ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಮಕನಮರಡಿಯಲ್ಲಿ `ಕೈ' ಪ್ರಬಲ?

ಯಮಕನಕರಡಿ ಕ್ಷೇತ್ರ ಪರಿಚಯ
Last Updated 5 ಏಪ್ರಿಲ್ 2013, 6:03 IST
ಅಕ್ಷರ ಗಾತ್ರ

ಬೆಳಗಾವಿ: ಕ್ಷೇತ್ರ ಪುನರ್‌ವಿಂಗಡಣೆಯಿಂದಾಗಿ 2008ರ ಚುನಾವಣೆ ಪೂರ್ವದಲ್ಲಿ ಯಮಕನಮರಡಿ ವಿಧಾಸಭೆ ಕ್ಷೇತ್ರವು ಅಸ್ತಿತ್ವಕ್ಕೆ ಬಂದಿತು. ಇದಕ್ಕೂ ಮೊದಲು ಯಮಕನಮರಡಿಯ ಪ್ರದೇಶವು ಸಂಕೇಶ್ವರ ಹಾಗೂ ಬಾಗೇವಾಡಿ ಕ್ಷೇತ್ರಗಳಲ್ಲಿ ಹಂಚಿಹೋಗಿದ್ದವು. ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲು ಕ್ಷೇತ್ರವಾಗಿರುವ ಇಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸತೀಶ ಜಾರಕಿಹೊಳಿ ಆಯ್ಕೆಯಾಗಿದ್ದಾರೆ.

ಈ ಮೊದಲು ಸಂಕೇಶ್ವರ ಕ್ಷೇತ್ರದೊಳಗಿದ್ದ ಪಾಶ್ಚಾಪುರ, ದಡ್ಡಿ ಹಾಗೂ ಹೆಬ್ಬಾಳ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಮತ್ತು ಬಾಗೇವಾಡಿ ಕ್ಷೇತ್ರದೊಳಗಿದ್ದ ಕಡೋಲಿ, ಕಾಕತಿ ಹಾಗೂ ಹುದಲಿ ಜಿ.ಪಂ. ಕ್ಷೇತ್ರಗಳನ್ನು ಯಮಕನಮರಡಿ  ಕ್ಷೇತ್ರ ಒಳಗೊಂಡಿದೆ.

ಸಂಕೇಶ್ವರ ಕ್ಷೇತ್ರದಲ್ಲಿ 1994ರಿಂದಲೂ ಸತತವಾಗಿ ಮೂರು ಬಾರಿ ಆಯ್ಕೆಯಾಗಿದ್ದ ಎ.ಬಿ. ಪಾಟೀಲರು ಕ್ಷೇತ್ರ ಪುನರ್ ವಿಂಗಡಣೆಯಿಂದಾಗಿ ತಮ್ಮ ರಾಜಕೀಯ ಅಸ್ತಿತ್ವವನ್ನೇ ಕಳೆದುಕೊಳ್ಳುವಂತಾಯಿತು. ಯಮಕನಮರಡಿ ಎಸ್‌ಟಿ ಮೀಸಲು ಕ್ಷೇತ್ರವಾಗಿದ್ದರಿಂದ 2008ರ ಚುನಾವಣೆಯಲ್ಲಿ ಅನಿವಾರ್ಯವಾಗಿ ಎ.ಬಿ. ಪಾಟೀಲರು ಹುಕ್ಕೇರಿ ಕ್ಷೇತ್ರದಿಂದ ಸ್ಪರ್ಧಿಸಿ ಉಮೇಶ ಕತ್ತಿ ಎದುರು ಸೋಲು ಅನುಭವಿಸುವಂತಾಯಿತು.

ಸಂಕೇಶ್ವರ ಕ್ಷೇತ್ರದಲ್ಲಿ 1983ರಿಂದ ನಡೆದ 6 ಚುನಾವಣೆಗಳಲ್ಲಿ 4 ಬಾರಿ ಕಾಂಗ್ರೆಸ್, ಜನತಾದಳ ಹಾಗೂ ಜೆಡಿಯು  ಅಭ್ಯರ್ಥಿಗಳು ತಲಾ ಒಂದೊಂದು ಬಾರಿ ಗೆಲುವು ಸಾಧಿಸಿದ್ದರು. ಬಾಗೇವಾಡಿ ಕ್ಷೇತ್ರದಲ್ಲಿ 2 ಬಾರಿ ಪಕ್ಷೇತರರು, ಜನತಾ ಪಕ್ಷ, ಜನತಾದಳ, ಜೆಡಿಯು ಹಾಗೂ ಬಿಜೆಪಿಯ ಅಭ್ಯರ್ಥಿಗಳು ತಲಾ ಒಂದೊಂದು ಬಾರಿ ಆಯ್ಕೆಗೊಂಡಿದ್ದರು.

ಸಂಕೇಶ್ವರ ಕ್ಷೇತ್ರದಲ್ಲಿ 1983ರಲ್ಲಿ ಕಾಂಗ್ರೆಸ್‌ನ ಎಂ.ಎಸ್. ಪಾಟೀಲ ಅವರು 370 ಮತಗಳ ಅಂತರದಿಂದ ಜನತಾ ಪಕ್ಷದ ಎಲ್.ಕೆ. ಖೋತ ಅವರನ್ನು ಸೋಲಿಸಿದ್ದರು. 1985ರಲ್ಲಿ ಕಾಂಗ್ರೆಸ್‌ನ ಮಲ್ಹಾರಗೌಡ ಪಾಟೀಲ ಅವರು  ಜನತಾ ಪಕ್ಷದ ಪಿ.ಎಸ್. ಕರಗುಪ್ಪಿ ಅವರ ವಿರುದ್ಧ 3,016 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 1989ರಲ್ಲಿ ಮಲ್ಹಾರಗೌಡ ಪಾಟೀಲರು ಜನತಾದಳದ ಎ.ಬಿ. ಪಾಟೀಲರನ್ನು  4,128 ಮತಗಳ ಅಂತರದಿಂದ ಸೋಲಿಸಿ ಪುನರಾಯ್ಕೆಯಾದರು.

1994ರಲ್ಲಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ ಜನತಾದಳದ ಎ.ಬಿ. ಪಾಟೀಲರು, ಕಾಂಗ್ರೆಸ್‌ನ ಎಂ.ಡಿ. ನಲವಡೆ ಅವರನ್ನು 16,713 ಮತಗಳ ಅಂತರದಿಂದ ಸೋಲಿಸಿದರು. ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಮಲ್ಹಾರಗೌಡ ಪಾಟೀಲ 16,048 ಮತಗಳನ್ನು ಗಳಿಸಿದ್ದರು.

1999ರಲ್ಲಿ ಜೆಡಿಯುನಿಂದ ಸ್ಪರ್ಧಿಸಿದ್ದ ಎ.ಬಿ. ಪಾಟೀಲರು ಕಾಂಗ್ರೆಸ್‌ನ ಮಲ್ಹಾರಗೌಡ ಪಾಟೀಲರ ವಿರುದ್ಧ 32,049 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2004ರಲ್ಲಿ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದಿದ್ದ ಎ.ಬಿ. ಪಾಟೀಲರು, ಬಿಜೆಪಿಯ ರಾಜೇಂದ್ರ ಪಾಟೀಲರನ್ನು 16,208 ಮತಗಳ ಅಂತರದಿಂದ ಸೋಲಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಬಿಎಸ್‌ಪಿಯ ಜೀವನಲತಾ ನಡುವಿನಮನಿ ಕೇವಲ 3,292 ಮತ ಪಡೆದಿದ್ದರು.

ಬಾಗೇವಾಡಿ ಕ್ಷೇತ್ರದಲ್ಲಿ 1983ರಲ್ಲಿ ಪಕ್ಷೇತರ ಅಭ್ಯರ್ಥಿ ಜಿ.ಎಲ್. ಅಷ್ಟೇಕರ 4572 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಜನತಾ ಪಕ್ಷದ ಎನ್.ಬಿ. ಪಾಟೀಲ 16,981 ಮತ ಹಾಗೂ ಕಾಂಗ್ರೆಸ್‌ನ ಡಿ.ಕೆ. ಎಲಿಗಾರ 15,955 ಮತ ಗಳಿಸಿದ್ದರು.

1985ರಲ್ಲಿ ಜನತಾ ಪಕ್ಷದ ಎಸ್.ಸಿ. ಮಾಳಗಿ ಅವರು ಪಕ್ಷೇತರ ಅಭ್ಯರ್ಥಿ ಜಿ.ಎಲ್. ಅಷ್ಟೇಕರ ಅವರನ್ನು 1,234 ಮತಗಳ ಅಂತರದಿಂದ ಸೋಲಿಸಿದ್ದರು. ಕಾಂಗ್ರೆಸ್‌ನ ಎ.ಕೆ. ಕೊಟ್ರಶೆಟ್ಟಿ ಮೂರನೇ ಸ್ಥಾನದಲ್ಲಿದ್ದರು.

1989ರಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ಸಿ. ಮೊದಗೇಕರ ದೇಸಾಯಿ ಅವರು 163 ಮತಗಳ ಅಂತರದಿಂದ ರೈತ ಸಂಘದ ಕೆ.ಎಸ್. ಯಳ್ಳೂರಕರ ಅವರನ್ನು ಸೋಲಿಸಿದರು. ಜನತಾದಳದ ಎಸ್.ಸಿ. ಮಾಳಗಿ ಮೂರನೇ ಸ್ಥಾನಕ್ಕೆ ಕುಸಿದಿದ್ದರು.

1994ರಲ್ಲಿ ಜನತಾದಳದ ಎಸ್.ಸಿ. ಮಾಳಗಿ 5,389 ಮತಗಳ ಅಂತರದಿಂದ ಪಕ್ಷೇತರ ಅಭ್ಯರ್ಥಿ ಜಿ.ಎಲ್. ಅಷ್ಟೇಕರರನ್ನು ಸೋಲಿಸಿದ್ದರು. ಕಾಂಗ್ರೆಸ್‌ನ ಎನ್.ಬಿ. ಪಾಟೀಲ ಮೂರನೇ ಸ್ಥಾನ ಪಡೆದಿದ್ದರು.

1999ರಲ್ಲಿ ಜೆಡಿಯುನಿಂದ ಸ್ಪರ್ಧಿಸಿದ ಎಸ್.ಸಿ. ಮಾಳಗಿ 273 ಮತಗಳಿಂದ ಪಕ್ಷೇತರ ಅಭ್ಯರ್ಥಿ ಪಿಂಗಟ ಯಲ್ಲೋಜಿರಾವ್ ಸಿದರಾಯ ಅವರನ್ನು ಸೋಲಿಸಿ ಪುನರಾಯ್ಕೆಯಾಗಿದ್ದರು. ಕಾಂಗ್ರೆಸ್‌ನ ಶಿವಶಂಕರ ಸೋಮಲಿಂಗಪ್ಪ ಮಳಗಲಿ ಮೂರನೇ ಸ್ಥಾನ ಪಡೆದಿದ್ದರು.

2004ರಲ್ಲಿ ಬಿಜೆಪಿಯ ಅಭಯ ಪಾಟೀಲ (32,854 ಮತ) ಅವರು 3698 ಮತಗಳ ಅಂತರದಿಂದ ಹಾಲಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಎಸ್.ಸಿ. ಮಾಳಗಿ (29,156 ಮತ) ಅವರನ್ನು ಸೋಲಿಸಿದ್ದರು. ಎಂಇಎಸ್‌ನ ಶಿವಾಜಿ ಸುಂಟಕರ 28,420 ಮತ ಪಡೆದಿದ್ದರು.

ಯಮಕನಮರಡಿ ಕ್ಷೇತ್ರ ಅಸ್ತಿತ್ವಕ್ಕೆ ಬಂದ ಬಳಿಕ 2008ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ (46,132 ಮತ) ಅವರು 16,781 ಮತಗಳ ಅಂತರ ದಿಂದ ಜೆಡಿಎಸ್‌ನ ಬಾಳಗೌಡ ಪಾಟೀಲರನ್ನು (29,351 ಮತ) ಸೋಲಿಸಿದರು. ಬಿಜೆಪಿಯ ಮಲ್ಲಪ್ಪ ಲಕ್ಷ್ಮಣ ಮುತ್ತೆಣ್ಣವರ 18,557 ಮತ ಹಾಗೂ ಪಕ್ಷೇತರ ಅಭ್ಯರ್ಥಿ ಯಲ್ಲಪ್ಪ ಹನುಮಂತ ಕೋಳೇಕರ 10,320 ಮತಗಳನ್ನು ಗಳಿಸಿದ್ದರು.

ಕ್ಷೇತ್ರದಲ್ಲಿ ಸದ್ಯ ಒಟ್ಟು 1,58,300 ಮತದಾರರಿದ್ದಾರೆ. ಇದರಲ್ಲಿ 79,373 ಪುರುಷರು ಹಾಗೂ 86,326 ಮಹಿಳೆಯರು ಮತದಾನದ ಹಕ್ಕನ್ನು ಹೊಂದಿದ್ದಾರೆ.

ಕಾಂಗ್ರೆಸ್‌ನಿಂದ ಈ ಬಾರಿಯೂ ಸ್ಪರ್ಧಿಸಲಿರುವ ಹಾಲಿ ಶಾಸಕ ಸತೀಶ ಜಾರಕಿಹೊಳಿ ಅವರು ಈ ಹಿಂದೆ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದು, ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದಾರೆ. ಜೆಡಿಎಸ್ ಟಿಕೆಟ್‌ಗಾಗಿ ಸಣ್ಣರಾಯ ನಾಯಕ, ಸುಭಾಸ ಕರನಿಂಗ್, ರಂಜನೀಶ ಆಚಾರ್ಯ ಪೈಪೋಟಿ ನಡೆಸಿದ್ದಾರೆ. ಬಿಜೆಪಿಯಿಂದ ಮಲ್ಲಪ್ಪ ಮುತ್ತೆಣ್ಣವರ, ಪರಸಪ್ಪ ನಾಯಕ ಟಿಕೆಟ್‌ಗಾಗಿ ಯತ್ನಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT