ಪತ್ರೆಯ ವೈದ್ಯರು ಅವರ ಆರೋಗ್ಯ ಸ್ಥಿತಿಯ ಮೇಲೆ ನಿಗಾ ಇಟ್ಟಿದ್ದಾರೆ. ಸಂಜೆಯ ವೇಳೆಗೆ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದ್ದರಿಂದ ಅವರಿಗೆ ಉಪವಾಸ ಕೈಬಿಟ್ಟು, ಆಸ್ಪತ್ರೆಗೆ ದಾಖಲಾಗಬೇಕು ಎಂಬ ಸಲಹೆ ನೀಡಲಾಯಿತು.

ಸತ್ಯಾಗ್ರಹ ನಡೆಸಲಾಗುತ್ತಿರುವ ಸ್ಥಳದಲ್ಲಿದ್ದ ವೈದ್ಯರ ಪ್ರಕಾರ ಹೊರಟ್ಟಿಯವರು ಬೆನ್ನುನೋವು, ಅಧಿಕ ರಕ್ತದೊತ್ತಡ, ಜ್ವರದಿಂದ ಬಳಲುತ್ತಿದ್ದಾರೆ. ಆದರೆ, ವೈದ್ಯರ ಸಲಹೆಗೆ ಸಮ್ಮತಿ ನೀಡದ ಹೊರಟ್ಟಿ ಉಪವಾಸ ಮುಂದುವರಿಸಿದರು. 

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಹೊರಟ್ಟಿ, ‘ಬಜೆಟ್ ಹಣವನ್ನು ಪಕ್ಷದ ಜನಪ್ರಿಯ ಯೋಜನೆಗಳಿಗೆ ವರ್ಗಾಯಿಸಲಾಗುತ್ತಿದ್ದು, ಸುಮಾರು 10 ಸಾವಿರ ಶಿಕ್ಷಕರಿಗೆ ಸಂಬಳ ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ಶಿಕ್ಷಕರ ಕುಟುಂಬಗಳ ಸ್ಥಿತಿ ಕೂಡ ಚಿಂತಾಜನಕವಾಗಿದೆ. ಒಂದು ಹೊತ್ತಿನ ಊಟ ಹೊಂದಿಸುವುದು ದುಸ್ಥರವಾಗಿದೆ’ ಎಂದು ವಿಷಾದಿಸಿದ ಅವರು, ‘ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಶಿಕ್ಷಕರ ಸಂಬಳಕ್ಕೆ ಹಣ ಎತ್ತಿಡುವವರೆಗೆ ಉಪವಾಸ ನಿಲ್ಲಿಸುವುದಿಲ್ಲ’ ಎಂದರು.

‘ಮುಖ್ಯಮಂತ್ರಿಗಳು ಮಾತುಕತೆಗೆ ಆಹ್ವಾನ ನೀಡುವವರೆಗೆ ಉಪವಾಸ ನಿಲ್ಲಿಸುವ ಪ್ರಶ್ನೆಯೇ ಇಲ್ಲ’ ಎಂದ ಅವರು, ಶಿಕ್ಷಣ ಸಚಿವರ ವಿರುದ್ಧ ಹರಿಹಾಯ್ದರು.
ಗದಗಿನ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ, ಜಿಲ್ಲಾಧಿಕಾರಿ ದರ್ಪಣ ಜೈನ್, ಪೊಲೀಸ್ ಆಯುಕ್ತ ಡಾ. ಕೆ.ರಾಮಚಂದ್ರರಾವ್, ಜೆಎಸ್‌ಎಸ್ ಕಾಲೇಜಿನ ಪ್ರಾಚಾರ್ಯ ಅಜಿತಪ್ರಸಾದ್, ಮಾಜಿ ಸಂಸದ ಮಂಜುನಾಥ ಕುನ್ನೂರು, ಸತ್ಯಾಗ್ರಹ ಸ್ಥಳಕ್ಕೆ ತೆರಳಿ ಹೊರಟ್ಟಿ ಅವರ ಆರೋಗ್ಯ ವಿಚಾರಿಸಿದರು. ಶ್ಯಾಮ ಮರಿಗೌಡರ, ಆನಂದ ಕುಲಕರ್ಣಿ, ಸುರೇಶ ಹಿರೇಮಠ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT