ಶನಿವಾರ, ಮಾರ್ಚ್ 6, 2021
18 °C

ಸುಸ್ಥಿರ ಸಾರಿಗೆಗೆ ಇ–ವಾಹನ

ಆಮೃತ ಕಿರಣ್ ಬಿ.ಎಂ. Updated:

ಅಕ್ಷರ ಗಾತ್ರ : | |

Prajavani

ವಾಹನಗಳು ಸೂಸುವ ಇಂಗಾಲದ ಡೈಆಕ್ಸೈಡ್ ವಾತಾವರಣದಲ್ಲಿ ಮಲಿನ ಮೋಡಗಳನ್ನು ಸೃಷ್ಟಿಸಿದೆ. ಸುಸ್ಥಿರವೂ, ಭವಿಷ್ಯಕ್ಕೆ ಅನಿವಾರ್ಯವೂ ಎನಿಸಿರುವ ನವೀಕರಿಸಬಹುದಾದ ಇಂಧನ ಬಳಕೆಯೊಂದೇ ಇದಕ್ಕಿರುವ ಪರಿಹಾರ. ಎಲೆಕ್ಟ್ರಿಕ್ ವಾಹನ ಹಾಗೂ ಅವುಗಳಿಗೆ ಸರ್ಕಾರದ ಪ್ರೋತ್ಸಾಹದ ಮೇಲೊಂದು ನೋಟ ಇಲ್ಲಿದೆ..

***

ಜಾಗತಿಕ ವಾಹನ ಮಾರುಕಟ್ಟೆಯಲ್ಲಿ ಭಾರತದ ಅಟೊಮೊಬೈಲ್ ಉದ್ದಿಮೆಯು ಬೃಹತ್ ಹಾಗೂ ಅತಿವೇಗವಾಗಿ ಬೆಳೆಯುತ್ತಿರುವ ಕ್ಷೇತ್ರವಾಗಿದೆ. ಜಿಡಿಪಿಯ ಶೇ 7.1ರಷ್ಟು ಬೆಳವಣಿಗೆಗೂ ಕಾರಣವಾಗಿದೆ. 2021ರ ವೇಳೆಗೆ ವರ್ಷಕ್ಕೆ ಶೇ 15ರಷ್ಟು ಬೆಳವಣಿಗೆ ದರದಲ್ಲಿ ₹1.15 ಲಕ್ಷ ಕೋಟಿಗೆ ತಲುಪುವ ಅಂದಾಜು ಇದೆ. 

ಆದರೆ ಬಹುಪಾಲು ವಾಹನಗಳು ಪಳಯುಳಿಕೆ ಇಂಧನವನ್ನು (ಪೆಟ್ರೋಲಿಯಂ) ಆಶ್ರಯಿಸಿವೆ. ವಾಹನಗಳು ಸೂಸುವ ಇಂಗಾಲದ ಡೈ ಆಕ್ಸೈಡ್ ವಾತಾವರಣದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಹೀಗಾಗಿ ಆಟೊಮೊಬೈಲ್ ಕ್ಷೇತ್ರವನ್ನು ನವೀಕರಿಸಬಹುದಾದ ಇಂಧನ ಮೂಲಗಳಿಗೆ ಪರಿವರ್ತಿಸುವ ಸುಸ್ಥಿರ ಮಾದರಿಯತ್ತ ದೇಶ ಹೆಜ್ಜೆ ಇರಿಸಿದೆ. 

ಬ್ಯಾಟರಿ ಚಾಲಿತ ವಾಹನಗಳ ಮಾರುಕಟ್ಟೆ ವಿಸ್ತರಣೆಯಲ್ಲಿ ಸರ್ಕಾರದ ಯೋಜನೆ ಹಾಗೂ ಸಬ್ಸಿಡಿ ಮಹತ್ವದ ಪಾತ್ರ ವಹಿಸಲಿವೆ. ಎಲ್ಲ ನಗರಗಳಲ್ಲಿ ವಾಯುಮಾಲಿನ್ಯದ ಪ್ರಮಾಣ ಏರುಗತಿಯಲ್ಲಿರುವ ಆತಂಕದ ವಾತಾವರಣವೂ ಈ ಮಾರುಕಟ್ಟೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. 

ಇತರ ಕ್ಷೇತ್ರಗಳಿಗೆ ಹೋಲಿಸಿದರೆ, ಇಂಧನ ಬಳಕೆ ಹಾಗೂ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ ಪ್ರಮಾಣ, ಈ ಎರಡರಲ್ಲೂ ಸಾರಿಗೆ ಕ್ಷೇತ್ರದ ಪಾಲು ದೊಡ್ದದು. ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಇಂಧನಗಳಿಗೆ ಹೊರಳಿಕೊಳ್ಳುವುದೇ ಜಾಣತನದ ನಿರ್ಧಾರ ಎನ್ನುವುದು ತಜ್ಞರ ಅಭಿಮತ. 

ನೀತಿ ಆಯೋಗದ ಫರ್ಮಾನು 

2023ರ ವೇಳೆಗೆ ದೇಶದ ಎಲ್ಲ ತ್ರಿಚಕ್ರ ವಾಹನಗಳೂ, 2025ರ ಹೊತ್ತಿಗೆ ಎಲ್ಲ ದ್ವಿಚಕ್ರವಾಹನಗಳೂ, 2030ರ ಹೊತ್ತಿಗೆ ಎಲ್ಲ ಕಾರುಗಳೂ ವಿದ್ಯುತ್ ಚಾಲಿತವಾಗಿರಬೇಕು ಎಂದು ನೀತಿ ಆಯೋಗ ಇತ್ತೀಚೆಗೆ ಸೂಚನೆ ನೀಡಿತ್ತು. ಇದಕ್ಕೆ ಪರ–ವಿರೋಧ ಅಭಿಪ್ರಾಯ ವ್ಯಕ್ತವಾಗಿದ್ದರೂ, ಬ್ಯಾಟರಿ ವಿದ್ಯುತ್ ವಾಹನಗಳೇ ಭವಿಷ್ಯದ ಹಾಗೂ ಸುಸ್ಥಿರ ಆಯ್ಕೆ ಎಂಬುದನ್ನು ಅಲ್ಲಗಳೆಯಲಾಗದು. ಇದು ಹವಾಮಾನ ವೈಪರೀತ್ಯ ಬದಲಾವಣೆ ತಡೆಗಟ್ಟುವ ನಿಟ್ಟಿನಲ್ಲಿ ಅನಿವಾರ್ಯ. 

ಹಸಿರು ಸಾರಿಗೆ ಒಂದು ಸವಾಲು 

ಇಂಧನ ಹೊರಸೂಸುವಿಕೆಯನ್ನು ಸಂಪೂರ್ಣವಾಗಿ ಕೊನೆಗೊಳಿಸಬೇಕಾದರೆ ಹಸಿರು ಇಂಧನವೊಂದೇ ಪರಿಹಾರ. ಆದರೆ ನವೀಕರಿಸಬಹುದಾದ ಇಂಧನ ಬಳಸಿಕೊಂಡು ಹಸಿರು ಸಾರಿಗೆಗೆ ಪರಿವರ್ತಿಸಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ. ಸಾಕಷ್ಟು ಸವಾಲುಗಳನ್ನು ಈ ಕ್ಷೇತ್ರ ಹೊದ್ದುಕೊಂಡು ಕುಳಿತಿದೆ. ಇಂತಹ ಕೆಲವನ್ನು ಪಟ್ಟಿ ಮಾಡಬಹುದು.

* ಪೆಟ್ರೋಲಿಯಂ ಉತ್ಪನ್ನಗಳಿಗೆ ಸಿಗುತ್ತಿರುವ ತೆರಿಗೆ ಪ್ರೋತ್ಸಾಹ

* ಸೂಕ್ತ ಹಣಕಾಸು ನೆರವು ದೊರೆಯದಿರುವುದು 

* ಹಣಕಾಸು ಮತ್ತು ಮಾನವ ಸಂಪನ್ಮೂಲ ಕೊರತೆ

* ಸಾರ್ವಜನಿಕ ಹೂಡಿಕೆಯಲ್ಲಿ ನಗರ ಸಾರಿಗೆಗೆ ಸಿಗದ ಆದ್ಯತೆ

* ಹಸಿರು ಸಾರಿಗೆ ಕ್ಷೇತ್ರದ ದತ್ತಾಂಶಗಳ ಕೊರತೆ

* ಆಟೊಮೊಬೈಲ್ ಉದ್ದಿಮೆದಾರರ ನಿರಾಸಕ್ತಿ

* ಇಚ್ಛಾಶಕ್ತಿ, ರಾಜಕೀಯ ಜಾಗೃತಿ ಕೊರತೆ

ಫೇಮ್‌–2 ಸವಲತ್ತು 

ವಿದ್ಯುತ್‌ಚಾಲಿತ ವಾಹನಗಳ ಬಳಕೆಯನ್ನು ಉತ್ತೇಜಿಸುವ ದೃಷ್ಟಿಯಿಂದ 2015ರಲ್ಲಿ ಫೇಮ್‌ ಇಂಡಿಯಾಗೆ (Faster Adoption and Manufacturing of Electric Vehicles–FAME 2) ಕೇಂದ್ರ ಸರ್ಕಾರ ಚಾಲನೆ ನೀಡಿತ್ತು. ಅದರಂತೆ, 2015ರ ಏಪ್ರಿಲ್‌ 1 ರಿಂದ 2019ರ ಮಾರ್ಚ್‌ 31ರವರೆಗೆ ಕಾರ್ಯಾಚರಣೆ ನಡೆಸುತ್ತಿರುವ ವಾಹನಗಳಿಗೆ ಫೇಮ್‌–1ರಲ್ಲಿ ಸಬ್ಸಿಡಿ ದೊರೆತಿದೆ. ಇದರಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಸಂಖ್ಯೆಯೇ ಶೇ 90.

ಸುಧಾರಿತ ತಂತ್ರಜ್ಞಾನ ಮತ್ತು 2 ಕಿಲೊವಾಟ್ ಬ್ಯಾಟರಿ ಸಾಮರ್ಥ್ಯದ 10 ಲಕ್ಷ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳಿಗೆ ₹20 ಸಾವಿರದವರೆಗೆ ರಿಯಾಯ್ತಿ ನೀಡಲು ಸರ್ಕಾರ ಫೇಮ್‌–2 ಯೋಜನೆ ರೂಪಿಸಿದೆ. ಫೇಮ್ 2 ಯೋಜನೆಯ ಸಬ್ಸಿಡಿಗೆ ಅರ್ಹವಾಗಿರುವ ಸಂಸ್ಥೆಗಳ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಮತ್ತು ವಾಹನ ಉತ್ಪಾದನಾ ಸಂಸ್ಥೆಗಳಿಗೆ ಸರ್ಕಾರ ಧನಸಹಾಯ ನೀಡುತ್ತದೆ. ಇದು ನೇರವಾಗಿ ವಾಹನಗಳ ಬೆಲೆ ಕಡಿತಕ್ಕೆ ನೆರವಾಗಲಿದೆ. ಇದಕ್ಕಾಗಿಯೇ ಕೇಂದ್ರ ಸರ್ಕಾರವು 2019-21ರ 3 ವರ್ಷಗಳ ಅವಧಿಗೆ ₹10 ಸಾವಿರ ಕೋಟಿ ತೆಗೆದಿಟ್ಟಿದೆ. ಈ ಮೂಲಕ ಎಲೆಕ್ಟ್ರಿಕ್ ವಾಹನ ಅಭಿವೃದ್ಧಿ ಮತ್ತು ಮಾರಾಟದ ಜೊತೆಗೆ ಚಾರ್ಜಿಂಗ್ ಸ್ಟೆಷನ್‌ ಸಂಖ್ಯೆ ಹೆಚ್ಚಿಸುವುದು ಇದರ ಉದ್ದೇಶ.

ಸವಲತ್ತು ಹೇಗೆ  

ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಅವುಗಳ ಬ್ಯಾಟರಿ ಗಾತ್ರದ ಆಧಾರದ ಮೇಲೆ ಒಂದು ಕಿಲೊವಾಟ್‌ಗೆ ₹10 ಸಾವಿರದಂತೆ ಸಹಾಯಧನ ದೊರೆಯಲಿದೆ. ರಾಜ್ಯ ಸಾರಿಗೆ ಘಟಕಗಳು ಹೆಚ್ಚೆಚ್ಚು ಎಲೆಕ್ಟ್ರಿಕ್ ಬಸ್‌ಗಳನ್ನು ಕೊಳ್ಳುವಂತೆ ಪ್ರೋತ್ಸಾಹಿಸಲು ಕಿಲೋವಾಟ್‌ಗೆ ₹20,000 ಸಹಾಯಧನ ನೀಡಲಾಗುತ್ತಿದೆ. ಫೇಮ್‌–2 ಪ್ರಕಟಣೆ ಬಳಿಕ ಇವಿ ಮಾರುಕಟ್ಟೆ ವಿಸ್ತರಣೆಯಾಗುತ್ತಿದೆ. 

ಇವಿ ಮಾರುಕಟ್ಟೆ ಸ್ಪರ್ಧೆ 

ಭಾರತದ ಎಲೆಕ್ಟ್ರಿಕ್ ವಾಹನಗಳ ತಯಾರಕರ ಮಾರುಕಟ್ಟೆ ಕೆಲವರ ಒಡೆತನದಲ್ಲಿದೆ. ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ ಸಂಸ್ಥೆಯು ಈ ನಿಟ್ಟಿನಲ್ಲಿ ಮಂಚೂಣಿಯಲ್ಲಿದೆ. ಇದರ ಜೊತೆ ಟೊಯೊಟೊ ಕಿರ್ಲೋಸ್ಕರ್, ಬಿಎಂಡಬ್ಲ್ಯೂ ಎಜಿ, ವೋಲ್ವೊ ಕಾರ್ ಕಾರ್ಪೊರೇಷನ್, ಹೊಂಡಾ ಮೋಟಾರ್ ಸಂಸ್ಥೆಗಳು ಹೈಬ್ರಿಡ್ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಸರ್ಕಾರ ಪ್ರಕಟಿಸಿದ ಸವಲತ್ತುಗಳು ಹಾಗೂ ವಾಹನ ನೀತಿಗಳಿಂದಾಗಿ ಇನ್ನಷ್ಟು ತಯಾರಕರು ವಿದ್ಯುತ್ ಚಾಲಿತ ಕಾರುಗಳ ಉತ್ಪಾದನೆ ಸಾಹಸಕ್ಕೆ ಇಳಿದಿದ್ದಾರೆ. ಟಾಟಾ ಮೋಟಾರ್ಸ್, ಹ್ಯುಂಡೈ ಮೊಟಾರ್ ಕಂಪನಿ ಮೊದಲಾದ ಕಂಪನಿಗಳು ಸ್ಪರ್ಧೆಗೆ ಒಡ್ಡಿಕೊಂಡಿವೆ. 

ಚೀನಾ ಪಾರುಪತ್ಯ 

ಇವಿ ಮಾರುಕಟ್ಟೆ ವಿಸ್ತರಣೆಯಲ್ಲಿ ಭಾರತ ದಾಪುಗಾಲಿಟ್ಟಿದ್ದರೂ ಸದ್ಯ ಇದರ ರಾಜ ಎನಿಸಿಕೊಂಡಿರುವುದು ಚೀನಾ. ಇಲ್ಲಿ 486 ಹೈಬ್ರಿಡ್ ಕಾರು ತಯಾರಕ ಕಂಪನಿಗಳಿವೆ. ಎಲೆಕ್ಟ್ರಿಕ್ ಕಾರು ಉತ್ಪಾದನೆ ಹಾಗೂ ಬಳಕೆಯಲ್ಲಿ ಚೀನಾ ದೇಶವೇ ಅತಿದೊಡ್ಡದು ಎಂದು ಮಾಧ್ಯಮಗಳ ವರದಿ ಹೇಳುತ್ತವೆ. ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್‌ಗಳ ವಿಚಾರದಲ್ಲಿ ಚೀನಾ ಜಗತ್ತಿನಲ್ಲೇ ಅತಿದೊಡ್ಡ ಜಾಲ ಹೊಂದಿದೆ.

ಇಂಗಾಲದ ಹೆಜ್ಜೆ

4 - ಜಾಗತಿಕವಾಗಿ ಇಂಗಾಲ ಹೊರಸೂಸುವ ದೇಶಗಳ ಪೈಕಿ ಭಾರತದ ಸ್ಥಾನ

24% - ಸಾರಿಗೆ ಕ್ಷೇತ್ರದ ಇಂಗಾಲದ ಹೊರಸೂಸುವಿಕೆ ಪ್ರಮಾಣ

ಶೇ 5ಕ್ಕೆ ಇಳಿಯಿತು ಜಿಎಸ್‌ಟಿ

ಬ್ಯಾಟರಿ ಚಾಲಿತ ವಾಹನಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಜಿಎಸ್‌ಟಿ ಮಂಡಳಿಯು ಶೇ 12ರಷ್ಟಿದ್ದ ತೆರಿಗೆಯನ್ನು ಶೇ 5ಕ್ಕೆ ಇಳಿಸಿದೆ. ಇದರ ಜತೆ ಚಾರ್ಜಿಂಗ್‌ ಸ್ಟೇಷನ್‌ಗಳ ಮೇಲಿನ ಜಿಎಸ್‌ಟಿಯನ್ನೂ ಶೇ 18 ರಿಂದ ಶೇ 5ಕ್ಕೆ ತಗ್ಗಿಸಲಾಗಿದೆ. ಸ್ಥಳೀಯ ಆಡಳಿತ ಸಂಸ್ಥೆಗಳು 12ಕ್ಕೂ ಹೆಚ್ಚಿನ ಆಸನಗಳಿರುವ ವಿದ್ಯುತ್‌ ಚಾಲಿತ ಬಸ್‌ಗಳನ್ನು ಬಾಡಿಗೆಗೆ ಪಡೆಯುವುದಕ್ಕೆ ಜಿಎಸ್‌ಟಿಯಿಂದ ವಿನಾಯ್ತಿ ನೀಡಲಾಗಿದೆ.

ಬ್ಯಾಟರಿ ತೆರಿಗೆ ಇಳಿಸಿ

ಬ್ಯಾಟರಿಗಳ ಮೇಲೆ ಇರುವ ಶೇ 18ರಷ್ಟು ಜಿಎಸ್‌ಟಿಯನ್ನು ಕಡಿತಗೊಳಿಸಿದಲ್ಲಿ, ವಾಹನಗಳ ದರ ಇನ್ನಷ್ಟು ಕಡಿಮೆಯಾಗಲಿದೆ ಎಂದು ವಿದ್ಯುತ್‌ ಚಾಲಿತ ವಾಹನ ತಯಾರಕರ ಒಕ್ಕೂಟ (ಎಸ್‌ಎಂಇವಿ) ಅಭಿಪ್ರಾಯಪಟ್ಟಿದೆ.

ಬಜೆಟ್‌ನಲ್ಲೂ ಲಾಭ

ಪ್ರಸಕ್ತ ಸಾಲಿನ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಇನ್ನಷ್ಟು ಉತ್ತೇಜಕ ಕ್ರಮಗಳನ್ನು ಪ್ರಕಟಿಸಿತ್ತು. ವಿದ್ಯುತ್ ಚಾಲಿತ ವಾಹನ ಖರೀದಿಸುವ ಸಾಲದ ಬಡ್ಡಿ ಪಾವತಿಗೆ ಆದಾಯ ತೆರಿಗೆಯಲ್ಲಿ ಹೆಚ್ಚುವರಿಯಾಗಿ ₹ 1.5 ಲಕ್ಷ ಕಡಿತ ಕಲ್ಪಿಸಲಾಗಿದೆ.

ತೆರಿಗೆ ವಿವರ

ಶೇ 12 ರಿಂದ 5ಕ್ಕೆ - ವಿದ್ಯುತ್‌ ಚಾಲಿತ ವಾಹನ

ಶೇ18 ರಿಂದ 5ಕ್ಕೆ - ಚಾರ್ಜಿಂಗ್‌ ಸ್ಟೇಷನ್‌

ಇ–ಸಾರಿಗೆ ಉತ್ತೇಜನಕ್ಕೆ ‘ಪ್ರೈಡ್ ರನ್’

ಬೆಂಗಳೂರಿನಲ್ಲಿ ಸೆಪ್ಟೆಂಬರ್ 8ರಂದು ಕ್ರಾನಿಕ್ ಫೌಂಡೇಷನ್ ವತಿಯಿಂದ ‘ಪ್ರೈಡ್ ರನ್’ ಹೆಸರಿನಲ್ಲಿ ಮ್ಯಾರಥಾನ್ ಆಯೋಜನೆಗೊಂಡಿದೆ. ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು ಆದಷ್ಟು ಕಡಿಮೆಗೊಳಿಸಿ, ಹಸಿರು ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸುವುದು ‘ಪ್ರೈಡ್ ರನ್’ ಕಾರ್ಯಕ್ರಮದ ಉದ್ದೇಶ.

ಬೆಂಗಳೂರಿನಲ್ಲಿ ಚಾರ್ಜಿಂಗ್ ಸ್ಟೇಷನ್

ಭಾರತದಲ್ಲಿ ಬ್ಯಾಟರಿ ಚಾರ್ಜಿಂಗ್ ಮೂಲಸೌಕರ್ಯಗಳನ್ನು ಹಂತ ಹಂತವಾಗಿ ರೂಪಸಲಾಗುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ಎನರ್ಜಿ ಎಫಿಷಿಯನ್ಸಿ ಸರ್ವೀಸಸ್ ಲಿಮಿಟೆಡ್ (ಇಇಎಸ್‌ಎಲ್) 10,000 ಚಾರ್ಜಿಂಗ್ ಸ್ಟೇಷನ್‌ಗಳನ್ನು ನಿರ್ಮಿಸುವ ಗುರಿ ಹಾಕಿಕೊಂಡಿದೆ. ಎನ್‌ಟಿಪಿಸಿ, ಟಾಟಾ ಹಾಗೂ ಬಿಎಚ್‌ಇಎಲ್ ಕೂಡಾ ನಿರ್ಧಾರ ಮಾಡಿವೆ.

ಕರ್ನಾಟಕದಲ್ಲಿ ಬೆಸ್ಕಾಂ, ವಿವಿಧ ಸ್ಥಳಗಳಲ್ಲಿ 112 ಚಾರ್ಜಿಂಗ್ ಕೇಂದ್ರ ನಿರ್ಮಾಣ ಕೆಲಸದಲ್ಲಿ ತೊಡಗಿಕೊಂಡಿದೆ. ಬೆಂಗಳೂರಿನಲ್ಲಿ ಈಗಾಗಲೇ ನಾಲ್ಕು ಕಡೆ ಚಾರ್ಜಿಂಗ್ ಸ್ಟೇಷನ್ ತಲೆಎತ್ತಿವೆ.

ಎಲೆಕ್ಟ್ರಿಕ್ ಕಾರು ದುಬಾರಿ

ಕೇಂದ್ರ ಸರ್ಕಾರ ಈ ಬಾರಿ ತನ್ನ ಬಜೆಟ್‌ನಲ್ಲಿ ಉತ್ತೇಜಕ ಕ್ರಮಗಳನ್ನು ಪ್ರಕಟಿಸಿದ ತಕ್ಷಣವೇ ಹ್ಯುಂಡೈ ಕಂಪನಿಯು ಎಲೆಕ್ಟ್ರಿಕ್ ಎಸ್‌ಯುವಿ 'ಕೋನಾ' ಬಿಡುಗಡೆ ಮಾಡಿತು. ಒಮ್ಮೆ ಚಾರ್ಜ್ ಮಾಡಿದರೆ 452 ಕಿಲೋಮೀಟರ್ ಸಂಚರಿಸಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಆದರೆ ಬೆಲೆ ಮಾತ್ರ ದುಬಾರಿ. ₹25.30 ಲಕ್ಷ ನಿಗದಿಪಡಿಸಲಾಗಿತ್ತು. ಇದೀಗ ₹ 1.59 ಲಕ್ಷ ದರ ಇಳಿಕೆ ಮಾಡಿದ್ದು, ₹ 23.71 ಲಕ್ಷಕ್ಕೆ ದೊರೆಯಲಿದೆ.

ಟಾಟಾ ಮೋಟರ್ಸ್‌ ಕಂಪನಿಯು ತನ್ನ ವಿದ್ಯುತ್‌ ಚಾಲಿತ ವಾಹನ ‘ಟಿಗಾರ್‌ ಇವಿ’ ಬೆಲೆಯನ್ನು ₹ 80 ಸಾವಿರದವರೆಗೂ ಕಡಿತ ಮಾಡಿದೆ. ಟಿಗಾರ್‌ ಇವಿಯ ಎಲ್ಲಾ ಆವೃತ್ತಿಗಳ ಬೆಲೆಯಲ್ಲಿಯೂ ಇಳಿಕೆ ಆಗಲಿದೆ. ಮುಂಬೈನಲ್ಲಿ ಎಕ್ಸ್‌ ಷೋರೂಂ ಬೆಲೆ ₹ 12.35 ಲಕ್ಷದಿಂದ ₹ 12.71 ಲಕ್ಷ ಇತ್ತು. ಅದು ₹ 11.58 ಲಕ್ಷದಿಂದ ₹ 11.92 ಲಕ್ಷಕ್ಕೆ ಇಳಿಕೆಯಾಗಿದೆ.

ವಿದ್ಯುತ್‌ ಚಾಲಿತ ಸ್ಕೂಟರ್‌ಗಳನ್ನು ತಯಾರಿಸುವ ಏಥರ್‌ ಎನರ್ಜಿ ಕಂಪನಿಯು ಸಹ ₹ 9 ಸಾವಿರದವರೆಗೆ ಬೆಲೆಯಲ್ಲಿ ಇಳಿಕೆ ಮಾಡಿದೆ. ಬೆಂಗಳೂರಿನಲ್ಲಿ ಆನ್‌ರೋಡ್‌ ಬೆಲೆ ಏಥರ್‌ 450ಗೆ ₹ 1,13,715 ಮತ್ತು ಏಥರ್‌ 340ಗೆ ₹ 1,22,224 ಆಗಲಿದೆ.

ಹಲವು ಎಲೆಕ್ಟ್ರಿಕ್ ಕಾರುಗಳು ಬಿಡುಗಡೆ ಹೊಸ್ತಿಲಲ್ಲಿದ್ದು, ಗ್ರಾಹಕರ ಕೊಳ್ಳುವ ಸಾಮರ್ಥ್ಯ ಹಾಗೂ ಆಸಕ್ತಿಯನ್ನು ಅವಲಂಬಿಸಿವೆ.

***

ಶುದ್ಧ ಪರಿಸರದ ಕಾಳಜಿಯೊಂದೇ ಹಸಿರು ವಾಹನ ಕ್ಷೇತ್ರ ಬೆಳವಣಿಗೆಯಾಗಲು ಇರುವ ದಾರಿ. ನಾಗರಿಕರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಕಾರ್ಯಕ್ರಮಗಳ ಉದ್ದೇಶ

- ರಮೇಶ್ ಶಿವಣ್ಣ, ರಾಜ್ಯ ನವೀಕರಿಸಬಹುದಾದ ಇಂಧನ ಉತ್ಪಾದಕರ ಸಂಘದ ಅಧ್ಯಕ್ಷ

ಬೆಸ್ಕಾಂನಿಂದ ಬೆಂಗಳೂರಿನ ನಾಲ್ಕು ಕಡೆ ಚಾರ್ಜಿಂಗ್ ಕೇಂದ್ರ ಸ್ಥಾಪಿಸಿದ್ದು, ಅವುಗಳನ್ನು 112ಕ್ಕೆ ಹೆಚ್ಚಿಸುವ ಗುರಿ, ಚಾರ್ಜಿಂಗ್ ಕೇಂದ್ರ ಸ್ಥಾಪನೆಗೆ ವಿಶೇಷ ನೀತಿ, ಸರ್ಕಾರಿ ಅಧಿಕಾರಿಗಳ ಬಳಕೆಗೆ ಎಲೆಕ್ಟ್ರಿಕ್ ವಾಹನಗಳ ನಿಯೋಜನೆಯಂತಹ ಹಲವು ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಚಾರ್ಜಿಂಗ್ ಸ್ಟೇಷನ್‌ ಮೂಲಸೌಕರ್ಯ ನಿರ್ಮಾಣದಲ್ಲಿ ರಾಜ್ಯದ ನೋಡಲ್ ಏಜೆನ್ಸಿಯಾಗಿ ಬೆಸ್ಕಾಂ ಕೆಲಸ ಮಾಡುತ್ತಿದೆ

–ಶ್ರೀನಾಥ್, ಬೆಸ್ಕಾಂ ಡಿಜಿಎಂ

ನಗರದ ಗಾಳಿ ಹಾಗೂ ನೀರು ಶುದ್ಧವಾಗಿರಬೇಕು. ಇಂಧನ ಉತ್ಪಾದನೆ ಹಾಗೂ ಸಾರಿಗೆ ಕ್ಷೇತ್ರಗಳು ಇವನ್ನು ಮಲಿನಗೊಳಿಸಬಾರದು. ಕನಿಷ್ಟ ಅವಧಿಯಲ್ಲಿ ಇದರ ಸಾಕಾರಕ್ಕೆ ನಾವೆಲ್ಲರೂ ದುಡಿಯಬೇಕಿದೆ

–ಡಾ. ಎಸ್.ಶಂಕರ್, ಚೇರ್ಮನ್, ಎಂಡಿ, ಶಟ್ಲ್ ಕಾರ್ಸ್ ಇಂಡಿಯಾ ಪ್ರೈ.ಲಿ.

ಕ್ರೌನಿಕ್ ಫೌಂಡೇಷನ್ ಹಮ್ಮಿಕೊಂಡಿರುವ ‘ಪ್ರೈಡ್ ರನ್’ ಜಾಗೃತಿ ಕಾರ್ಯಕ್ರಮಕ್ಕೆ ನಮ್ಮ ಬೆಂಬಲವಿದೆ. ಕರ್ನಾಟಕದಲ್ಲಿ ಫವರಿಚ್ ಗ್ರೂಪ್ ಅಭಿವೃದ್ಧಿಪಡಿಸುತ್ತಿರುವ 270 ಎಕರೆಯ ಫುಡ್ ಪಾರ್ಕ್ ಮತ್ತು ಇಂಡಿಸ್ಟ್ರಿಯಲ್ ಪಾರ್ಕ್‌ನಲ್ಲಿ ಸಂಪೂರ್ಣ ಹಸಿರು ಸಂಚಾರ ಅಳವಡಿಸಿಕೊಳ್ಳುವ ಘೋಷಣೆ ಮಾಡಿದ್ದೇವೆ 

- ಸಿ.ಜಯದೇವ ನಾಯ್ಡು, ಚೇರ್ಮನ್, ಫವರಿಚ್ ಗ್ರೂಪ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು