ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಷಿತರ ಕಾಳಜಿಗೆ ದಲಿತ ಅಧಿಕಾರಿಗಳ ನಿರ್ಲಕ್ಷ್ಯ

Last Updated 22 ಜನವರಿ 2011, 8:20 IST
ಅಕ್ಷರ ಗಾತ್ರ

ಚಾಮರಾಜನಗರ: ‘ಅಂಬೇಡ್ಕರ್ ಹೆಸರಲ್ಲಿ ಸೌಲಭ್ಯ ಪಡೆದ ದಲಿತ ಅಧಿಕಾರಿಗಳಿಗೆ ಶೋಷಿತರ ಬಗ್ಗೆ ಕಾಳಜಿ ಇಲ್ಲ’ ಎಂದು ಮಾಜಿ ಸಚಿವ ಬಿ. ಸೋಮಶೇಖರ್ ದೂರಿದರು.ನಗರದಲ್ಲಿ ಶುಕ್ರವಾರ ದಲಿತ ಸಾಹಿತ್ಯ ಸಾಂಸ್ಕೃತಿಕ ಕಲಾ ಸಪ್ತಾಹದ ಅಂಗವಾಗಿ ನಡೆದ ದಲಿತ ವಿದ್ಯಾರ್ಥಿ ಸಮಾವೇಶದಲ್ಲಿ ಅವರು ಮಾತನಾಡಿದರು. ಅಂಬೇಡ್ಕರ್ ಸ್ವಾರ್ಥಕ್ಕಾಗಿ ಅಧಿಕಾರ ಬಳಸಿಕೊಳ್ಳಲಿಲ್ಲ. ಜೀವನದ ಉದ್ದಕ್ಕೂ ಶೋಷಿತರ ಅಭಿವೃದ್ಧಿಗೆ ದುಡಿದರು. ಆದರೆ, ದಲಿತ ಸಮಾಜ ಪ್ರತಿನಿಧಿಸುವ ಅಧಿಕಾರಿಗಳಿಗೆ ಈ ಬಗ್ಗೆ ಅರಿವು ಇಲ್ಲ ಎಂದರು.

ಸಮಾಜಕ್ಕೆ ಒಳಿತು ಮಾಡುವ ವ್ಯಕ್ತಿ ರಾಜಕೀಯ ಕ್ಷೇತ್ರದಲ್ಲಿ ಇರುವುದಿಲ್ಲ. ಸಂವಿಧಾನಕ್ಕೆ ಜಾತೀಯತೆ ಇಲ್ಲ. ಜನತಂತ್ರಕ್ಕೆ ಅಂಬೇಡ್ಕರ್ ರಚಿಸಿರುವ ಸಂವಿಧಾನ ಮಾದರಿಯಾಗಿದೆ.ವಿದ್ಯಾರ್ಥಿಗಳು ಅವರ ಆದರ್ಶ ಪಾಲಿಸಬೇಕಿದೆ ಎಂದು ಕರೆ ನೀಡಿದರು.ದಲಿತ ಸಂಘಟನೆಗಳು ಹಣಕ್ಕೆ ಮೊರೆ ಹೋಗಿವೆ. ಚುನಾವಣೆ ವೇಳೆ ರಾಜಕೀಯ ಮುಖಂಡರಿಗೆ ಸಂಘಟನೆಯ ಶಕ್ತಿ ತೋರಿಸಿ ಹಣ ಪಡೆಯುತ್ತಿವೆ. ಇದರಿಂದ ಶೋಷಿತ ವರ್ಗ ಉದ್ಧಾರವಾಗುವುದಿಲ್ಲ. ದಲಿತ ಸಂಘಟನೆಗಳ ವಿಘಟನೆ ಸರಿಯಲ್ಲ. ಒಂದೇ ನಾಯಕತ್ವ ಇರಬೇಕು ಎಂದರು.

ಆಡಳಿತಗಾರರು ತಮ್ಮ ಅನುಕೂಲಕ್ಕೆ ತಕ್ಕಂತೆ ಸಂವಿಧಾನವನ್ನೇ ತಿರುಚಿದ್ದಾರೆ. ರಾಜ್ಯ ಸರ್ಕಾರ ಸಂವಿಧಾನಾತ್ಮಕವಾಗಿ ರಚನೆಯಾಗಬೇಕಿತ್ತು. ಆದರೆ, ರಾಜಕೀಯ ವ್ಯವಸ್ಥೆಯಿಂದ ಸರ್ಕಾರದ ರಚನೆ ಸಂಕುಚಿತಗೊಂಡಿದೆ. ‘ಮತ’ಕ್ಕೆ ಮಹಿಳೆಯರ ‘ಶೀಲ’ಕ್ಕಿರುವಷ್ಟೇ ಬೆಲೆಯಿದೆ. ರಾಜಕಾರಣಿಗಳು ನೀಡುವ ಹಣ ಪಡೆದು ಓಟಿನ ಮೌಲ್ಯವನ್ನು ಹಾಳು ಮಾಡಿಕೊಳ್ಳಬಾರದು ಎಂದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಎಂ. ಮಹೇಶ್‌ಪ್ರಭು ಮಾತನಾಡಿ, ‘ದಲಿತ ಮತ್ತು ರೈತ ಸಂಘಟನೆಗಳು ಒಂದಾಗಿ ಹೋರಾಟ ಮಾಡಿದರೆ ರೈತರು ಮತ್ತು ಶೋಷಿತರಿಗೆ ಸೌಲಭ್ಯ ದಕ್ಕುತ್ತವೆ’ ಎಂದು ಹೇಳಿದರು. ರಾಮಚಂದ್ರ ಶಿಕ್ಷಣ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಮರಿಮಾದಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಉದಯಕುಮಾರ್, ಚೂಡಾ ಆಯುಕ್ತ ಕೆ.ಎಚ್.ಬಸವರಾಜು, ದೇವರಾಜು, ಚೌಡಯ್ಯ ಕಟ್ನವಾಡಿ, ಜಿ.ಎಂ. ಗಾಡ್ಕರ್, ವೆಂಕಟರಮಣಸ್ವಾಮಿ ಹಾಜರಿದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT