ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಖತ್ ಸಂಕ್ರಾಂತಿ

Last Updated 14 ಜನವರಿ 2011, 20:35 IST
ಅಕ್ಷರ ಗಾತ್ರ

ಉತ್ತರ ಭಾರತದವರ ಲೋಹರಿ. ಕರ್ನಾಟಕ ಮತ್ತು ಆಂಧ್ರದವರ ಅಚ್ಚುಮೆಚ್ಚಿನ ಸಂಕ್ರಾಂತಿ. ತಮಿಳುನಾಡಿನವರ ಪಾಲಿಗೆ ಪೊಂಗಲ್. ಹೀಗೆ ದೇಶದೆಲ್ಲೆಡೆ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಸಮೃದ್ಧಿಯ ಸಂಕೇತದ ಹಬ್ಬವೇ ಸಂಕ್ರಾಂತಿ. 

ಇಂದಿನಿಂದ ರಾತ್ರಿ ಕಡಿಮೆಯಾಗಿ ಹಗಲು ಅಧಿಕವಾಗುತ್ತಾ ಸಾಗುತ್ತದೆ. ಸೂರ್ಯ ಪ್ರಕಾಶಮಾನವಾಗುತ್ತಾ ಸಾಗುತ್ತಾನೆ. ಇದು ಖಗೋಳ ಹಾಗೂ ಶಾಸ್ತ್ರ ಸಂಬಂಧಿ.

ಇನ್ನು ರೈತರ ಪಾಲಿಗೆ ಸಂಕ್ರಾಂತಿ ಸುಗ್ಗಿ ಕಾಲ. ಬೆಳೆ ಕಟಾವು ನಡೆಸಿ ಕಣ ಒಟ್ಟು ಮಾಡುವ ಸಂಭ್ರಮದ ಸನ್ನಿವೇಶ. ಹಬ್ಬದ ದಿನ ರೈತರ ಸಂಭ್ರಮ ಮುಗಿಲು ಮುಟ್ಟುತ್ತದೆ. ದನಕರುಗಳಿಗೆ ಅಲಂಕಾರ ಮಾಡಿ. ಕಡಲೆಕಾಯಿ, ಗೆಣಸು, ಎಳ್ಳು- ಬೆಲ್ಲ, ಕಬ್ಬು, ಸಿಹಿ ಪೊಂಗಲ್... ಹೀಗೆ ಹಬ್ಬಕ್ಕಾಗಿ ತಯಾರಿಸಿದ ವಿಶೇಷ ಖಾದ್ಯಗಳನ್ನು ಸಮರ್ಪಿಸಿದರೆ ಹಬ್ಬದ ಸಾರ್ಥಕತೆ ಮತ್ತು ಮನಸಿಗೆ ತೃಪ್ತಿ. ಸಂಜೆ ಬೆಂಕಿ ಹಾಯಿಸುವ (ಬೆದರಿಸುವ) ವಿಶಿಷ್ಟ ಆಚರಣೆ ನೋಡುವುದೇ ಬಲು ಸೊಗಸು. ಹಳ್ಳಿಗರ ಪಾಲಿಗೆ ಸಂಕ್ರಾಂತಿ ರತ್ತೋ ರತ್ತೋ!

ಬೆಳಿಗ್ಗಿನ ಜಾವದಿಂದಲೇ ಹಳ್ಳಿ ಪಟ್ಟಣ್ಣ ಎಂಬ ಭೇದವಿಲ್ಲದೆ ಸಂಕ್ರಾಂತಿ ಆಚರಣೆ ಚಾಲು. ದೇವಸ್ಥಾನಗಳಿಗೆ ಹೋಗಿ ಹಣ್ಣುಕಾಯಿ ಅರ್ಪಣೆ ಮಾಡಿದ ನಂತರವೇ ಮುಂದಿನ ಹೆಜ್ಜೆ. ಮನೆಯಲ್ಲಿ ಹಬ್ಬದೂಟ ತಯಾರಿ, ಸೇವನೆ.  

ಇದು ಹಳ್ಳಿ ಹೈಕಳ ಕಥೆ ಮಾತ್ರವಲ್ಲ, ನಮ್ಮ ಪ್ಯಾಟೆಮಂದಿಯೂ ಸಹ ಇದೇ ಹಾದಿಯನ್ನು ಅನುಸರಿಸುತ್ತಾರೆ. ಹಬ್ಬದೂಟಕ್ಕಾಗಿ ಮುಖ ಮಾಡುವುದು ಹೊಟೇಲ್‌ಗಳತ್ತ. ಇನ್ನು ಹಬ್ಬದ ದಿನ ಪ್ಯಾಟೆ ಹೆಣೈಕ್ಳು ಎಂದಿನಂತೆ ಚಿಂದಿ ಚಿಂದಿ ಜೀನ್ಸ್, ಶಾರ್ಟ್ ಕುರ್ತಾ, ಚೂಡಿದಾರ್‌ಗಳಿಗೆ ಬೈ ಹೇಳಿ. ಸಾಮಾನ್ಯವಾಗಿ ಫಾರ್ ಎ ಚೇಂಜ್ ಎನ್ನುವಂತೆ ರೇಶ್ಮೆ ಲಂಗ, ದಾವಣಿ, ಸೀರೆಯುಟ್ಟು ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತ ಸಂಜೆ ಮನೆಯಿಂದ ಮನೆಗೆ ಎಳ್ಳು ಬೀಸಲು ರೆಡಿಯಾಗುತ್ತಾರೆ.

ಒಟ್ಟಾರೆ ಹಳ್ಳಿ ದಿಲ್ಲಿ ಎಂಬ ಭೇದವಿಲ್ಲದೆ ಎಲ್ಲೆಡೆ ಆಚರಣೆಗೊಳ್ಳುವ ಸಂಕ್ರಾಂತಿಗೆ ಇರುವ ಪೌರಾಣಿಕ ಹಿನ್ನೆಲೆ ಸ್ವಾರಸ್ಯ ಪೂರ್ಣ. ‘ತಿಲಾಸುರನೆಂಬ ರಾಕ್ಷಸ, ಬ್ರಹ್ಮನಿಂದ ವರ ಪಡೆದು ಲೋಕ ಕಂಟಕನಾಗಿರುತ್ತಾನೆ. ಆಗ ಸೂರ್ಯದೇವ ಮಕರ ಮತ್ತು ಕರ್ಕರನ್ನು ಅವರ ಸಂಹಾರಕ್ಕಾಗಿ ಕಳುಹಿಸುತ್ತಾನೆ. ಮಕರ ತಿಲಾಸುರನ ಹೊಟ್ಟೆಗೆ ಭಲ್ಲೆಯಿಂದ ತಿವಿದಾಗ ಆತನ ಹೊಟ್ಟೆಯಿಂದ ರಾಶಿ ರಾಶಿ ಎಳ್ಳು ಹೊರ ಬರುತ್ತದೆ. ತಿಲಾಸುರನ ಅಟ್ಟಹಾಸ ಅಂತ್ಯವಾಗುತ್ತದೆ. ಇದರಿಂದ ಸಂಪೃತ್ತಗೊಂಡ ಸೂರ್ಯದೇವ ಮಕರನ ಸಾಹಸವನ್ನು ಹೊಗಳಿ- ನಿನ್ನನ್ನು ಮತ್ತು ನೀನು ಶೋಧಿಸಿದ ಎಳ್ಳನ್ನು ಪೂಜಿಸಿದವರಿಗೆ ಒಳಿತಾಗಲಿ ಎಂದು ಆಶೀರ್ವದಿಸುತ್ತಾನೆ. ಇದರಿಂದಲ್ಲೇ ಎಳ್ಳು ಬೀರುವ ಸಂಪ್ರದಾಯ ಆರಂಭವಾಯಿತು’ ಎನ್ನುವ ನಂಬಿಕೆ ಇದೆ. ಇದರ ನೆನಪಿನಲ್ಲಿ ನಡೆಯುವುದೇ ಮಕರ ಸಂಕ್ರಾಂತಿ.

ಅಯ್ಯಪ್ಪಸ್ವಾಮಿ ಭಕ್ತರಿಗೆ ಮಕರಜ್ಯೋತಿಯ ದರ್ಶನವಾಗುವ ಅಭೂತಪೂರ್ವ ಕ್ಷಣ. ಮಕ್ಕಳಿಗೆ ಸಕ್ಕರೆ ಅಚ್ಚು ಸವಿಯುವ ಖುಷಿ. ಹೆಣ್ಣು ಮಕ್ಕಳಿಗೆ ಸಂಭ್ರಮದ ಒಲುಮೆ. ರೈತರಿಗೆ ಸುಗ್ಗಿಯ ಸಂಭ್ರಮ ಒಟ್ಟಾರೆ ಸಂಕ್ರಾಂತಿ ಸೂಪರೋ ಸೂಪರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT