ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾಂಡೋಲಿನ್‌ ‘ರಾಗಶ್ರೀ’

ನಾದದ ಬೆನ್ನೇರಿ
Last Updated 18 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಕತ್ತರಿಗುಪ್ಪೆಯಲ್ಲಿರುವ ರಾಗಶ್ರೀ ಸಂಗೀತ ಶಾಲೆಯಲ್ಲಿ ಎನ್.ಎಸ್.ಪ್ರಸಾದ್ ಮ್ಯಾಂಡೋಲಿನ್ ವಾದನ ಹೇಳಿಕೊಡುತ್ತಾರೆ. ಸಂಗೀತದ ಶಾಸ್ತ್ರ ಭಾಗವಲ್ಲದೆ ತಾತ್ವಿಕ ಲಕ್ಷಣಗಳ ಕಲಿಕೆಯೂ ಇಲ್ಲಿ ಸಾಧ್ಯ.

ಮಕ್ಕಳಿಗೆ ಮಧ್ಯವಾರ್ಷಿಕ ಪರೀಕ್ಷೆಯ ಬಿಸಿ. ಜತೆಗೆ ದಸರಾ ರಜೆ ಸಿಗಲು ಇನ್ನೆರಡೇ ವಾರ ಬಾಕಿ. ಮಕ್ಕಳೆಲ್ಲ ಓದಿನ ಕಡೆ ಲಕ್ಷ್ಯ ವಹಿಸಬೇಕಾದ್ದರಿಂದ ಸಂಗೀತ ಶಾಲೆಗೆ ಅವರು ಬರದೆ ‘ಶಾರ್ಟ್ ಬ್ರೇಕ್’ ತೆಗೆದುಕೊಂಡಿದ್ದಾರೆ. ಆದರೆ ಮಕ್ಕಳು ಮಾತ್ರವಲ್ಲದೆ ಗೃಹಿಣಿಯರು, ವೃತ್ತಿನಿರತರೂ ಸಂಗೀತ ಕಲಿಯುವುದರಿಂದ ಸಂಗೀತ ಶಾಲೆಗಳು ಲವಲವಿಕೆಯಿಂದಲೇ ಕಾರ್ಯ ನಿರ್ವಹಿಸುತ್ತಿವೆ.

ಸಂಗೀತದೊಂದಿಗೆ ವಿಜ್ಞಾನ, ಮನರಂಜನೆಯೊಂದಿಗೆ ಶಿಕ್ಷಣ ಹೀಗೆ ಸಂಗೀತದೊಂದಿಗೆ ಅನ್ಯ ವಿಷಯಗಳು ಅನನ್ಯ ಸಂಬಂಧ ಹೊಂದಿವೆ. ಸಂಗೀತ ಶಾಸ್ತ್ರದ ಜತೆಗೆ ತಾತ್ವಿಕ ಮತ್ತು ಲಕ್ಷಣ ಭಾಗಗಳನ್ನೂ ಹೇಳಿಕೊಡುವ ವಿಶಿಷ್ಟ ಸಂಗೀತ ಶಾಲೆ ನಗರದ ಬನಶಂಕರಿ ಮೂರನೇ ಹಂತದ ಬಳಿಯ ಕತ್ತರಿಗುಪ್ಪೆಯಲ್ಲಿದೆ. ಇದೇ ರಾಗಶ್ರೀ ಸಂಗೀತ ಅಕಾಡೆಮಿ. 

ಸುಮಾರು 30 ಮಕ್ಕಳು ಇಲ್ಲಿ ಕರ್ನಾಟಕ ಶಾಸ್ತ್ರೀಯ ಶೈಲಿಯಲ್ಲಿ ಮ್ಯಾಂಡೋಲಿನ್‌ ಜತೆಗೆ ಸುಗಮ ಸಂಗೀತ, ಸಿನಿಮಾ ಸಂಗೀತ ಕಲಿಯುತ್ತಿದ್ದಾರೆ. ಮ್ಯಾಂಡೋಲಿನ್ ವಾದನದಲ್ಲಿ ತಮ್ಮದೇ ಆದ ಮೋಹಕ ಶೈಲಿಯನ್ನು ರೂಪಿಸಿಕೊಂಡಿರುವ ವಿದ್ವಾನ್ ಎನ್.ಎಸ್. ಪ್ರಸಾದ್ ಈ ಸಂಗೀತ ಶಾಲೆಯ ರೂವಾರಿ. ಇಲ್ಲಿ ಗುಂಪಿನಲ್ಲಿ ಪಾಠ ಹೇಳಿಕೊಡಲಾಗುತ್ತದೆ. ಮಕ್ಕಳು ಬಯಸಿದರೆ ಪ್ರತ್ಯೇಕ ಪಾಠವೂ ಸಿಗುತ್ತದೆ. ವಿದ್ವಾನ್ ಎನ್.ಎಸ್. ಪ್ರಸಾದ್ ಕಳೆದ 30 ವರ್ಷಗಳಿಂದ ಮ್ಯಾಂಡೋಲಿನ್, ಸಂಗೀತ ಪಾಠ ಮಾಡುತ್ತಾ ಬಂದರೂ ‘ರಾಗಶ್ರೀ ಸಂಗೀತ ಅಕಾಡೆಮಿ’ ಎಂಬ ಅಪರೂಪದ ಸಂಗೀತ ಶಾಲೆ ಆರಂಭಿಸಿ ಇದೀಗ ಸುಮಾರು 10 ವರ್ಷಗಳಾಗಿವೆ. 

ನವಿರು ನವಿರಾದ ಮೀಟುಗಳಿಂದ ಕೇಳುಗರನ್ನು ಮೋಡಿ ಮಾಡುವ ಇಟಲಿ ಮೂಲದ ಪುಟ್ಟ ವಾದ್ಯ ಮ್ಯಾಂಡೋಲಿನ್. ಸುಗಮ ಸಂಗೀತಕ್ಕೆ ಅತ್ಯಂತ ಸೂಕ್ತವಾದ ತಂತಿ ಪಕ್ಕವಾದ್ಯ. ಇದನ್ನು ಕಲಿಸುವ ಶಾಲೆಗಳು ಬೆಂಗಳೂರಿನಲ್ಲಿ ವಿರಳ ಮತ್ತು ಕಲಿಸುವವರೂ ಕಡಿಮೆ. ಈ ನಿಟ್ಟಿನಲ್ಲಿ ರಾಗಶ್ರೀ ಶಾಲೆಯು ಮ್ಯಾಂಡೋಲಿನ್‌ ಕಲಿಯುವ ಆಸೆ, ಆಸಕ್ತಿಯುಳ್ಳ ಮಕ್ಕಳ ಮನದಾಸೆ ತಣಿಸುತ್ತಿದೆ.
ಇಲ್ಲಿ ಕಲಿತ ಶಿವರಾಮ್, ಜ್ಯೋತಿ, ರಾಧಿಕಾ, ಶ್ರೀಧರ ಮೂರ್ತಿ, ಕೃಷ್ಣ ಉಡುಪ, ನಾಗಭೂಷಣ ಉಡುಪ, ಸಂಗೀತಾ ಥಾಮಸ್, ಲಕುಲೇಶ್, ಮೇದಿನಿ ದತ್, ಸುನಿತಾ, ವಿನಯ ಕುಮಾರ್, ವೀರೇಂದ್ರ ಮುಂತಾದವರು ಮ್ಯಾಂಡೋಲಿನ್‌ ಮತ್ತು ಗಾಯನದಲ್ಲಿ ಭರವಸೆ ಮೂಡಿಸುವ ಕಲಾವಿದರಾಗಿ ರೂಪುಗೊಂಡಿದ್ದಾರೆ. 

‘ಸಂಗೀತದ ಸುಸ್ವರ ತರಂಗದ ಅಲೆಯನ್ನು ಜನಸಾಮಾನ್ಯರಿಗೂ ಮುಟ್ಟುವ ಹಾಗೆ ಮಾಡಿ, ಮಕ್ಕಳಲ್ಲಿ ಸದ್ಭಾವನೆ ಮೂಡಿಸಿ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡುವುದೇ ಈ ಸಂಗೀತ ಶಾಲೆಯ ಉದ್ದೇಶ’ ಎನ್ನುತ್ತಾರೆ ಎನ್.ಎಸ್.ಪ್ರಸಾದ್.
‘ಇಲ್ಲಿ ಸಂಗೀತ ಕಲಿಸುವುದರ ಜತೆಗೆ ಸಂಗೀತ ಕಮ್ಮಟ, ಶಿಬಿರ ಏರ್ಪಡಿಸಿ ಕಲೆಯ ಬಗ್ಗೆ ಹೆಚ್ಚಿನ ಜ್ಞಾನ ವಿಸ್ತಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಧ್ವನಿ ಸಂಸ್ಕರಣಕ್ಕೆ ಬೇಕಾದ ಸೂಕ್ಷ್ಮ ಅಂಶಗಳನ್ನು ಮಕ್ಕಳಿಗೆ ಮನನ ಮಾಡಿಕೊಡಲಾಗುತ್ತದೆ. ರಾಗ, ರಾಗ ಲಕ್ಷಣ, ರಾಗದ ಸ್ವರೂಪ, ಛಾಯೆ ಮುಂತಾದ ವಿಷಯಗಳ ಜತೆಗೆ ತಾಳ, ಲಯಗಳ ಬಗ್ಗೆಯೂ ಹೆಚ್ಚಿನ ಮುತುವರ್ಜಿ ವಹಿಸಿ ತರಬೇತಿ ನೀಡಲಾಗುತ್ತದೆ ಎನ್ನುತ್ತಾರೆ ಅವರು.

ಈ ಸಂಗೀತ ಶಾಲೆಯ ಮತ್ತೊಂದು ವೈಶಿಷ್ಟ್ಯವೆಂದರೆ ‘ಮನರಂಜನೆ ಮೂಲಕ ಶಿಕ್ಷಣ’ ಎಂಬ ಥೀಮ್ ಇಟ್ಟುಕೊಂಡು ಸಂಗೀತದ ಕಾರ್ಯಾಗಾರ ನಡೆಸುವುದು.

‘ತಂತಿವಾದ್ಯ ಕಲಿಯುವವರಿಗೆ ಮ್ಯಾಂಡೋಲಿನ್ ಹೇಳಿ ಮಾಡಿಸಿದಂತಹ ವಾದ್ಯ ಪ್ರಕಾರ. ಈ ಪುಟ್ಟ ವಾದ್ಯದಲ್ಲಿ ಶಾಸ್ತ್ರೀಯ ಸಂಗೀತದ ಜತೆಗೆ ಸುಗಮ ಸಂಗೀತ, ಭಕ್ತಿ ಸಂಗೀತ, ಸಿನಿಮಾ ಸಂಗೀತಗಳನ್ನು ಸೊಗಸಾಗಿ ನುಡಿಸಬಹುದು’ ಎನ್ನುತ್ತಾರೆ ಈ ಮ್ಯಾಂಡೋಲಿನ್‌ ವಾದಕ.

‘ಮ್ಯಾಂಡೋಲಿನ್‌ ಮಾರ್ತಾಂಡ’
ಸಂಗೀತ ಕ್ಷೇತ್ರದಲ್ಲಿ ‘ಮ್ಯಾಂಡೋಲಿನ್ ಪ್ರಸಾದ್’ ಎಂದೇ ಪರಿಚಿತರಾದರು. ಸುಗಮ ಸಂಗೀತ ಮತ್ತು ಸಿನಿಮಾ ಸಂಗೀತದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡರು. ಮೂಲತಃ ಮೈಸೂರಿನವರು. ಓದಿದ್ದು ವಿಜ್ಞಾನದಲ್ಲಿ ಪದವಿ. ವಿದ್ವಾನ್ ವಿ.ದೇಶಿಕಾಚಾರ್ ಅವರಿಂದ ವೀಣೆ ಕಲಿತರು. ಆಮೇಲೆ ಆಯ್ದುಕೊಂಡಿದ್ದು ಮ್ಯಾಂಡೋಲಿನ್. ಮೈಸೂರಿನ ಸತ್ಯನಾರಾಯಣ (ರತನ್) ಅವರಲ್ಲಿ ಮ್ಯಾಂಡೋಲಿನ್‌ ಅಭ್ಯಾಸ ಮಾಡಿದರು.

ನಾಡಿನ ಸುಪ್ರಸಿದ್ಧ ಗಾಯಕ–ಗಾಯಕಿಯರಿಗೆಲ್ಲ ತಮ್ಮ ವಾದ್ಯ ಸಹಕಾರ ನೀಡುತ್ತ ಬಂದಿದ್ದಾರೆ. ಹಲವಾರು ಯುವ ಕಲಾವಿದರಿಗೆ ಮಾರ್ಗದರ್ಶನವನ್ನೂ ನೀಡುತ್ತಿದ್ದಾರೆ. ಈಗಾಗಲೇ ಇವರ ಬಳಿ ಮ್ಯಾಂಡೋಲಿನ್‌ ಕಲಿತ ಅನೇಕ ಶಿಷ್ಯಂದಿರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.

ಮ್ಯಾಂಡೋಲಿನ್ ವಾದನದ ಜತೆಗೆ ರಾಗ ಸಂಯೋಜನೆ ಹಾಗೂ ಸಂಗೀತ ನಿರ್ದೇಶನವನ್ನೂ ಪ್ರಸಾದ್ ಮಾಡುತ್ತಿದ್ದಾರೆ. ಭಾವಗೀತೆ, ಭಕ್ತಿಗೀತೆಗಳ ಧ್ವನಿಸುರುಳಿಗಳಿಗೆ, ದೂರದರ್ಶನದ ಧಾರವಾಹಿಗಳಿಗೆ ಹಾಗೂ ಹಲವು ಕನ್ನಡದ ಚಲನಚಿತ್ರಗಳಿಗೂ ಇವರು ಹಿನ್ನೆಲೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಜನಪ್ರಿಯ ಸುಗಮ ಸಂಗೀತ ಗಾಯಕರಾಗಿದ್ದ ಸಿ. ಅಶ್ವಥ್ ಜತೆ ಅಮೆರಿಕದ ಕೆಲವು ದೇಶಗಳಲ್ಲಿ ಸಂಗೀತ ಪ್ರವಾಸ ಮಾಡಿದ್ದಾರೆ. ಸಿಂಗಪುರ, ಬಹರೈನ್, ಮಸ್ಕತ್, ಆಸ್ಟ್ರೀಲಿಯಾಗಳಲ್ಲಿಯೂ ಅನೇಕ ಕಛೇರಿಗಳನ್ನು ನೀಡಿದ ಹೆಗ್ಗಳಿಕೆ ಇವರದು. ಶಾಸ್ತ್ರೀಯ ಸಂಗೀತ, ಸುಗಮ ಸಂಗೀತಗಳಲ್ಲದೆ ಫ್ಯೂಷನ್ ಕಾರ್ಯಕ್ರಮಗಳಲ್ಲೂ ಇವರ ಮ್ಯಾಂಡೋಲಿನ್‌ ವಾದನ ರಂಜಿಸಿದೆ.

‘ಮ್ಯಾಂಡೋಲಿನ್‌ ಮಾರ್ತಾಂಡ, ಸ್ವರಮಂದಾರ, ಸ್ವರ ಮಯೂರ, ಬೆಸ್ಟ್ ಸ್ಟ್ರಿಂಗ್ ಪ್ಲೇಯರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಕಲಾಶ್ರೀ ಪುರಸ್ಕಾರ ಇವರಿಗೆ ಸಂದ ಪ್ರಮುಖ ಬಿರುದು ಪ್ರಶಸ್ತಿಗಳು. ದಾಸರ ಪದ, ಭಾವಗೀತೆ, ಸಿನಿಮಾ ಹಾಡುಗಳ ಧ್ವನಿಮುದ್ರಿಕೆಗಳು ಹೊರಬಂದಿವೆ. ಕಿರುತೆರೆ ಧಾರಾವಾಹಿ, ಸಿನಿಮಾಗಳಿಗೂ ಹಿನ್ನೆಲೆ ಸಂಗೀತ ನೀಡಿದ್ದಾರೆ.
ವಿಳಾಸ: ರಾಗಶ್ರೀ, ನಂ. 86, ನಾಲ್ಕನೇ ಮುಖ್ಯರಸ್ತೆ, ಕತ್ತರಿಗುಪ್ಪೆ ಪೂರ್ವ, ಬನಶಂಕರಿ ಮೂರನೇ ಹಂತ, ಬೆಂಗಳೂರು. 560085. ಫೋನ್: 080- 26793533/9448270533

ಅದ್ಭುತ ಶೈಲಿ
ಅದು ಮೈಸೂರಿನಲ್ಲಿ ನಡೆದ ‘ಸಂಗೀತ ಪ್ರೇರಣ’ ಎಂಬ ಕಾರ್ಯಾಗಾರ. ಅಲ್ಲಿ ಎನ್.ಎಸ್. ಪ್ರಸಾದ್ ಅವರು ಸಂಗೀತದ ಬಗ್ಗೆ ಅನೇಕ ವಿಚಾರಗಳನ್ನು ಮಂಡಿಸಿದರು. ಅಲ್ಲೇ ನನಗೆ ಇವರ ಪರಿಚಯ ಆಯಿತು. ಆಗಲೇ ಉತ್ತಮ ಸಂಗೀತ ಸಂಪನ್ಮೂಲ ವ್ಯಕ್ತಿ ಎಂದುಕೊಂಡಿದ್ದೆ. ಅದಾಗಿ ಬೆಂಗಳೂರಿಗೆ ಬಂದು ಅವರ ಬಳಿ ಸುಗಮ ಸಂಗೀತಕ್ಕೆ ಸೇರಿದೆ. ಸಂಗೀತ ಕಲಿಸುವ ಶೈಲಿ ನಿಜಕ್ಕೂ ಅದ್ಭುತವಾದದ್ದು. ಧ್ವನಿ ಸಂಸ್ಕರಣಕ್ಕೆ ನೀಡುವ ಮಹತ್ವ ಮೆಚ್ಚುವಂಥದ್ದು. ಇವರು ಒಬ್ಬ ವಿಭಿನ್ನ ಸಂಗೀತ ಕಲಾವಿದರಾಗಿ ನಿಲ್ಲುತ್ತಾರೆ.
-ವಿನಯ ಕುಮಾರ್ ನಾಡಿಗ್

ಸಂಗೀತದಲ್ಲಿ ಸೃಜನಶೀಲತೆ
ಗುರು-ಶಿಷ್ಯರ ಸಂಬಂಧ ಆತ್ಮೀಯವಾಗಿರಬೇಕು, ಶಿಷ್ಯರೊಂದಿಗಿನ ಒಡನಾಟ ಸೌಹಾರ್ದಯುತವಾಗಿರಬೇಕು ಎಂಬುದನ್ನು ಚಾಚೂ ತಪ್ಪದೆ ಪಾಲಿಸುವ ಗುರು ಪ್ರಸಾದ್ ಅವರ ಬಳಿ ಸುಮಾರು ಏಳೆಂಟು ವರ್ಷಗಳಿಂದ ಮ್ಯಾಂಡೋಲಿನ್‌ ಕಲಿಯುತ್ತಿದ್ದೇನೆ. ಇಲ್ಲಿ ಬರೀ ಕರ್ನಾಟಕ ಸಂಗೀತ ಮಾತ್ರವಲ್ಲದೆ ಹಿಂದೂಸ್ತಾನಿ, ಸುಗಮ ಸಂಗೀತ, ಚಿತ್ರ ಸಂಗೀತ ಮತ್ತು ಫ್ಯೂಷನ್ ಸಂಗೀತವನ್ನೂ ಕಲಿಯುತ್ತಿದ್ದೇನೆ.

‘ಸಂಗೀತದಲ್ಲಿ ಸೃಜನಶೀಲತೆ’ ಎಂಬ ಅಂಶವನ್ನು ಮನದಟ್ಟಾಗಬೇಕಾದರೆ ಅದಕ್ಕೆ ರಾಗಶ್ರೀ ಸಂಗೀತ ಶಾಲೆಯೇ ಸೂಕ್ತವಾದದ್ದು ಎಂಬುದು ನನ್ನ ಅನಿಸಿಕೆ. ನಾನು ಒಂದು ಕಂಪೆನಿಯಲ್ಲಿ ಫೈನಾನ್ಶಿಯಲ್ ಕನ್ಸಲ್‌ಟೆಂಟ್ ಆಗಿ ಕೆಲಸ ಮಾಡುತ್ತಿದ್ದು, ಸಂಗೀತವನ್ನು ಹವ್ಯಾಸವಾಗಿ ರೂಢಿಸಿಕೊಂಡಿದ್ದೇನೆ. ಇದರಲ್ಲಿ ನನಗೆ ನೆಮ್ಮದಿ, ಸಮಾಧಾನ ಸಿಗುತ್ತಿದೆ.
-ಶಿವರಾಮ್ ಎಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT