ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾಪಡೆಗಳ ವಿಶೇಷಾಧಿಕಾರ ಕಾಯ್ದೆ : ರಾಜಕೀಯ ಪಕ್ಷಗಳ ವಿಭಿನ್ನ ನಿಲುವು

Last Updated 17 ಜನವರಿ 2012, 19:30 IST
ಅಕ್ಷರ ಗಾತ್ರ

ಇಂಫಾಲ (ಪಿಟಿಐ): ಬಂಡುಕೋರರನ್ನು ನಿಯಂತ್ರಿಸಲು ಮಣಿಪುರದಲ್ಲಿ ಹೇರಲಾಗಿದ್ದ ಸಶಸ್ತ್ರಪಡೆಗಳ ವಿಶೇಷಾಧಿಕಾರ ಕಾಯ್ದೆ ಮೂರು ದಶಕಗಳ ನಂತರವೂ ಆ ರಾಜ್ಯದಲ್ಲಿ ಚುನಾವಣಾ ವಿಷಯವಾಗಿದೆ.

ಮಣಿಪುರ ಈ ತಿಂಗಳ 28ರಂದು ಚುನಾವಣೆ ಎದುರಿಸುತ್ತಿದ್ದು, ವಿವಿಧ ರಾಜಕೀಯ ಪಕ್ಷಗಳು ಈ ವಿಚಾರದಲ್ಲಿ ವಿಭಿನ್ನ ನಿಲುವು ತಳೆದಿವೆ. 1980ರ ಸೆಪ್ಟೆಂಬರ್‌ನಲ್ಲಿ ಬಂಡುಕೋರರ ಹಾವಳಿ ತೀವ್ರವಾಗಿದ್ದಾಗ ಈ ಕಾಯ್ದೆ ಮೂಲಕ ಪ್ರತ್ಯೇಕತಾವಾದಿಗಳನ್ನು ಮಣಿಸಲು ಸೇನಾ ಪಡೆಗೆ ವಿಶೇಷ ಅಧಿಕಾರ ನೀಡಲಾಗಿತ್ತು.

ಬಿಜೆಪಿ, ಎನ್‌ಸಿಪಿಯಂತಹ ಪಕ್ಷಗಳು `ಅಫ್ಸಾ~ ತೆಗೆದು ಹಾಕುವಂತಹ ಸನ್ನಿವೇಶ ನಿರ್ಮಾಣ ಮಾಡಬೇಕು ಎಂದು ಪ್ರತಿಪಾದಿಸುತ್ತಿವೆ. ಸಿಪಿಎಂ ಮತ್ತು ಮಣಿಪುರದ ಅತ್ಯಂತ ಹಳೆಯ ಪ್ರಾದೇಶಿಕ ಪಕ್ಷವಾದ ಮಣಿಪುರ ಪೀಪಲ್ಸ್ ಪಾರ್ಟಿಗಳು ಕಾಯ್ದೆಯನ್ನು ಸಂಪೂರ್ಣವಾಗಿ ರದ್ದುಮಾಡಬೇಕು ಎಂದು ಹೇಳುತ್ತಿವೆ.

ಮಣಿಪುರದಲ್ಲಿ ಆಡಳಿತಾರೂಢ ಪಕ್ಷವಾದ ಕಾಂಗ್ರೆಸ್‌ನ ನಾಯಕರು ಮಾತ್ರ ಈ ವಿಚಾರದಲ್ಲಿ ತುಟಿ ಹೊಲಿದುಕೊಂಡಂತೆ ವರ್ತಿಸುತ್ತಿದ್ದಾರೆ. ಚುನಾವಣಾ ಪ್ರಣಾಳಿಕೆಗೆ ಸಂಬಂಧಿಸಿ ಕೇಂದ್ರ ನಾಯಕರೊಂದಿಗೆ ಚರ್ಚೆ ನಡೆಸುತ್ತಿರುವುದಾಗಿ ಅವರು ಹೇಳುತ್ತಿದ್ದಾರೆ.

`ಅಫ್ಸಾ~ ರದ್ದು ಮಾಡುವಂತೆ ಮಣಿಪುರದ ಸಾಮಾಜಿಕ ಕಾರ್ಯಕರ್ತೆ ಇರೋಮ್ ಶರ್ಮಿಳಾ ಕಳೆದ 10 ವರ್ಷಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT