ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿನ್ ತೆಂಡೂಲ್ಕರ್: ನೂರು ಶತಕಗಳ ವೀರನಾಗುವತ್ತ...!

Last Updated 4 ನವೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ಸಚಿನ್ ತೆಂಡೂಲ್ಕರ್ ನೋಡಿದಾಗಲೆಲ್ಲಾ ಎದೆಯೊಳಗೊಂದು ಹಾಡಿನ ಸಾಲು ನಲಿದಾಡುತ್ತದೆ. ಪದಗಳ ಜೋಡಿಸಿಟ್ಟು ಕವಿಯೊಬ್ಬ `ಏರಿದವನು ಚಿಕ್ಕವನಿರಲೇಬೇಕು ಎಂಬ ಮಾತನು ಸಾರುವನು~ ಎಂದು ಬರೆದಿಟ್ಟ. ಅದೇ ಕವಿತೆಯನ್ನು ಕ್ರಿಕೆಟ್ ಪ್ರೇಮಿಗಳ ಮನಸ್ಸು ಕೂಡ ತನಗರಿವಿಲ್ಲದಂತೆಯೇ ಹಾಡುತ್ತದೆ.

ಹೌದು; ಕ್ರಿಕೆಟ್ ಜಗತ್ತೇ ಹೆಮ್ಮೆಯಿಂದ ನೋಡುವ ಈ ಅದ್ಭುತ ಬ್ಯಾಟ್ಸ್‌ಮನ್ ವ್ಯಕ್ತಿತ್ವವೇ ಅಂಥದು. ಯಶಸ್ಸಿನ ಪಿತ್ತವನ್ನು ನೆತ್ತಿಗೆ ಏರಿಸಿಕೊಳ್ಳದಂಥ ಗುಣ. ಅದಕ್ಕೆ ಸಾಕ್ಷಿ ನೀಡಲು ಘಟನೆಗಳು ಸಾಲು ಸಾಲಾಗಿ ನೆನಪಿನ ಪುಟಗಳಲ್ಲಿ ಬಂದು ನಿಲ್ಲುತ್ತವೆ. ಆದರೆ ಇತಿಹಾಸ ಸೇರಿದ ಅಂಥ ಅನೇಕ ಕ್ಷಣಗಳನ್ನು ಬದಿಗಿಟ್ಟು; ತಕ್ಷಣವೇ ಕಣ್ಣೆದುರು ತೆರೆದುಕೊಂಡು, ನೆನಪಿನಲ್ಲಿ ಗಟ್ಟಿಯಾದ ಘಟನೆಗಳ ಕಡೆಗೆ ಗಮನ ಕೊಟ್ಟಾಗಲೂ ಅದೇ ಕವಿಮಾತಿನ ಸುಳಿದಾಟ.

ನೂರು ಅಂತರರಾಷ್ಟ್ರೀಯ ಶತಕಗಳ ಸಾಧನೆಯ ಹೊಸ್ತಿಲಲ್ಲಿ ನಿಂತಿರುವ ಕ್ರಿಕೆಟಿಗ ಇಲ್ಲಿನ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಅಭ್ಯಾಸ ನಡೆಸಿದ. ಆಗ ಮತ್ತೊಮ್ಮೆ ಈ ದೊಡ್ಡ ಆಟಗಾರನ ವಿಶಿಷ್ಟ ವ್ಯಕ್ತಿತ್ವವು ಚಿತ್ರವಾಗಿ ಹೃದಯ ಪುಟದಲ್ಲಿ ಅಚ್ಚೊತ್ತಿತು. ಹಿರಿಯ ಸಾಧನೆಯ ಹತ್ತಾರು ಗರಿಗಳನ್ನು ಯಶಸ್ಸಿನ ಕಿರೀಟಕ್ಕೆ ಸಿಕ್ಕಿಸಿಕೊಂಡಿದ್ದರೂ, ಈಗಷ್ಟೇ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟ ಮುಗ್ಧ ಬಾಲಕನಂತೆ ನೆಟ್ಸ್‌ಗೆ ಬಂದ ಸಚಿನ್. ಆಗ ಅವರ ಮೇಲೆ ಗಮನ ಕೇಂದ್ರೀಕರಿಸಿದ ಮಾಧ್ಯಮದವರ ಕ್ಯಾಮೆರಾಗಳು ನೂರಾರು.

ಒಂದೆರಡು ಅಂತರರಾಷ್ಟ್ರೀಯ ಪಂದ್ಯ ಆಡಿದ ಇತ್ತೀಚಿನ ಕೆಲವು ಹುಡುಗರು ಕೂಡ ಗತ್ತಿನಿಂದ ಓಡಾಡುವುದನ್ನು ನೋಡಿದ್ದೇವೆ. ಆದರೆ ಸಚಿನ್ ಮಾತ್ರ ಹಾಗಲ್ಲ. ಕ್ರೀಡಾ ಪತ್ರಕರ್ತರ ಗುಂಪಿನಲ್ಲಿದ್ದ ಪರಿಚಿತ ಮುಖಗಳತ್ತ ಮಂದಹಾಸ ಚೆಲ್ಲಿಯೇ ಮುಂದೆ ಹೆಜ್ಜೆ ಇಟ್ಟರು. ಅವರ ಒಂದು ಕೈಯಲ್ಲಿ ಕಿಟ್ ಹಾಗೂ ಇನ್ನೊಂದು ಕೈಯಲ್ಲಿ ಮೂರು   ಬ್ಯಾಟ್. ಕ್ರಿಕೆಟ್ ತಮ್ಮ ಕಾಯಕ ಎನ್ನುವಂತೆ ಶಿಸ್ತಿನಿಂದ ಪ್ಯಾಡ್ ಕಟ್ಟಿಕೊಂಡು ನೆಟ್ಸ್ ಕಡೆಗೆ ನಡೆಯುವ ಮುನ್ನ ಕಿಟ್ ಒಳಗಿನ ಸಾಯಿ ಬಾಬಾ ಚಿತ್ರದ ಕಡೆಗೆ ಕಿರು ನೋಟ. ಎದೆಗೊಮ್ಮೆ ಕೈ ಒತ್ತಿಕೊಂಡು, ಕತ್ತಲ್ಲಿದ್ದ ತಾಯತಕ್ಕೆ ಮುತ್ತಿಟ್ಟಾಗ ದೈವಭಕ್ತಿಯ ಅನಾವರಣ.

ವೆಸ್ಟ್ ಇಂಡೀಸ್ ವಿರುದ್ಧ ಭಾನುವಾರ ಆರಂಭವಾಗಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಹಣಾಹಣಿಗಾಗಿ ಕೊಟ್ಲಾ ಕ್ರೀಡಾಂಗಣದ ಅಂಚಿನ ನೆಟ್ಸ್‌ನಲ್ಲಿ ತಮ್ಮ ಸಹ ಆಟಗಾರರ ಜೊತೆ ತೆಂಡೂಲ್ಕರ್ ಅಭ್ಯಾಸ ಆರಂಭ. ಈಗಷ್ಟೇ ತಂಡವನ್ನು ಪ್ರವೇಶಿಸಿರುವ ಯುವ ಬಲಗೈ ಮಧ್ಯಮ ವೇಗಿ ವರುಣ್ ಆರೊನ್ ಮೊದಲ ಎಸೆತವನ್ನು ರಕ್ಷಣಾತ್ಮಕವಾಗಿ ಆಡಿ ಆನಂತರ ಸುಮಾರು ಐವತ್ತು ಬಾರಿ ಬ್ಯಾಟ್ ಬೀಸಿದ `ಮುಂಬೈಕರ್~. ವಿಶೇಷವಾಗಿ ಕಣ್ಣು ಸೆಳೆದಿದ್ದು ಅವರು ಪ್ರತಿಯೊಂದು ಎಸೆತದ ನಂತರ ವರುಣ್‌ಗೆ ಆ ಎಸೆತ ಹೇಗಿತ್ತು ಎನ್ನುವುದನ್ನು ಕೂಗಿ ಹೇಳುತ್ತಿದ್ದ ರೀತಿ.

ತಾನೊಬ್ಬ ಹಿರಿಯ ಆಟಗಾರ ಎನ್ನುವ ಅಹಂ ಇಲ್ಲದೆಯೇ ಮುಕ್ತ ಮನಸ್ಸಿನಿಂದ ಎದುರಿಗೆ ಬೌಲಿಂಗ್ ಮಾಡುತ್ತಿದ್ದ ನೆಟ್ಸ್ ಬೌಲರ್‌ಗೂ ಮೆಚ್ಚುಗೆ. `ಓವ್...ಐಯಾಮ್ ಸ್ಟಕ್...~, `ಸ್ಟ್ರೇಟರ್ ಒನ್...~ ಎಂದು ಹೇಳಿದ್ದು ಕೇಳಿದಾಗ ಒಬ್ಬ ಆತ್ಮೀಯ ಗೆಳೆಯನ ಮಾತಿನಂತೆ. ಸ್ಪಿನ್ನರ್‌ಗಳ ನೆಟ್ಸ್‌ನಲ್ಲಿ ಸಚಿನ್ ಹೆಚ್ಚು ಆಸಕ್ತಿಯಿಂದ ಸಲಹೆ ನೀಡಿದ್ದು ರವಿಚಂದ್ರನ್ ಅಶ್ವಿನ್‌ಗೆ. ಒಳ್ಳೆಯ ಎಸೆತಕ್ಕೆ `ಲೈಕ್ ಇಟ್... ಗುಡ್ ಒನ್...~ ಎಂದು ಹೇಳಿದ್ದೂ ಗಮನ ಸೆಳೆಯಿತು. ನೆಟ್ಸ್‌ನಲ್ಲಿ ಬೇರೆ ಬ್ಯಾಟ್ಸ್‌ಮನ್‌ಗೆ ಅವಕಾಶ ಮಾಡಿಕೊಟ್ಟು ಹೊರಡುವ ಮುನ್ನ ಅಶ್ವಿನ್ ಹೆಗಲ ಮೇಲೆ ಕೈಹಾಕಿ `ಪ್ರತಿಯೊಂದು ಎಸೆತದಲ್ಲಿ ಸ್ವಲ್ಪ ಬದಲಾವಣೆ ಮಾಡುವ ಪ್ರಯತ್ನ ಮುಖ್ಯ~ ಎಂದು ಹೇಳಿದರು. ಆಗ ಅಶ್ವಿನ್ ಮುಖದ ತುಂಬಾ ಮಂದಹಾಸ ಅಂದದಿಂದ ನಲಿಯಿತು. ಹೌದು; ಹೀಗೆ ಹಿರಿಯ ಆಟಗಾರರ ಸಲಹೆಗಳು ಯುವಕರ ಉತ್ಸಾಹ ಹೆಚ್ಚಿಸುತ್ತವೆ.

ತೆಂಡೂಲ್ಕರ್ ನೆಟ್ಸ್‌ನಲ್ಲಿ ಇದ್ದಾಗ ತಿಳಿ ಹಾಸ್ಯ ಹಾಗೂ ನಗೆಯ ಅಲೆ ಸಹಜ. ನೆಟ್ಸ್ ಅಂಚಿನಲ್ಲಿ ನಿಂತಿದ್ದ ಭಾರತ ತಂಡದ ಕೋಚ್ ಡಂಕನ್ ಫ್ಲೆಚರ್ ಕಡೆಗೆ ಒಮ್ಮೆ ಬಲವಾಗಿ ಚೆಂಡನ್ನು ಅಟ್ಟಿದರು ಸಚಿನ್. ಆಗ ಸ್ವತಃ ಅವರೇ ಕೂಗಿ `ಜೋಪಾನ ಚೆಂಡು...!~ ಎಂದು ಕಿರುಚಿದರು. ಆನಂತರವೂ ಫ್ಲೆಚರ್ ಅಲ್ಲಿಯೇ ನಿಂತಿದ್ದರು. ಮತ್ತೊಮ್ಮೆ ಅಂಥದೇ ಹೊಡೆತ. ಅದೃಷ್ಟಕ್ಕೆ ನೆಟ್ಸ್ ಅಂಚಿನ ಕಂಬಕ್ಕೆ ತಾಗಿದ ಚೆಂಡು ದಿಕ್ಕು ಬದಲಾಯಿಸಿತು. ಆಗ ಇದೇ ಅನುಭವಿ ಬ್ಯಾಟ್ಸ್‌ಮನ್ ಹೇಳಿದ `ನಾನು ಹೇಳಲಿಲ್ಲವೇ... ಮತ್ತೆ ಅಲ್ಲಿಯೇ ಏಕೆ ನಿಂತಿದ್ದೀರಾ...?~ ಎಂದು ನಕ್ಕರು. ಆಗ ಡಂಕನ್ ಜೊತೆಗೆ ಅಲ್ಲಿದ್ದ ಎಲ್ಲರೂ ನಕ್ಕರು.

ಹೀಗೆ ಸಚಿನ್ ಕ್ರಿಕೆಟ್ ಜೀವನದಲ್ಲಿ ಯಾವುದೇ ಬಿಗುಮಾನವಿಲ್ಲದೆ ಸಾಗಿ ಬಂದಿದ್ದಾರೆ. ನೂರನೇ ಅಂತರರಾಷ್ಟ್ರೀಯ ಶತಕ ಸಾಧನೆಯ ಶ್ರೇಯ ಪಡೆಯುವ ಹಂತದಲ್ಲಿಯೂ ಇದ್ದಾರೆ. ಆದರೆ ಒತ್ತಡ ಒಂದಿಷ್ಟೂ ಇಲ್ಲ. ಇಂಗ್ಲೆಂಡ್ ಪ್ರವಾಸದಲ್ಲಿ ಸಾಧ್ಯವಾಗದ್ದನ್ನು ಭಾರತದಲ್ಲಿಯೇ ವೆಸ್ಟ್ ಇಂಡೀಸ್ ಎದುರು ಸಾಧಿಸುವ ಛಲ. ಟೆಸ್ಟ್‌ನಲ್ಲಿ 51 ಹಾಗೂ ಏಕದಿನ ಪಂದ್ಯಗಳಲ್ಲಿ 48 ಶತಕ ಗಳಿಸಿರುವ ಬಲಗೈ       ಬ್ಯಾಟ್ಸ್‌ಮನ್ ತೆಂಡೂಲ್ಕರ್ ಅವರು ಕ್ರಿಕೆಟ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಲು ಇನ್ನೊಂದು ಶತಕ ಅಗತ್ಯ. ಅದು ಪ್ರವಾಸಿ ಕೆರಿಬಿಯನ್ ತಂಡದ ಎದುರು ದಕ್ಕುತ್ತದೆ ಎನ್ನುವುದು ಕ್ರಿಕೆಟ್ ಪ್ರೇಮಿಗಳ ನಂಬಿಕೆ.

ಟೆಸ್ಟ್‌ನಲ್ಲಿ ತೆಂಡೂಲ್ಕರ್ ಕೊನೆಯ ಶತಕ ಗಳಿಸಿದ್ದು ಇದೇ ವರ್ಷ ಜನವರಿಯಲ್ಲಿ. ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್‌ಟೌನ್‌ನಲ್ಲಿ (146). ಇಂಗ್ಲೆಂಡ್ ಎದುರು ದಿ ಓವಲ್‌ನಲ್ಲಿ ಕಳೆದ ಆಗಸ್ಟ್‌ನಲ್ಲಿ ಕೇವಲ ಒಂಬತ್ತು ರನ್‌ಗಳಿಂದ ಶತಕ ವಂಚಿತರಾಗಿದ್ದರು. ಏಕದಿನ ಪಂದ್ಯಗಳಲ್ಲಿ ಕೊನೆಯ ಶತಕ ಬಂದಿದ್ದು ಇದೇ ವರ್ಷದ ಮಾರ್ಚ್‌ನಲ್ಲಿ. ನಾಗಪುರದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 111 ರನ್ ಗಳಿಸಿದ್ದರು. ಆನಂತರ ಭಾರತದಲ್ಲಿ ಆಡಿದ ಪಂದ್ಯಗಳಲ್ಲಿ ನೂರು ರನ್‌ಗಳ ಗುಚ್ಛವನ್ನು ಕಟ್ಟಲು ಸಚಿನ್‌ಗೆ ಸಾಧ್ಯವಾಗಿಲ್ಲ. ಆದರೆ ವಿಂಡೀಸ್ ಎದುರು ಮೂರಂಕಿಯ ಮೊತ್ತ ಗಳಿಸುವತ್ತ ಭಾರತದ ಹೆಮ್ಮೆಯ ಬ್ಯಾಟ್ಸ್‌ಮನ್ ಚಿತ್ತ ನೆಟ್ಟಿರುವುದಂತೂ ಸ್ಪಷ್ಟ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT