ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧವಾ, ವೃದ್ಧಾಪ್ಯ ವೇತನ ಮಂಜೂರು ವಿಳಂಬ: ಚರ್ಚೆ

Last Updated 9 ಅಕ್ಟೋಬರ್ 2012, 8:45 IST
ಅಕ್ಷರ ಗಾತ್ರ

ಉಡುಪಿ: ಉಡುಪಿ ಉಷ್ಣ ವಿದ್ಯುತ್ ಸ್ಥಾವರ   (ಯುಪಿಸಿಎಲ್) ಆರಂಭವಾದ ನಂತರ ಅಸ್ತಮಾ ಮತ್ತಿತರ ಕಾಯಿಲೆಗಳಿಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು ರೋಗಿಗಳಿಗೆ ವೈದ್ಯಕೀಯ ನೆರವು ನೀಡುವಂತೆ ಯುಪಿಸಿಎಲ್‌ಗೆ ಸೂಚನೆ ನೀಡಿ, ಸ್ಥಳೀಯ ವಿದ್ಯಾವಂತ ಯುವಕರಿಗೆ ಉದ್ಯೋಗ ನೀಡುವಂತೆ ಕಂಪೆನಿಗೆ ತಾಕೀತು ಮಾಡಿ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಭಾಸ್ಕರ್ ಅವರು ಸೋಮವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಿದರು.

ಯುಪಿಸಿಎಲ್ ವಿದ್ಯುತ್ ಉತ್ಪಾದನೆ ಆರಂಭಿಸಿದ ನಂತರ ಜನರು ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬಡವರು ಚಿಕಿತ್ಸೆ ಪಡೆಯಲಾಗದಂತಹ ಸ್ಥಿತಿಯಲ್ಲಿದ್ದಾರೆ. ಕಂಪೆನಿಯೇ ಇವರಿಗೆ ಆರೋಗ್ಯ ಸೇವೆ ನೀಡಬೇಕು. ತಜ್ಞ ವೈದ್ಯರನ್ನು ಅವರು ನೇಮಕ ಮಾಡಬೇಕು ಎಂದರು.

ಸ್ಥಳೀಯ ವಿದ್ಯಾವಂತ ಯುವಕರಿಗೆ ಕಂಪೆನಿ ಕೆಲಸ ನೀಡುತ್ತಿಲ್ಲ. ಪರಿಣಾಮ ಸಾವಿರ, ಎರಡು ಸಾವಿರ ರೂಪಾಯಿಗೆ ಅವರು ಕೆಲಸ ಮಾಡುತ್ತಿದ್ದಾರೆ. ಯುಪಿಸಿಎಲ್ ಹೊರ ರಾಜ್ಯದವರಿಗೆ ಮಾತ್ರ ನೇಮಕ ಮಾಡಿಕೊಳ್ಳುತ್ತಿದೆ. ಈ ಬಗ್ಗೆ ನಿರ್ಣಯ ಮಾಡಿ ಕಳುಹಿಸಬೇಕು ಎಂದು ಅವರು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ದೇವದಾಸ್ ಹೆಬ್ಬಾರ್, ಈ ಬಗ್ಗೆ ನಿರ್ಣಯ ಮಾಡಲಾಗುತ್ತದೆ ಎಂದರು.

ವಿಧವಾ, ಅಂಗವಿಕಲರ, ವೃದ್ಧಾಪ್ಯ ವೇತನವನ್ನು ಸಮಯಕ್ಕೆ ಸರಿಯಾಗಿ ಮಂಜೂರು ಮಾಡುತ್ತಿಲ್ಲ. ಹಾರಾಡಿಯ ಕೂಸು ಪೂಜಾರ್ತಿ ಎಂಬುವರು ಅರ್ಜಿ ಸಲ್ಲಿಸಿ ಆರು ತಿಂಗಳು ಕಳೆದರೂ ಇನ್ನೂ ಮಂಜೂರಾಗಿಲ್ಲ ಎಂದು ಸದಸ್ಯ ಕೇಶವ ಕುಮಾರ್ ಪ್ರಶ್ನಿಸಿದರು. ಇದಕ್ಕೆ ಹಲವು ಸದಸ್ಯರು ದನಿಗೂಡಿಸಿದರು.

ಸಿಬ್ಬಂದಿ ರಜೆ ಇದ್ದ ಕಾರಣ ಮತ್ತು ಸಿಬ್ಬಂದಿ ಕೊರತೆಯಿಂದ ಸಮಸ್ಯೆ ಆಗಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದರು. ಬ್ರಹ್ಮಾವರ ವಿಶೇಷ ತಹಶೀಲ್ದಾರ್ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇದೆ. ಈ ಬಗ್ಗೆ ನಿರ್ಣಯ ಮಾಡಿ ಕಳುಹಿಸಿ ಎಂದು ಸದಸ್ಯೆ ವೆರೋನಿಕ ಕರ್ನೆಲಿಯೋ ಹೇಳಿದರು.

ತಾಲ್ಲೂಕು ಪಂಚಾಯಿತಿ ಸದಸ್ಯರಿಗೆ ಬೆಲೆಯಿಲ್ಲ: ಸರ್ಕಾರದ ಯಾವುದೇ ಕಾರ್ಯಕ್ರಮ ನಡೆದರೂ ತಾಲ್ಲೂಕು ಪಂಚಾಯಿತಿಯ ಸ್ಥಳೀಯ ಸದಸ್ಯರನ್ನು ಆಹ್ವಾನಿಸಬೇಕು. ಆದರೆ ಯಾವೊಂದು ಕಾರ್ಯಕ್ರಮಗಳಿಗೂ ಆಹ್ವಾನ ಸಿಗುತ್ತಿಲ್ಲ. ತಾಲ್ಲೂಕು ಪಂಚಾಯಿತಿ ಸದಸ್ಯರಿಗೆ ಗೌರವ ನೀಡುತ್ತಿಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಬ್ರಹ್ಮಾವರದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಸಹ ಸ್ಥಳೀಯ ತಾಲ್ಲೂಕು ಪಂಚಾಯಿತಿ ಸದಸ್ಯರಿಗೆ ಆಹ್ವಾನ ನೀಡಿಲ್ಲ ಎಂದು ಆರೋಪಿಸಿದರು. ಸರ್ಕಾರಿ ಕಾರ್ಯಕ್ರಮಗಳಿಗೆ ಆಹ್ವಾನ ನೀಡದಿದ್ದರೆ ಎಲ್ಲ ತಾಲ್ಲೂಕು ಪಂಚಾಯಿತಿ ಸದಸ್ಯರು ಒಂದಾಗಿ ಕಾರ್ಯಕ್ರಮ ಸ್ಥಳದಲ್ಲಿ ಧರಣಿ ನಡೆಸಬೇಕು ಎಂದು ಸದಸ್ಯರು ಹೇಳಿದರು. ಜನ ಸ್ಪಂದನಾ ಸಭೆಯೊಂದಕ್ಕೆ ತಮಗೂ ಆಹ್ವಾನ ನೀಡಿರಲಿಲ್ಲ ಎಂದು ಅಧ್ಯಕ್ಷರೇ ಅಸಹಾಯಕತೆ ವ್ಯಕ್ತಪಡಿಸಿದರು.

ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗೆ ದೂರು ನೀಡಲು ಒಮ್ಮತದಿಂದ ತೀರ್ಮಾನಿಸಲಾಯಿತು.

ಬಸವ ವಸತಿ ಯೋಜನೆ ಕೆಲ ಪ್ರದೇಶಗಳಲ್ಲಿ ಸರಿಯಾಗಿ ಜಾರಿಯಾಗುತ್ತಿಲ್ಲ. ತಾತ್ಕಾಲಿಕ ಹಕ್ಕು ಪತ್ರ ಇರುವವರಿಗೆ ಹಣ ಮಂಜೂರಾಗುತ್ತಿಲ್ಲ ಎಂಬ ದೂರು ಸಹ ಕೇಳಿಬಂತು. ಕಾರ್ಖಾನೆಗಳು ದೂರ ಇರುವ ಕಾರಣ ಕೆಲವರು ಗೇರು ಬೀಜವನ್ನು ಮನೆಯಲ್ಲಿಯೇ ಸುಲಿಯುವ ಕೆಲಸ ಮಾಡುತ್ತಿದ್ದಾರೆ. ಆದರೆ ಇದಕ್ಕೆ ಪರಿಸರ ನಿಯಂತ್ರಣ ಮಂಡಳಿ ಅನುಮತಿ ಬೇಕು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಿ ಎಂದು ಕೆಲವು ಸದಸ್ಯರು ಪ್ರಶ್ನಿಸಿದರು.

ಮನೆಯಲ್ಲಿ ಗೇರು ಬೀಜ ಸುಲಿಯಲು ಯಾವುದೇ ಅನುಮತಿ ಅಗತ್ಯ ಇಲ್ಲ. ಈ ಕ್ರಿಯೆಗೆ ವಿದ್ಯುತ್ ಸಂಪರ್ಕ ಪಡೆದರೆ ಮಾತ್ರ ಅನುಮತಿ ಅಗತ್ಯ ಎಂದು ಅಧಿಕಾರಿಗಳು ಮತ್ತು ಅಧ್ಯಕ್ಷರು ಸ್ಪಷ್ಟಪಡಿಸಿದರು.
ಆರ್‌ಟಿಸಿ ಪಡೆಯುವುದು ಸೇರಿದಂತೆ ಕಂದಾಯ ಇಲಾಖೆಯ ಕೆಲಸಗಳಲ್ಲಿ ಆಗುತ್ತಿರುವ ತೊಂದರೆ ಬಗ್ಗೆ ಸಭೆ ಕರೆದು ಚರ್ಚಿಸಲಾಗುತ್ತದೆ. ಅ17ರ ಒಳಗೆ ಸಭೆಯ ದಿನಾಂಕ ನಿಗದಿ ಮಾಡಲಾಗುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕಂದಾಯ ಕಾಯ್ದೆಯ 94ಸಿ ತಿದ್ದುಪಡಿ ಮಸೂದೆಯನ್ನು ಇನ್ನೊಮ್ಮೆ ಸದನದಲ್ಲಿ ಮಂಡಿಸಲು ಸಿದ್ಧತೆ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಗುರುತಿಸಿ ಅದನ್ನು ನಿವೇಶನವನ್ನಾಗಿ ಪರಿವರ್ತಿಸಿ ಬಡವರಿಗೆ ನೀಡಲು ಕ್ರಮ ಕೈಗೊಳ್ಳಿ ಎಂದು ಅವರು ಕಾರ್ಯ ನಿರ್ವಹಣಾ ಅಧಿಕಾರಿಗೆ ಮಂಜುನಾಥಯ್ಯ ಅವರಿಗೆ ಸೂಚಿಸಿದರು.

ಅ10ಕ್ಕೆ 20 ತಿಂಗಳ ಅಧಿಕಾರ ಅವಧಿ ಪೂರೈಸುತ್ತಿರುವ ಅಧ್ಯಕ್ಷ ದೇವದಾಸ್ ಹೆಬ್ಬಾರ್ ಅವರಿಗೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು. ರಾಜ್ಯ ಯುವ ವಿಜ್ಞಾನಿ ಪ್ರಶಸ್ತಿ ಪಡೆದ ಕಟಪಾಡಿಯ ಸಂದೀಪ್ ಕೊರಡ್ಕಲ್ ಅವರನ್ನು ಸನ್ಮಾನಿಸಲಾಯಿತು.

ಶಾಸಕರಾದ ಕೆ. ರಘುಪತಿ ಭಟ್, ಲಾಲಾಜಿ ಆರ್ ಮೆಂಡನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಬೇಬಿ ಎಸ್ ಪೂಜಾರ‌್ತಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಭರತ್‌ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಕಾವೇರಿ ಹೋರಾಟಕ್ಕೆ ಬೆಂಬಲ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ರಾಜ್ಯದಾದ್ಯಂತ ಹೋರಾಟ ನಡೆಯುತ್ತಿದೆ. ಇದಕ್ಕೆ ಬೆಂಬಲ ಸೂಚಿಸಬೇಕು ಎಂದು ಸದಸ್ಯ ಸತ್ಯಾನಂದ ನಾಯಕ್ ಸಭೆಯ ಗಮನ ಸೆಳೆದರು. ಈ ಬಗ್ಗೆ ನಿರ್ಣಯ ಕೈಗೊಂಡು ಕಳುಹಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT