ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಲಿತಕಲಾ ವಿವಿ ಸ್ಥಾಪನೆಗೆ ಒತ್ತಾಯ

Last Updated 19 ಸೆಪ್ಟೆಂಬರ್ 2011, 8:10 IST
ಅಕ್ಷರ ಗಾತ್ರ

ಬಾದಾಮಿ: ಚಾಲುಕ್ಯರ ನಾಡಿನ ಪರಿಸರದಲ್ಲಿ ಪ್ರತ್ಯೇಕವಾಗಿ ಲಲಿತ ಕಲಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕು ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪುರ ಸರ್ಕಾರವನ್ನು ಆಗ್ರಹಿಸಿದರು.

ಇಲ್ಲಿಗೆ ಸಮೀಪದ ಬನಶಂಕರಿಯ ಹಂಪಿ ಕನ್ನಡ ವಿಶ್ವವಿದ್ಯಾಲಯದ ಶಿಲ್ಪ ಮತ್ತು ವರ್ಣ ಚಿತ್ರಕಲಾ ಕೇಂದ್ರದಲ್ಲಿ ರಾಷ್ಟ್ರೀಯ ಲಲಿತಕಲಾ ಪರಿಷತ್, ಕರ್ನಾಟಕ ಲಲಿತಕಲಾ ಅಕಾಡೆಮಿ ಹಾಗೂ ಹಂಪಿ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಜರುಗಿದ ಪ್ರಕೃತಿ ಚಿತ್ರಣ ಹಾಗೂ ಭಾವಚಿತ್ರ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ದೇಶಿ ಸಂಸ್ಕೃತಿ, ಕಲೆ, ಇತಿಹಾಸವನ್ನು ಪ್ರತಿಬಿಂಬಿಸುವ ಕೆಲಸ ಆಗಬೇಕಾಗಿದೆ. ಅದಕ್ಕೆ ಪೂರಕವಾಗಿ ಲಲಿತಕಲಾ ವಿಶ್ವವಿದ್ಯಾಲಯ ಸ್ಥಾಪಿಸಿದರೆ ಕಲಾ ಪರಂಪರೆಯ ಮೌಲ್ಯ ಹೆಚ್ಚಿಸಲು ಸಹಾಯಕವಾಗಲಿದೆ ಎಂದು ನುಡಿದರು.

ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಭಾರತೀಯ ಸಂಸ್ಕೃತಿಯು ಅತ್ಯಂತ ಶ್ರೀಮಂತ ಪರಂಪರೆಯನ್ನು ಹೊಂದಿದೆ. ದೇಶದ ಸಂಸ್ಕೃತಿಯನ್ನು ಜಾಗತಿಕವಾಗಿ ಪರಿಚಯಿಸುವುದು ಯುವ ಕಲಾವಿದರ ಮೇಲಿದೆ ಎಂದು ಹೇಳಿದರು.

ಡಾ. ಆನಂದ ಪೂಜಾರ, ಎಂ.ಐ. ಬಾರಾವಲಿ ಮಾತನಾಡಿದರು. ಶಿಲ್ಪ ಮತ್ತು ವರ್ಣ ಚಿತ್ರಕಲಾ ಮುಖ್ಯಸ್ಥ ಡಾ. ಎಸ್.ಸಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.  ರಾಜ್ಯದಲ್ಲಿ 100ಕ್ಕೂ ಹೆಚ್ಚು ಕಲಾ ಕಾಲೇಜುಗಳಿವೆ. ಚಿತ್ರಕಲೆ ಮತ್ತು ಶಿಲ್ಪಕಲೆಗಳಿಗೆ ಪ್ರತ್ಯೇಕ ವಿಶ್ವವಿದ್ಯಾಲಯ ಅಗತ್ಯವಿದೆ. ಇದರಿಂದ  ಕಲೆಯತ್ತ ಯುವ ಪೀಳಿಗೆಯನ್ನು ಆಕರ್ಷಿಸಲು ಸಹಾಯಕ. ಕಲಾಸಕ್ತರಿಗೆ ವೇದಿಕೆ ಕಲ್ಪಿಸಿ ಕೊಡುವ ಜೊತೆಗೆ ಜಾಗತಿಕ ಮಟ್ಟದಲ್ಲಿ ದೇಶದ ಕಲೆಯನ್ನು ಪ್ರಚುರಪಡಿಸಲು ನೆರವಾಗಲಿದೆ ಎಂದು ನುಡಿದರು.

ಕಲಾವಿದ ಯುಸೂಫ್ ಅಲಿ ಖಲಾಸಿ ಅಕ್ರಾಲಿಕ್ ವರ್ಣದಲ್ಲಿ ಪ್ರಕೃತಿ ಚಿತ್ರಣವನ್ನು ಹಾಗೂ ಬಸವರಾಜ ಕುರಿ ಭಾವಚಿತ್ರದ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು.

ರಾಷ್ಟ್ರೀಯ ಲಲಿತ ಕಲಾ ಪರಿಷತ್‌ನ ಅಧ್ಯಕ್ಷ ಟಿ.ಆರ್. ಮಲ್ಲಾಪುರ ಕಲಾ ಚಟುವಟಿಕೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಲಲಿತಕಲಾ ಅಕಾಡೆಮಿ ಸದಸ್ಯ ಶಂಕರ ಕುಂದಗೋಳ ಸ್ವಾಗತಿಸಿದರು. ಡಾ. ಎನ್.ಎಂ. ಅಂಗಡಿ ವಂದಿಸಿದರು.

ಬ್ಯಾಂಕ್ ಸುವರ್ಣ ಮಹೋತ್ಸವ ಇಂದು
ಮುದ್ದೇಬಿಹಾಳ: ತಾಲ್ಲೂಕಿನ ಜಮ್ಮಲದಿನ್ನಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸುವರ್ಣ ಮಹೋತ್ಸವ ಸಮಾರಂಭ ಇದೇ 19 ರಂದು ಬೆಳಿಗ್ಗೆ 11ಕ್ಕೆ ನಡೆಯಲಿದೆ.

ಸುವರ್ಣ ಮಹೋತ್ಸವದ ನಿಮಿತ್ತ ಸಂಘದ ನೂತನ ಕಟ್ಟಡದ ಉದ್ಘಾಟನೆ ಹಾಗೂ ಗ್ರಾಮದ ಅಗಸಿ ದ್ವಾರ ಕಟ್ಟಡದ ಶಂಕುಸ್ಥಾಪನೆ ನೆರವೇರುವುದು. 

ಗ್ರಾಮದ ಶ್ರೀದೇವಿ ದೇವಸ್ಥಾನದ ಆವರಣದಲ್ಲಿ ನಡೆಯಲಿರುವ ಸಮಾರಂಭವನ್ನು ಜಿಲ್ಲಾ ಬಿ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಉದ್ಘಾಟಿಸುವರು.

ಬ್ಯಾಂಕಿನ ಅಧ್ಯಕ್ಷ ಬಸವರಾಜ ಅಂಗಡಗೇರಿ ಅಧ್ಯಕ್ಷತೆ ವಹಿಸುವರು. ಸಾನ್ನಿಧ್ಯವನ್ನು ತಾಳಿಕೋಟಿಯ ಶ್ರೀ ಖಾಸ್ಗತೇಶ್ವರ ಸ್ವಾಮೀಜಿ ಹಾಗೂ ಕುಂಟೋಜಿಯ ಶ್ರೀ ಚನ್ನವೀರ ದೇವರು ವಹಿಸಲಿದ್ದಾರೆ.

ಅತಿಥಿಗಳಾಗಿ ಶಾಸಕ ಸಿ.ಎಸ್. ನಾಡಗೌಡ, ಬಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾದ ಮಹಾಂತಪ್ಪಗೌಡ ಪಾಟೀಲ, ಮುಧೋಳದ ತಹಸೀಲ್ದಾರ ಶಂಕರಗೌಡ ಸೋಮನಾಳ, ವಿಜಾಪೂರ ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕರಾದ ಎನ್.ಎಸ್.ಹಣಗಿ, ಎಚ್. ಶ್ರೀಶೈಲಪ್ಪ, ಪಿ.ಬಿ.ಕಾಳಗಿ, ಬಿ.ಬಿ. ತಳೇವಾಡ ಪಾಲ್ಗೊಳ್ಳುವರು.

ಕಾರ್ಯಕ್ರಮಕ್ಕೆ ಸಾರ್ವಜನಿಕರು ಆಗಮಿಸುವಂತೆ ಸಂಘದ ನಿರ್ದೇಶಕ ಮಂಡಳಿ ಸದಸ್ಯರಾದ ಬಿ.ಎಸ್.ಮೇಟಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT