ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಯಾಮಕ್ಕೆ ವೀಡಿಯೊ ಪಾಠ

Last Updated 14 ಜುಲೈ 2013, 19:59 IST
ಅಕ್ಷರ ಗಾತ್ರ

ಹವಾ ನಿಯಂತ್ರಣ ವ್ಯವಸ್ಥೆಯಿಂದ ತಂಪಾಗಿದ್ದ ಪ್ರಾಂಗಣ, ದಾರಿಯ ಆಜುಬಾಜಿನಲ್ಲಿ ಸಾಲಾಗಿ ಇರಿಸಲಾಗಿದ್ದ ಉಪಕರಣಗಳನ್ನು ಬಳಸಿಕೊಂಡು ವ್ಯಾಯಾಮ ಮಾಡುತ್ತಿದ್ದ ಮಂದಿ, ತುಸು ಒಳ ನಡೆದರೆ ಜೋಡಿಸಿಟ್ಟ ಆಸನಗಳು, ಮನಬಂದಂತೆ ತೇಲುತ್ತಾ ಸಾಗುತ್ತಿದ್ದ ಕೆಂಪು-ಬಿಳಿ ಬಲೂನ್‌ಗಳು, ಆಧುನಿಕ ಶೈಲಿಯಲ್ಲಿ ಉಡುಗೆ ತೊಟ್ಟು ಮಾರೆತ್ತರದ ಚಪ್ಪಲಿಯಲ್ಲಿ ತೂಗುಯ್ಯಾಲೆಯಾಡುತ್ತಿದ್ದ ಮಾನಿನಿಯರು, ಗೋಡೆಯ ಮೇಲೆ ದೊಡ್ಡದಾಗಿ ಬಿತ್ತರಗೊಳ್ಳುತ್ತಿದ್ದ ವ್ಯಾಯಾಮ ಪಾಠ, ಅದನ್ನೇ ಅನುಸರಿಸುತ್ತಿದ್ದ ಅಭ್ಯಾಸಿಗಳು.

ಎಚ್.ಎಸ್.ಆರ್. ಲೇಔಟ್‌ನ ಸ್ನ್ಯಾಪ್ ಫಿಟ್‌ನೆಸ್ ಕೇಂದ್ರದಲ್ಲಿ ನೂತನವಾಗಿ ನಿರ್ಮಾಣವಾಗಿರುವ `ಫಿಟ್‌ನೆಸ್ ಆನ್ ಡಿಮಾಂಡ್' ಕಾರ್ಯಕ್ರಮ ಮೊದಲ ನೋಟಕ್ಕೆ ದಕ್ಕುವುದು ಹೀಗೆ. ಈ ಶಾಖೆಯನ್ನು ಔಪಚಾರಿಕವಾಗಿ ಬುಧವಾರ ಅನಾವರಣ ಗೊಳಿಸಲಾಗಿದ್ದು, ಸ್ನ್ಯಾಪ್ ಫಿಟ್‌ನೆಸ್‌ನ ಸಂಸ್ಥಾಪಕ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ವಿಕ್ರಂ ಹಾಗೂ ಮಾರುಕಟ್ಟೆ ಮುಖ್ಯಸ್ಥೆ ಶ್ರೀಲೇಖಾ ರೆಡ್ಡಿ ಉದ್ಘಾಟಿಸಿದರು.

ಗೋಡೆಯಗಲದ ಹೈಡೆಫಿನಿಶನ್ ಪ್ರೊಜೆಕ್ಟರ್ ಅಳವಡಿಸಲಾಗಿದೆ. ಫಿಟ್‌ನೆಸ್ ಆನ್ ಡಿಮಾಂಡ್‌ನ ಮೂಲ ಶಾಖೆ ಅಮೆರಿಕದಲ್ಲಿದ್ದು, ಅಲ್ಲಿಯ ವಿವಿಧ ತರಬೇತುದಾರರು ಹೇಳಿಕೊಡುವ ಯೋಗ, ಲ್ಯಾಟಿನ್ ಡಾನ್ಸ್, ಕಿಕ್‌ಬಾಕ್ಸಿಂಗ್, ಪೈಲೇಟ್ಸ್, ಸೈಕ್ಲಿಂಗ್ ಮುಂತಾದ ಕಲೆಯನ್ನು ವೀಡಿಯೊ ಮಾಡಿ ಅವುಗಳನ್ನು ಅಂತರ್ಜಾಲದ ಮೂಲಕ ಬಿತ್ತರಿಸಲಾಗುತ್ತದೆ. ಅವುಗಳನ್ನು ಪ್ರೊಜೆಕ್ಟರ್ ಮೇಲೆ ಪ್ಲೇ ಮಾಡಲಾಗುತ್ತದೆ.

ಯಾರಿಗೆ ಯಾವ ವಿಧಾನ ಬೇಕೋ ಆ ವಿಧಾನದ ವೀಡಿಯೊ ಪ್ಲೇ ಮಾಡಿಕೊಂಡು ಕಸರತ್ತನ್ನು ಮುಂದುವರಿಸಬಹುದು. ಈ ವ್ಯಾಯಾಮಗಳನ್ನು ಮಾಡಿ ತೋರಿಸುತ್ತಿದ್ದ ನಾಲ್ಕಾರು ಜನರ ತಂಡ ಕೊನೆಯಲ್ಲಿ ಕುಳಿತು ನಿಂತು ಮಾಡುವ ವ್ಯಾಯಾಮ ಮಾಡುವ ಹೊತ್ತಿಗೆ ಸುಸ್ತು ಹೊಡೆದರು.

ವ್ಯಾಯಾಮ ಪ್ರೊಜೆಕ್ಟರ್‌ನಲ್ಲಿ ಬಿತ್ತರವಾಗುವಾಗ ಆಂಗಿಕ ಚಲನೆಗಳು ಸರಿಯಾಗಿವೆಯೋ ಇಲ್ಲವೋ ಎಂಬುದು ಹೇಗೆ ತಿಳಿಯುತ್ತದೆ ಎಂದು ಕೇಳಿದರೆ, `ಅಲ್ಲೊಬ್ಬ ಮೇಲ್ವಿಚಾರಕರೂ ಇರುತ್ತಾರೆ' ಎಂಬ ಉತ್ತರ. ಆಂಗಿಕ ಚಲನೆಗಳು ಸರಿಯಾಗಿವೆಯೋ ಇಲ್ಲವೋ ಎಂಬ ಪ್ರತಿ ಕ್ಷಣದ ಚಲನೆಗಳನ್ನು ವೀಕ್ಷಿಸಿ ಸರಿಮಾಡುವುದು ಅವರ ಜವಾಬ್ದಾರಿ.
ಈ ವೀಡಿಯೊ ಪಾಠದಿಂದ ದೇಹದ ಎಲ್ಲಾ ಭಾಗಗಳಿಗೆ ವ್ಯಾಯಾಮ ದೊರೆಯುತ್ತದೆ. ನೃತ್ಯದ ಮೋಜೂ ಮನಸ್ಸನ್ನು ಹಿಗ್ಗಿಸುತ್ತದೆ ಎನ್ನುವುದು ಅಭ್ಯಾಸ ನಿರತರ ಅಭಿಪ್ರಾಯ.

ಅಮೆರಿಕದಲ್ಲಿ ಪ್ರಾರಂಭವಾದ `ಫಿಟ್‌ನೆಸ್ ಆನ್ ಡಿಮಾಂಡ್' ಪ್ರಪಂಚದಾದ್ಯಂತ ಹರಡಿದ್ದು, 150 ಶಾಖೆಗಳನ್ನು ಹೊಂದಿದೆ. ಬೆಂಗಳೂರಿನಲ್ಲಿ 27 ಪ್ರದೇಶಗಳಲ್ಲಿರುವ ಇದು ಆಯಾಯಾ ಪ್ರದೇಶದಲ್ಲಿ ವಾಸಿಸುವವರಿಗೆ ಬಳಕೆಗೆ ಸುಲಭವಾಗಿ ದೊರೆಯುವಂತೆ ಮಾಡುವ ಉದ್ದೇಶ ಹೊಂದಿದೆ.

ಈ ಜಿಮ್‌ನಿಂದ ಅನೇಕ ಸೆಲೆಬ್ರಿಟಿಗಳು ಪ್ರಯೋಜನ ಪಡೆದುಕೊಂಡಿದ್ದಾರಂತೆ. ಫಿಟ್‌ನೆಸ್‌ಗೆ ಸಂಬಂಧಿಸಿದಂತೆ ಅನೇಕ ಮಾಹಿತಿಗಳ ಸಂಗ್ರಹವೂ ಇಲ್ಲಿದ್ದು, ಆರೋಗ್ಯ ವೃದ್ಧಿಗೆ ಬೇಕಾದ ವಿನೂತನ ಮಾದರಿಗಳು ಜನಸಾಮಾನ್ಯರಿಗೆ ಲಭ್ಯವಾಗುತ್ತಿರುವುದು ಖುಷಿಯ ಸಂಗತಿ.

`ಇಲ್ಲಿನ ಸೌಲಭ್ಯಗಳು ಮನಸ್ಸಿಗೆ ತುಂಬಾ ಹಿಡಿಸಿದವು. ವಿವಿಧ ಬಗೆಯಲ್ಲಿ ಫಿಟ್‌ನೆಸ್ ತರಬೇತಿ ನಡೆಯುತ್ತದೆ. ನನಗೆ ಬೇಕಾದ ವ್ಯಾಯಾಮ ವಿಧಾನ ಆಯ್ಕೆ ಮಾಡಿಕೊಳ್ಳುವ ಅವಕಾಶವೂ ಇಲ್ಲಿದೆ. ಮೂರ್ನಾಲ್ಕು ವರ್ಷಗಳ ಹಿಂದೆ ನಾನು 90 ಕೆ.ಜಿ. ಇದ್ದೆ. ಬೇರೆಡೆ ಜಿಮ್‌ಗೆ ತೆರಳುತ್ತಿದ್ದೆ. ತೂಕ ಇಳಿಯಿತು. ವಿದೇಶದಲ್ಲಿದ್ದು ವಾಪಸ್ ಬರುವ ವೇಳೆ ಇಲ್ಲೊಂದು ನೂತನ ಫಿಟ್‌ನೆಸ್ ಜಿಮ್ ಇದೆ ಎಂಬುದು ಗೊತ್ತಾಗಿ ಬಂದೆ. ತುಂಬಾ ಖುಷಿಯಾಗಿದ್ದೇನೆ. ಎರಡು ತಿಂಗಳಲ್ಲಿ ನಾಲ್ಕೈದು ಕೆ.ಜಿ ತೂಕ ಇಳಿಸಿಕೊಂಡಿದ್ದೇನೆ. ಇಲ್ಲಿಯ ತಂಪು ವಾತಾವರಣ ವ್ಯಾಯಾಮ ಮಾಡಿದಾಗ ಬೆವರಿ ದುರ್ವಾಸನೆ ಬರುತ್ತದೆ ಎಂಬ ಚಿಂತೆಯನ್ನು ಇಲ್ಲವಾಗಿಸಿದೆ. ನಾಲ್ಕು ತಿಂಗಳಿಗೆ ನಾನು 6000 ರೂ. ಶುಲ್ಕ ನೀಡಿದ್ದೇನೆ' ಎಂದು ಅನುಭವ ಹಂಚಿಕೊಂಡರು ಅರುಣ್.

`ನಗರದಲ್ಲಿ ಆರೋಗ್ಯ ಸ್ವಾಸ್ಥ್ಯದ ಬಗ್ಗೆ ಇನ್ನಷ್ಟು ಕಾಳಜಿ ಮೂಡಿಸಲು ಇಂಥ ಜಿಮ್‌ಗಳನ್ನು ರೂಪಿಸಿದ್ದೇವೆ. ಫಿಟ್‌ನೆಸ್ ಆನ್ ಡಿಮಾಂಡ್‌ನಲ್ಲಿ ಅಂತರರಾಷ್ಟ್ರೀಯ ವ್ಯಾಯಾಮ ತಜ್ಞರು ತರಬೇತಿ ನೀಡುವುದರ ಜೊತೆಗೆ ವಾರಕ್ಕೊಮ್ಮೆ ತರಗತಿಗಳ ರೂಪರೇಷೆ ಬದಲಾಗುವುದು ವಿಶೇಷತೆ. ಇಲ್ಲಿ ಅನೇಕ ಜಿಮ್ ಕೇಂದ್ರಗಳಿದ್ದರೂ ನಿರ್ದಿಷ್ಟ ಸಮಯಕ್ಕೆ ಅಂಟಿಕೊಂಡಿರುತ್ತವೆ. ಇದರಿಂದ ಅನೇಕರಿಗೆ ಪ್ರಯೋಜನ ಪಡೆಯುವುದು ಅಸಾಧ್ಯವಾಗಬಹುದು. ಹೀಗಾಗಿ ನಾವು ದಿನದ 24 ಗಂಟೆಯೂ ಶಾಖೆಯನ್ನು ತೆರೆದಿರುತ್ತೇವೆ. ಇಲ್ಲಿ ಒಮ್ಮೆ ಸದಸ್ಯತ್ವ ಪಡೆದರೆ ವಿಶ್ವದ ಯಾವುದೇ ಮೂಲೆಯಲ್ಲಿರುವ ಸ್ನ್ಯಾಪ್ ಫಿಟ್‌ನೆಸ್ ಕೇಂದ್ರಕ್ಕೆ ತೆರಳಿ ವ್ಯಾಯಾಮ ಮಾಡಿ ಬರಬಹುದು. ಹಾಗೂ ಕಡಿಮೆ ಬೆಲೆಯಲ್ಲಿ ಈ ಸೌಲಭ್ಯಗಳನ್ನು ಕಲ್ಪಿಸುತ್ತಿರುವುದು ನಮ್ಮ ಹೆಗ್ಗಳಿಕೆ' ಎನ್ನುತ್ತಾರೆ ಶ್ರೀಲೇಖಾ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT