ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಸಮ್ಮೇಳನ ಮುಂದೂಡಿಕೆ: ಆಕ್ಷೇಪ

Last Updated 6 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ವಿಜಾಪುರ: ಇಲ್ಲಿ ನಡೆಸಲು ಉದ್ದೇಶಿಸಿರುವ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತೀವ್ರ ಬರದ ಹಿನ್ನೆಲೆಯಲ್ಲಿ ಮುಂದೂಡುವ ಸಾಧ್ಯತೆ ಇದೆ ಎಂಬ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರ ಹೇಳಿಕೆಗೆ ಕಸಾಪ ಜಿಲ್ಲಾ ಘಟಕ ಆಕ್ಷೇಪ ವ್ಯಕ್ತಪಡಿಸಿದೆ.

`ಜಿಲ್ಲೆಯಲ್ಲಿ ಬರ ಇರುವುದು ನಿಜ. ಹಿಂಗಾರಿ ಹಂಗಾಮಿನಲ್ಲಿ ಉತ್ತಮ ಮಳೆ ಆರಂಭಗೊಂಡರೆ ಈ ತಿಂಗಳು ಸಭೆ ಕರೆದು ಸ್ವಾಗತ ಸಮಿತಿ ರಚಿಸಲು ನಿರ್ಧರಿಸಿದ್ದೆವು. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೂ ಸಮಾಲೋಚನೆ ನಡೆಸಲಾಗಿದ್ದು, ಡಿಸೆಂಬರ್ ಇಲ್ಲವೆ ಜನವರಿ ತಿಂಗಳಲ್ಲಿ ಸಮ್ಮೇಳನ ನಡೆಸುವ ಉದ್ದೇಶ ನಮ್ಮದಾಗಿದೆ. ಈ ಹಂತದಲ್ಲಿ ಹಾಲಂಬಿ ಅವರು ಸಮ್ಮೇಳನ ಮುಂದೂಡಿಕೆಯ ಹೇಳಿಕೆ ನೀಡಿರುವುದು ಸಮಂಜಸವಲ್ಲ~ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಹೇಳಿದ್ದಾರೆ.

`ರಾಜಕೀಯ ಅಸ್ಥಿರತೆ, ಬರದ ಕಾರಣದಿಂದಾಗಿ ಸಮ್ಮೇಳನದ ತಯಾರಿ ಕಾರ್ಯಗಳಿಗೆ ಹಿನ್ನಡೆ ಯಾಗಿರುವುದು ನಿಜ. ಅಂದ ಮಾತ್ರಕ್ಕೆ ಈ ವರ್ಷ ಸಮ್ಮೇಳನವೇ ಬೇಡ ಎಂಬುದು ಸರಿಯಲ್ಲ. ವಿಜಾಪುರ ನಗರದಲ್ಲಿ 1923ರಲ್ಲಿ 9ನೇ ಸಮ್ಮೇಳನ ನಡೆದಿತ್ತು. ವಿಭಜಿತ ವಿಜಾಪುರ ಜಿಲ್ಲೆಯಲ್ಲಿ 89 ವರ್ಷಗಳ ನಂತರ ನಡೆಯಲಿರುವ ಈ ಸಮ್ಮೇಳನದ ಬಗ್ಗೆ ಜಿಲ್ಲೆಯ ಸಾಹಿತ್ಯ ಬಳಗ, ಜನತೆಯಲ್ಲಿ ಉತ್ಸುಕತೆ ಇದೆ. ಮಳೆಯಾಗಿ ಬರಗಾಲದ ಪರಿಸ್ಥಿತಿ ಸುಧಾರಿಸಿದ ತಕ್ಷಣ ಸಮ್ಮೇಳನದ ಸಿದ್ಧತೆ ಆರಂಭಿಸೋಣ ಎಂದು ಎಲ್ಲ ಹಿರಿಯ ಸಾಹಿತಿಗಳು ಹೇಳಿದ್ದರು.

ಕೇವಲ ಎರಡೇ ತಿಂಗಳಲ್ಲಿ ಸಿದ್ಧತೆ ಮಾಡಿಕೊಂಡು ಗಂಗಾವತಿ ಸಮ್ಮೇಳನ ಯಶಸ್ವಿಗೊಳಿಸಿದ ಉದಾಹರಣೆಯೂ ನಮ್ಮೆದುರಿಗಿದೆ. ಅಲ್ಪ ಅವಧಿಯಲ್ಲಿಯೂ ಸಮ್ಮೇಳನ ಯಶಸ್ವಿಗೊಳಿಸುವ ಶಕ್ತಿ ಜಿಲ್ಲೆಯ ಜನತೆಗಿದೆ~ ಎಂದರು.
`ಸಾಹಿತ್ಯ ಸಮ್ಮೇಳನ ಎಂಬುದು ಅಕ್ಷರ ಜಾತ್ರೆ. ಕನ್ನಡಿಗರನ್ನು-ಕನ್ನಡ ಮನಸ್ಸನ್ನು ಒಂದುಗೂಡಿಸುವ ಹಬ್ಬ.

ರಾಜ್ಯ ಸರ್ಕಾರವೇ ಈ ಸಮ್ಮೇಳನಗಳಿಗೆ ಪ್ರತಿ ವರ್ಷ ಅನುದಾನ ನೀಡುತ್ತಿದೆ. ಇಂತಹ ವ್ಯತಿರಿಕ್ತ ಹೇಳಿಕೆಗಳು ಬಂದರೆ ಅನುದಾನ ನೀಡುವಲ್ಲಿ ಸರ್ಕಾರವೂ ಹಿಂದೇಟು ಹಾಕುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT