ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ನಿರೀಕ್ಷೆಯಲಿ, ಶಾಲೆಯತ್ತ ಹೆಜ್ಜೆ

Last Updated 31 ಮೇ 2012, 9:25 IST
ಅಕ್ಷರ ಗಾತ್ರ

ಯಾದಗಿರಿ:  ಯುಗ ಯುಗಾದಿ ಕಳೆದರೂ ಮತ್ತೆ ಯುಗಾದಿ ಬರುತಿದೆ ಎನ್ನುವಂತೆ ಶಾಲೆಗಳು ಮತ್ತೆ ಪ್ರಾರಂಭವಾಗುತ್ತಿವೆ. ಹಳೆಯ ಕಹಿ ನೆನಪುಗಳನ್ನು ಮರೆತು ಹೊಸ ಹಾದಿಯನ್ನು ಸಾಗುವ ಸವಾಲನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿಗಳು ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.

ಶೈಕ್ಷಣಿಕವಾಗಿ ಜಿಲ್ಲೆಯ ಸಾಧನೆ ಅತ್ಯಂತ ಕಡಿಮೆ. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಗಳ ಫಲಿತಾಂಶದಲ್ಲಿ ರಾಜ್ಯದ ಕೊನೆಯ ಸ್ಥಾನವನ್ನು ಅಲಂಕರಿಸಿರುವ ಜಿಲ್ಲೆಯು, ಅದರಿಂದ ಹೊರಬರುವ ನಿಟ್ಟಿನಲ್ಲಿ ಹೊಸ ಚಿಂತನೆಗಳನ್ನು ಆರಂಭಿಸುವ ಕಾಲ ಬಂದೊದಗಿದೆ. ಶಾಲೆಯ ಮಕ್ಕಳ ಹಾಜರಾತಿ ಹೆಚ್ಚಿಸುವುದರ ಜೊತೆಗೆ, ಗುಣಮಟ್ಟದ ಶಿಕ್ಷಣ ನೀಡುವುದರ ಬಗ್ಗೆ ಗಂಭೀರ ಚಿಂತನೆ ಮಾಡಬೇಕಾಗಿದೆ.

ಶೈಕ್ಷಣಿಕವಾಗಿ ಹಲವಾರು ಸಮಸ್ಯೆಗಳು ಜಿಲ್ಲೆಯಲ್ಲಿದ್ದು, ವಿದ್ಯಾರ್ಥಿಗಳು ಸಮಸ್ಯೆಗಳ ಸುಳಿಯಲ್ಲಿ ನರಳುವಂತಾಗಿದೆ. ಶಾಲೆಯ ಪ್ರಾರಂಭೋತ್ಸವದ ನಂತರ ಕೊರತೆಗಳು ಬೃಹದಾಕಾರವಾಗಿ ಬೆಳೆದು ನಿಲ್ಲುತ್ತವೆ. ಶಿಕ್ಷಕರು, ಕೊಠಡಿಗಳು ಕೊರತೆ, ಶಾಲೆಗಳಲ್ಲಿ ಮೂಲಸೌಲಭ್ಯಗಳ ಕೊರತೆ ಇನ್ನೂ ನೀಗಬೇಕಾಗಿದೆ.

ಶಿಕ್ಷಕರೇ ಇಲ್ಲ: ಜೀವನದ ಭದ್ರ ಅಡಿಪಾಯ ಎಂದೇ ಪರಿಗಣಿಸಲಾಗಿರುವ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆಯೇ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಸುಮಾರು ಒಂದು ಸಾವಿರ ಶಿಕ್ಷಕರ ಕೊರತೆ ಜಿಲ್ಲೆಯಲ್ಲಿದೆ. ಅದರಲ್ಲಿಯೂ ವಿಶೇಷವಾಗಿ ವಿಷಯ ಶಿಕ್ಷಕರು ಇಲ್ಲದೇ ಇರುವುದು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿದೆ.

ಜಿಲ್ಲೆಯಾಗಿ ರಚನೆ ಆದಂದಿನಿಂದಲೂ ಶಿಕ್ಷಕರ ಕೊರತೆ ಎದುರಾಗುತ್ತಲೇ ಬಂದಿದೆ. ನಂತರ ನಡೆದ ವರ್ಗಾವಣೆ ಕೌನ್ಸೆಲಿಂಗ್‌ನಲ್ಲಿ ಬಹುತೇಕ ಶಿಕ್ಷಕರು ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಿಸಿಕೊಂಡು ಹೋಗಿದ್ದು, ಅವರ ಸ್ಥಾನಗಳಿಗೆ ಶಿಕ್ಷಕರು ಬರಲೇ ಇಲ್ಲ. ಹೀಗಾಗಿ ಜಿಲ್ಲೆಯಾದ್ಯಂತ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲದಂತಾಗಿದ್ದು, ನಿಯೋಜನೆಯ ಮೇಲೆ ಶಿಕ್ಷಕರು ಸೇವೆ ಸಲ್ಲಿಸುವುದು ಅನಿವಾರ್ಯವಾಗಿದೆ.

ಇನ್ನು ಪ್ರೌಢಶಾಲೆಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಪ್ರೌಢಶಾಲಾ ಶಿಕ್ಷಕರು ಹುದ್ದೆಗಳು ಖಾಲಿ ಉಳಿದಿವೆ. ಇನ್ನೊಂದೆಡೆ ಸುಮಾರು 74 ಸರ್ಕಾರಿ ಪ್ರೌಢಶಾಲೆಗಳಲ್ಲಿ ಇಂಗ್ಲಿಷ್ ಭಾಷೆಯ ಶಿಕ್ಷಕರ ಹುದ್ದೆಗಳು ಮಂಜೂರೇ ಆಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆಯು ಉತ್ತಮ ಸಾಧನೆ ಮಾಡುವುದಾದರೂ ಹೇಗೆ ಎಂಬುದು ಜಿಲ್ಲೆಯ ಜನರ ಪ್ರಶ್ನೆ.

ಗ್ರಾಮೀಣ ಪ್ರದೇಶಗಳ ಮಕ್ಕಳಿಗೆ ಮನೆಪಾಠದ ಸೌಲಭ್ಯವೂ ಇಲ್ಲದೇ ಇರುವುದರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪರದಾಡುವಂತಾಗುತ್ತಿದೆ. ಪ್ರಮುಖವಾಗಿ ಇಂಗ್ಲಿಷ್ ವಿಷಯದಲ್ಲಿಯೇ ಹೆಚ್ಚಿನ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದು, ಶಿಕ್ಷಕರ ಕೊರತೆಗೆ ಸ್ಪಷ್ಟ ನಿದರ್ಶನವಾಗಿದೆ.

ಪ್ರತಿ ಬಾರಿಯೂ ಶಿಕ್ಷಕರ ವರ್ಗಾವಣೆ ಸಂದರ್ಭದಲ್ಲಿ ಜಿಲ್ಲೆಗೆ ಹೆಚ್ಚುವರಿ ಶಿಕ್ಷಕರು ವರ್ಗಾವಣೆ ಮಾಡಿಸಿಕೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು ಹೇಳುತ್ತಲೇ ಬಂದಿದ್ದಾರೆ. ಆದರೆ ಈವರೆಗೆ ಶಿಕ್ಷಕರ ಹುದ್ದೆಗಳು ಮಾತ್ರ ಭರ್ತಿ ಆಗುತ್ತಿಲ್ಲ ಎಂಬ ನೋವು ಪಾಲಕರದ್ದು.

“ನಮ್ಮ ಹುಡುಗ ಭಾಳ ಶ್ಯಾಣಾ ಅದಾನ್ರಿ. ಆದ್ರ ಇಂಗ್ಲಿಷ್‌ನ್ಯಾಗ ಫೇಲ್ ಆಗ್ಯಾನ್ರಿ. ಈಗ ಜೂನ್‌ದಾಗ ಪರೀಕ್ಷಾ ಅಂತಾರ. ಮತ್ತ ಅದ ಪರಿಸ್ಥಿತಿರಿ. ಪಾಸ್ ಆಗೂದರೆ ಹೆಂಗ್ರಿ” ಎನ್ನುತ್ತಾರೆ ನಗರದ ನಿವಾಸಿ ಶಿವಶರಣಪ್ಪ.

ಸೌಲಭ್ಯಗಳೂ ಇಲ್ಲ: ಇನ್ನು ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ, ಕಂಪೌಂಡ್ ಗೋಡೆಯಂತಹ ಮೂಲಸೌಲಭ್ಯಗಳೂ ಇಲ್ಲ. ಶೌಚಾಲಯವಿದ್ದರೆ, ಕುಡಿಯುವ ನೀರಿನ ಸಮಸ್ಯೆ, ಒಂದಿದ್ದರೆ, ಇನ್ನೊಂದು ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳು ಶಾಲೆಯಲ್ಲಿ ಸಮಯ ಕಳೆಯುವುದೇ ಕಷ್ಟಕರವಾಗಿದೆ.

ಇನ್ನೊಂದೆಡೆ ಮಧ್ಯಾಹ್ನದ ಬಿಸಿಯೂಟಕ್ಕಾಗಿ ಅಡುಗೆ ಕೋಣೆಗಳ ಕೊರತೆಯೂ ಎದುರಾಗುತ್ತಿವೆ. ಮೊದಲೇ ಕೊಠಡಿಗಳು ಕಡಿಮೆ ಇದ್ದು, ಇರುವ ಕೊಠಡಿಯನ್ನೇ ಬಿಸಿಯೂಟಕ್ಕೆ ಬಳಕೆ ಮಾಡುತ್ತಿರುವುದರಿಂದ ಮತ್ತೊಂದು ಕೊಠಡಿ ಇಲ್ಲದಂತಾಗುತ್ತಿದೆ. 

ಇಷ್ಟೆಲ್ಲ ಸಮಸ್ಯೆಗಳ ಮಧ್ಯೆ ಮಕ್ಕಳು ಮತ್ತೊಮ್ಮೆ ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದು, ಶಿಕ್ಷಕರೂ ಇರುವ ಸೌಲಭ್ಯದಲ್ಲಿಯೇ ಗುಣಮಟ್ಟದ ಶಿಕ್ಷಣ ನೀಡುವುದಾದರೂ ಹೇಗೆ ಎಂಬ ಚಿಂತೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT