ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಪ್ರಾತಿನಿಧ್ಯ, ಮೀಸಲಿಗೆ ಒತ್ತಾಯ

Last Updated 9 ಮೇ 2012, 6:10 IST
ಅಕ್ಷರ ಗಾತ್ರ

ತುಮಕೂರು: ರಾಜ್ಯದಲ್ಲಿರುವ ಕುಂಚಿಟಿಗ ಸಮುದಾಯಕ್ಕೆ ರಾಜಕೀಯ ಪಕ್ಷಗಳು ಪ್ರಾತಿನಿಧ್ಯ ನೀಡಬೇಕು ಮತ್ತು ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ಸೇರಿಸಬೇಕು ಎಂದು ವಿಶ್ವ ಕುಂಚಿಟಿಗರ ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ಇಲ್ಲಿ ಮಂಗಳವಾರ ಒತ್ತಾಯಿಸಿದರು.

ಪಟ್ಟಭದ್ರ ವ್ಯವಸ್ಥೆಯ ಹಿಡಿತದ ವಿರುದ್ಧ ಒಗ್ಗಟ್ಟಾಗಿ ಹೋರಾಟ ನಡೆಸಿ ರಾಜಕೀಯ ಪ್ರಾತಿನಿಧ್ಯ ಪಡೆಯು ವುದು ಸೇರಿದಂತೆ ಸಮುದಾಯವನ್ನು ಸರ್ವ ಶಕ್ತ ಸಮುದಾಯವನ್ನಾಗಿ ರೂಪಿಸುವ ಹಿನ್ನೆಲೆಯಲ್ಲಿ ಮೇ 27ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶ ಯಾರ ವಿರುದ್ಧವೂ ಅಲ್ಲ, ಸಮುದಾಯದಲ್ಲಿ ಒಗ್ಗಟ್ಟು, ಜಾಗೃತಿ ಮೂಡಿಸುವ ಉದ್ದೇಶ ಇದೆ ಎಂದರು.

ಬೆಂಗಳೂರು ಯಲಹಂಕ ವಿಮಾನ ನಿಲ್ದಾಣದ ಸಮೀಪ ಸರ್ಕಾರ 15 ಎಕರೆ ಭೂಮಿ ಕೊಡಲು ಒಪ್ಪಿದೆ. ಇಲ್ಲಿ ಸಮುದಾಯ ಭವನ, ದೇವಸ್ಥಾನ, ಶಾಲೆ, ಜನಾಂಗದ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ನಿರ್ಮಾಣ ಮಾಡಲು ಚಿಂತಿಸಲಾಗಿದೆ ಎಂದರು.

ಪಟ್ಟನಾಯಕನಹಳ್ಳಿ ನಂಜಾವಧೂತ ಸ್ವಾಮೀಜಿ, ಹೊಸದುರ್ಗದ ಬಸವ ಶಾಂತವೀರ ಸ್ವಾಮೀಜಿ, ಹನುಮಂತನಾಥ ಸ್ವಾಮೀಜಿ ಸೇರಿದಂತೆ ಹಲವು ಪ್ರಮುಖರು ಭಾಗವಹಿಸುವರು. ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ, ದೆಹಲಿ ಯಿಂದಲೂ ಕುಂಚಿಟಿಗರು ಸಮಾವೇಶಕ್ಕೆ ಆಗಮಿಸುವರು ಎಂದು ವಿವರಿಸಿದರು.

ತಮಿಳುನಾಡಿನ ಕುಂಚಿಟಿಗ ಸಮುದಾಯದ ಮುಖಂಡ ಜಾನಕಲ್ ಮೋಹನ್‌ರಾಜ್ ಮಾತನಾಡಿ, ಕೃಷ್ಣದೇವರಾಯನ ಸೈನ್ಯದಲ್ಲಿ ಕುಂಚಿಟಿಗರದು ಪ್ರಮುಖ ಪಾತ್ರ ಇತ್ತು. ಹೈದರಾಲಿಯ ಶೋಷಣೆ ತಡೆಯಲಾಗದೇ ಶಿರಾ, ಹಿರಿಯೂರು, ಹೊಸದುರ್ಗದಿಂದ ಸಾಕಷ್ಟು ಸಂಖ್ಯೆಯ ಕುಂಚಿಟಿಗರು ತಮಿಳುನಾಡಿಗೆ ವಲಸೆ ಬಂದರು. ತಮಿಳುನಾಡಿನಲ್ಲಿ ಈಗ 40 ಲಕ್ಷ ಕುಂಚಿಟಿಗರು ಇದ್ದಾರೆ. ಜನಾಂಗದ ಇಬ್ಬರು ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರೊಬ್ಬರು ಇದ್ದಾರೆ ಎಂದು ಮಾಹಿತಿ ನೀಡಿದರು.

ಕುಂಚಿಟಿಗರ 48 ಕುಲ, 48 ಮನೆ ದೇವರ ಸಂಸ್ಕೃತಿ ಯನ್ನು ಜನಾಂಗ ಬಿಟ್ಟುಕೊಡುವುದಿಲ್ಲ. ಸಮಾವೇಶಕ್ಕೆ ತಮಿಳುನಾಡಿನಿಂದ 30 ಸಾವಿರ ಜನರು ಬರಲಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕುಂಚಿಟಿಗರ ಸಂಘದ ಅಧ್ಯಕ್ಷ ಆರ್.ದೊಡ್ಡಲಿಂಗಪ್ಪ, ಉಪಾಧ್ಯಕ್ಷ ಲಿಂಗಣ್ಣ, ಸಮ್ಮೇಳನದ ಪ್ರಧಾನ ಸಂಚಾಲಕ ಪುಟ್ಟೀರಪ್ಪ, ಪದಾಧಿಕಾರಿಗಳಾದ ಜ್ಯೋತಿ ಬಾಲಕೃಷ್ಣ, ಸುವರ್ಣ ಲಿಂಗರಾಜು, ಲಿಂಗಣ್ಣ, ರಾಜೇಗೌಡ, ರಾಮಾಂಜಿನಪ್ಪ, ಪೋಸ್ಟ್ ವೀರಕ್ಯಾತಪ್ಪ ಇತರರು ಇದ್ದರು.

`ಲಿಂಗಾಯತರಲ್ಲ, ಒಕ್ಕಲಿಗರು~
ಕುಂಚಿಟಿಗರು ವೀರಶೈವ ಅಥವಾ ಲಿಂಗಾಯತರಲ್ಲ, ಒಕ್ಕಲಿಗ ಜಾತಿಯ ಒಂದು ಉಪ ಪಂಗಡ ಎಂದು ವಿಶ್ವ ಕುಂಚಿಟಿಗರ ಸಮ್ಮೇಳನದ ಪ್ರಧಾನ ಸಂಚಾಲಕ ಪುಟ್ಟೀರಪ್ಪ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಹರಿಹರ, ಹಾವೇರಿ ಭಾಗದಲ್ಲಿ ಸಾಕಷ್ಟು ಕುಂಚಿಟಿಗರಿಗೆ ಲಿಂಗಧಾರಣೆ ಮಾಡಿ ಅವರನ್ನು ಕುಂಚಿಟಿಗ ಲಿಂಗಾಯತರು ಎಂದು ಕರೆಯಲಾಗಿದೆ. ಕುಂಚಿಟಿಗ ಲಿಂಗಾಯತರು ಇತ್ತ ಕುಂಚಿಟಿಗರೊಂದಿಗೆ ಸಂಬಂಧ ಬೆಸೆಯದೆ, ಅತ್ತ ಲಿಂಗಾಯತರೊಂದಿಗೂ ಸಂಬಂಧ ಬೆಸೆಯದೇ ಅವರಲ್ಲಷ್ಟೇ ಸಂಬಂಧ ಮುಂದುವರೆಸಿದ್ದಾರೆ. ಆದರೆ ಕುಂಚಿಟಿಗರ ಮುಂದೆ ಬಂದಿರುವ ಲಿಂಗಾಯತರು ಎಂಬ ಹೆಸರನ್ನು ಬಿಡಲು ಒಪ್ಪಿದ್ದಾರೆ ಎಂದರು.

ಬೆಂಗಳೂರಿನಲ್ಲಿ ನಡೆಯಲಿರುವ ಸಮಾವೇಶದಲ್ಲಿ ಹರಿಹರ, ಹಾವೇರಿ ಭಾಗದ ಕುಂಚಿಟಿಗ ಲಿಂಗಾಯ ತರು ಇನ್ನು ಮುಂದೆ ಲಿಂಗಾಯತ ಪದ ಬಿಟ್ಟು ಕುಂಚಿಟಿಗರು ಎಂದು ಘೋಷಣೆ ಮಾಡಿಕೊಳ್ಳಲಿದ್ದಾರೆ ಎಂದು ಹೇಳಿದರು.

ಕುಂಚಿಟಿಗರು ಒಕ್ಕಲಿಗರಲ್ಲ ಎಂಬುದೂ ಕೂಡ ತಪ್ಪು. ಒಕ್ಕಲಿಗರಲ್ಲಿ ಸರ್ಪ ಒಕ್ಕಲಿ ಗರು, ಉಪ್ಪಿನಕೊಳಗ, ಗಂಗಟಕಾರ್ ಒಕ್ಕಲಿಗರು ಎಂಬ ಪಂಗಡಗಳಿವೆ. ಕುಂಚಿಟಿಗರು ಕೂಡ ಒಕ್ಕಲಿಗರ ಒಂದು ಪಂಗಡ ಎಂದರು.
ಸಮಾವೇಶದಲ್ಲಿ ಜನಾಂಗದ ಏಕೈಕ ಶಾಸಕ ಟಿ.ಬಿ.ಜಯಚಂದ್ರ, ನಂಜಾವಧೂತ ಸ್ವಾಮೀಜಿ ಭಾಗವಹಿಸುವುದು ಖಚಿತ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT