ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಕೊಠಡಿ ನಿರ್ಮಾಣ ಕಾಮಗಾರಿ ಕಳಪೆ: ಆರೋಪ: ಮೊಕದ್ದಮೆ ದಾಖಲಿಗೆ ಆಗ್ರಹ

Last Updated 5 ಜುಲೈ 2012, 7:10 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರು ತಾಲ್ಲೂಕಿನ ಯಕ್ಲಾಸಪುರ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದ್ದು, ಇದಕ್ಕೆ ಕಾರಣರಾದ ನಿರ್ಮಿತಿ ಕೇಂದ್ರದ ಕಿರಿಯ ಎಂಜಿನಿಯರ್ ಸುರೇಶರೆಡ್ಡಿ  ಅವರ ವಿರುದ್ಧ ಮೊಕದ್ದಮೆ ದಾಖಲಿಸಿ ಶಾಲಾ ಕೊಠಡಿಯನ್ನು ಪುನರ್ ಪರಿಶೀಲನೆ ನಡೆಸಿ ಮಕ್ಕಳ ವ್ಯಾಸಂಗಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು ಎಂದು ಹೈದರಾಬಾದ್ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಯಚೂರು ನಗರ ಘಟಕದ ಮುಖಂಡ ಆಂಜನೇಯ ಯಕ್ಲಾಸಪುರ ಒತ್ತಾಯಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  2009-10ರಲ್ಲಿ ನೆರೆ ಹಾವಳಿ ಸಂದರ್ಭದಲ್ಲಿ ಯಕ್ಲಾಸಪುರ ಗ್ರಾಮವೂ ಹಾನಿಗೊಳಗಾದ ಗ್ರಾಮಗಳ ಪಟ್ಟಿಗೆ ಸೇರಿತ್ತು. ಗ್ರಾಮದ ಶಾಲೆಯೂ ಹಾಳಾಗಿತ್ತು. ಹೀಗಾಗಿ ಪ್ರಾಥಮಿಕ ಶಾಲೆಯಲ್ಲಿ 2 ಕೊಠಡಿ ನಿರ್ಮಾಣಕ್ಕೆ 8 ಲಕ್ಷ ಮಂಜೂರಾತಿ ದೊರಕಿತ್ತು. ರಾಯಚೂರಿನ ನಿರ್ಮಿತಿ ಕೇಂದ್ರಕ್ಕೆ ವಹಿಸಿಕೊಡಲಾಗಿತ್ತು. ಶಾಲಾ ಕೊಠಡಿ ನಿರ್ಮಾಣ ಕಾಮಗಾರಿ ಕೈಗೊಂಡ ನಿರ್ಮಿತಿ ಕೇಂದ್ರದ ಕಿರಿಯ ಎಂಜಿನಿಯರ್ ಸುರೇಶರೆಡ್ಡಿ ಅವರು ಸಮರ್ಪಕ ರೀತಿ ಕಾಮಗಾರಿ ಮಾಡದೇ ಕಳಪೆ ಕಾಮಗಾರಿ ಮಾಡಿದ್ದಾರೆ ಎಂದು ಆರೋಪಿಸಿದರು.

ಈ ಬಗ್ಗೆ ಪರಿಶೀಲನೆ, ತನಿಖೆಗೆ ಅನೇಕ ಬಾರಿ   ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಪಂ ಸಿಇಒ ಅವರು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ತನಿಖಾಧಿಕಾರಿಗಳಾಗಿ ನಿಯೋಜಿತಗೊಂಡು 5-6 ನೂನ್ಯತೆಗಳ ಬಗ್ಗೆ ವರದಿ ಕೊಟ್ಟಿದ್ದರು.10 ದಿನದಲ್ಲಿಯೇ ಆಕ್ಷೇಪಣೆಗೆ ಉತ್ತರಿಸಬೇಕು. ಸರಿಪಡಿಸಬೇಕು ಎಂದು ಆದೇಶಿಸಿದ್ದರು. ಆದರೆ ಒಂದು ವರ್ಷ ಕಳೆದರೂ ಉತ್ತರಿಸಿಲ್ಲ ಎಂದು ಹೇಳಿದರು.

3ನೇ ತನಿಖಾ ತಂಡವನ್ನು ಎಸ್.ಎಲ್.ಎನ್ ಎಂಜಿನಿಯರಿಂಗ್ ಕಾಲೇಜಿನ ತಜ್ಞರ ತಂಡದ ಮೂಲಕ ಪರಿಶೀಲನೆಗೆ ಜಿಪಂ ಸಿಇಓ ಆದೇಶಿಸಿದ್ದರು. ಕಿರಿಯ ಎಂಜಿನಿಯರ್ ಸುರೇಶರೆಡ್ಡಿ ಕಳಪೆ ಕಾಮಗಾರಿ ಮಾಡಿದ್ದಾರೆ ಎಂದು 1 ಮತ್ತು 3ನೇ ತನಿಖಾ ತಂಡವು ವರದಿಯಲ್ಲಿ ಸ್ಪಷ್ಟಪಡಿಸಿದೆ. ಆದರೆ ಈ ಬಗ್ಗೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ತಿಳಿಸಿದರು.

ಈಗ ಮಳೆಗಾಲ ಶುರುವಾಗಿದೆ. ಶಾಲಾ ಕೊಠಡಿಗಳು ಯಾವಾಗ ಬೀಳುತ್ತವೋ ಎಂಬ ಸ್ಥಿತಿಯಲ್ಲಿ ಇವೆ. ಕಳಪೆ ಕಾಮಗಾರಿಯಿಂದ ಕೂಡಿದ ಈ ಕಟ್ಟಡಗಳನ್ನು ಯಾವುದೇ ಕಾರಣಕ್ಕು ವಹಿಸಿಕೊಳ್ಳಬಾರದು. ವಹಿಸಿಕೊಂಡರೆ ಮಕ್ಕಳಿಗೆ ಅಪಾಯ ಎಂದು ಶಾಲೆಯ ಎಸ್‌ಡಿಎಂಸಿ ಪದಾಧಿಕಾರಿಗಳಿಗೆ, ಮುಖ್ಯಾಧ್ಯಾಪಕರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಮೂರ‌್ನಾಲ್ಕು ದಿನದಲ್ಲಿ ಜಿಲ್ಲಾ ಪಂಚಾಯಿತಿಯು ಮೊಕದ್ದಮ್ಮೆ ದಾಖಲಿಸದೇ ಇದ್ದರೆ ಹೋರಾಟ ನಡೆಸಲಾಗುವುದು.  ಶಿಕ್ಷಣ ಇಲಾಖೆ ಅಧಿಕಾರಿಗಳ ಕಚೇರಿ ಎದುರು ಶಾಲಾ ಮಕ್ಕಳೊಂದಿಗೆ ಧರಣಿ ನಡೆಸಬೇಕಾಗುತ್ತದೆ ಎಂದು ತಿಳಿಸಿದರು.

ಕಳಪೆ ಕಾಮಗಾರಿ ಬಗ್ಗೆ ಥರ್ಡ್ ಪಾರ್ಟಿ ಕೊಟ್ಟಿರು ವರದಿಯೂ ತಮಗೆ ತೃಪ್ತಿ ತಂದಿಲ್ಲ. ಅನೇಕ ಸಂಶಯಗಳಿವೆ. ಹೀಗಾಗಿ ಅವುಗಳನ್ನು ಪರಿಶೀಲಿಸಲಾಗುತ್ತಿದೆ. ಲೋಪ ಸ್ಪಷ್ಟವಾಗಿ ಕಂಡು ಬಂದಲ್ಲಿ ಥರ್ಡ್ ಪಾರ್ಟಿ ವಿರುದ್ಧವೂ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಹೇಳಿದರು.ಸಂಘಟನೆ ಪ್ರಧಾನ ಕಾರ್ಯದರ್ಶಿ ಶೇಖರಪ್ಪ ಡೊಳ್ಳಿ, ಸಂಘಟನಾ ಕಾರ್ಯದರ್ಶಿ ಎ. ರೆಡ್ಡಿ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT