ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನಾ ವಿಭಾಗ ರಚಿಸಿಕೊಳ್ಳಿ - ಡಾ.ಎ.ಪಿ.ಜೆ. ಅಬ್ದುಲ್ ಕಲಾಂ

Last Updated 17 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಜನತೆಗೆ ವಸ್ತುನಿಷ್ಠ ವರದಿ ಹಾಗೂ ವಿಶ್ಲೇಷಣೆ ನೀಡುವ ನಿಟ್ಟಿನಲ್ಲಿ ಪ್ರತಿಯೊಂದು ಮಾಧ್ಯಮ ಸಂಸ್ಥೆಗಳು ಸಂಶೋಧನಾ ವಿಭಾಗ ರಚಿಸಿಕೊಳ್ಳಬೇಕಾದ ಅಗತ್ಯವಿದೆ~ ಎಂದು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಸಲಹೆ ನೀಡಿದರು.

ನಗರದ ಕಬ್ಬನ್ ಉದ್ಯಾನದ ಆವರಣದಲ್ಲಿರುವ ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ `ರಾಷ್ಟ್ರ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ~ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

`ರಾಷ್ಟ್ರ ಹಾಗೂ ಜನತೆಯ ಹಿತದೃಷ್ಟಿಗೆ ಸಂಬಂಧಪಟ್ಟ ವಿಷಯಗಳ ಕುರಿತು ಆಳ ಅಧ್ಯಯನ ನಡೆಸಲು ಹಾಗೂ ಸತ್ಯ ಸಂಗತಿಯನ್ನು ಪತ್ತೆ ಹಚ್ಚಿ, ವಸ್ತುಸ್ಥಿತಿಯ ಬಗ್ಗೆ ಮಾಹಿತಿ ನೀಡಲು ವ್ಯವಸ್ಥಿತವಾದ ಸಂಶೋಧನಾ ವಿಭಾಗ ಹೊಂದಿರುವುದು ಸೂಕ್ತ~ ಎಂದರು.

`ಯುವ ಉತ್ಸಾಹಿ ವರದಿಗಾರರು ಕೈಗೊಳ್ಳುವ ಸಂಶೋಧನೆಗೆ ಮಾಧ್ಯಮ ಸಂಸ್ಥೆಗಳು ಪ್ರೋತ್ಸಾಹ ನೀಡಬೇಕು. ಇದರಿಂದ ಗುಣಮಟ್ಟದ ವರದಿಗಾರಿಕೆಗೆ ಸಹಕಾರಿಯಾಗಲಿದೆ. ಹಾಗೆಯೇ ದೇಶ ನಿರ್ಮಾಣಕ್ಕೂ ನೆರವಾದಂತಾಗುತ್ತದೆ~ ಎಂದು ಹೇಳಿದರು.

`ಸಾವಯವ ಕೃಷಿ ವಿಧಾನ ಅಳವಡಿಕೆಗೆ ಪ್ರೋತ್ಸಾಹ ನೀಡಬೇಕಿದೆ. ಸುಧಾರಿತ ತಂತ್ರಜ್ಞಾನ, ಪರಿಸರ ಸಮತೋಲನ, ಸಾಂಪ್ರದಾಯಿಕ ಜ್ಞಾನ ಹಾಗೂ ಸತ್ವಯುತ ಕೃಷಿಗೆ ಒತ್ತು ನೀಡುವ ಈ ವಿಧಾನ ಎರಡನೇ ಹಸಿರು ಕ್ರಾಂತಿಗೆ ನಾಂದಿಯಾಗಲಿದೆ~ ಎಂದು ಹೇಳಿದರು.

`ಪತ್ರಕರ್ತರು ದೇಶದ ಜನತೆಗೆ ನಿಷ್ಠರಾಗಿರಬೇಕು. ಯಾವುದೇ ಖಾಸಗಿ ವ್ಯಕ್ತಿಗಳು, ಸಂಘ- ಸಂಸ್ಥೆ, ಪಕ್ಷದೊಂದಿಗೆ ಗುರುತಿಸಿಕೊಳ್ಳದೇ ಸ್ವತಂತ್ರರಾಗಿರಬೇಕು. ಸತ್ಯಾಂಶ ತಿಳಿಸುವಲ್ಲಿ ರಾಜಿ ಮಾಡಿಕೊಳ್ಳಬಾರದು. ರಾಷ್ಟ್ರೀಯ ಹಿತಾಸಕ್ತಿ, ಸಾಮಾಜಿಕ ವ್ಯವಸ್ಥೆ ಹಾಗೂ ಶಾಂತಿ- ಸುವ್ಯವಸ್ಥೆಗೆ ಸಂಬಂಧಪಟ್ಟ ವಿಷಯಗಳಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು~ ಎಂದು ಕಿವಿಮಾತು ಹೇಳಿದರು. `ದೇಶದಲ್ಲಿ ಕಳೆದ ಒಂದು ವರ್ಷದಲ್ಲಿ ಆಡಳಿತದ ಲೋಪಗಳನ್ನು ಎತ್ತಿ ತೋರುವಲ್ಲಿ ಮಾಧ್ಯಮಗಳು ಮಹತ್ವದ ಪಾತ್ರ ವಹಿಸಿವೆ. ಹಾಗೆಯೇ ಗುಣಾತ್ಮಕ ಅಂಶಗಳನ್ನು ಅಳವಡಿಸಿಕೊಳ್ಳುವ ಮೂಲಕ ದೇಶದ ಆರ್ಥಿಕ ಹಾಗೂ ರಾಜಕೀಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಬೇಕು~ ಎಂದರು.

ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, `ಅಬ್ದುಲ್ ಕಲಾಂ ಅವರಂತಹ ಶ್ರೇಷ್ಠ ವ್ಯಕ್ತಿಗಳ ಮಾರ್ಗದರ್ಶನ ನನಗೆ ಅಗತ್ಯವಿದೆ. ಅವರು ನೀಡುವ ಸಲಹೆ, ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು~ ಎಂದು ಹೇಳಿದರು.

ಇದಕ್ಕೂ ಮೊದಲು ಇಬ್ಬರು ಗಣ್ಯರು ಸಂಪಿಗೆ ಸಸಿ ನೆಟ್ಟು ನೀರೆರೆದರು. ಬಳಿಕ ಅಬ್ದುಲ್ ಕಲಾಂ ಅವರು ನವೀಕೃತ ಪತ್ರಿಕಾಗೋಷ್ಠಿ ಸಭಾಂಗಣವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಅಬ್ದುಲ್ ಕಲಾಂ ಹಾಗೂ ಸದಾನಂದಗೌಡ ಅವರಿಗೆ ಪ್ರೆಸ್‌ಕ್ಲಬ್‌ನ ಗೌರವ ಸದಸ್ಯತ್ವ ನೀಡಲಾಯಿತು.

ಬೆಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಎಂ.ಎ. ಪೊನ್ನಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಸದಾಶಿವ ಶೆಣೈ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT