ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ ನೋಂದಣಿ ಸಂಖ್ಯೆ ಇನ್ನು ‘ಕೆಎ–63’

ಹೊಸ ಆರ್‌ಟಿಒ ಕಚೇರಿ ಫೆಬ್ರುವರಿಯಿಂದ ಆರಂಭ
Last Updated 6 ಜನವರಿ 2014, 5:55 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹೊಸ ವಾಹನ ನೋಂದಣಿ ವೇಳೆ ಹುಬ್ಬಳ್ಳಿ, ಕುಂದಗೋಳ ಭಾಗದ ಜನತೆ ‘ಕೆಎ–25’ ಸರಣಿಯ ಸಂಖ್ಯೆಯೊಂದಿಗೆ ಕಳೆದ 23 ವರ್ಷಗಳಿಂದ ಹೊಂದಿದ್ದ ಭಾವನಾತ್ಮಕ ನಂಟು ಇನ್ನೊಂದು ತಿಂಗಳಲ್ಲಿ ಕಳಚಿಕೊಳ್ಳಲಿದೆ.ಇನ್ನು ಮುಂದೆ ಹೊಸ ವಾಹನಗಳ ನೋಂದಣಿಗೆ ಈ ಭಾಗದಲ್ಲಿ ‘ಕೆಎ–63’ ಸರಣಿಯ ಸಂಖ್ಯೆಯನ್ನು ಆರಂಭಿಸಲಾಗುತ್ತಿದೆ. ಹಳೆಯ ಕೆಎ–25 ಸಂಖ್ಯೆ ಧಾರವಾಡ ನಗರ, ನವಲಗುಂದ, ಕಲಘಟಗಿ ತಾಲ್ಲೂಕುಗಳಿಗೆ ಸೀಮಿತವಾಗಲಿದೆ.

ಹೊಸ ಆರ್‌ಟಿಒ ಕಚೇರಿ: ಈ ಹಿಂದೆ ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಬಜೆಟ್‌ನಲ್ಲಿ ರಾಜ್ಯದ ಏಳು ಕಡೆ ನೂತನ ಆರ್‌ಟಿಒ ಕಚೇರಿಗಳನ್ನು ಆರಂಭಿಸುವುದಾಗಿ ಘೋಷಣೆ ಮಾಡಿದ್ದರು. ಅದರಲ್ಲಿ ಹುಬ್ಬಳ್ಳಿ ನಗರಕ್ಕೇ ಪ್ರತ್ಯೇಕ ಆರ್‌ಟಿಒ ಕಚೇರಿ ಆರಂಭಿಸಲು ಕೈಗೊಂಡ ತೀರ್ಮಾನದ ಹಿನ್ನೆಲೆಯಲ್ಲಿ ಹುಬ್ಬಳ್ಳಿಗರಿಗೆ ಹೊಸ ಕಚೇರಿ ಹಾಗೂ ನೋಂದಣಿ ಸಂಖ್ಯೆ ದೊರೆಯುತ್ತಿದೆ.

ಹುಬ್ಬಳ್ಳಿಯಲ್ಲಿ ಹೊಸ ಆರ್‌ಟಿಒ ಕಚೇರಿ ಆರಂಭಿಸಲು ಹಾಲಿ ಹುಬ್ಬಳ್ಳಿ–ಧಾರವಾಡ ಆರ್‌ಟಿಒ ಕಚೇರಿಯಲ್ಲಿ ಸಹಾಯಕ ಸಾರಿಗೆ ಅಧಿಕಾರಿಯಾಗಿರುವ (ಎಆರ್‌ಟಿಒ) ವಿ.ಡಿ.ತಹಸೀಲ್ದಾರ ಅವರನ್ನು ಸರ್ಕಾರ ನೋಡಲ್‌ ಅಧಿಕಾರಿಯಾಗಿ ನೇಮಿಸಿದೆ. ತಾರಿಹಾಳದಲ್ಲಿ ಹೊಸ ಕಚೇರಿಗೆ ಕಟ್ಟಡ ಗುರುತಿಸಲಾಗಿದೆ. ಲೋಕೋಪಯೋಗಿ ಇಲಾಖೆಯ ತಜ್ಞರು ಕಟ್ಟಡಕ್ಕೆ ಬಾಡಿಗೆ ನಿಗದಿ ಮಾಡಿದ ನಂತರ ಒಪ್ಪಂದ ಮಾಡಿಕೊಳ್ಳಲಾಗುವುದು. ಫೆಬ್ರುವರಿ 1ರಿಂದ ಹುಬ್ಬಳ್ಳಿಗೆ ಪ್ರತ್ಯೇಕವಾಗಿ ಆರ್‌ಟಿಒ ಕಚೇರಿ ಆರಂಭವಾಗಲಿದೆ ಎಂದು ತಹಸೀಲ್ದಾರ ಹೇಳುತ್ತಾರೆ.

23 ವರ್ಷಗಳ ನಂಟು: 1990ರಲ್ಲಿ ಕೇಂದ್ರದ ಹೊಸ ಸಾರಿಗೆ ನೀತಿಯಡಿ ಭೂ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಪ್ರತ್ಯೇಕ ಸರಣಿಯ ಸಂಖ್ಯೆಗಳನ್ನು ನೀಡಿದ್ದು, ಧಾರವಾಡ ಜಿಲ್ಲೆಗೆ ‘25’ನೇ ಸರಣಿಯ ಸಂಖ್ಯೆ ದೊರೆತಿತ್ತು. ಅದೇ ವರ್ಷದ ಡಿಸೆಂಬರ್‌ನಲ್ಲಿ ಈ ಸಂಖ್ಯೆಯಡಿ ನೋಂದಣಿ ಆರಂಭವಾಗಿತ್ತು.

ಸಂಖ್ಯೆ ಹೆಚ್ಚಳ: ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ ಹಾಲಿ 4,27,708 ನೊಂದಾಯಿತ ವಾಹನಗಳು ಇವೆ. ಪ್ರತೀ ವರ್ಷ ಶೇ 10ರಿಂದ 15ರಷ್ಟು ವಾಹನಗಳು ಹೆಚ್ಚಾಗುತ್ತಿವೆ. ಅದರಲ್ಲಿ ಶೇ 60ರಿಂದ 70 ಹುಬ್ಬಳ್ಳಿ ನಗರಕ್ಕೆ ಸೇರಿವೆ ಎನ್ನುವ ವಿ.ಡಿ. ತಹಸೀಲ್ದಾರ್, ಇದರಿಂದ ಹುಬ್ಬಳ್ಳಿ ಭಾಗಕ್ಕೆ ಪ್ರತ್ಯೇಕ ಆರ್‌ಟಿಒ ಕಚೇರಿ ಅಗತ್ಯವಿದೆ ಎನ್ನುತ್ತಾರೆ.

ಹೆಚ್ಚಿನ ಸಿಬ್ಬಂದಿ: ಹೊಸ ಆರ್‌ಟಿಒ ಕಚೇರಿಗೆ ಸರ್ಕಾರ ಹೊಸದಾಗಿ 33 ಸಿಬ್ಬಂದಿಯನ್ನು ಈಗಾಗಲೇ ನೇಮಿಸಿದೆ ಅವರಲ್ಲಿ ಒಬ್ಬರು ಆರ್‌ಟಿಒ, ಇಬ್ಬರು ಎಆರ್‌ಟಿಒ, ಇಬ್ಬರು ಹಿರಿಯ ನಿರೀಕ್ಷಕರು, ನಾಲ್ವರು ನಿರೀಕ್ಷಕರು, ಮೂವರು ಕಚೇರಿ ಅಧೀಕ್ಷಕರು, ಒಬ್ಬರು ಸ್ಟೆನೊ, ಐವರು ಪ್ರಥಮ ದರ್ಜೆ ಸಹಾಯಕರು, ಎಂಟು ಮಂದಿ ದ್ವಿತೀಯ ದರ್ಜೆ ಸಹಾಯಕರು, ಇಬ್ಬರು ವಾಹನ ಚಾಲಕರು, ಇಬ್ಬರು ಟೈಪಿಸ್ಟ್ ಹಾಗೂ ಮೂವರು ಜವಾನರು ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT