ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ-ರಾಜ್ಯಪಾಲರ ಜಟಾಪಟಿ: ಜನಜೀವನ ಅಸ್ತವ್ಯಸ್ತ

Last Updated 22 ಜನವರಿ 2011, 19:30 IST
ಅಕ್ಷರ ಗಾತ್ರ

ರಾಮನಗರ: ಒಂದೆಡೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಇನ್ನೊಂದೆಡೆ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಎದುರು ಬದುರು; ಎರಡೂ ಕಡೆಯಿಂದ ಘೋಷಣೆ, ಧಿಕ್ಕಾರಗಳ ಕೂಗು; ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ವಾಕ್ ಸಮರ; ಕೈಕೈಮಿಲಾಯಿಸುವ ಹಂತಕ್ಕೂ ತಲುಪಿದ್ದ ಪರಿಸ್ಥಿತಿ; ವಿಕೋಪಕ್ಕೆ ಹೋಗದಂತೆ ತಡೆಯುವಲ್ಲಿ ಯಶಸ್ವಿಯಾದ ಪೊಲೀಸರು....

ಇದಿಷ್ಟು ನಡೆದದ್ದು ರಾಮನಗರದ ಐಜೂರು ವೃತ್ತದಲ್ಲಿ. ರಾಜ್ಯ ಬಿಜೆಪಿ ಶನಿವಾರ ಕರ್ನಾಟಕ ಬಂದ್‌ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ನಗರದಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಂದ್ ಅನ್ನು ಸಮರ್ಪಕವಾಗಿ ಆಚರಿಸಲು ಪಣ ತೊಟ್ಟಿದ್ದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದು ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು. ಬಂದ್ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಕಚೇರಿಯಿಂದ ಪಕ್ಷದ ಕಾರ್ಯಕರ್ತರು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿದರು.

ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ನಾಗರಾಜ್  ಇದರ ನೇತೃತ್ವವಹಿಸಿದ್ದರು. ಈ ಸಂದರ್ಭದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಅಂಗಡಿಗಳ ಮಾಲೀಕರಿಗೆ ಬಿಜೆಪಿಯವರು ಹೇಳುತ್ತಿದ್ದರು. ಕೆಲವೆಡೆ ಅಂಗಡಿ ಮಾಲೀಕರು ಸ್ವಯಂ ಪ್ರೇರಿತವಾಗಿ ತಮ್ಮ ಅಂಗಡಿಗಳನ್ನು ಮುಚ್ಚಿದರು.

ಐಜೂರು ವೃತ್ತದಲ್ಲಿ ಕಾದಿದ್ದ ಜೆಡಿಎಸ್: ಬಿಜೆಪಿ ಕಾರ್ಯಕರ್ತರು ಜಿಲ್ಲಾ ಕೇಂದ್ರದಲ್ಲಿ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿ ಬಂದ್ ಆಚರಿಸುತ್ತಿದ್ದಾರೆ ಎಂದು ತಿಳಿದ ಜೆಡಿಎಸ್ ಕಾರ್ಯಕರ್ತರು ಜಿಲ್ಲಾ ಅಧ್ಯಕ್ಷರೂ ಆದ ಶಾಸಕ ಕೆ.ರಾಜು ಅವರ ನೇತೃತ್ವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಿ ಐಜೂರಿನ ಮಯೂರ ಹೋಟೆಲ್ ಬಳಿ ಕಾಯುತ್ತಿದ್ದರು.

ಬಿಜೆಪಿ ಕಾರ್ಯಕರ್ತರ ಮೆರವಣಿಗೆ ಐಜೂರು ವೃತ್ತ ಪ್ರವೇಶಿಸುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಘೋಷಣೆಗಳನ್ನು ಕೂಗತೊಡಗಿದರು. ಇದರಿಂದ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ರಾಜ್ಯಪಾಲರು, ಕೇಂದ್ರ ಸರ್ಕಾರ ಹಾಗೂ ಜೆಡಿಎಸ್ ವಿರುದ್ಧ ಘೋಷಣೆಗಳನ್ನು ಕೂಗಿದರು.

ಎರಡೂ ಪಕ್ಷದವರು ತಮ್ಮ ಪಕ್ಷಗಳ ಬಾವುಟಗಳನ್ನು ಹಿಡಿದು ಒಬ್ಬರ ವಿರುದ್ಧ ಒಬ್ಬರು ಆರೋಪದ ಘೋಷಣೆಗಳನ್ನು ಮೊಳಗಿಸಿದರು. ಎರಡೂ ಕಡೆಯಲ್ಲಿ ವಾಕ್ ಸಮರ ಜೋರಾಗಿ ನಡೆಯಿತು. ಒಂದು ಹಂತದಲ್ಲಿ ಇದು ಕೈಕೈಮಿಲಾಯಿಸುವ ಹಂತಕ್ಕೂ ತಲುಪಿತ್ತು. ದೊಡ್ಡ ಸಂಖ್ಯೆಯಲ್ಲಿದ್ದ ಜೆಡಿಎಸ್ ಕಾರ್ಯಕರ್ತರು ಮುಂದೆ ಹೋಗುತ್ತಿದ್ದ ಬಿಜೆಪಿ ಕಾರ್ಯಕರ್ತರ ಹಿಂದೆ ಸಾಗಲಾರಂಭಿಸಿದರು.  ಬಿಜೆಪಿ ಕಾರ್ಯಕರ್ತರು ರಸ್ತೆ ಮಧ್ಯದಲ್ಲಿಯೇ ನಿಂತು ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಕೂಗಿದರು.

ಬೆಂಬಿಡದ ಜೆಡಿಎಸ್ ಕಾರ್ಯಕರ್ತರು: ಇದಕ್ಕೆ ಪ್ರತಿಯಾಗಿ ಜೆಡಿಎಸ್‌ನಿಂದ ಪ್ರತಿ ಘೋಷಣೆಗಳು ಮೊಳಗಿದವು. ಎರಡೂ ಪಕ್ಷದ ಕಾರ್ಯಕರ್ತರನ್ನು ತಡೆಯಲು ಪೊಲೀಸರು ಹೆಣಗಬೇಕಾಯಿತು. ಜೆಡಿಎಸ್ ಕಾರ್ಯಕರ್ತರನ್ನು ವೃತ್ತದ ಸಿಗ್ನಲ್ ತನಕ ಎರಡು- ಮೂರು ಬಾರಿ ಪೊಲೀಸರು ಹಿಂದಕ್ಕೆ ಕಳುಹಿಸಿದರು. ಆದರೆ ಅವರು ಪುನಃ ಬಿಜೆಪಿ ಕಾರ್ಯಕರ್ತರ ಹಿಂದೆ ಜೆಡಿಎಸ್ ಬಾವುಟಗಳನ್ನು ಹಿಡಿದು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಸಾಗತೊಡಗಿದರು.

ಎರಡೂ ಪಕ್ಷದವರ ನೂಕು ನುಗ್ಗಲಿನಲ್ಲಿ ಬಿಜೆಪಿಯ ಒಂದಿಬ್ಬರು ಕಾರ್ಯಕರ್ತರಿಗೆ ಸಣ್ಣ ಪ್ರಮಾಣದಲ್ಲಿ ಗಾಯಗಳಾಗಿವೆ. ಈ ಎಲ್ಲ ಘಟನಾವಳಿಗಳಿಂದ ಬೆಂಗಳೂರು- ಮೈಸೂರು ರಸ್ತೆಯಲ್ಲಿ ಸುಮಾರು 30 ನಿಮಿಷ ರಸ್ತೆ ಸಂಚಾರಕ್ಕೆ ತೀವ್ರ ತೊಂದರೆ ಎದುರಾಗಿತ್ತು. ಸಾಕಷ್ಟು ವಾಹನಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂದಿತು. ಕೆಲ ವಾಹನಗಳ ಸವಾರರು ಆತಂಕದಲ್ಲಿ ವಾಹನ ಚಲಿಸುತ್ತಿದ್ದರು.

ಜಿಲ್ಲಾಧಿಕಾರಿಗೆ ಮನವಿ: ರಸ್ತೆಯುದ್ದಕ್ಕೂ ಜೆಡಿಎಸ್ ಕಾರ್ಯಕರ್ತರ ವಿರೋಧದ ನಡುವೆಯೂ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ತಲುಪಿದರು. ಅಲ್ಲಿ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ವಿರುದ್ಧ ಘೋಷಣೆಗಳನ್ನು ಕೂಗಿದರು. ರಾಜ್ಯಪಾಲರ ವರ್ತನೆಯನ್ನು ಖಂಡಿಸಿದರು. ಅಲ್ಲದೆ ರಾಜ್ಯಪಾಲರನ್ನು ವಾಪಸು ಕರೆಸಿಕೊಳ್ಳುವಂತೆ ರಾಷ್ಟ್ರಪತಿ ಅವರನ್ನು ಒತ್ತಾಯಿಸಿದರು. ಈ ಸಂಬಂಧ ಜಿಲ್ಲಾಧಿಕಾರಿ ಜಿ.ಎಲ್.ಚಂದ್ರಶೇಖರಯ್ಯ ಅವರಿಗೆ ಮನವಿ ಪ್ರತಿಯನ್ನು ನೀಡಿದರು.ಬಮೂಲ್ ನಿರ್ದೇಶಕ ಪಿ.ನಾಗರಾಜು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಶೇಷಾದ್ರಿ, ರಾ-ಚ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ನಾಗರಾಜು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಜೆಡಿಎಸ್ ವಿರುದ್ಧ ಬಿಜೆಪಿ ಕಿಡಿ: ಶಾಂತಿಯುತವಾಗಿ ಬಂದ್ ಮಾಡಲು ಜೆಡಿಎಸ್ ಕಾರ್ಯಕರ್ತರು ಅಡ್ಡಿ ಮಾಡಿದರು. ಅಲ್ಲದೆ ಹೇಡಿಗಳಂತೆ ಹಿಂದಿನಿಂದ ನಮ್ಮ ಕಾರ್ಯಕರ್ತರ ಮೇಲೆ ಬಂದು ದಾಳಿ ನಡೆಸಿದರು ಎಂದು ಬಿಜೆಪಿ ಮುಖಂಡ ಎಸ್.ಆರ್.ನಾಗರಾಜು ಕಿಡಿಕಾರಿದರು. ಜೆಡಿಎಸ್ ನಾಯಕರ ಅಣತಿಯಂತೆ ಪೊಲೀಸರು ಕಾರ್ಯ ನಿರ್ವಹಿಸಿದ್ದಾರೆ. ಜೆಡಿಎಸ್‌ನವರು ನಮ್ಮ ಪ್ರತಿಭಟನೆಯನ್ನು ತಡೆದು, ನಮ್ಮ ಮೇಲೆ ದಾಳಿ ನಡೆಸಿದರೂ ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT