ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ತೀರಾ, ಬದುಕೀರಾ ಕೇಳಾಕ ಬಂದಿಲ್ಲ: ಸಂತ್ರಸ್ತರ ಅಳಲು

Last Updated 1 ಅಕ್ಟೋಬರ್ 2011, 10:25 IST
ಅಕ್ಷರ ಗಾತ್ರ

ಕಂಪ್ಲಿ: `ಎರಡು ವರ್ಷ ಆಯಿತು ನೋಡ್ರಿ, ಉಸ್ರು ಬಿಗಿ ಹಿಡ್ದು ತಗಡಿನ ಟೆಂಟ್‌ನ ಕೆಳಗಾ ಜೀವನ ಮಾಡ್ತ ಅದೀವಿ. ಒಬ್ಬರಿಗಾದರೂ ನಮ್ಮ ಬಗ್ಗೆ ಕನಿಕರಾನೇ ಇಲ್ಲ. ಎರಡು ವರ್ಷದ ಹಿಂದೆ ಹಳ್ಳ ಬಂದಾಗ ಬಂದೋದ ಎಮ್ಮೆಲ್ಲೇರು ಇವತ್ತಿನವರೆಗೆ ಸತ್ತೀರ ಬದುಕೀರ ಅಂತ ಕೇಳಾಕೆ ಬಂದಿಲ್ಲ~.

2009 ಅಕ್ಟೋಬರ್ 1ರ ಮಧ್ಯರಾತ್ರಿ ದರೋಜಿ ಕೆರೆ ಕೋಡಿ ಒಡೆದು ನಾರಿಹಳ್ಳ ಉಕ್ಕಿ ಹರಿದ ಪರಿಣಾಮ ಸಮೀಪದ ಸುಗ್ಗೇನಹಳ್ಳಿ ಆಶ್ರಯ ಕಾಲೊನಿಗೆ (ಶಾರದ ನಗರ) ನೀರು ನುಗ್ಗಿ ಸುಮಾರು 164 ಕುಟುಂಬಗಳು (ಸರ್ಕಾರಿ ದಾಖಲೆ 77 ಕುಟುಂಬಗಳು) ಅಕ್ಷರಶಃ ಬೀದಿ ಪಾಲಾಗಿದ್ದು, ಅವರೆಲ್ಲರೂ ಇಂದು ಸಿಟ್ಟು, ನಿರಾಶೆ, ಅಸಾಹಕತೆಯಿಂದ ಗೋಳು ತೊಂಡಿಕೊಂಡ ಪರಿ ಇದು.

ಲೆಕ್ಕೆಮರದ ಹನುಮಂತಮ್ಮನ ಮಗಳು ಪದ್ಮಾವತಿ 25 ದಿನದ ಹಿಂದೆ ಹೆರಿಗೆ ಆಗಿದೆ. ಹಸಿ ಬಾಣಂತಿ ಈಕೆಯ ಕೂಸು ತಗಡಿನ ಝಳಕ್ಕೆ ಹಠ ಮಾಡಿ ಅತ್ತು ಅತ್ತು ನಿದ್ದೆ ಮಾಡ್ತಿಲ್ಲ. ರಾತ್ರಿ ಚುಕ್ಕಾಡಿ ಕಾಟ ಬೇರೆ. ಇದರಿಂದ ಬೇಸತ್ತಿರುವ ಹನುಮಂತಮ್ಮ `ಬ್ಯಾಡ ಸಾರ್ ನಮ್ಮ ಬಾಳೆವು ಯಾರಿಗೂ ಬೇಡ~ ಎಂದು ದುಃಖಿಸುತ್ತಾಳೆ.

`ಎರಡು ವರ್ಸ್‌ದಿಂದ ಈ ತಗಡಿನ ಟೆಂಟ್‌ನಾಗ ನಮ್ಮ ಜೀವ ಉಳಿದಿರೋದೇ ಹೆಚ್ಚು~ ಎನ್ನುತ್ತಾಳೆ ಯತ್ನಟ್ಟಿ ಮಾರೆಮ್ಮ.

ಇದ್ದ ಪಾಯಖಾನಿ ಹಳ್ಳಕ್ಕೆ ಬಡುಕೊಂಡು ಹೋಗಿ ಎರಡು ವರ್ಷ ಆಯಿತು ಸಾರ್. ಅವಾಗಿಂದ ಸಂಜೆ ಸೂರ್ಯ ಮುಳುಗಿದ ಮೇಲೆ ಮತ್ತು ಸೂರ್ಯ ಹುಟ್ಟಕ್ಕಿಂತ ಮುಂಚೆ ಬೆಳಗ ಮುಂಜಾಲೆ ಅಕ್ಕಪಕ್ಕದ ಬತ್ತದ ಗದ್ದೆಗೆ ದೊಡ್ಡಿಗೆ ಹೋಗಬ್ಯಾಕ್ರಿ. ಈ ಕಷ್ಟನ ಯಾರ ಮುಂದೆ ಹೇಳ್ಕೊಬೇಕು. ಇನ್ನು ಮೈ ತೊಳಕಬೇಕಾದರೆ ಪ್ಲಾಸ್ಟಿಕ್ ತಾಡಪಾಲು ಚಾಟು ಮಾಡಿಕ್ಯಾಬೇಕು ಎಂದು ಕಾಲೊನಿ ಮಹಿಳೆಯರೆಲ್ಲರೂ ನೋವಿನಿಂದ ತಿಳಿಸುತ್ತಾರೆ.

ಸರ್ಕಾರ ಹಾಕಿಕೊಟ್ಟ ತಗಡಿನ ಟೆಂಟ್ ಕಿತ್ತು ಹೋಗಿದ್ದರಿಂದ ಹರಿಜನ ಅಮರಪ್ಪನ ಕುಟುಂಬ ಟೆಂಟ್ ತೊರೆದು ಜಿಂದಾಲ್‌ಗೆ ದುಡಿಯಲು ಗುಳೆ ಹೋಗಿದೆ. ಇನ್ನು ಹರಿಜನ ಲೇಸಿ ಹುಲಿಗೆಮ್ಮನ ಕುಟುಂಬಕ್ಕೆ ಟೆಂಟ್ ಹಾಕಿಕೊಡುವಲ್ಲಿ ಕಡೆಗಣಿಸಿದ್ದರಿಂದ ಹಳೇ ಅಂಗನವಾಡಿ ಕಟ್ಟಡದಲ್ಲಿ ನೆಲೆಯೂರಿದ್ದಾಳೆ.

ಎರಡು ವರ್ಷದ ಹಿಂದೆ ಹಾಕಿಕೊಟ್ಟ ಸುಮಾರು 10ಗಿ11 ಅಳತೆಯ ತಾತ್ಕಾಲಿಕ ತಗಡಿನ ಟೆಂಟ್‌ಗಳಲ್ಲಿ ಕೆಲವು ಹಾಳಾಗಿದ್ದು, ಇನ್ನು ಕೆಲವು ದುಃಸ್ಥಿತಿ ಯಲ್ಲಿವೆ. ಕೆಲ ಸಂತ್ರಸ್ತರು ಅವೇ ಟೆಂಟ್‌ಗಳನ್ನು ದುರಸ್ತಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇಂದಲ್ಲ ನಾಳೆ ಮಳೆ ಗಾಳಿಗೆ ಹಾರಿ ಹೋದರೆ ಹೇಗೆ ನಮ್ಮ ಬದುಕು ಮತ್ತೆ ಮೂರಾಬಟ್ಟೆ ಆಗುತ್ತದಲ್ಲ ಎನ್ನುವ ಚಿಂತೆಯಿಂದ ಕೆಲವರು ಕಾಲ ತಳ್ಳುತ್ತಿದ್ದಾರೆ.

ಭಾರಿ ಮಳೆ ಗಾಳಿ ಕಂಡು ಬರುತ್ತಿದ್ದಂತೆ ಮಹಿಳೆಯರು, ಮಕ್ಕಳು ಸಮುದಾಯ ಭವನ ಸೇರಿದರೆ, ಪುರುಷರು ಸರ್ಕಾರಿ ಪ್ರಾಥಮಿಕ ಶಾಲೆ ಸೇರುತ್ತಾರೆ.

ಸಿರುಗುಪ್ಯಾಗ (ಸಿರುಗುಪ್ಪ) ಸಾವಿರಾರು ಜನರಿಗೆ ಮೈನ್ಸ್‌ನೋರು (ಗಣಿ ಮಾಲಿಕರು) ಮನೆ ಕಟ್ಸಿ ಕೊಟ್ಟಾರಂತಾ. ಆದ್ರ ಸರ್ಕಾರದೋರು ಎಲ್ಡು (ಎರಡು) ವರ್ಷ ಆಯಿತು ನಮಗೆ ಮನೆ ಕಟ್ಸಿ ಕೊಡ್ತಿವಿ ಅಂತ ಹೇಳಿ. ಇವತ್ತಿನವರಿಗೂ ಇದ್ರ ಸುದ್ಧಿನೇ ಇಲ್ಲ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಇಡಬಾರದು ಓಟ್ಸು ಹಾಕ್ಸಿಕಂಡಾರು ಅಂತ ಇನ್ನು ಕೆಲವರು ಹತಾಶೆಯಿಂದ ತಿಳಿಸುತ್ತಾರೆ.

ಇಡೀ ಕಾಲೊನಿಗೆ ಒಂದೇ ಕೊಳಾಯಿ ಇದ್ದು, ವಿದ್ಯುತ್ ಇದ್ದಾಗ ಮಾತ್ರ ನೀರು ಪೂರೈಕೆಯಾಗುತ್ತದೆ. ಎರಡು ಕೈಪಂಪ್‌ನಲ್ಲಿ ಒಂದು ಮಾತ್ರ ಉಪಯೋಗಿ ಸುತ್ತಿದ್ದು, ಮತ್ತೊಂದು ಕೈಪಂಪ್ ದುರಸ್ತಿ ಮಾಡಿ ಎಂದು ಪಿಂಜಾರು ಇಸ್ಮಾಯಿಲ್ ಗ್ರಾ.ಪಂ ಬಿಲ್ ಕಲೆಕ್ಟರ್‌ಗೆ ಹೇಳುತ್ತಿದ್ದರೂ ಕಿವಿಗೊಟ್ಟಿಲ್ಲ ಎಂದು ಆರೋಪಿಸುತ್ತಾರೆ.

ಇಡೀ ಕಾಲೊನಿಗೆ ಒಂದೇ ಒಂದು ಸಿ.ಎಫ್.ಎಲ್ ಬಲ್ಬು ಅಳವಡಿಸಲಾಗಿದೆ. ಅಲ್ಲೊಂದು ಇಲ್ಲೊಂದು ಬುರಡೆ ಬಲ್ಬು ಇವೆ. ಸಣ್ಣ ಪುಟ್ಟ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸ್ಥಳೀಯ ಗ್ರಾ.ಪಂ ಆಡಳಿತ ಮಂಡಳಿ ತಾರತಮ್ಯ ಎಸಗುತ್ತಿದೆ ಎಂದು ಅಲ್ಲಿನ ನಿವಾಸಿಗಳು ದೂರುತ್ತಾರೆ.

ಈ ಕಾಲೊನಿಯಲ್ಲಿ ಪಿಂಜಾರು, ಹರಿಜನ, ಚಲವಾದಿ ಮಾದಿಗರು, ವಡ್ಡರ ಜನಾಂಗದವರು ವಾಸಿಸು ತ್ತಿದ್ದಾರೆ. ಎಲ್ಲರೂ ಕೃಷಿ ಕೂಲಿಯಿಂದ ಜೀವನ ಸವೆಸುತ್ತಿದ್ದು, ಕಳೆದ ಎರಡು ವರ್ಷಗಳಿಂದ ಸುಖ ಎನ್ನುವುದನ್ನು ಅರಿಯದೆ ಬದುಕು ಕಂಡುಕೊಳ್ಳಲು ನಿತ್ಯ ಹೆಣಗಾಡುತ್ತಿದ್ದಾರೆ. ಇಂದಲ್ಲ ನಾಳೆ ಶಾಶ್ವತ ಸೂರು ದೊರೆಯಬಹುದು ಎನ್ನುವ ನಿರೀಕ್ಷೆಯಲ್ಲಿ ಈ ಎಲ್ಲಾ ಬಡ ಕುಟುಂಬಗಳು ಕಾಲ ತಳ್ಳುತ್ತಿವೆ.
 
ಇದೇ ರೀತಿ ನಾರಿಹಳ್ಳ ವ್ಯಾಪ್ತಿಯ ಜೀರಿಗ ನೂರು, ನಂ.2 ಮುದ್ದಾಪುರ ಗ್ರಾಮ ಗಳಲ್ಲಿ ಸರ್ಕಾರ ಹಾಕಿಕೊಟ್ಟಿರುವ ತಾತ್ಕಾಲಿಕ ಟೆಂಟ್‌ನಲ್ಲಿ ಇನ್ನೂ ಹಲವಾರು ಕುಟುಂಬಗಳು `ಆಸರೆ~ಗಾಗಿ ಕಾಯುತ್ತಿವೆ. ಸುಗ್ಗೇನಹಳ್ಳಿ ಆಶ್ರಯ ಕಾಲೊನಿ ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸಲು ನಿವೇಶನ ಅವರ ಹೆಸರಿನಲ್ಲಿ ಇಲ್ಲದಿರುವುದೇ ಪ್ರಮುಖ ತಾಂತ್ರಿಕ ಕಾರಣ ಎಂದು ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಹೇಳುತ್ತಿದ್ದಾರೆ. ನಾರಿಹಳ್ಳ ಸಂತ್ರಸ್ತರು ಇನ್ನೆಷ್ಟು ವರ್ಷ ಕಾಯಬೇಕು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT