ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಚಕ ಪಂದ್ಯದಲ್ಲಿ ಭಾರತಕ್ಕೆ ನಿರಾಸೆ

ಕ್ರಿಕೆಟ್: `ಸ್ನೇಹ ಸಮರ'ದ ಮೊದಲ ಪಂದ್ಯದಲ್ಲಿ ಪಾಕ್ ಜಯಭೇರಿ
Last Updated 25 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ದೋನಿ ಪಡೆ ಗೆಲುವು ಸಾಧಿಸಲೆಂದು ಭಾರತದ ಕೋಟಿ ಕೋಟಿ ಕ್ರಿಕೆಟ್ ಪ್ರೇಮಿಗಳು ಹಾರೈಸಿದ್ದರು. ಆದರೆ, ಅವರ ಹಾರೈಕೆಗೆ ಫಲ ಸಿಗಲಿಲ್ಲ. 20ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಶೋಯಬ್ ಮಲಿಕ್ ಸಿಕ್ಸರ್ ಎತ್ತುವ ಮೂಲಕ ಭಾರತದ ಕ್ರಿಕೆಟ್ ಪ್ರಿಯರ ಕನಸನ್ನು ನುಚ್ಚು ನೂರು ಮಾಡಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಟ್ವೆಂಟಿ-20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ತಂಡ ಐದು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಐದು ವರ್ಷಗಳ ಬಳಿಕ ನಡೆದ ಭಾರತ ಹಾಗೂ ಪಾಕ್ ನಡುವಣ ಸರಣಿ ಸಾಕಷ್ಟು ಕುತೂಹಲ ಕೆರಳಿಸಿತ್ತು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಂಡ ಸೋಲಿನಿಂದ ಮುಖಭಂಗ ಅನುಭವಿಸಿದ್ದ ದೋನಿ ಪಡೆ ಚೇತರಿಸಿಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಭಾರತದ `ಅದೇ ರಾಗ ಅದೇ ಹಾಡು' ಮುಂದುವರಿಯಿತು.

ಟಾಸ್ ಗೆದ್ದ ಪಾಕ್ ತಂಡ, ಆತಿಥೇಯರಿಗೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿತು. ಉತ್ತಮ ಆರಂಭ ಪಡೆದರೂ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ಭಾರತ ವಿಫಲವಾಯಿತು. ನಿಗದಿತ 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ಕಳೆದುಕೊಂಡು 133 ರನ್ ಗಳಿಸಿತ್ತು. ಈ ಗುರಿಯನ್ನು ಮಹಮ್ಮದ್ ಹಫೀಜ್ ನೇತೃತ್ವದ ಪಾಕ್ ತಂಡ 19.4 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ದಾಟಿತು.

ಕೊನೆಯ ಓವರ್‌ನಲ್ಲಿ ಪಾಕ್ ಗೆಲುವಿಗೆ ಹತ್ತು ರನ್‌ಗಳ ಅಗತ್ಯವಿತ್ತು. ದೋನಿ ಧೈರ್ಯಮಾಡಿ ರವೀಂದ್ರ ಜಡೇಜಾ ಕೈಗೆ ಚೆಂಡು ನೀಡಿದರು. ಪಾಕ್ ಮೊದಲ ಮೂರು ಎಸೆತಗಳಲ್ಲಿ 4 ರನ್ ಕಲೆ ಹಾಕಿತು. ನಾಲ್ಕನೇ ಎಸೆತದಲ್ಲಿ `ಭಾರತದ ಅಳಿಯ' ಶೋಯಬ್ ಸಿಕ್ಸರ್ ಸಿಡಿಸುವ ಮೂಲಕ ಪಾಕಿಸ್ತಾನದ ಸಂಭ್ರಮಕ್ಕೆ ಕಾರಣರಾದರು. ಕ್ರೀಡಾಂಗಣದಲ್ಲಿದ್ದ ಸಾನಿಯಾ ಮಿರ್ಜಾ ಪತಿ ಬಾರಿಸಿದ ಸಿಕ್ಸರ್‌ಗೆ ತುಟಿಯಂಚಿನಲ್ಲಿಯೇ ನಗೆ ಅರಳಿಸಿದರು.

ಚಿನ್ನಸ್ವಾಮಿ ಅಂಗಣದಲ್ಲಿ ನಡೆದ ಈ ಚೊಚ್ಚಲ ಅಂತರರಾಷ್ಟ್ರೀಯ ಟ್ವೆಂಟಿ-20 ಪಂದ್ಯದಲ್ಲಿ ದೋನಿ ಪಡೆಯ ಗೆಲುವನ್ನು ಕಣ್ತುಂಬಿಕೊಳ್ಳಬೇಕು ಎನ್ನುವ ಕಾರಣದಿಂದ ಸಾಕಷ್ಟು ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಆಗಮಿಸಿದ್ದರು. ಆದರೆ. ಭಾರತದ ಕಳಪೆ ಬ್ಯಾಟಿಂಗ್ ಅಭಿಮಾನಿಗಳ ಮನಕ್ಕೆ ಬೇಸರ ಉಂಟು ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT