ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದಿಂದ ವಿನೂತನ ಯೋಜನೆ ಜಾರಿ

Last Updated 25 ಜನವರಿ 2012, 10:45 IST
ಅಕ್ಷರ ಗಾತ್ರ

ಗದಗ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿ ಜಾರಿಗೆ ತಂದಿರುವ `ತೊಟ್ಟಿಲ ಮಗು~ ಕಾರ್ಯಕ್ರಮವು ಅನಾಥ, ಪರಿತ್ಯಜಿಸಲ್ಪಟ್ಟ ಶಿಶುಗಳಿಗೆ ಆಸರೆಯಾಗಲಿದೆ ಎಂದು ಸಚಿವ ಸಿ.ಸಿ. ಪಾಟೀಲ ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಬಾಲಕಾರ್ಮಿಕ ಪದ್ಧತಿ ವಿರೋಧಿ ಆಂದೋಲನದ ಸಹಯೋಗದಲ್ಲಿ ಬಾಲ್ಯ ವಿವಾಹದ ವಿರುದ್ಧದ ಬೃಹತ್ ಪ್ರಚಾರ ಆಂದೋಲನದ ಸಮಾರೋಪ ಹಾಗೂ 2012ನೇ ಸಾಲಿನ ಹೆಣ್ಣು ಮಗುವಿನ ದಿನಾಚರಣೆ, ತೊಟ್ಟಿಲ ಮಗು  ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
 
ಗದುಗಿನಿಂದಲೇ ತೊಟ್ಟಿಲ ಮಗು ಯೋಜನೆಯು ಜಾರಿಗೆ ಬರುತ್ತಿದ್ದು, ಅನಾಥ ಮಕ್ಕಳಿಗೆ ಸಕಾಲದಲ್ಲಿ ರಕ್ಷಣೆ ನೀಡಿ ಪುನರ್‌ವಸತಿ ಕಲ್ಪಿಸುವುದು ಹಾಗೂ ಹೆಣ್ಣುಮಕ್ಕಳ ಲಿಂಗಾನುಪಾತವನ್ನು ಉತ್ತಮಪಡಿಸುವುದು ಇದರ ಉದ್ದೇಶವಾಗಿದೆ ಎಂದು ಅವರು ನುಡಿದರು. ಈ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಪ್ರತಿ ಜಿಲ್ಲೆಯಲ್ಲೂ ಮಕ್ಕಳ ರಕ್ಷಣಾ ಘಟಕ ಸ್ಥಾಪಿಸಲಾಗಿದೆ.

ಸ್ವಯಂ ಸೇವಾ ಸಂಸ್ಥೆಗಳ ನೆರವಿನಿಂದ ಪ್ರತಿ ಜಿಲ್ಲೆಯಲ್ಲೂ ಇಂತಹ 25 ತೊಟ್ಟಿಲುಗಳನ್ನು ಇಡಲಾಗುವುದು.  ಪ್ರತಿ ಮಗುವಿನ ಪೋಷಣೆ ತರುವಾಯ ಅವುಗಳ ಪೋಷಣೆಗಾಗಿ ಮಾನ್ಯತೆ ಪಡೆದ ವಿಶೇಷ ದತ್ತು ಸಂಸ್ಥೆಗಳು ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಕಾರ್ಯ ನಿರ್ವಹಿಸಲಿವೆ.

ಕಾನೂನಿನ ಅನ್ವಯ ಆಸಕ್ತರಿಗೆ ಮಕ್ಕಳನ್ನು ದತ್ತು ಕೊಡುವ ಅಂಶವನ್ನೂ ಈ ಯೋಜನೆ ಒಳಗೊಂಡಿದೆ. ಆದರೆ ಈ ಯೋಜನೆ ಮುಂದುವರಿಯಬಾರದು. ಸಮಾಜದ ಯಾವ ಮಗುವೂ ಅನಾಥವಾಗಬಾರದು. ಜನತೆ ಈ ಕುರಿತು ಎಚ್ಚೆತ್ತುಕೊಳ್ಳಬೇಕು ಎಂದು  ಎಂದು ಅವರು ತಿಳಿಸಿದರು.

ಮಕ್ಕಳು ಹೂವಿದ್ದಂತೆ. ಬಾಲ್ಯ ವಿವಾಹದ ಮೂಲಕ ಅವರ ಬದುಕನ್ನು ಚಿವುಟುವ ಕೆಲಸ ಮಾಡಬಾರದು. ಬದಲಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವತ್ತ ಪೋಷಕರು ಮನಸ್ಸು ಮಾಡಬೇಕು ಎಂದು ಸಲಹೆ ನೀಡಿದರು.

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ನೀನಾ ಪಿ. ನಾಯಕ ಮಾತನಾಡಿ, ಮಕ್ಕಳ ಹಕ್ಕುಗಳ ಸಂಬಂಧ ಆಯೋಗಕ್ಕೆ ಪ್ರತಿ ದಿನ 8-10 ದೂರುಗಳು ಬರುತ್ತಿದ್ದು, ಅದನ್ನು ಸಂಬಂಧಿಸಿದ ಇಲಾಖೆಗಳಿಗೆ ತಿಳಿಸುತ್ತಿದ್ದೇವೆ. ಅಧಿಕಾರಿಗಳು ಇದಕ್ಕೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ ಎಂದರು.

ಉತ್ತರ ಕರ್ನಾಟಕದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಹೆಚ್ಚಿನ ಅರಿವಿನ ಅಗತ್ಯ ಇದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಬೇಕಿದೆ ಎಂದು ನುಡಿದರು.

 ಗದುಗಿನಲ್ಲಿ ಈಚೆಗೆ ನಡೆದಿದ್ದ ಸಾಮೂಹಿಕ ವಿವಾಹದ ಸಂದರ್ಭ 69 ಅಪ್ರಾಪ್ತ ಜೋಡಿಗಳನ್ನು ಪತ್ತೆ ಮಾಡಲಾಗಿತ್ತು. ಇವರಲ್ಲಿ 20 ಜೋಡಿಗೆ ವೈದ್ಯರು ಹಾಗೂ 5 ಜೋಡಿಗೆ ಶಾಲೆಯ ಮುಖ್ಯಸ್ಥರು ವಯಸ್ಸಿನ ಧೃಡೀಕರಣ ಪತ್ರ ನೀಡಿದ್ದಾರೆ. ಪತ್ರ ಪಡೆಯುವ ಸಂದರ್ಭ ಒಬ್ಬ ಯುವತಿಯನ್ನು ಹಾಜರುಪಡಿಸಿ, ಅದೇ ಪತ್ರವನ್ನು ಬೇರೊಬ್ಬ ಬಾಲಕಿಯ ವಯಸ್ಸಿನ ದಾಖಲೆಯಾಗಿ ಸಲ್ಲಿಸುತ್ತಿರುವುದು ಕಂಡುಬಂದಿದೆ.
 
ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಹುಡುಗಿಯರ ಭಾವಚಿತ್ರವಿರುವ ಪತ್ರಗಳಿಗೆ ಮಾತ್ರ ಧೃಢೀಕರಣ ನೀಡುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಸವರಾಜೇಶ್ವರಿ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಉಪಾಧ್ಯಕ್ಷೆ ಶಾಂತವ್ವ ದಂಡಿನ, ಸದಸ್ಯರಾದ ಎಂ.ಎಸ್. ದೊಡ್ಡಗೌಡರ, ಶಾರದಾ ಹಿರೇಗೌಡರ, ತಾ.ಪಂ. ಉಪಾಧ್ಯಕ್ಷ ಅಂದಪ್ಪ ಉಮಚಗಿ, ಜಿಲ್ಲಾಧಿಕಾರಿ ಎಸ್.ಶಂಕರನಾರಾಯಣ, ಜಿ.ಪಂ. ಸಿಇಒ ವೀರಣ್ಣ ತುರಮರಿ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರವಿಕುಮಾರ ನಾಯಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಾದ ಉಷಾ ಪಟವಾರಿ, ಎಚ್.ಜೆ. ಚಂದ್ರಶೇಖರಯ್ಯ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್. ಕರೀಗೌಡರ, ನಗರಸಭೆ ಸದಸ್ಯೆ ಜಯಶ್ರೀ ಉಗಲಾಟದ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT