ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಬಾಗಿಲಿನಿಂದ ಪುರೋಹಿತಶಾಹಿ ವ್ಯವಸ್ಥೆ

Last Updated 22 ಅಕ್ಟೋಬರ್ 2012, 3:30 IST
ಅಕ್ಷರ ಗಾತ್ರ

ಚಿತ್ರದುರ್ಗ: ಹಿಂಬಾಗಿನಿಂದ ಬರಲು ಪ್ರಯತ್ನಿಸುತ್ತಿರುವ ಪುರೋಹಿತಶಾಹಿ ವ್ಯವಸ್ಥೆಯನ್ನು ಸಂಪೂರ್ಣ ನಾಶ ಮಾಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅಭಿಪ್ರಾಯಪಟ್ಟರು.

ನಗರದ ಮುರುಘಾಮಠದ ಆವರಣದ ಅನುಭವಮಂಟಪದ ಶರಣ ಹರಳಯ್ಯ ಮಧುವಯ್ಯ ವೇದಿಕೆಯಲ್ಲಿ ಭಾನುವಾರ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ನಡೆದ ಬಸವತತ್ವ ಸಮಾವೇಶದಲ್ಲಿ  ಶಿವಮೂರ್ತಿ ಮುರುಘಾ ಶರಣರ ವಿರಚಿತ `ಸಮಕಾಲೀನ~ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಪುರೋಹಿತಶಾಹಿ ವ್ಯವಸ್ಥೆ ಇಂದಿನ ಸಮಾಜದಲ್ಲಿ ಮುಗಿಲೆತ್ತರ ತಲುಪಿದೆ. ಎಲ್ಲ ಟಿವಿ ವಾಹಿನಿಗಳು ಪುರೋಹಿತಶಾಹಿ ಆಚರಣೆಗಳನ್ನೇ ನಿತ್ಯ ಪ್ರದರ್ಶಿಸುತ್ತಿವೆ. ಜನರು ಅದನ್ನೇ ನಂಬುತ್ತಿದ್ದಾರೆ. ವಿದ್ಯಾವಂತರೇ ಮೌಢ್ಯಗಳನ್ನು ನಂಬುತ್ತಿರುವುದು ದುರದೃಷ್ಟಕರ. ಬಸವಣ್ಣ ಅವರು ಪುರೋಹಿತಶಾಹಿ ವ್ಯವಸ್ಥೆಯನ್ನು ವಿರೋಧಿಸುತ್ತಿದ್ದರು. ಆದರೆ ಅವರ ತತ್ವಕ್ಕೆ ಬೆಲೆ ಇಲ್ಲದಂತೆ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದರು. 

ವಿದ್ಯಾವಂತರೇ ಕಂದಚಾರಕ್ಕೆ ಮಾರು ಹೋಗಿದ್ದು, ಸಮಾಜದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಸಮಾನತೆ ಕಂಡಾಗ ಮಾತ್ರ ದೇಶದಲ್ಲಿ ಸಮಾನತೆ ಕಾಣಲು ಸಾಧ್ಯ. ಸಮಾನತೆಯ ಬಗ್ಗೆ ಎಲ್ಲರೂ ಭಾಷಣಗಳಲ್ಲಿ, ಬಾಯಿ ಮಾತಿನಲ್ಲಿ, ಪ್ರವಚನಗಳಲ್ಲಿ, ಧರ್ಮಗಳ ಮೂಲಕ ಜಾತ್ಯತೀತ ತತ್ವ ಪ್ರತಿಪಾದಿಸುತ್ತೇನೆ ಎಂದು ಹೇಳುತ್ತಾರೆಯೇ ಹೊರತು ಕೃತಿಗೆ ತರುವ ಪ್ರಯತ್ನ ಯಾರು ಮಾಡಲು ಮುಂದಾಗಿಲ್ಲ.

12ನೇ ಶತಮಾನದಲ್ಲೇ ಬಸವಣ್ಣ ಅಂತರ್ಜಾತಿ ವಿವಾಹ ಮಾಡಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರಿದ್ದಾರೆ. ಆದರೆ ಸಮಾಜದಲ್ಲಿ ಅನೇಕರು ಇದಕ್ಕೆ ತದ್ವಿರುದ್ದರಾಗಿದ್ದಾರೆ. ಮೇಲ್ನೋಟಕ್ಕೆ ಮಾತ್ರ ಬಸವತತ್ವ ಪ್ರತಿಪಾದನೆ ಎನ್ನುವಂತಾಗಿದೆ ಎಂದು ನುಡಿದರು.ಬಸವಣ್ಣ ಅವರ ಸಮಾನತೆ ವಿಚಾರದಲ್ಲಿ 850 ವರ್ಷ ಕಳೆದರೂ ಸಹ ಇಂದಿಗೂ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಯಾಗಿಲ್ಲ. ಶೋಷಣೆ, ದೌರ್ಜನ್ಯ, ಅತ್ಯಾಚಾರ, ಅಸ್ಪೃಶ್ಯತೆ ಇಂದು ಕೂಡ ಉಳಿದಿರುವುದು ವಿಷಾದನೀಯ ಸಂಗತಿ ಎಂದರು.

ಭ್ರಷ್ಟಾಚಾರಗಿಂತ ಜಾತಿ ಅಪಾಯಕಾರಿ. ಆರ್ಥಿಕ, ಸಾಮಾಜಿಕ ಅಸಮಾನತೆಗಳು ತೊಲಗುವವರೆಗೂ ಜಾತಿ ಎನ್ನುವ ವಿಷಬೀಜ ತೊಲಗುವುದಿಲ್ಲ. ಇವನಾರವ, ಇವನಾರವ, ಇವ ನಮ್ಮವ, ಇವ ನಮ್ಮವ ಎಂದು ಹೇಳುತ್ತಲೇ ಜಾತಿ ಪಾಲಿಸುತ್ತೇವೆ. ವಿದ್ಯಾವಂತರು ಜಾತಿ ಪಾಲಿಸುತ್ತಿರುವುದು ಅಪಾಯಕಾರಿಯಾಗಿದೆ ಇದು ಹೋಗಲಾಡಿಸಲು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಸಮೃದ್ಧರಾಗಬೇಕು ಎಂದು ನುಡಿದರು.

ಸಹಕಾರ ಸಚಿವ ಬಿ.ಜೆ. ಪುಟ್ಟಸ್ವಾಮಿ ಮಾತನಾಡಿ, ಲಿಂಗಾಯತರಲ್ಲಿ 43 ಉಪಜಾತಿಗಳಿವೆ. ಬಸವಣ್ಣನ ಅನುಯಾಯಿಗಳೇ ತಮ್ಮ ಒಳಜಾತಿಗಳಲ್ಲಿ ಮದುವೆ ಯಾಗುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಇವರನ್ನು ಬಸವಣ್ಣನ ಅನುಯಾಯಿ ಎನ್ನಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಮಾತನಾಡಿ, ವೀರಶೈವರು ಹಾಗೂ ಮುಸಲ್ಮಾನರು ಬಸವಣ್ಣ ಅವರ ಕಾಲದಿಂದಲೂ ಏಕತೆಯಿಂದ ಬದುಕಿದ್ದಾರೆ. ಗ್ರಾ.ಪಂ. ಸದಸ್ಯರಿಗೂ ಇಂದು ಪಲ್ಲಕ್ಕಿ ಉತ್ಸವ ಬೇಕಿದೆ. ಆದರೆ, ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಪಲ್ಲಕ್ಕಿ ಉತ್ಸವವನ್ನು ತ್ಯಜಿಸಿ ಸ್ವಾಮೀಜಿಯಾಗದೇ ಶರಣರಾಗಿ ಉಳಿದಿದ್ದಾರೆ. ಇಂದು ಸಮಾಜ ಕೆಟ್ಟು ಹೋಗಿದ್ದು, ಮಹಾತ್ಮಗಾಂಧಿ ಅಂತವರು ಸಹ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದರೂ  ್ಙ 3 ಕೋಟಿ ಖರ್ಚು ಮಾಡಬೇಕಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.

ಇಂದು ವಿಧಾನಸಭೆಯಲ್ಲಿರುವವರು ನಪುಂಸಕರಾಗಿದ್ದಾರೆ. ಅವರಿಗೆ ಜನಪರ ಕಾಳಜಿ ಇಲ್ಲ ಎಂದು ಟೀಕಿಸಿದರು.
ಮಾದಿಗ ದಂಡೋರ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಶಂಕರಪ್ಪ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನ ವಾಲ್ಮೀಕಿ ಸ್ವಾಮೀಜಿ, ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಉಪಸ್ಥಿತರಿದ್ದರು.

ಮಾಜಿ ಶಾಸಕ ಎ.ಟಿ. ರಾಮಸ್ವಾಮಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ. ಉಮೇಶ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT