ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ಪದ ಸೃಷ್ಟಿ: ಗೊಟ್ಟಿಗಾಳೆಗ

Published 16 ಮಾರ್ಚ್ 2024, 23:36 IST
Last Updated 16 ಮಾರ್ಚ್ 2024, 23:36 IST
ಅಕ್ಷರ ಗಾತ್ರ

ಗೊಟ್ಟಿಗಾಳೆಗ

ಗೊಟ್ಟಿಗಾಳೆಗ (ನಾ). ಗುಂಪುಗಾಳಗ; ತುಮುಲ ಯುದ್ಧ

(ಗೊಟ್ಟಿ + ಕಾಳಗ)

ಕುವೆಂಪು ಅವರು ರಾಮ ಸೀತೆ ಲಕ್ಷ್ಮಣರಲ್ಲಿಯ ಒಂದು ಹಿಮಗಾಲದ ಕೌಟುಂಬಿಕ ಪ್ರೀತಿ ವಾತ್ಸಲ್ಯದ ಚಿತ್ರಣವನ್ನು ಮಹಾಕಾವ್ಯದಲ್ಲಿ ನೀಡಿದ್ದಾರೆ. ಒಂದು ದಿನ ನಸುಕಿನಲ್ಲಿಯೇ ಗೋದಾವರಿ ಹೊಳೆಗೆ ಹೋದ ಮೈದ ಲಕ್ಷ್ಮಣನು ಬಾರದಿರಲು ಸೀತೆ ಚಿಂತಿಸುತ್ತಾಳೆ. ಮಂಜಿನಲ್ಲಿ ಮಿಂದು ಬಂದಂತೆ, ಸ್ನಾನ ಮಾಡದೆ ಮಂಜಿನಲ್ಲಿ ಕಣ್ಣುತಪ್ಪಿ ಹಿಂದಿರುಗಿ ಬಂದ ಲಕ್ಷ್ಮಣ ಹುಹುಹು ನಡುಗುತ್ತ ಒಲೆಯೆಡೆಗೆ ಬೆಂಕಿ ಕಾಯಿಸಲು ಹೋಗುತ್ತಾನೆ.

ಆಗಿನ ಪ್ರಕೃತಿಯ ಕಾಡಿನ ಚಿತ್ರಣವನ್ನು ಕವಿ ಕಣ್ಣಿಗೆ ಕಟ್ಟುವಂತೆ ನುಡಿನುಡಿಯಲ್ಲಿ ಕಡೆದಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಹೊತ್ತೇರಲು ಆಗ ಮೂಡಿದ ಸೂರ್ಯ ಕಿರಣಗಳಿಗೂ ದಟ್ಟೈಸಿದ ಹಿಮಕ್ಕೂ ಗುಂಪುಗಾಳಗವಾಯಿತು ಎಂದು ‘ಗೊಟ್ಟಿಗಾಳಗ’ ಪದ ರೂಪಿಸಿ ಬಣ್ಣಿಸಿದ್ದಾರೆ. ಆ ತುಮುಲ ಯುದ್ಧದಲ್ಲಿ ಮಂಜಿನಸೇನೆ ಸಾಂಧ್ರತೆಯನ್ನು ಕಳೆದುಕೊಂಡು ಚೆದುರಿ ದಳದಳವಾಗಿ ಗಿರಿಶಿಖರ ಸೀಮೆಯಿಂದ ಹಿಮ್ಮೆಟ್ಟುತ್ತದೆ. ಕವಿಯು ಆ ಸಹಜ ನಿಸರ್ಗದಾಟವನ್ನು ನುಡಿನುಡಿಯಲ್ಲಿ ಹೀಗೆ ರೂಪಿಸಿದ್ದಾರೆ:

ಪೇಳ್ತಿನಿತನಂತರಂ ಪೇಳ್ತೇರೆ,

ಪೇಳ್ತರೆಯ ಕದಿರುಗಳಿಟ್ಟಣಿಸಿದೈಕಿಲಿಗೆ

ಗೊಟ್ಟಿಗಾಳೆಗವಾಗಿ, ಸೋಲ್ತ ಮಂಜಿನ ಸೇನೆ

ಸಾಂಧ್ರತೆಯನುಳಿದು,

ವಿರಳತೆಯಾಂತುಮೊಳಸೋರ್ದು

ಚದರಿ, ದಳದಳಮಾಗಿ, ಗಿರಿ ಶಿಖರ ಸೀಮೆಯಿಂ

ಮೆಲ್ಲನೆ ಪೆಡಂಮೆಟ್ಟಿ ಸರಿಯತೊಡಗಿತು ಸಾನು

ನಿಮ್ನತೆಗೆ.

ಎದೆಯನ್ನೆ

ಅನ್ನೆ (ನಾ). ಅಂಥವಳು; ಆ ರೀತಿಯವಳು

ಮನದನ್ನೆ = 1. ಪ್ರೀತಿ ಪಾತ್ರಳಾದವಳು 2. ಹೆಂಡತಿ, ಪತ್ನಿ.

ಬೇಂದ್ರೆಯವರು ‘ಆಡದಿರು ಮನದನ್ನೆ ಎನಗೆ ಇದಿರಾಡದಿರು’ ಎಂದು ತನ್ನ ಪತ್ನಿಯನ್ನು ‘ಮನದನ್ನೆ’ ಎಂದು ಕರೆದು, ಆ ಪದ ಜನಪ್ರಿಯವಾಗುವಂತೆ ಮಾಡಿದ್ದಾರೆ. ಕುವೆಂಪು ಅವರು ಆ ಮನದನ್ನೆಯನ್ನು ‘ಎದೆಯೆದೆಗೆ ಇಳಿದು ಬಾ ಎದೆಯನ್ನೆಯಂತೆ!’ ಎಂದು ‘ಅನಂತೆ ನೀಂ: ಮನಮನಕೆ ಮನದನ್ನೆ’ ಕವನದಲ್ಲಿ ಸಂಬೋಧಿಸಿದ್ದಾರೆ.

ಹೀಗೆ ‘ಎದೆಯನ್ನೆ’ ಪದ ಸೃಷ್ಟಿಸಿ ಪ್ರಯೋಗಿಸಿರುವುದು ಕುವೆಂಪು ‘ಮನದನ್ನೆ’ಯನ್ನು ‘ಎದೆಯನ್ನೆ’ ಆಗಿಸಿಕೊಂಡದ್ದರ, ಒಲ್ಮೆಯವಳನ್ನು ಮನಕ್ಕಿಂತ ಎದೆಗೆ ಹತ್ತಿರವಾಗಿಸಿಕೊಂಡ ಭಾವದೊಲ್ಮೆ. ಇದು ಸಾದೃಶ್ಯ ಮೂಲ ನವಪದ ನಿರ್ಮಾಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT