ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈ.ಕ ಅಭಿವೃದ್ಧಿಗೆ ಪೂರಕ ಕಾನೂನು ರಚಿಸಿ

371(ಜೆ): ಉಪಸಮಿತಿಗೆ ಮನವಿ
Last Updated 4 ಜುಲೈ 2013, 6:40 IST
ಅಕ್ಷರ ಗಾತ್ರ

ರಾಯಚೂರು: ಸಂವಿಧಾನದ 371(ಜೆ) ಕಲಂನಡಿ ನಿಯಮಾವಳಿ ರೂಪಿಸುವ ಸಂದರ್ಭದಲ್ಲಿ ಸಂವಿಧಾನದ ಆಶಯದಂತೆ ತಾವು ಸಲ್ಲಿಸಿರುವ ಬೇಡಿಕೆಗಳನ್ನು ಪರಿಗಣಿಸಿ ಹೈದರಾಬಾದ್ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ಕಾನೂನು ರಚಿಸಬೇಕು ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಜಿಲ್ಲಾ ಸಂಚಾಲಕರು ಹಾಗೂ ಜನಸಂಗ್ರಾಮ ಪರಿಷತ್‌ನ ರಾಜ್ಯ ಮುಖಂಡರಾದ ರಾಘವೇಂದ್ರ ಕುಷ್ಟಗಿ ಹಾಗೂ ರಜಾಕ್ ಉಸ್ತಾದ್ ಅವರು ಸಂವಿಧಾನ 371(ಜೆ) ಕಲಂ ನಿಯಮಾವಳಿ ರೂಪಿಸುವ ಸಚಿವ ಸಂಪುಟ ಉಪ ಸಮಿತಿ ಅಧ್ಯಕ್ಷ ಎಚ್.ಕೆ ಪಾಟೀಲ್ ಅವರಿಗೆ ಬುಧವಾರ ಹೊಸಪೇಟೆಯಲ್ಲಿ ಕರೆದ ಸಭೆಯಲ್ಲಿ ಮನವಿ ಮಾಡಿದ್ದಾರೆ.

ಹೈ.ಕ ಭಾಗದ ಸ್ಥಳೀಯರೇ ಎಂದು ಗುರುತಿಸಲು ಕೆಲ ಮಾನದಂಡ ಅವಶ್ಯ. ವಂಶಪಾರಂಪರ್ಯವಾಗಿ ಈ ಭಾಗದಲ್ಲಿ ಬಾಳಿಕೊಂಡು ಬಂದಿರುವ ಕುಟುಂಬ ವರ್ಗ, ಕನಿಷ್ಠ 15 ವರ್ಷ ಈ ಭಾಗದಲ್ಲಿ ವಾಸವಾಗಿದ್ದು, 10 ವರ್ಷ ಇಲ್ಲಿ ಶಿಕ್ಷಣ ಪಡೆದಿರುವಂಥವರನ್ನು ಸ್ಥಳೀಯರು ಎಂದು ಗುರುತಿಸಬೇಕು. ತಪ್ಪು ಮಾಹಿತಿ ನೀಡಿ ಶಿಕ್ಷಣ, ನೌಕರಿ ಗಿಟ್ಟಿಸಿಕೊಂಡಿದ್ದು ಕಂಡು ಬಂದರೆ ಕ್ಷಣದಲ್ಲಿಯೇ ಕೊಟ್ಟ ಸೌಲಭ್ಯ ವಾಪಸ್ಸು ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಅಭಿವೃದ್ಧಿ ಮಂಡಳಿ ರಚನೆಯಲ್ಲಿ ಕಡಗಣನೆ ಬೇಡ: ಅಭಿವೃದ್ಧಿ ಮಂಡಳಿ ರಚನೆ ವಿಷಯದಲ್ಲಿ ಈ ಭಾಗದವರನ್ನು ಕಡೆಗಣಿಸಬಾರದು. ಈ ಭಾಗದ ಶಾಸಕರು ಸದಸ್ಯರಾಗಿರಬೇಕು, ಇದೇ ಭಾಗದವರು ಮಂಡಳಿ ಅಧ್ಯಕ್ಷರಾಗಬೇಕು, ಹೋರಾಟ ಸಮಿತಿಯ ಎಲ್ಲ ಜಿಲ್ಲೆಗೊಬ್ಬರಂತೆ ಸರದಿ ಪ್ರಕಾರ ಮಂಡಳಿ ಸದಸ್ಯರನ್ನಾಗಿ ಮಾಡಬೇಕು, ಕೃಷಿ, ಔದ್ಯೋಗಿಕ, ಸಾಮಾಜಿಕ ಕ್ಷೇತ್ರ, ಗ್ರಾಮೀಣ ಅಭಿವೃದ್ಧಿ, ಶಿಕ್ಷಣ ಕ್ಷೇತ್ರ ಸೇರಿದಂತೆ 6 ಜಿಲ್ಲೆಯಿಂದ ತಲಾ ಒಬ್ಬರನ್ನು ಮಂಡಳಿ ಸದಸ್ಯರನ್ನಾಗಿಸಬೇಕು, ಎಲ್ಲ ಜಿ.ಪಂ ಅಧ್ಯಕ್ಷರು ಸದಸ್ಯರಾಗಿರಬೇಕು ಎಂಬುದು ಸೇರಿದಂತೆ ವಿವಿಧ ಅಂಶಗಳನ್ನು ಪ್ರಸ್ತಾಪಿಸಿ ಗಮನ ಸೆಳೆದಿದ್ದಾರೆ.

ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಎಂಬ ಕಾರಣ ನೀಡಿ ಶಾಲಾ-ಕಾಲೇಜು ಮುಚ್ಚಬಾರದು, ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಪ್ರೋತ್ಸಾಹ ಯೋಜನೆ ರೂಪಿಸಬೇಕು, ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ವಸತಿ ಶಾಲೆ, 25 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ ನಿಯಮ ಕಡ್ಡಾಯ ಪಾಲನೆ ಮಾಡಬೇಕು, ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಮಾದರಿ ಪ್ರೌಢ ಶಾಲೆ ಆರಂಭಿಸಬೇಕು, ಪ್ರತಿ ಜಿ.ಪಂ ಕ್ಷೇತ್ರಕ್ಕೊಂದು ಐಟಿಐ ಸಂಸ್ಥೆ ಆರಂಭಿಸಬೇಕು ಎಂದು ಕೋರಿದ್ದಾರೆ.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಪಾಲಿಟೆಕ್ನಿಕ್ ಕಾಲೇಜು ಆರಂಭ ಮಾಡಬೇಕು, ಹೋಬಳಿ ಮಟ್ಟದಲ್ಲಿ ಪದವಿ ಕಾಲೇಜು ಆರಂಭಿಸಬೇಕು, ಪ್ರತಿ ಜಿಲ್ಲೆಗೆ ಎರಡು ತಾಂತ್ರಿಕ ಕಾಲೇಜು, ಪ್ರತಿ ಜಿಲ್ಲೆಯಲ್ಲಿ ಸುಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು, ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಬೇಕು, ಯುಪಿಎಸ್‌ಸಿ, ಕೆಪಿಎಸ್‌ಸಿ ತರಬೇತಿ ಕೇಂದ್ರ ಆರಂಭ ಸೇರಿದಂತೆ ಒಟ್ಟು 16 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT