ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃದ್ಧಾಪ್ಯ ವೇತನ ವಯೋಮಿತಿ 60ಕ್ಕೆ

Last Updated 9 ಜೂನ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಬಡತನ ರೇಖೆಗಿಂತ ಕೆಳಗಿನ ಸ್ತರದಲ್ಲಿ ಜೀವನ ನಡೆಸುತ್ತಿರುವ ವೃದ್ಧರಿಗೆ ನೀಡಲಾಗುತ್ತಿರುವ ಮಾಸಿಕ ವೃದ್ಧಾಪ್ಯ ವೇತನದ ವಯೋಮಿತಿಯನ್ನು 65ರಿಂದ 60 ವರ್ಷಕ್ಕೆ ಇಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಇದರಿಂದ ವೃದ್ಧಾಪ್ಯ ವೇತನ ಫಲಾನುಭವಿಗಳ ವಯಸ್ಸಿನ ಮಿತಿಯನ್ನು ಇಳಿಸಬೇಕೆಂಬ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.

ಅಂತೆಯೇ 80 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿರುವ 200 ರೂಪಾಯಿ ಮಾಸಿಕ ವೃದ್ಧಾಪ್ಯ ವೇತನವನ್ನು ಇನ್ನು ಮುಂದೆ 500 ರೂಪಾಯಿಗೆ ಏರಿಸಲು ಸಹ ಸರ್ಕಾರ ಮುಂದಾಗಿದೆ.
ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆ ಗುರುವಾರ ಈ ಮಹತ್ವದ ತೀರ್ಮಾನ ಕೈಗೊಂಡಿತು.

ಸರ್ಕಾರದ ಈ ನಿರ್ಧಾರವನ್ನು ಪ್ರಸಕ್ತ ವರ್ಷದ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಜಾರಿ ಮಾಡಲಾಗಿದೆ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆಯ ಭಾಗವಾಗಿರುವ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆಯಡಿ ವೃದ್ಧಾಪ್ಯ ವೇತನದ ನೆರವನ್ನು ನೀಡಲಾಗುತ್ತಿದೆ. ಸರ್ಕಾರದ ನೂತನ ನಿರ್ಧಾರದಿಂದ, ದೇಶದಲ್ಲಿ ಬಡತನ ರೇಖೆಗಿಂತಲೂ ಕೆಳಗೆ ವಾಸಿಸುತ್ತಿರುವ 72.32 ಲಕ್ಷ ಜನರು ಹೆಚ್ಚುವರಿಯಾಗಿ ಇದರ ಸದುಪಯೋಗ ಪಡೆದುಕೊಳ್ಳಲಿದ್ದಾರೆ.
 
ಅಂತೆಯೇ ಬಡತನ ರೇಖೆಗಿಂತಲೂ ಕೆಳಗಿರುವ 26.49 ಲಕ್ಷ ಜನರು 80 ವರ್ಷ ಮೇಲ್ಪಟ್ಟವರ ಸಾಲಿನಲ್ಲಿ ಪ್ರಯೋಜನ ಹೊಂದಲಿದ್ದಾರೆ. ಇದರಿಂದಾಗಿ ಕೇಂದ್ರದ ಬೊಕ್ಕಸಕ್ಕೆ ಈ ವರ್ಷ 2,770 ಕೋಟಿ ರೂಪಾಯಿಗಳ ಹೊರೆ ಬೀಳಲಿದೆ.

ವೃದ್ಧಾಪ್ಯ ವೇತನದ ವಯೋಮಿತಿ ಬದಲಾಗಿರುವ ಹಿನ್ನೆಲೆಯಲ್ಲಿ, ವಿಧವಾ ವೇತನದ ವಯೋಮಿತಿ 40- 64 ವರ್ಷ ಇದ್ದುದನ್ನು ಇನ್ನು ಮುಂದೆ 40- 59ಕ್ಕೆ ಇಳಿಸಲಾಗುವುದು. ಅಂಗವಿಕಲರ ಪಿಂಚಣಿಗೆ ಅರ್ಹರಾದವರ ವಯೋಮಿತಿಯು 18- 64 ವರ್ಷದಿಂದ 18- 59 ವರ್ಷಕ್ಕೆ ಇಳಿಯಲಿದೆ ಎಂದು ಹೇಳಿಕೆ ವಿವರಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT