ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ನಿರ್ಮಾಣ-ಸಮಿತಿ ರಚಿಸಲು ಆದೇಶ

Last Updated 12 ಸೆಪ್ಟೆಂಬರ್ 2011, 19:35 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಯಶವಂತಪುರ ಹಾಗೂ ಯಲಹಂಕ ನಡುವೆ ನಡೆಯುತ್ತಿರುವ ಸುಮಾರು 10 ಕಿ.ಮೀ. ವಿಸ್ತರಣೆಯ `ಲಿಂಕ್ ರಸ್ತೆ~  ವಿವಾದವನ್ನು ಬಗೆಹರಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸುವಂತೆ ಸರ್ಕಾರಕ್ಕೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ಸೋಮವಾರ ಆದೇಶಿಸಿದೆ.

ಸುಪ್ರೀಂಕೋರ್ಟ್‌ಗೆ ತೆರಳುವ ಮುನ್ನ ನ್ಯಾ. ಕೇಹರ್ ಅವರು ಈ ಆದೇಶವನ್ನು ಪ್ರಕಟಿಸಿದ್ದು, ಇದು ರಾಜ್ಯ ಹೈಕೋರ್ಟ್‌ನಲ್ಲಿ ಅವರ ಕೊನೆಯ ಆದೇಶವಾಗಿದೆ. ರಸ್ತೆ ನಿರ್ಮಾಣ ಮುಂದುವರಿಸಲು ಬಿಬಿಎಂಪಿಗೆ ನಿರ್ಬಂಧಿಸಿರುವ ಪೀಠ, ನಿರ್ಮಾಣದ ಮುಂದಿನ ಪ್ರಕ್ರಿಯೆಯನ್ನು ಸಮಿತಿಯ ಆದೇಶದ ಅನ್ವಯ ನಡೆಸುವಂತೆ ಸೂಚಿಸಿದೆ.

100 ಅಡಿ ಅಗಲದ ಈ ರಸ್ತೆ ನಿರ್ಮಿಸುವ ಸಲುವಾಗಿ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿನ ನೂರಾರು ಮರಗಳನ್ನು ಕಡಿಯಲಾಗುತ್ತಿದೆ ಎಂದು ದೂರಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾದ ಡಾ.ಆರ್. ದ್ವಾರಕೀನಾಥ್, ಡಾ. ಜಿ.ಕೆ. ವೀರೇಶ್ ಹಾಗೂ ಅನೇಕ ಮಂದಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇದಾಗಿದ್ದು, ಪೀಠ ಪ್ರಕರಣ ಇತ್ಯರ್ಥಗೊಳಿಸಿದೆ.

`ಇದು ಬಿಬಿಎಂಪಿ ಮತ್ತು ವಿಶ್ವವಿದ್ಯಾಲಯದ ನಡುವೆ ಇರುವ ವಿವಾದ. ಇಂತಹ ಪ್ರಕರಣಗಳಲ್ಲಿ ಉನ್ನತ ಮಟ್ಟದ ಸಮಿತಿಯ ರಚನೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ಹಿನ್ನೆಲೆಯಲ್ಲಿ ಸಮಿತಿಯನ್ನು ರಚಿಸಬೇಕು. ಸಮಿತಿಯಲ್ಲಿ ಮುಖ್ಯ ಕಾರ್ಯದರ್ಶಿಗಳ ಜೊತೆ, ಕೃಷಿ, ಅರಣ್ಯ ಇಲಾಖೆಗಳ ಕಾರ್ಯದರ್ಶಿಗಳು ಒಳಗೊಂಡಿರಬೇಕು. ಇವರಲ್ಲದೇ ವಿವಿ ಹಾಗೂ ಬಿಬಿಎಂಪಿಯ ತಲಾ ಇಬ್ಬರು ಪ್ರತಿನಿಧಿಗಳೂ ಇರಬೇಕು~ ಎಂದು ಪೀಠ ತಿಳಿಸಿದೆ.

`ಈ ವಿವಾದಿತ ಪ್ರದೇಶವು ಸುಮಾರು 530 ಜಾತಿಯ ಮರಗಳು, 165 ಜಾತಿಯ ಪಕ್ಷಿಗಳು, 23 ಪ್ರಭೇದದ ಸಸ್ತನಿಗಳನ್ನು ಒಳಗೊಂಡಿದೆ. ಈ ಜಾಗವನ್ನು ಪಾರಂಪರಿಕ ತಾಣ ಎಂದು 2010ರ ಸೆಪ್ಟೆಂಬರ್‌ನಲ್ಲಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗಿದೆ~ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ಲಾಕಪ್ ಡೆತ್: ನೋಟಿಸ್
ಕೊಡಗು ಜಿಲ್ಲೆಯ ಶನಿವಾರಸಂತೆಯ 25ರ ವಯಸ್ಸಿನ ಯುವಕ ಶಶಿಕುಮಾರ್ ಅವರ ಲಾಕಪ್ ಡೆತ್ ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಪೊಲೀಸರಿಗೆ ಹೈಕೋರ್ಟ್ ಸೋಮವಾರ ನೋಟಿಸ್ ಜಾರಿಗೆ ಆದೇಶಿಸಿದೆ.

ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಶಶಿಕುಮಾರ್ ಅವರ ತಂದೆ ಚಂದ್ರಯ್ಯ ಅವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಈ ಆದೇಶ ಹೊರಡಿಸಿದ್ದಾರೆ. ವನಜಾಕ್ಷಿ ಎನ್ನುವವರ ದೂರಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಅಲ್ಲಿಯ ಪೊಲೀಸ್ ಠಾಣೆಗೆ ಕರೆಯೊಯ್ದ ಪೊಲೀಸರು ತಮ್ಮ ಎದುರೇ ಮಗನನ್ನು ಚೆನ್ನಾಗಿ ಥಳಿಸಿದ ಹಿನ್ನೆಲೆಯಲ್ಲಿ ಆತ ಸಾವನ್ನಪ್ಪಿದ್ದಾನೆ.
 
ಇದಕ್ಕೆ ಪಿಎಸ್‌ಐ ಮಂಜುನಾಥ ಅವರೇ ಕಾರಣ. ಆದರೆ ವೈದ್ಯರು ಪೊಲೀಸರ ಜೊತೆ ಶಾಮೀಲಾಗಿ ಮರಣೋತ್ತರ ಪರೀಕ್ಷೆಯಲ್ಲಿ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ ಎನ್ನುವುದು ಅರ್ಜಿದಾರರ ವಾದ.

ಇದು ಪೊಲೀಸರ ಥಳಿತದಿಂದಲೇ ಸಂಭವಿಸಿದ ಸಾವು ಎಂಬ ಬಗ್ಗೆ ಹಲವು ದಾಖಲೆಗಳನ್ನು ಅರ್ಜಿದಾರರ ಪರ ವಕೀಲ ಸಿ.ಎನ್.ರಾಜು ಕೋರ್ಟ್‌ಗೆ ನೀಡಿದರು. ವಿಚಾರಣೆಯನ್ನು ಮುಂದೂಡಲಾಗಿದೆ.

ಅತಿ ಭದ್ರತೆ: ಅಸಮಾಧಾನ
ದೆಹಲಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ರಾಜ್ಯದ ಹೈಕೋರ್ಟ್‌ನಲ್ಲಿ `ವಿಪರೀತ~ ಭದ್ರತೆ ವ್ಯವಸ್ಥೆ ಮಾಡಿರುವುದು ವಕೀಲ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಕುರಿತು ಚರ್ಚಿಸಲು ಬೆಂಗಳೂರು ವಕೀಲರ ಸಂಘದ ಆಶ್ರಯದಲ್ಲಿ ಸೋಮವಾರ ಸಭೆ ನಡೆಯಿತು. ಭದ್ರತೆಯನ್ನು ತಾವು ಎಂದಿಗೂ ವಿರೋಧಿಸುವುದಿಲ್ಲ. ಆದರೆ ಭದ್ರತೆ ಹೆಸರಿನಲ್ಲಿ ವಕೀಲರಿಗೆ ಹಿಂಸೆ ನೀಡಲಾಗುತ್ತಿದೆ ಎನ್ನುವುದು ಅವರ ಆರೋಪ.

ಹೈಕೋರ್ಟ್ ಆವರಣದೊಳಕ್ಕೆ ಕೊನೆಯ ಪಕ್ಷ ವಕೀಲರ ವಾಹನವನ್ನು ಬಿಡಬೇಕು. ಯಾವ ರೀತಿಯ ತಪಾಸಣೆ ಇದ್ದರೂ ಅದಕ್ಕೆ ತಾವು ಸಹಕರಿಸುತ್ತೇವೆ. ದಾಖಲೆಗಳ ಭಾರಿ ಬ್ಯಾಗ್‌ಗಳನ್ನು ಹೊತ್ತು ತರಬೇಕಾಗುತ್ತದೆ. ಬಹಳ ದೂರದಲ್ಲಿ ಕಾರು ಪಾರ್ಕಿಂಗ್ ಮಾಡಿದರೆ ಇದನ್ನು ಹೊತ್ತು ತರುವುದೇ ಕಷ್ಟ. ಇದರಿಂದ ಕೊನೆಯ ಪಕ್ಷ ಕೋರ್ಟ್‌ನ ಮುಂಭಾಗದಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಬೇಕು ಎನ್ನುವುದು ಪ್ರಮುಖ ಕೋರಿಕೆ. ಈ ಕುರಿತು ರಿಜಿಸ್ಟ್ರಾರ್ ಹಾಗೂ ಪೊಲೀಸರಲ್ಲಿ ಮನವಿ ಸಲ್ಲಿಸಲು ಸಭೆ ನಿರ್ಧರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT