ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯಕಾಂತಿಗೆ `ಕೋರಿಹುಳು' ಕಾಟ

Last Updated 4 ಜನವರಿ 2013, 10:18 IST
ಅಕ್ಷರ ಗಾತ್ರ

ಗಜೇಂದ್ರಗಡ: ಸೂರ್ಯಕಾಂತಿ ಬೆಳೆ `ಕೋರಿ ಹುಳು' ಬಾಧೆಗೆ ಸಿಲುಕಿದ್ದು ರೈತರು ಕೈಕೈ ಹಿಸುಕಿಕೊಳ್ಳುವಂತಾಗಿದೆ.

ಮಳೆಯ ಕೊರತೆಯ ನಡುವೆಯೂ ಈ ಭಾಗದಲ್ಲಿ ರೈತರು ಹೆಚ್ಚಾಗಿ ಸೂರ್ಯಕಾಂತಿ ಬೆಳೆದಿದ್ದರು. ತೇವಾಂಶದ ವಾತಾವರಣ ಇದ್ದ ಪರಿಣಾಮ ಗಿಡವೂ ಚೆನ್ನಾಗಿ ಬೆಳೆದು ಹೊಲ ಹಸುರಿನಿಂದ ಕಂಗೊಳಿಸುತ್ತಿತ್ತು. ಆದರೆ, `ನೀಲಂ ಚಂಡಮಾರುತ'ದ ನಂತರದ ದಿನಗಳಲ್ಲಿ `ಕೋರಿ ಹುಳು' ಕೀಟ ಬಾಧೆ ಸಿಲುಕಿದ ಸೂರ್ಯಕಾಂತಿ ಬೆಳೆ ಈಗ ಎಲೆ ಮತ್ತು ಹೂವು ಇಲ್ಲದೇ ಒಣಗತೊಡಗಿದೆ.

ಸೂರ್ಯಕಾಂತಿ ಬೆಳೆಯಲು ಎಕರೆಗೆ ಸುಮಾರು 4,000 ವೆಚ್ಚವಾಗುತ್ತದೆ. ಉತ್ತಮ ಫಸಲು ದೊರೆತರೆ  ಎಕರೆಗೆ  ಸುಮಾರು 4 ಕ್ವಿಂಟಲ್ ಇಳುವರಿ ದೊರೆಯುತ್ತದೆ. ಆದರೆ ಈ ಬಾರಿ ತೇವಾಂಶದ ಕೊರತೆಯಿಂದಾಗಿ ಇಳುವರಿಯೂ ಕುಂಠಿತವಾಗಿದ್ದು ಖರ್ಚು ಮಾಡಿರುವ ಹಣವೂ ಕೈಗೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತ ಹನುಂತಪ್ಪ ಅಜ್ಮೀರ ನೊಂದು ನುಡಿದರು.

ನಿಯಂತ್ರಣಕ್ಕೆ ಬಾರದ ಕೀಟಬಾಧೆ: ಸೂರ್ಯಕಾಂತಿ ಬೆಳೆಯನ್ನು ವ್ಯಾಪಿಸಿರುವ ಕೋರಿ ಹುಳು ಬಾಧೆ ನಿಯಂತ್ರಣಕ್ಕೆ ರೈತರು  ಕ್ರಿಮಿನಾಶಕ ಸಿಂಪಡಿಸಿದ್ದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಕೋರಿ ಹುಳು ಬಾಧೆಯಿಂದ ಆಗಿರುವ  ನಷ್ಟವನ್ನು ಅಂದಾಜು ಮಾಡಿ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಸರ್ಕಾರವನ್ನು  ಒತ್ತಾಯಿಸಿದರು.

ಪರಿಹಾರ ಇಲ್ಲ
ಕೋರಿ ಹುಳು ಬಾಧೆ ಕಾಣಿಸಿಕೊಂಡ ತಕ್ಷಣ ಪ್ರೋಪೋನಾಫಾಸ್ ರಾಸಾಯನಿಕ ಕ್ರಿಮಿನಾಶಕ ಸಿಂಪಡಿಸಬೇಕು. ಕೀಟದ ಮೇಲೆ ರೋಮಗಳು ಬೆಳೆದಿದ್ದರೆ, ಯಾವುದೇ ಕ್ರಿಮಿನಾಶಕ ಸಿಂಪಡಿಸಿದರೂ ನಿಯಂತ್ರಣಕ್ಕೆ ಬರುವುದಿಲ್ಲ. ಹುಳು ದೊಡ್ಡದಾಗಿದ್ದರೆ, ಹುಳುಗಳನ್ನು ಹಿಡಿದು ಸೀಮೆಎಣ್ಣೆ ಡಬ್ಬಿಯಲ್ಲಿ ಹಾಕಿ ಸಾಯಿಸಬೇಕು. ಹುಳು ಸಾಯಿಸಲು ಬೇರೆ ಮಾರ್ಗವಿಲ್ಲ. ಜೊತೆಗೆ ಕೋರಿ ಹುಳು ಬಾಧೆಗೆ ಸಿಲುಕಿರುವ ಸೂರ್ಯಕಾಂತಿ ಬೆಳೆಗೆ ಪರಿಹಾರ ನೀಡಲಾಗದು ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್. ಎ. ಸೂಡಿಶೆಟ್ಟರ್ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT