ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿನ ದರ ರೂ.2.60 ಹೆಚ್ಚಳ

Last Updated 13 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ಹಾಗೂ ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ತನ್ನ ವ್ಯಾಪ್ತಿಯಲ್ಲಿನ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 2.60 ರೂಪಾಯಿ ನೀಡುವ ಮೂಲಕ ಸಂಕ್ರಾಂತಿ ಉಡುಗೊರೆ ನೀಡಿದೆ. ಇದು 16ರಿಂದ ಜಾರಿಯಾಗಲಿದೆ.

ನಗರದ ಡಾ.ಎಂ.ಎಚ್. ಮರಿಗೌಡ ರಸ್ತೆಯಲ್ಲಿರುವ ಒಕ್ಕೂಟದ ಆವರಣದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ದಿಬ್ಬೂರು ಜಯಣ್ಣ, `ಹಾಲು ಉತ್ಪಾದಕರಿಗೆ ಸಂಕ್ರಾಂತಿ ಉಡುಗೊರೆಯಾಗಿ ಪ್ರತಿ ಲೀಟರ್‌ಗೆ 2.60 ರೂಪಾಯಿ ನೀಡಲು ಆಡಳಿತ ಮಂಡಲಿ ಸಭೆಯಲ್ಲಿ ನಿರ್ಧರಿಸಲಾಗಿದೆ~ ಎಂದರು.

`ಪಶು ಆಹಾರದ ಬೆಲೆ ಏರಿಕೆಯಾಗಿರುವುದರಿಂದ ರೈತರಿಗೆ ತೀವ್ರ ಹೊರೆಯಾಗುತ್ತಿತ್ತು. ಇದೀಗ ಹಾಲಿನ ದರ ಪ್ರತಿ ಲೀಟರ್‌ಗೆ ಮೂರು ರೂಪಾಯಿ ಹೆಚ್ಚಳ ಮಾಡಿರುವುದರಿಂದ ರೈತರಿಗೆ ಅನುಕೂಲವಾಗಲಿದೆ~ ಎಂದರು.

ಒಕ್ಕೂಟದ ನಿರ್ದೇಶಕ ಮಂಜುನಾಥ್, `ಹಾಲಿನ ದರದಲ್ಲಿ ಏರಿಕೆಯಾಗಿರುವ ಮೂರು ರೂಪಾಯಿಯಲ್ಲಿ 2.60 ರೂಪಾಯಿಯನ್ನು ರೈತರಿಗೆ ನೀಡಲಾಗುವುದು. ಪೆಟ್ರೋಲ್, ಡೀಸೆಲ್ ದರ ಏರಿಕೆ, ಸಂಸ್ಕರಣೆ ಶುಲ್ಕ, ಪ್ಯಾಕಿಂಗ್ ಶುಲ್ಕ ಹೆಚ್ಚಳ, ನೌಕರರು- ಅಧಿಕಾರಿಗಳಿಗೆ ಬಡ್ತಿ ನೀಡಿರುವುದರಿಂದ ಉಳಿದ 40 ಪೈಸೆಯನ್ನು ಆಡಳಿತ ವೆಚ್ಚಗಳಿಗೆ ಬಳಸಲಾಗುವುದು~ ಎಂದರು.

`ಬೆಂಗಳೂರು ಡೇರಿ ವತಿಯಿಂದ ಈವರೆಗೆ ರೈತರಿಗೆ ಪ್ರತಿ ಲೀಟರ್ ಹಾಲಿಗೆ 18 ರೂಪಾಯಿ ನೀಡಲಾಗುತ್ತಿತ್ತು. ಇದೇ 16ರ ನಂತರ ಪ್ರತಿ ಲೀಟರ್‌ಗೆ ರೂ 20.60ನೀಡಲಾಗುವುದು.
ತುಮಕೂರಿನಲ್ಲಿ ರೂ 20, ಕೋಲಾರದಲ್ಲಿ ರೂ 20.40, ಮಂಡ್ಯದಲ್ಲಿ 20.50 ರೂಪಾಯಿ ನೀಡಲಾಗುತ್ತಿದೆ~ ಎಂದು ಹೇಳಿದರು.

10.25 ಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆ: ಬೆಂಗಳೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ವಿ. ಲಕ್ಷ್ಮಣರೆಡ್ಡಿ, `ಒಕ್ಕೂಟಕ್ಕೆ ನಿತ್ಯ ಸರಾಸರಿ 9.50 ಲಕ್ಷ ಕೆ.ಜಿ. ಹಾಲು ಪೂರೈಕೆಯಾಗುತ್ತಿದೆ. ಕಳೆದ ಸಾಲಿಗೆ ಹೋಲಿಸಿದರೆ ಸದ್ಯ ಒಂದು ಲಕ್ಷ ಕೆ.ಜಿ.ಗಿಂತಲೂ ಹೆಚ್ಚು ಹಾಲು ಸರಬರಾಜಾಗುತ್ತಿದೆ. ಮುಂದಿನ ಹಣಕಾಸು ವರ್ಷದಲ್ಲಿ 10.25 ಲಕ್ಷ ಕೆ.ಜಿ. ಹಾಲು ಪೂರೈಕೆಯಾಗುವ ನಿರೀಕ್ಷೆ ಇದೆ~ ಎಂದರು.

`ಹಾಲು ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಹೊಸಕೋಟೆಯಲ್ಲಿ 24 ಕೋಟಿ ರೂಪಾಯಿ ವೆಚ್ಚದಲ್ಲಿ ಶೀತಲ ಕೇಂದ್ರ ನಿರ್ಮಾಣ ಮಾಡಲಾಗುವುದು. ಹಾಗೆಯೇ ಆನೇಕಲ್‌ನಲ್ಲಿ 10 ಕೋಟಿ ರೂಪಾಯಿ ವೆಚ್ಚದಲ್ಲಿ ಹಾಲು ಸಂಸ್ಕರಣೆ ಮತ್ತು ಪ್ಯಾಕಿಂಗ್ ಘಟಕ ನಿರ್ಮಿಸಲಾಗುವುದು~ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT