ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಮಾರ್ಗ ಅಭಿವೃದ್ಧಿಗೆ ಆದ್ಯತೆ

Last Updated 2 ಸೆಪ್ಟೆಂಬರ್ 2013, 6:27 IST
ಅಕ್ಷರ ಗಾತ್ರ

ಬೀದರ್: ಆದ್ಯತೆ ಮೇರೆಗೆ ಬೀದರ್ ಮತ್ತು ಗುಲ್ಬರ್ಗ ನಡುವಣ ರೈಲು ಮಾರ್ಗ ಅಭಿವೃದ್ಧಿ ಪೂರ್ಣಗೊಳಿಸಲು ಒತ್ತು ನೀಡಲಿದ್ದು, ರಾಜ್ಯ ಸರ್ಕಾರವೂ ಪೂರಕವಾಗಿ ಸ್ಪಂದಿಸಬೇಕು ಎಂದು ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಹೇಳಿದರು.

ನಗರ ರೈಲ್ವೆ ನಿಲ್ದಾಣದಲ್ಲಿ ಬೀದರ್-ಬೆಂಗಳೂರು ನೂತನ ರೈಲು ಸೇವೆಗೆ ಚಾಲನೆ ನೀಡಿದ ಅವರು, ಆಗಲೇ ಮಾರ್ಗ ಅಭಿವೃದ್ಧಿಗೆ ಹೆಚ್ಚುವರಿ ಮೊತ್ತ ಒದಗಿಸಲಾಗಿದೆ. ಹಳಿ ಅಭಿವೃದ್ಧಿ ಆಗಿರುವ ಬೀದರ್-ಹುಮನಾಬಾದ್ ನಡುವೆ ಫುಶ್‌ಪುಲ್ ರೈಲು ಸಂಚಾರಕ್ಕೆ ಚಾಲನೆ ನೀಡಲು ಸಿದ್ಧತೆ ನಡೆದಿದೆ ಎಂದರು.

ಪ್ರಸಕ್ತ ಬಜೆಟ್‌ನಲ್ಲಿ ಈ ಮಾರ್ಗದ ಅಭಿವೃದ್ಧಿಗೆ ರೂ. 10 ಕೋಟಿ ಇಡಲಾಗಿತ್ತು. ಹೆಚ್ಚುವರಿಯಾಗಿ ರೂ. 60 ಕೋಟಿ ಒದಗಿಸಿದ್ದು, ರಾಜ್ಯ ಸರ್ಕಾರ ಕೂಡಾ ಅಷ್ಟೇ ಮೊತ್ತ ಒದಗಿಸಲಿದೆ. ಈ ಮಾರ್ಗದಲ್ಲಿ ಬೆಣ್ಣೆತೊರಾ ಬಳಿ ರೈಲ್ವೆ ಸೇತುವೆ ನಿರ್ಮಾಣ ಮತ್ತು  ಮರಗುತ್ತಿ ಬಳಿ ಸುರಂಗ ಅಭಿವೃದ್ಧಿಪಡಿಸಲು ಚಾಲನೆ ನೀಡಲಾಗಿದೆ ಎಂದರು.

ಬೀದರ್ ಮೂಲಕ ಹಾದುಹೋಗುತ್ತಿದ್ದ ನಾಂದೇಡ್-ಬೆಂಗಳೂರು ನಡುವಣ ರೈಲು ವೇಳೆ ಬದಲಿಸಿದರೆ ಲಾತೂರ್ ಮತ್ತಿತರ ಕಡೆಯಿಂದ ದೂರು ಬರಬಹುದು ಎಂಬ ಹಿನ್ನೆಲೆಯಲ್ಲಿ ಹೊಸ ರೈಲು ಒದಗಿಸಲು ನಿರ್ಧರಿಸಲಾಯಿತು. ರೂ. 22 ಕೋಟಿ ವೆಚ್ಚದಲ್ಲಿ 16 ಬೋಗಿಗಳ ಈ ರೈಲು ಸೇವೆ ಒದಗಿಸಲಾಗಿದೆ ಎಂದು ವಿವರಿಸಿದರು.

ಕ್ಲೀನಿಂಗ್ ಸೌಲಭ್ಯ ಇಲ್ಲ
ಹೊಸ ರೈಲು ಸೇವೆ ಒದಗಿಸಲು ಪೂರಕವಾಗಿ ಬೀದರ್ ನಿಲ್ದಾಣದಲ್ಲಿ ಸ್ವಚ್ಛತೆ, ನೀರು ಸೌಲಭ್ಯದ ಕೊರತೆ ಇತ್ತು. ಇದು ಲಭ್ಯವಾಗುವವರೆತೆ ಆರು ತಿಂಗಳು ಮುಂದೂಡಲು ಅಧಿಕಾರಿಗಳು ಬಯಸಿದ್ದರು. ಆದರೆ, ತಾತ್ಕಾಲಿಕವಾಗಿ ಬೆಂಗಳೂರಿನಲ್ಲೇ ನಿರ್ವಹಣೆಗೆಒತ್ತುನೀಡುವುದು; ಸ್ವಚ್ಚತೆ ಮತ್ತು ನೀರುಪೂರೈಕೆಗೆ ಶಾಶ್ವತ ವ್ಯವಸ್ಥೆ ಆಗುವವರೆಗೂ ತಾತ್ಕಾಲಿಕವಾಗಿ ಬೀದರ್ ನೀರು ನಿಲ್ದಾಣದಲ್ಲಿ ಹೆಚ್ಚುವರಿ ಟ್ಯಾಂಕರ್‌ಗಳನ್ನು ಬಳಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಕೇವಲ ಹೋರಾಟದಿಂದ ಕೆಲಸ ಆಗದು -ಧರ್ಮಸಿಂಗ್
ಬೀದರ್
: ಬೆಂಗಳೂರಿಗೆ ನೇರ ರೈಲು ಸಂಪರ್ಕ ಒದಗಿಸಬೇಕು ಎಂಬ ನಿಟ್ಟಿನಲ್ಲಿ ಇಲಾಖೆ ಮತ್ತು ರೈಲ್ವೆ ಸಚಿವರ ಜೊತೆಗೆ ನಡೆಸಿದ ಚರ್ಚೆ, ಪ್ರಯತ್ನ ಇಂದು ಫಲ ನೀಡಿದ್ದು, ಈ ಕನಸು ಈಡೇರುವಲ್ಲಿ ಎಲ್ಲ ಶಾಸಕರು ಸಹಕರಿಸಿದ್ದಾರೆ ಎಂದು ಸಂಸದ ಧರ್ಮಸಿಂಗ್ ಹೇಳಿದರು.

`ಕೇವಲ ಹೋರಾಟ ಮಾಡುವುದರಿಂದ ಕೆಲಸವು ಆಗುವುದಿಲ್ಲ. ಸಮಸ್ಯೆಯೂ ಬಗೆಹರಿಯುವುದಿಲ್ಲ. ಬೇಡಿಕೆ ಈಡೇರಿಸಿಕೊಳ್ಳಲು ಸಮಾಲೋಚನೆಯ ಅಗತ್ಯ ಇರುತ್ತದೆ. ತಾವು ಆ ನಿಟ್ಟಿನಲ್ಲಿ ಯತ್ನ ನಡೆಸಿದೆ. ಯಾವುದೇ ಕೆಲಸ ಮಾಡಲು ಬದ್ಧತೆ ಬೇಕಾಗಿರುತ್ತದೆ' ಎಂದು ಪ್ರತಿಪಾದಿಸಿದರು. ನೂತನ ರೈಲು ಸೇವೆ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು, ಬೀದರ್-ಹೈದರಾಬಾದ ಇಂಟರ್‌ಸಿಟಿ ರೈಲು ಹೈದರಾಬಾದ್‌ನಿಂದ ಈ ಮೊದಲುಇದ್ದ ನಾಂಪಲ್ಲಿ ಬದಲಿಗೆ ಸಿಕಂದರಾಬಾದ್‌ನಿಂದ ನಿರ್ಗಮಿಸುವಂತೆ ಬದಲಿಸಲಾಗಿದೆ. ಇದರಿಂದ ತೊಂದರೆಯಾಗಿದ್ದು, ಮೊದಲಿನಂತೆ ಉಳಿಸಬೇಕು ಎಂದು ಒತ್ತಾಯಿಸಿದರು.

`ಖರ್ಗೆ ಇಲ್ಲದಿದ್ದರೆ ಸಾಧ್ಯವಾಗುತ್ತಿರಲಿಲ್ಲ'”  ಬಹುತೇಕ ಶಾಸಕರು, ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೊಗಳಿಕೆಯ ಸುರಿಮಳೆಗೈದರು. `ಖರ್ಗೆ ಅವರಿಲ್ಲದಿದ್ದರೆ ಈ ಸೌಲಭ್ಯ ದಕ್ಕುವುದು ಅಸಾಧ್ಯವಾಗಿತ್ತು' ಎಂದು ಶ್ಲಾಘಿಸಿದ ಶಾಸಕರು, ಸಚಿವರ ಎದುರು ಹೊಸ ರೈಲು ಮಾರ್ಗಗಳ ಬೇಡಿಕೆಗಳನ್ನು ಇಟ್ಟರು. ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ ಅವರು, ನೂತನ ರೈಲು ಬೀದರ್‌ನಿಂದ ಸೋಮವಾರ ನಿರ್ಗಮಿಸಲಿದೆ. ಇದರ ಬದಲು ಭಾನುವಾರವೇ ನಿರ್ಗಮಿಸುವಂತೆ ಬದಲಾವಣೆ ತಂದರೆ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗುವವರಿಗೆ ಅನುಕೂಲ ಎಂದರು. ಉಸ್ತುವಾರಿ ಸಚಿವೆ ಉಮಾಶ್ರೀ, ಸಚಿವರಾದ ಖಮರುಲ್ ಇಸ್ಲಾಂ, ಡಾ. ಶರಣಪ್ರಕಾಶ್, ಬಾಬುರಾವ್ ಚಿಂಚನಸೂರ್, ಶಾಸಕರಾದ ಈಶ್ವರ ಖಂಡ್ರೆ, ರಾಜಶೇಖರ ಪಾಟೀಲ, ಪ್ರಭು ಚವ್ಹಾಣ, ಮಲ್ಲಿಕಾರ್ಜುನ ಖೂಬಾ, ಅಜಯ್ ಸಿಂಗ್, ಡಾ. ಎ.ಬಿ.ಮಾಲಕರೆಡ್ಡಿ ಅವರು ಮಾತನಾಡಿದರು.

ಮಾತಿನಲ್ಲೇ ಬೆನ್ನುತಟ್ಟಿದ ಗುರುಪಾದಪ್ಪ-ಧರ್ಮಸಿಂಗ್!
ಬೀದರ್
: ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ ಅವರು ಮತ್ತೆ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರಾ ಎಂಬ ವದಂತಿಗಳಿಗೆ ಇಂಬು ಕೊಡುವಂತೆ ಮಾತುಗಳು ಭಾನುವಾರ ನೂತನ ರೈಲು ಸೇವೆ ಉದ್ಘಾಟನೆ ಸಮಾರಂಭದಲ್ಲಿ ಕಂಡು ಬಂದವು.

ಗುರುಪಾದಪ್ಪ ಅವರನ್ನು ಬೀದರ್‌ನ ಶಹೆನ್‌ಶಾ ಎಂದು ಬಣ್ಣಿಸಿದ ಸಂಸದ ಧರ್ಮಸಿಂಗ್ ಅವರು, ಗುರುಪಾದಪ್ಪ ಸೇರಿ ಎಲ್ಲ ಶಾಸಕರ ನೆರವಿನ ಫಲವಾಗಿ ಈ ಸೇವೆ ದಕ್ಕುತ್ತಿದೆ ಎಂದರು.

`ಗುರುಪಾದಪ್ಪ ಅವರ ಸಹಕಾರ ಬೇಕು. ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷದ ರಹೀಂ ಖಾನ್ ಸೋತಿದ್ದಾರೆ. ಸೋಲು-ಗೆಲುವು ಇದ್ದದ್ದೆ. ಪರಸ್ಪರ ಕೈಹಿಡಿದು ಕೊಂಡು ಮುಂದೆ ಹೋಗಬೇಕು ಎಂದು ಅವರಿಗೆ ಹೇಳಿದ್ದೇನೆ' ಎಂದು ಹೇಳಿದರು.

ತಮ್ಮ ಭಾಷಣದಲ್ಲಿ ಗುರುಪಾದಪ್ಪ ಅವರು, ಧರ್ಮಸಿಂಗ್ ಅವರು ತುಂಬಾ ಒಳ್ಳೆಯವರಿದ್ದಾರೆ. ಅವರ ಶ್ರಮದ ಫಲವಾಗೇ ಈ ಸೌಲಭ್ಯ ಸಿಕ್ಕಿದೆ ಎಂದರು. `ನಾನು ಅವರಿಗೆ, ಅವರು ನನಗೆ ಹೊಗಳುತ್ತಿದ್ದೇವೆ ಎಂದು ಯಾರೂ ತಪ್ಪು ತಿಳಿಯಬಾರದು. ಯಾರು ಶತ್ರು ಅಲ್ಲ. ದೋಸ್ತಿ ಇದ್ದೇವೆ' ಎಂದರು.

ಒಳ್ಳೆ ಕೆಲಸ ಮಾಡಿದ್ದಾರೆ ಎಂದಾಗ ಹೊಗಳಬೇಕಾಗುತ್ತದೆ ಎಂದರು. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಗುರುಪಾದಪ್ಪ ಅವರು ಕಾಂಗ್ರೆಸ್ ಜೊತೆಗೆ ಗುರುತಿಸಿಕೊಳ್ಳಬಹುದಾ ಎಂಬ ಮಾತುಗಳಿಗೆ ಉತ್ತರ ಸಿಗಲಿಲ್ಲ. ಧರ್ಮಸಿಂಗ್, ಗುರುಪಾದಪ್ಪ ಇಬ್ಬರೂ ಹಾಸ್ಯದ ಮಾತುಗಳ ಮೂಲಕ ಈ ಶಂಕೆಯನ್ನು ಮರೆಸಿಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT