ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರು ಕರ್ತವ್ಯಕ್ಕೆ ಹಾಜರು

Last Updated 12 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು:   ಐದು ದಿನಗಳಿಂದ ಸರ್ಕಾರಿ ವೈದ್ಯರು ನಡೆಸುತ್ತಿದ್ದ ಮುಷ್ಕರವನ್ನು ಮಾನವೀಯತೆಯ ದೃಷ್ಟಿಯಿಂದ ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದ್ದು, ವೃತ್ತಿಧರ್ಮದ ಒತ್ತಡಕ್ಕೆ ಮಣಿದು ಎಂದಿನಂತೆ ಮಂಗಳವಾರ ಕರ್ತವ್ಯಕ್ಕೆ ಹಾಜರಾದರು.

ಜಿಲ್ಲಾ ಆಸ್ಪತ್ರೆಗಳನ್ನು ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಆರೋಗ್ಯ ಇಲಾಖೆಗೆ ಮರಳಿ ನೀಡುವಂತೆ ಒತ್ತಾಯಿಸಿ ಕೆಲವು ದಿನಗಳಿಂದ ನಡೆದ ಮುಷ್ಕರ ಇನ್ನೇನೂ ಗಂಭೀರ ಸ್ವರೂಪ ಪಡೆಯುತ್ತದೆ ಎನ್ನುವಷ್ಟರಲ್ಲಿ ವೈದ್ಯರು ಮುಷ್ಕರವನ್ನು ಕೈಬಿಟ್ಟರು. ಇದರಿಂದ ಚಿಕಿತ್ಸೆಗಾಗಿ ಪರದಾಡುತ್ತಿದ್ದ ರೋಗಿಗಳು ತುಸು ನಿರಾಳವಾದರು.

ದೂರವಾದ ರೋಗಿಗಳ ಆತಂಕ: ಸರ್ಕಾರ ಮತ್ತು ವೈದ್ಯಾಧಿಕಾರಿಗಳ ಸಂಘದ ನಡುವಿನ ಸಂಧಾನ ಸೋಮವಾರ ವಿಫಲವಾಗಿದ್ದರಿಂದ ಮುಷ್ಕರ ಮುಂದುವರೆಯುವ ಬಗ್ಗೆ ಸಂಘವು ಸೂಚನೆ ನೀಡಿತ್ತು. ಇದರಿಂದ ಮುಷ್ಕರ ಮುಂದುವರೆಯುವ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲವಿತ್ತು. ಆದರೆ, ವೈದ್ಯಾಧಿಕಾರಿಗಳು ಸೇವೆಗೆ ಹಾಜರಾಗುತ್ತಿದ್ದಂತೆ ರೋಗಿಗಳ ಆತಂಕ ಕರಗಿತು.

ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಡಾ.ಎಚ್. ಎನ್.ರವೀಂದ್ರ, `ರೋಗಿಗಳ ಪರದಾಟ ನೋಡಲಾಗದೇ, ಮಾನವೀಯತೆಯ ದೃಷ್ಟಿಯಿಂದ ಈ ಮುಷ್ಕರವನ್ನು ತಾತ್ಕಾಲಿಕವಾಗಿ ಕೈಬಿಡುತ್ತಿದ್ದೇವೆ. ಹಾಗೆಂದು ಇದು ನಮಗೆ ಸೋಲೆಂದು ಸರ್ಕಾರ ಭಾವಿಸಬಾರದು' ಎಂದು ಹೇಳಿದರು.

ಸರ್ಕಾರದಲ್ಲಿರುವ ಮೂರ್ಖರು:`ಆರೋಗ್ಯ ಸಚಿವ ಅರವಿಂದ ಲಿಂಬಾವಳಿ ಅವರು ವೈದ್ಯರಿಗೆ ಮಾನವೀಯತೆ ಮತ್ತು ವೃತ್ತಿಧರ್ಮದ ಬಗ್ಗೆ ಪಾಠ ಮಾಡುವ ಅಗತ್ಯವಿಲ್ಲ. ಮಾನವೀಯತೆ ಇರುವ ಕಾರಣಕ್ಕಾಗಿ ಸೇವೆಗೆ ಹಾಜರಾಗುತ್ತಿದ್ದೇವೆ. ವೈದ್ಯರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಆಗದೇ ಇರುವ ಮೂರ್ಖರು ಸರ್ಕಾರದಲ್ಲಿದ್ದಾರೆ ಎಂದು ತಿಳಿದುಕೊಂಡಿರಲಿಲ್ಲ. ಈಗ ಸಾರ್ವಜನಿಕರಿಗೂ ಈ ಮೂರ್ಖರ ಬಗ್ಗೆ ಅರ್ಥವಾಗಿದೆ' ಎಂದು ಕಿಡಿಕಾರಿದರು.

`ವೈದ್ಯರ ಬೇಡಿಕೆಗಳಿಗಿಂತ ರೋಗಿಗಳ ಪರದಾಟ ನೋಡಲಾಗದೇ ಸಂಘದ ಸಭೆಯಲ್ಲಿ ಮುಷ್ಕರ ಕೈಬಿಡುವ ನಿರ್ಧಾರ ಕೈಗೊಳ್ಳಲಾಗಿದೆ. ಸಾಮಾನ್ಯ ಜನರು ಮತ್ತು ನೌಕರರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಮುಷ್ಕರ, ಪ್ರತಿಭಟನೆಯಿಂದ ರೋಗಿಗಳು ಮತ್ತು ವೈದ್ಯರ ಆರೋಗ್ಯ ಹದಗೆಡುತ್ತದೆ ವಿನಾ ಸರ್ಕಾರಕ್ಕೆ ಬುದ್ಧಿ ಬರುವುದಿಲ್ಲ. ಇಷ್ಟಾದರೂ ಬೇಡಿಕೆ ಈಡೇರಲಿಲ್ಲವೆಂಬ ಕೊರಗು ಕಾಡುತ್ತಿದೆ' ಎಂದು ಅಳಲು ತೋಡಿಕೊಂಡರು.

ಬೂದಿ ಮುಚ್ಚಿದ ಕೆಂಡ: `ಜಿಲ್ಲಾ ಆಸ್ಪತ್ರೆಗಳಿಗೆ ಬಡ್ತಿ ಪಡೆಯುವ ಅವಕಾಶವೇ ಇಲ್ಲದಂತೆ ವೈದ್ಯರನ್ನು ನೋವಿನ ಕೂಪಕ್ಕೆ ತಳ್ಳಲಾಗಿದೆ. ಈಗ ಮುಷ್ಕರ ಕೈಬಿಟ್ಟಿರಬಹುದು.

ಆದರೆ ಇದು ಎಂದಿಗೂ ಬೂದಿ ಮುಚ್ಚಿದ ಕೆಂಡ. ಸಂಪುಟದ ಉಪಸಮಿತಿ ಸಭೆಯಲ್ಲಿ ಜಿಲ್ಲಾಸ್ಪತ್ರೆಗಳನ್ನು ಹಿಂಪಡೆಯುವ ಬಗ್ಗೆ ಸರ್ಕಾರ ತಳೆಯುವ ಧೋರಣೆ ಕಂಡುಕೊಂಡು ಮುಂದಿನ ಹೋರಾಟದ ರೂಪುರೇಷೆಯನ್ನು ರಚಿಸಲಾಗುವುದು' ಎಂದು ಹೇಳಿದರು.

ಇಂದು ಸಭೆ:  ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕ ಡಾ.ಧನ್ಯಕುಮಾರ್, `ಜಿಲ್ಲಾಸ್ಪತ್ರೆಗಳನ್ನು ಹಿಂದೆ ಪಡೆಯುವ ವಿಚಾರದ ಕುರಿತು ಸಂಪುಟದ ಉಪಸಮಿತಿಯ ಸಭೆ ಬುಧವಾರ ನಡೆಯಲಿದ್ದು, ಶೀಘ್ರವೇ ಸಮಸ್ಯೆ ಬಗೆಹರಿಯಲಿದೆ' ಎಂದು ತಿಳಿಸಿದರು.

ಚಿಕಿತ್ಸೆಯಿಲ್ಲದೆ ಸಾವು: ಈ ನಡುವೆ ರಕ್ತದೊತ್ತಡ ಏರುಪೇರಾದ ತಿ.ನರಸೀಪುರ ತಾಲ್ಲೂಕು ಬಿ.ಸೀಹಳ್ಳಿ ಗ್ರಾಮದ ಮಲ್ಲೇಗೌಡ ಅಲಿಯಾಸ್ ಮಲ್ಲೇಶ್ (42) ಸೂಕ್ತ ಚಿಕಿತ್ಸೆ ದೊರಕದೆ ಮೃತರಾದ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ. ಪತ್ನಿಯ ತವರು ಕೆ.ಶೆಟ್ಟಹಳ್ಳಿಗೆ ಬಂದಿದ್ದ ಮಲ್ಲೇಗೌಡ ಅವರು ರಕ್ತದ ಒತ್ತಡದಲ್ಲಿ ಏರುಪೇರಾಗಿ ಕುಸಿದು ಬಿದ್ದರು.

ತಕ್ಷಣ ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯಕೀಯ ಸಿಬ್ಬಂದಿಯ ಮುಷ್ಕರದಿಂದ ಅಲ್ಲಿ ಚಿಕಿತ್ಸೆ ಸಿಗಲಿಲ್ಲ. ಮತ್ತೆ ಕೆ.ಶೆಟ್ಟಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಾಗ ಚಿಕಿತ್ಸೆ ದೊರಕಲಿಲ್ಲ. ಬಾಬುರಾಯನಕೊಪ್ಪಲಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅವರು  ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT