ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಾನಕ್ಕಾಗಿ ಕಿತ್ತಾಟ: ಶ್ರೀರಾಮುಲು ಕಿಡಿ

Last Updated 21 ಜುಲೈ 2012, 6:10 IST
ಅಕ್ಷರ ಗಾತ್ರ

ಗದಗ: ರಾಜ್ಯದಲ್ಲಿ ಬರಗಾಲದಿಂದ ಜನರು ತೊಂದರೆ ಅನುಭವಿಸುತ್ತಿದ್ದರೆ ಸಚಿವ ಸ್ಥಾನಕ್ಕಾಗಿ ಕಿತ್ತಾಟ ನಡೆಯುತ್ತಿದೆ ಎಂದು ಬಿಎಸ್‌ಆರ್ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ಬಿ.ಶ್ರೀರಾಮುಲು ಕಿಡಿ ಕಾರಿದರು.

ಗದುಗಿನಲ್ಲಿ ಶುಕ್ರವಾರ ತೋಂಟದಾರ್ಯ ಮಠದ ಡಾ.ಸಿದ್ದಲಿಂಗ ಸ್ವಾಮೀಜಿ ಅವರನ್ನು ಸನ್ಮಾನಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರಕ್ಕೆ ಜನರು ಮತ್ತು ರೈತರ ಬಗ್ಗೆ ಕಾಳಜಿ ಇಲ್ಲ. ಮುಂದಿನ ದಿನಗಳಲ್ಲಿ ಜನರು ಸರ್ಕಾರವನ್ನು ಮರೆಯುತ್ತಾರೆ. ಮುಖ್ಯಮಂತ್ರಿ ಶೆಟ್ಟರ್ ಎದುರು ಅನೇಕ ಸವಾಲು ಇವೆ. ಬರ ನಿರ್ವಹಣೆ ಕಾಮಗಾರಿಯನ್ನು ಸೂಕ್ತವಾಗಿ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

54 ದಿನಗಳ ಪಾದಯಾತ್ರೆಯಲ್ಲಿ ರಾಜ್ಯದ ಜನತೆ ಮತ್ತು ರೈತರ ಸಮಸ್ಯೆಗಳನ್ನು ಅಲಿಸಿದ್ದೇನೆ. ಆತ್ಮಹತ್ಯೆ ಮತ್ತು ರೈತರು ವಲಸೆ ಹೋಗುವುದನ್ನು ತಡೆಯಬೇಕು. ಈ ಬಗ್ಗೆ ರಾಜ್ಯಪಾಲರಿಗೆ ವರದಿಯನ್ನು ಸಲ್ಲಿಸಿದ್ದೇನೆ. ಪ್ರಧಾನ ಮಂತ್ರಿ ಅವರೊಂದಿಗೆ ಚರ್ಚಿಸುವ ಜತೆಗೆ ಮುಖ್ಯಮಂತ್ರಿಗೂ ನಿರ್ದೇಶನ ನೀಡುವುದಾಗಿ ಭಾರದ್ವಾಜ್ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ರಾಜ್ಯ ಸರ್ಕಾರ ಸಲ್ಲಿಸಿರುವ ರೂ. 4,500 ಕೋಟಿ ಬರ ಪರಿಹಾರ ಪ್ರಸ್ತಾವಕ್ಕೆ ಕೇಂದ್ರ ರೂ. 300 ಕೋಟಿ ಬಿಡುಗಡೆ ಮಾಡಿದೆ. ಕೇಂದ್ರ ಮಲತಾಯಿ ಧೋರಣೆ ಅನುಸುರಿಸುತ್ತಿದೆ. ವಿರೋಧ ಪಕ್ಷವು ಇದರಲ್ಲಿ ವಿಫಲವಾಗಿದೆ. ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇದ್ದರೂ ಅನುದಾನ ಬಿಡುಗಡೆ ಮಾಡಿಸಲು ಸಾಧ್ಯವಾಗಿಲ್ಲ.

ಕೇಂದ್ರವನ್ನು ಪ್ರತಿನಿಧಿಸುವ ರಾಜ್ಯದ ನಾಯಕರು ಕೂಡಲೇ ಕೇಂದ್ರದ ಮೇಲೆ ಒತ್ತಡ ಹೇರಿ ರಾಜ್ಯದ ಪಾಲಿನ ಹಣವನ್ನು ಬಿಡುಗಡೆ ಮಾಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜನತೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

 ಬೈಕ್ ರ‌್ಯಾಲಿ: ಇದಕ್ಕೂ ಮುನ್ನ ಬಿಎಸ್‌ಆರ್ ಪಕ್ಷದ ಮುಖಂಡರು ನಗರದಲ್ಲಿ ಬೈಕ್ ರ‌್ಯಾಲಿ ನಡೆಸಿದರು. ಶ್ರೀರಾಮುಲು ಅವರನ್ನು ತೆರೆದ ಜೀಪಿನಲ್ಲಿ ಕರೆದೊಯ್ಯಲಾಯಿತು.

ಕಿತ್ತೂರು ರಾಣಿ ಚನ್ನಮ್ಮ, ಕೆ.ಎಚ್.ಪಾಟೀಲ, ಹುಯಿಲುಗೋಳ ನಾರಾಯಣ, ಪುಟ್ಟರಾಜ ಗವಾಯಿ, ಗಾಂಧೀಜಿ, ಅಂಬೇಡ್ಕರ್ ಪ್ರತಿಮೆಗೆ ಶ್ರೀರಾಮುಲು ಮಾಲರ್ಪಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT